Thursday, 7 December 2017
ನವಧಾನ್ಯವೂ ಪರಿಹಾರವೂ
ಫಲ ಜ್ಯೋತಿಷ್ಯ-
ವಿದ್ಯಾರ್ಥಿಗಳ ಮುಂದೆ ಕ್ಷೇತ್ರಗಳ ಆಯ್ಕೆ ಬಹಳ. ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುನ್ನಡೆಯಲು ಅನುಸರಿಸಬೇಕಾದ ಸುಲಭ ಪರಿಹಾರವೇನು? ಎಂಬುದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರವಿದೆ. ಅದನ್ನು ಪಾಲಿಸಿ ಕ್ಷಿಪ್ರ ಲಾಭವನ್ನು ಹೊಂದಬಹುದು.
ವಿದ್ಯಾರ್ಥಿಗಳಿಗೆ ಒಂದಿಲ್ಲೊಂದು ಆತಂಕ. ಅತ್ತ ಪರೀಕ್ಷಾ ಜ್ವರ. ಇತ್ತ ಪ್ರತಿನಿತ್ಯ ಅಸೈನ್‌ಮೆಂಟ್. ಮನೆಯಲ್ಲಿ ಪೋಷಕರಿಂದ ಓದು ಓದು ಅನ್ನೋ ಒತ್ತಡ. ಶಾಲೆ, ಕಾಲೇಜು ಮುಗಿಸಿ ಬಂದ ಮೇಲೆ ಟ್ಯೂಷನ್. ಟ್ಯೂಷನ್ ಅನ್ನೋ ಫ್ಯೂಷನ್‌ನಲ್ಲೇ ಸ್ಟೂಡೆಂಟ್ ಲೈಫ್‌ನಲ್ಲಿ ಪರ್ಫೆಕ್ಷನ್ ಸಾಧಿಸಬೇಕು. ಕಾಂಪಿಟೇಷನ್ ವರ್ಲ್ಡ್‌ನಲ್ಲಿ ಉತ್ತಮ ಅಂಕ ಗಳಿಸಬೇಕು. ಅಬ್ಬಾ ಎಷ್ಟೊಂದು ಟೆನ್ಷನ್! ಜ್ಯೋತಿಷ್ಯಶಾಸ್ತ್ರ ಎಲ್ಲದಕ್ಕೂ ಒಂದಿಷ್ಟು ಪರಿಹಾರ ಸೂಚಿಸುತ್ತದೆ. ವಿದ್ಯಾರ್ಥಿಗಳ ಪಾಡಿಗೆ ಏನಾದರೂ ಪರಿಹಾರ ಇದೆಯಾ? ಅದೂ ನಮ್ಮ ಕೈಗೆ ಎಟುಕವಂತಿದೆಯಾ?
ಹಾಂ ಇದೆ... ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳು ನವಗ್ರಹದ ಚಲನೆಯನ್ನು ಆಧರಿಸಿವೆ. ಒಂದೊಂದು ಗ್ರಹವು ಒಂದೊಂದು ಧಾನ್ಯದ ಪ್ರತೀಕವಾಗಿವೆ. ಅಂದಮೇಲೆ ನವಧಾನ್ಯಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ಸೋಜಿಗವೆನಿಸಿದರೂ ಸಾಧ್ಯವಿದೆ. ಯಾವ ಧಾನ್ಯದಿಂದ ಯಾವ ಪರಿಹಾರ ಅಂತ ನೋಡೋಣ.
ಗೋಧಿ : ಸೂರ್ಯ ಗ್ರಹವನ್ನು ಪ್ರತಿನಿಧಿಸುತ್ತದೆ. ವಿದ್ಯಾ ವಿಹೀನಃ ಪಶುಃ ಎನ್ನುವಂತೆ ವಿದ್ಯೆಯಿಲ್ಲದ ಬಾಳು ನಾಯಿಗಿಂತ ಕಡೆ. ಅದರಲ್ಲೂ ವಿದ್ಯಾರ್ಥಿಯಾದವನಿಗೆ ವಿದ್ಯೆಯೇ ಬಂಡವಾಳ. ತಾನು ತೆಗೆದುಕೊಂಡ ಕೋರ್ಸ್‌ನಲ್ಲಿ ಉತ್ತಮ ಅಂಕ ಪಡೆದರೇನೇ ಅವಕಾಶ. ಸೂರ್ಯ ಜ್ಞಾನ ಪ್ರದಾಯಕ. ಅವನ ಸಂಕೇತವಾದ ಗೋಧಿ ಪೌಷ್ಟಿದಾಯಕ. ಭಾನುವಾರ ಸೂರ್ಯನಿಗೆ ಸಂಬಂಧಿಸಿದ ವಾರ. ನವಗ್ರಹಗಳನ್ನು ವಿಗ್ರಹಗಳಿಂದಷ್ಟೇ ಅಲ್ಲದೇ ಸಂಬಂಧಿತ ವೃಕ್ಷಗಳಿಂದಲೂ ಗುರುತಿಸುತ್ತೇವೆ. ಹಾಗಾಗಿ ಸೂರ್ಯನ ಕೃಪೆ ಸಂಪಾದಿಸಲು ಜ್ಞಾನವಂತರಾಗಲು ಪ್ರತಿ ಭಾನುವಾರ ನವಗ್ರಹ ವೃಕ್ಷಗಳಿಗೆ ಅಥವಾ ನವಗ್ರಹ ಸನ್ನಿಧಾನಕ್ಕೆ ಎರಡು ಸುತ್ತು ಪ್ರದಕ್ಷಿಣೆ ಬನ್ನಿ. ಕಾಲು ಕೆ.