Thursday, 7 December 2017

ವೈದ್ಯಕೀಯ 'ಜ್ಯೋತಿಷ್ಯ' - ಜಿ.ವಿ. ರೋಹಿಣಿ

ಜ್ಯೋತಿಷ್ಯ ಶಾಸ್ತ್ರ ಒಂದು ಸನಾತನವಾದ ವಿಜ್ಞಾನ. ಆದ್ದರಿಂದ ಅದನ್ನು ವೇದಾಂಗ ಜ್ಯೋತಿಷ್ಯ ಎಂದೂ ಕರೆದಿದ್ದಾರೆ. ಈ ಜ್ಯೋತಿಷ್ಯ ವಿಭಾಗದಲ್ಲಿ ವೈದ್ಯಕೀಯ ಜ್ಯೋತಿಷ್ಯವೂ ಒಂದು ಪ್ರಮುಖ ಭಾಗವಾಗಿದೆ. ಇದನ್ನು ಸಾಮಾನ್ಯವಾಗಿ ಎಲ್ಲ ಜ್ಯೋತಿಷಿಗಳು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳುತ್ತಾರೆ. ಈ ವೈದ್ಯಕೀಯ ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ಕರ್ಮ ಸಿದ್ಧಾಂತವನ್ನು ಅವಲಂಬಿಸಿದೆ. ವೈದ್ಯಕೀಯ ಜ್ಯೋತಿಷ್ಯದಲ್ಲಿ ಒಬ್ಬ ಜಾತಕನಿಗೆ ತಗುಲಬಹುದಾದ ಕಾಯಿಲೆ ಮತ್ತು ಅವನ ಸಂಬಂಧಿಗಳಿಗೆ ತಗುಲಬಹುದಾದ ಕಾಯಿಲೆಗಳನ್ನು ಗುರುತಿಸಬಹುದು. ಆದರೆ ಇದು ವೈದ್ಯಕೀಯ ವಿಜ್ಞಾನಕ್ಕೆ ಅಸಾಧ್ಯ. ಇದು ವೈದ್ಯಕೀಯ ಜ್ಯೋತಿಷ್ಯದಲ್ಲಿ ಏಕೆ ಸಾಧ್ಯವೆಂದರೆ ಅಲ್ಲಿ ಜಾತಕನ ಕರ್ಮಾನುಸಾರದಿಂದ ಏರ್ಪಟ್ಟಿರುವ ಅಣ್ಣ, ತಮ್ಮ, ಅಕ್ಕ, ತಂಗಿ, ತಂದೆ, ತಾಯಿ, ಹೆಂಡತಿ, ಗಂಡ, ಸೋದರ ಮಾವ, ಭಾವ, ಮೈದುನ ಹೀಗೆ ಇವರ ಸಂಬಂಧಗಳು ಉಂಟಾಗಿರುತ್ತವೆ. ಉದಾಹರಣೆಗೆ ಒಬ್ಬ ಜಾತಕನು ಸಿಂಹ ಲಗ್ನದಲ್ಲಿ ಹುಟ್ಟಿದ್ದರೆ ಮತ್ತು ಅವನ ಜಾತಕದಲ್ಲಿ ಗುರು ಕಟಕದಲ್ಲಿ ಉಚ್ಛ ಸ್ಥಿತಿಯಲ್ಲಿ ಸ್ಥಿತನಾಗಿದ್ದರೆ ಅವನ ಪತ್ನಿಗೆ ಫ್ಲಗ್ಮಾಟಿಕ್‌ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಇದರ ವಿಶ್ಲೇಷಣೆ ಹೇಗೆಂದರೆ, ಸಿಂಹದಿಂದ ಏಳನೆ ಮನೆಯು ಕುಂಭ ರಾಶಿಯಾಗಿದೆ. ಇದು ಆತನ ಪತ್ನಿಗೆ ಸಂಬಂಧಿಸಿದೆ. ಕುಂಭದಿಂದ ಆರನೇ ಮನೆಯು ಕಟಕವಾದ್ದರಿಂದ 6ನೇ ಮನೆಯು ಪತ್ನಿಯ ರೋಗಸ್ಥಾನ. ಇಲ್ಲಿ ಗುರು ಸ್ಥಿತನಾಗಿರುವುದರಿಂದಲೂ ಮತ್ತು ಕಟಕ ರಾಶಿಯು ಜಲತತ್ವವಾದ್ದರಿಂದಲೂ ಆಕೆಗೆ ಕಫ ಸಂಬಂಧ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಅಥವಾ ದಪ್ಪನಾದ ಶರೀರ ಉಳ್ಳವಳಾಗಿಯೂ ಇರಬಹುದು. ಮತ್ತು ಮಧುಮೇಹದಿಂದ ಬಳಲಬಹುದು. ಆದ್ದರಿಂದ ಜಾತಕನ ಪತ್ನಿಗೆ ಮೇಲೆ ಹೇಳಿದ ಕಾಯಿಲೆ ಬರುವ ಸಾಧ್ಯತೆ ಇದೆ. ವೈದ್ಯಕೀಯ ಜ್ಯೋತಿಷ್ಯದಲ್ಲಿ ಅನಾರೋಗ್ಯವನ್ನು ಕಂಡು ಹಿಡಿಯಲು ಗ್ರಹಗಳನ್ನು ಬಳಸಲಾಗುತ್ತದೆ. ಏಕೆಂದರೆ ನವಗ್ರಹಗಳಿಗೆ ತ್ರಿದೋಷಗಳ ಸಂಬಂಧವುಂಟು ಹಾಗೂ ಅದರದೇ ಆದ ಪ್ರಕೃತಿ ನಿಯಮಗಳುಂಟು. ಇವುಗಳನ್ನು ಕೆಳಕಂಡಂತೆ ತಿಳಿಯಬಹುದು. ಸೂರ್ಯ: ಚತುರಶ್ರತನುಃ ಪಿತ್ತ ಪ್ರಕೃತಿಃ ಸವಿತಾಲ್ಪಕಚಃ ಅಂದರೆ ಸೂರ್ಯನು ಚೌಕಾಕಾರದ ಮುಖವುಳ್ಳವನು. ಪಿತ್ತ ಸ್ವಭಾವದವನೂ ಹಾಗೂ ತಲೆಯಲ್ಲಿ ಕೂದಲಿಲ್ಲದವನೂ ಎಂದು ಹೇಳಲ್ಪಟ್ಟಿದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ 'ಖಲ್ವಾತ' ಯೋಗವೆಂದು ಹೇಳುತ್ತಾರೆ. ಆಯುರ್ವೇದದಲ್ಲಿ ಹೇಳಿರುವ ಪಿತ್ತ ಪ್ರಕೋಪದ ಯಾವುದಾದರೂ ಕಾಯಿಲೆ ಸೂರ್ಯಗ್ರಹನು ಕೆಟ್ಟಿರುವಾಗ ಹಾಗೂ ಜಾತಕನ ಜನ್ಮ ಕುಂಡಲಿಯಲ್ಲಿ ರೋಗಸ್ಥಾನವಾದ 6ನೇ ಮನೆಯ ಹಾಗೂ ಅದರ ಅಧಿಪತಿಯ ಸಂಬಂಧದಿಂದ ಉಂಟಾಗುತ್ತದೆ. ಈ ನಿಯಮ ಕೆಳಗೆ ಹೇಳಿರುವ ಎಲ್ಲ ಗ್ರಹಗಳಿಗೂ ಅನ್ವಯಿಸುತ್ತದೆ. ಚಂದ್ರ: ತನು ವೃತ್ತ ತನುಃ ಬಹುವಾತ ಕಫಃ ಫ್ರಾಙ್ನ ಮೃದುವಾಕ್‌ ಶುಭ ದೃಕ್‌ ಅಂದರೆ ಚಂದ್ರನು ಗುಂಡಾದ ಮುಖವುಳ್ಳವನು ಹಾಗೂ ವಾತ ಮತ್ತು ಕಫ ಪ್ರಕೃತಿಗಳುಳ್ಳವನು ಹಾಗೂ ಶುಭವಾದ ದೃಷ್ಟಿ ಉಳ್ಳವನಾಗಿರುತ್ತಾನೆ. ಆದ್ದರಿಂದ ವಾತ ಮತ್ತು ಕಫ ಸಂಬಂಧವಾದ ರೋಗಗಳುಂಟಾಗುತ್ತದೆ. ಕುಜ: ಕ್ರೂರ ದಕ್‌ ತರುಣ ಮೂರ್ತಿ ಉದಾರಃ ಪೈತ್ತಿಕಃ ಸುಚಪಲಃ ಕೃಷ ಮಧ್ಯಃ ಜಾತಕನು ಕ್ರೂರ ದೃಷ್ಟಿ ಉಳ್ಳವನಾಗಿ ತರುಣನಂತೆ ಕ್ರಿಯಾಸಕ್ತನಾಗಿ ಚಪಲ ಸ್ವಭಾವ ಉಳ್ಳವನಾಗಿ, ಉದಾರಿಯಾಗಿ, ಪಿತ್ತ ಸ್ವಭಾವವನ್ನು ಉಳ್ಳವನಾಗಿರುತ್ತಾನೆ. ಆದ್ದರಿಂದ ಪಿತ್ತ ಸ್ವಭಾವದ ರೋಗಗಳನ್ನು ಕುಜನಿಗೆ ಹೇಳಲ್ಪಟ್ಟಿದೆ. ಬುಧ: ಸ್ಲಿಷ್ಟವಾಕ್‌ ಸತತ ಹಾಸ್ಯ ರುಚಿಃ ಪಿತ್ತ ಮಾರುತ ಕಫ ಪ್ರಕೃತಿಶ್ಚ ಬುಧನು ಹಾಸ್ಯ ಪ್ರದಾಯಕನಾಗಿಯೂ ವಾಕ್‌ ಚಾತುರ್ಯ ಉಳ್ಳವನಾಗಿಯೂ ವಾತ, ಪಿತ್ತ, ಕಫ ಮೂರೂ ದೋಷಗಳುಳ್ಳ ವ್ಯಾಧಿಗಳನ್ನು ಸೂಚಿಸುತ್ತಾನೆ. ಗುರು: ಬೃಹತ್ತನುಃ ಪಿಂಗಳ ಮೂಧ್ರ್ವ ಜೇಕ್ಷ ಣೋ ಬೃಹತ್ತನುಃ ಶ್ರೇಷ್ಠ್ಠಮೂರ್ತಿ ಕಫಾತ್ಮಕಃ ಗುರುವು ಬೃಹತ್ತಾದ ಶರೀರವುಳ್ಳವನಾಗಿ, ಶ್ರೇಷ್ಠ್ಠಮೂರ್ತಿಯಾಗಿ ಕಫ ಪ್ರವೃತ್ತಿ ಉಳ್ಳ ಸ್ವಭಾವದವನಾಗಿರುತ್ತಾನೆ. ಆದ್ದರಿಂದ ಗುರುವಿಗೆ ಕಫ ಸಂಬಂಧವಾದ ರೋಗಗಳನ್ನು ಹೇಳಲ್ಪಟ್ಟಿದೆ. ಶುಕ್ರ: ಭೃಗು ಸುಖೀ ಕಾಂತವಪುಃ ಸುಲೋಚನಃ ಸಿತ ಅನಿಲಾತ್ಮ ಸಿತ ವಕ್ರಮೂರ್ಧಜಃ ಶುಕ್ರನು ಸುಖಿಯೂ, ಕಾಂತಿಯುಳ್ಳ ಶರೀರವಂತನೂ, ಸುಂದರವಾದ ಕಣ್ಣುಗಳುಳ್ಳವನೂ, ವಾಯು ಪ್ರಕೃತಿ ಉಳ್ಳವನೂ ಆಗಿರುತ್ತಾನೆ. ಅಂದರೆ ಶುಕ್ರನು ವಾಯು ದೋಷ ಸಂಬಂಧವಾದ ರೋಗಗಳನ್ನು ಹೊಂದುತ್ತಾನೆ. ಶನಿ: ಮಂದೋ ಲಸಃ ಕೃಷ ದೀರ್ಘ ಗಾತ್ರಃ ಪುರುಷ ರೋಮಕ ಚೋನಿಲಾತ್ಮಃ ಶನಿಯು ಮಂದನೂ, ಆಲಸಿಯೂ, ಕೃಶನೂ ಹಾಗೂ ಸಣ್ಣಗೆ ಉದ್ದವಾದ ಶರೀರ ಉಳ್ಳವನೂ ಮತ್ತು ವಾತ ಪ್ರಕೃತಿಯುಳ್ಳವನೂ ಆಗಿರುತ್ತಾನೆ. ಆದ್ದರಿಂದ ಶನಿಗೆ ವಾತ ಸಂಬಂಧವಾದ ಕಾಯಿಲೆಗಳನ್ನು ಹೇಳಲ್ಪಡುತ್ತದೆ. ರಾಹು ಕೇತುಗಳಿಗೆ ಯಾವುದೇ ವೈದ್ಯಕೀಯ ಸಂಬಂಧವಿಲ್ಲದ ಕಾಯಿಲೆಗಳು ಹೇಳಲ್ಪಡುತ್ತದೆ. ಅಂದರೆ ವೈದ್ಯಕೀಯ ಶಾಸ್ತ್ರದಲ್ಲಿ ಪತ್ತೆ ಮಾಡಲು ಕಷ್ಟವಾಗುವಂತಹ ಕಾಯಿಲೆಗಳು, ಹುಳು ಹುಪ್ಪಟ, ಹಾವು ಇತ್ಯಾದಿ ವಿಷ ಕ್ರಿಮಿಗಳ ಕಡಿತದಿಂದ ಬರುವ ಮಾರಣಾಂತಿಕ ಕಾಯಿಲೆಗಳು ಹಾಗೂ ಅಭಿಚಾರಗಳಿಗೆ ತುತ್ತಾಗುವಂತಹ ಕಾಯಿಲೆಗಳು ರಾಹುಕೇತುವಿಗೆ ಹೇಳಲ್ಪಡುತ್ತದೆ. ಆದ್ದರಿಂದ ಜ್ಯೋತಿಷ್ಯವು ಮೂಲತಃ ಕರ್ಮಸಿದ್ಧಾಂತದ ಭದ್ರವಾದ ಬುನಾದಿಯಲ್ಲಿ ನೆಲೆಯಾಗಿವೆ. ಆದ್ದರಿಂದ ನವಗ್ರಹಗಳು ಮಾನವನ ಮೇಲೆ ಈಗ ಮೇಲೆ ಹೇಳಿದ ವಿಶೇಷ ರೀತಿಯಲ್ಲಿ ತಮ್ಮದೇ ಆದ ಪ್ರಭಾವದಿಂದ ರೋಗಗಳನ್ನುಂಟು ಮಾಡುತ್ತದೆ. ಇದೇ ವೈದ್ಯಕೀಯ ಜ್ಯೋತಿಷ್ಯದ ಮೂಲ ಸಾರ.

No comments:

Post a Comment