Thursday, 7 December 2017
ಮಹಿಳಾ ಆರೋಗ್ಯವೂ ಗ್ರಹ ಭಾವವೂ
ವಯೋಮಾನಕ್ಕೆ ಅನುಗುಣವಾಗಿ ಮಹಿಳೆಯರ ಆರೋಗ್ಯದಲ್ಲೂ ವ್ಯತ್ಯಯ ಕಾಣುತ್ತದೆ. ಆಯುರ್ವೇದವು ಅನಾರೋಗ್ಯಕ್ಕೆ ತ್ರಿದೋಷಗಳೇ ಕಾರಣ ಎನ್ನುತ್ತದೆ. ಜ್ಯೋತಿಷ್ಯಶಾಸ್ತ್ರವು ತ್ರಿದೋಷಕ್ಕೂ ಗ್ರಹಭಾವಕ್ಕೂ ಸಂಬಂಧ ಕಲ್ಪಿಸುತ್ತದೆ. ತತ್ ಸಂಬಂಧಿತ ಗ್ರಹ ಗುಣಗಳಿಗೆ ವಿರುದ್ಧವಾಗಿ ಚಿಕಿತ್ಸೆ ನೀಡಿದಾಗ ಸಮಸ್ಯೆಗಳು ಪರಿಹಾರವಾಗುತ್ತವೆ.ಪ್ರಾರ್ಥನಾ ಮಂತ್ರವೊಂದರಲ್ಲಿ 'ಆಯುಷ್ಯಂ ತೇಜ ಆರೋಗ್ಯಂ ದೇಹಿ ಮೇ ಪುರುಷೋತ್ತಮ' ಎನ್ನುವ ಮಾತೊಂದು ಬರುತ್ತದೆ. ಆರೋಗ್ಯವೇ ಭಾಗ್ಯ ಎನ್ನುವ ಮಾತನ್ನು ಪುಷ್ಟೀಕರಿಸುವುದೇ ಆರೋಗ್ಯ. ಆಯುರ್ವೇದದ ಪ್ರಕಾರ ತ್ರಿದೋಷಗಳ (ವಾತ, ಪಿತ್ತ ಮತ್ತು ಕಫ) ಸಾಮ್ಯತೆಯೇ ಆಗಿದೆ. ತ್ರಿದೋಷಗಳಲ್ಲಾಗುವ ಸ್ವಲ್ಪ ವ್ಯತ್ಯಯವೂ ಕಾಯಿಲೆಗೆ ಕಾರಣವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ರೀತ್ಯ ತ್ರಿದೋಷಗಳಿಗೆ ಗ್ರಹಭಾವವೇ ಕಾರಣವಾಗಿದೆ. ಆಯುರ್ವೇದದಲ್ಲಿ ಹೇಳಿದ ಹಾಗೆ ಪರಾಶರರು ಸಹ ಹೆಣ್ಣಿನ ವಯೋಮಾನವನ್ನು ಬಾಲ್ಯ, ಯೌವನ, ಪ್ರೌಢಾವಸ್ಥೆ, ವಾರ್ಧಕ್ಯ ಎಂದು ಭೇದ ಮಾಡಿದ್ದಾರೆ. ಹಾಗೆಯೇ ಗ್ರಹಗಳ ಪ್ರಭಾವವನ್ನು ವಯೋಮಿತಿಗಳ ಮೇಲೆ ಹೇಳಲಾಗಿದೆ.
ಉದಾಹರಣೆಗೆ 40 ರಿಂದ 50 ವರ್ಷದಲ್ಲಿ ಕುಜನ ಪ್ರಭಾವದಿಂದ ರಜಸ್ಸಿನ ತೊಂದರೆ, ಆಮ್ಲಪಿತ್ತ (ಅಸಿಡಿಟಿ) ಬರಬಹುದು. 55ನೇ ವರ್ಷದ ನಂತರ ವಾತದ ತೊಂದರೆಯ ಕಾರಣ ಸಂಧಿವಾತ, ನಿತ್ರಾಣ, ಮೈಕೈ ನೋವು, ಸೊಂಟ ನೋವು, ವಿಬಂಧ (ಕಾನ್‌ಸ್ಟಿಪೇಷನ್), ನಿದ್ರಾಹೀನತೆ ಮತ್ತಿತರ ವಾತ ಸಂಬಂಧಿ ರೋಗಗಳು ಬರಬಹುದು. ಅಂತಹ ತೊಂದರೆಗಳಿಗೆ ಜ್ಯೋತಿಷ್ಯಶಾಸ್ತ್ರದ ರೀತ್ಯ ಶನಿಗ್ರಹವೇ ಕಾರಣ ಎನ್ನಲಾಗಿದೆ.
ಹಾಗಾಗಿ ಮೇಲ್ಕಂಡ ದೋಷಗಳಿಗೆ ಪರಿಹಾರ ಹೇಳುವಾಗ ಆಯುರ್ವೇದ ಮತ್ತು ಜ್ಯೋತಿಷ್ಯ ಎರಡನ್ನೂ ಗಮನಿಸಬೇಕಾಗುತ್ತದೆ. ಉದಾ: ಕುಜ = ಉಷ್ಣ ತೀಕ್ಷ್ಣ ಗ್ರಹ, ಉಗ್ರ ಗ್ರಹ. ಹಾಗಾಗಿ ಶೀತದಿಂದ ಪ್ರಶಮನ ಸಾಧ್ಯ. ಆಯುರ್ವೇದದಲ್ಲಿ ಆಮ್ಲ ಪಿತ್ತಕ್ಕೆ ಯಷ್ಠಿಮಧು ಚೂರ್ಣದಿಂದ ತಯಾರಿಸಿದ ಕ್ಷೀರಪಾಕವನ್ನು, ತಲೆಕೂದಲು ಉದುರುವಿಕೆ ತಡೆಗಟ್ಟಲು ಯಷ್ಠಿಮಧುಕಾದಿ ತೈಲವನ್ನು, ರಜಸ್ಸಿನ ಹೆಚ್ಚು ಸ್ರಾವವನ್ನು ನಿಗ್ರಹ ಮಾಡಲು ಶೀತವೀರ್ಯವುಳ್ಳ ಬೂದುಕುಂಬಳದ ಲೇಹ್ಯವನ್ನು ತಿನ್ನಲು ಹೇಳುತ್ತೇವೆ.
ಮನಸ್ಸಿನ ಸಿಟ್ಟು, ಕೋಪ, ತಾಪ, ಕಿರಿಕಿರಿಗೆ ಕುಜಗ್ರಹ ಕಾರಣನಾಗುತ್ತಾನೆ. ಅದನ್ನು ತಣಿಸಲು ಆಯುರ್ವೇದವು ಸಂಗೀತ ಕೇಳಿ ಎಂತಲೂ, ಹೂವುಗಳಿರುವ ತೋಟಕ್ಕೆ ಹೋಗಿ ಎಂತಲೂ ಪರಿಹಾರ ಹೇಳುತ್ತದೆ. ಇದನ್ನು ಜ್ಯೋತಿಷ್ಯಕ್ಕೆ ಹೋಲಿಸಿದಾಗ ಕುಜನಿಗೆ ಸಮಸಪ್ತಕನಾದ ಶುಕ್ರನು ಸಂಗೀತಕ್ಕೂ, ಸೌಂದರ್ಯ, ಅಂದ ಚಂದ ಕೋಮಲತೆಗೆ ಕಾರಕತ್ವನೂ ಆಗಿರುತ್ತಾನೆ ಎಂದು ಹೇಳಲಾಗಿದೆ.
ಉದಾ: ಶನಿ - ಶೀತ ಹಾಗೂ ವಾಯು ಗುಣವನ್ನು ಹೊಂದಿದೆ.
ಆಯುರ್ವೇದದಲ್ಲಿಯೂ ವಯಸ್ಸಾದ ನಂತರ ವಾತ ಜಾಸ್ತಿ ಆಗುವುದರಿಂದ ವಾತದ ಗುಣ, ಶೀತತ್ವವೂ ಜಾಸ್ತಿಯಾಗಿ ಅನೇಕ ರೀತಿಯ ನೋವುಗಳನ್ನು ಉಂಟು ಮಾಡುತ್ತದೆ ಎನ್ನಲಾಗಿದೆ.
ಅಂತೆಯೇ ಚಿಕಿತ್ಸೆಯ ರೂಪದಲ್ಲಿ ಎಳ್ಳೆಣ್ಣೆಯನ್ನು ಮೈಕೈಗೆ ಹಚ್ಚಿ ಸ್ನಾನ ಮಾಡಿದರೆ ವಾತ ಸಮನಾಗಿ ನೋವು ಕಡಿಮೆಯಾಗುತ್ತದೆ ಎಂದಿದ್ದಾರೆ. ಶನಿಗ್ರಹಕ್ಕೆ 'ಎಳ್ಳು' (ತಿಲ) ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆಯುರ್ವೇದ ಇದನ್ನೇ 'ತೈಲಾನಾಂ ಶ್ರೇಷ್ಠಃ ತಿಲ ತೈಲಮ್' ಎಂದು ಹೇಳಿದೆ.
ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಪಾದಕ್ಕೆ ಶನಿಗ್ರಹದ ಅಂಶವನ್ನು ಸೂಚಿಸಿದ್ದಾರೆ. ಶನಿ ಗ್ರಹದ ಕಾರಣದಿಂದಲೇ ವಾತ ಜಾಸ್ತಿಯಾಗಿ ನಿದ್ರಾಹೀನತೆ ಉಂಟಾಗುತ್ತದೆ. ಆಯುರ್ವೇದದಲ್ಲಿ ತೈಲಾಭ್ಯಂಗದಲ್ಲಿ - 'ಶಿರಃ ಶ್ರವಣ ಪಾದೇಷು ತಂ ವಿಶೇಷೇಣ ಶೀಲಯೇತ್' ಎಂದು ಹೇಳಿದೆ. ಅಂದರೆ ಪಾದದ ಅಭ್ಯಂಗ ಮಾಡಿ ಮಲಗಿದರೆ, ಸುಖ ನಿದ್ರೆಯು ಬರುತ್ತದೆ. ಆಲಸಿತನ, ನೋವು ಕಳೆದು ಶರೀರ ಮನಸ್ಸುಗಳಿಗೆ ಹುಮ್ಮಸ್ಸು ನೀಡುತ್ತದೆ ಎಂದಿದ್ದಾರೆ.
* ಡಾ. ಸಪ್ನ ಎಸ್.
sangraha
Subscribe to:
Post Comments (Atom)
No comments:
Post a Comment