Thursday, 7 December 2017
ಮೂಲ ನಕ್ಷತ್ರ ಶುಭಕಾರಕ-ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.
ರಾತ್ರಿ ಸಮಯದಲ್ಲಿ ನೀಲ ಆಕಾಶವನ್ನು ನೋಡಿದರೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜಃಪುಂಜವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರವಾಗುವುವು. ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ಪ್ರಾಧ್ಯಾನತೆಯನ್ನು ಕೊಟ್ಟಿರುತ್ತಾರೆ. ಅವು ಯಾವುವೆಂದರೆ- ಮೂಲ, ಆಶ್ಲೇಷ, ವಿಶಾಖ ಮತ್ತು ಜೇಷ್ಠ ನಕ್ಷತ್ರ. ಇವುಗಳನ್ನು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾರಕ ನಕ್ಷತ್ರಗಳಾಗಿವೆ ಎಂದು ಹೇಳಿರುವರು. ಮೂಲ ನಕ್ಷತ್ರದ ಬಗ್ಗೆ ಗಮನ ಹರಿಸಿದಾಗ, ಈ ನಕ್ಷತ್ರಗಳನ್ನು ಮೂರು ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದ ತನಕ ಒಂದು ಗುಂಪು. ಮಖಾ ನಕ್ಷತ್ರದಿಂದ ಜೇಷ್ಠ ನಕ್ಷತ್ರದ ತನಕ ಇನ್ನೊಂದು ಗುಂಪು. ಮೂರನೆಯದಾಗಿ ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದ ತನಕ ಮತ್ತೊಂದು ಗುಂಪು. ಇವುಗಳಲ್ಲಿ ಅಶ್ವಿನಿ, ಮಖಾ ಮತ್ತು ಮೂಲ ನಕ್ಷತ್ರ ಮೊದಲನೇ ನಕ್ಷತ್ರಗಳು. ಮೂಲ ನಕ್ಷತ್ರ ಮೊದಲನೆಯದಾಗಿದ್ದರಿಂದ ಅದಕ್ಕೆ ಋುಷಿ ಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ.
ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣು ಮಗು ಜನಿಸಿದರೆ 8 ವರ್ಷದ ತನಕ ಮಗು ತಂದೆಯನ್ನು ನೋಡಬಾರದು ಎಂದೂ 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ ಹಾಗೂ 4ನೇ ಪಾದವಾದರೆ ಶುಭ ಎಂದು ಹೇಳಿರುವರು. ಮೂಲ ನಕ್ಷತ್ರದಲ್ಲಿ ಹೆಣ್ಣು ಮಗು ಜನಿಸಿದರೆ ಮದುವೆಯ ನಂತರ ಪತಿಯ ತಂದೆಗೆ (ಮಾವ)ನಿಗೆ ಕಂಟಕವಾಗುವುದು ಎಂದು ಹೇಳಲಾಗಿದೆ. ಜಾತಕದಲ್ಲಿ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ, ಯಾವ ಭಾವಕ್ಕೆ ದೋಷ ಆಗಿದೆ ಆ ಭಾವದ ಅಧಿಪತಿ 9ನೇ ಮನೆಯಲ್ಲಿ ಆಗಲಿ ಅಥವಾ ಶುಭ ಸ್ಥಾನದಲ್ಲಿದ್ದರೆ, ಶುಭ ಗ್ರಹಗಳಿಂದ ದೃಷ್ಟಿಸಿದ್ದರೆ, ಚಂದ್ರನಾಗಲಿ, ಭಾವಾಧಿಪತಿಯಾಗಲಿ ಬಲಿಷ್ಠನಾಗಿದ್ದರೆ, ಚಂದ್ರನಿಗೆ ಗುರು ದೃಷ್ಟಿ ಇದ್ದರೆ ಈ ಮೇಲಿನ ಮೂಲ ನಕ್ಷತ್ರದ ದೋಷಗಳೆಲ್ಲಾ ಪರಿಹಾರವಾಗುವುದು. ಇದನ್ನು ಯಾರು ಗಣನೆಗೆ ತೆಗೆದುಕೊಳ್ಳದೆ ಮೂಲ ನಕ್ಷತ್ರ ಎಂದ ತಕ್ಷಣ ಕೆಟ್ಟ ನಕ್ಷತ್ರ ಎಂದು ನಿರ್ಧರಿಸುವುದು ಸರಿಯಲ್ಲ.
ಸಾಕ್ಷಾತ್ ಸರಸ್ವತಿ ದೇವಿಯ ಜನನವಾಗಿದ್ದೂ ಮೂಲ ನಕ್ಷತ್ರದಲ್ಲಿಯೇ. ನವರಾತ್ರಿಯ ಸಮಯದಲ್ಲಿ ಮೂಲ ನಕ್ಷತ್ರದ ದಿನ ಸರಸ್ವತಿ ದೇವಿಯನ್ನು ವಿಶೇಷ ರೀತಿಯಲ್ಲಿ ಪೂಜಿಸುವರು. ಅಂದು ಆ ದೇವಿಯು ಜನಿಸಿದ ದಿನ ಎಂದು ಸರಸ್ವತಿಯನ್ನು ಆವಾಹನೆ ಮಾಡಿ ಪುಸ್ತಕಗಳನ್ನು ಇಟ್ಟು ಪೂಜಿಸುವುದು ವಾಡಿಕೆಯಾಗಿದೆ. ಸಾಕ್ಷಾತ್ ಸರಸ್ವತಿ ದೇವಿಯದೇ ಮೂಲ ನಕ್ಷತ್ರವಾಗಿದ್ದರಿಂದ ಈ ನಕ್ಷತ್ರವನ್ನು ಒಳ್ಳೆಯ ನಕ್ಷತ್ರ ಎಂದೇ ಪರಿಗಣಿಸಬಹುದು.
ವಿವಾಹ, ವಿದ್ಯಾರಂಭ, ಯಾತ್ರೆ, ಸೀಮಂತ, ಶಿಶುವಿಗೆ ತೊಟ್ಟಿಲು ಇನ್ನು ಮುಂತಾದ ಶುಭ ಕಾರ್ಯಗಳನ್ನು ಈ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಆದ್ದರಿಂದ ಮೂಲ ನಕ್ಷತ್ರ ಶುಭ ನಕ್ಷತವೇ ಆಗಿದೆ.
Subscribe to:
Post Comments (Atom)
No comments:
Post a Comment