ಜಿ.ಯಷ್ಟನ್ನಾದರೂ ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಒಂದು ಬಗೆಯ ಶಿಸ್ತು, ಬದುಕಿಗೆ ಅವಶ್ಯವಾದ ತ್ಯಾಗ ಗುಣವೂ ನಿಮ್ಮದಾಗುತ್ತದೆ. ನಿರಾಳವಾದ ಮನಸ್ಸು ಜ್ಞಾನಾರ್ಜನೆಗೆ ಪೂರಕವಾಗುತ್ತದೆ. ಸೂರ್ಯ ಗ್ರಹವು ಆಡಳಿತಾತ್ಮಕ, ಅಂತಾರಾಷ್ಟ್ರೀಯ, ಕಾನೂನು, ವೈದ್ಯಕೀಯ, ಸಲಹೆಗಾರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ.
ಅಕ್ಕಿ : ತಂಡುಲ ಎಂದು ಕರೆಯಲ್ಪಡುವ ಅಕ್ಕಿ ಚಂದ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಚಂದ್ರ ಮನೋಕಾರಕ. ಮನಸ್ಸೇ ಸರಿಯಾಗಿಲ್ಲದಿದ್ದರೆ ಹಿಡಿದ ಕೆಲಸ ಸಾಧನೆಯಾಗುವುದಾದರೂ ಹೇಗೆ? ಚಂದ್ರನ ಒಲುಮೆ ಗಳಿಸಿಕೊಳ್ಳಲು ನಿಯಮಿತವಾಗಿ ಪ್ರತಿ ಸೋಮವಾರ ನವಗ್ರಹ ಸನ್ನಿಧಾನದಲ್ಲಿ ಐದು ಪ್ರದಕ್ಷಿಣೆ ಹಾಕಿ. ಕಾಲು ಕೆಜಿಯಷ್ಟಾದರೂ ಅಕ್ಕಿಯನ್ನು ದಾನ ಮಾಡಿ. ಚಂದ್ರಗ್ರಹವು ವಿಜ್ಞಾನ,ಸಂಶೋಧನೆ, ಚಲನಚಿತ್ರ, ನರ್ಸಿಂಗ್ ವಿದ್ಯೆ, ಪ್ರಸೂತಿ, ಔಷಧಿ ಶಾಸ್ತ್ರ ಮತ್ತಿತರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ.
ತೊಗರಿ : ಕುಜಗ್ರಹವನ್ನು ಪ್ರತಿನಿಧಿಸುತ್ತದೆ. ಕುಜನಲ್ಲಿ ನಾಯಕತ್ವದ ಗುಣವಿದೆ. ವಿದ್ಯಾರ್ಥಿಯಾದವನಿಗೆ ಜ್ಞಾನವೊಂದಿದ್ದರೆ ಸಾಲದು. ಹಿಡಿದ ಕೆಲಸವನ್ನು ಸಾಧಿಸುವ ಛಲ ಅವನಲ್ಲಿರಬೇಕು. ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್ ಬದಿಗೊತ್ತಿ ಮುಂದಾಳುವಾಗುವ ಲಕ್ಷಣವಿರಬೇಕು. ಕುಜನು ಭೌತಶಾಸ್ತ್ರ, ಕ್ರಿಯಾಲಜಿ, ಭೂಗರ್ಭ ಮತ್ತಿತರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ.
ಹೆಸರು ಕಾಳು : ಬುಧಗ್ರಹವನ್ನು ಪ್ರತಿನಿಧಿಸುತ್ತದೆ. ಬುಧನು ವ್ಯಾಪಾರ, ವಾಣಿಜ್ಯ, ಸಂಗ್ರಹಶಕ್ತಿ, ಚಾಣಾಕ್ಷತನ. ಕಂಪ್ಯೂಟರ್, ತೆರಿಗೆ, ಲೆಖ್ಖಪತ್ರ, ಪತ್ರಿಕೋದ್ಯಮ, ಮಾಹಿತಿ ಮತ್ತು ಸಂಪರ್ಕ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾನೆ. ಅವನ ಕೃಪೆ ಸಂಪಾದಿಸಲು ಪ್ರತಿ ಬುಧವಾರ ನವಗ್ರಹ ಸನ್ನಿಧಾನದಲ್ಲಿ ನಾಲ್ಕು ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಹೆಸರುಕಾಳನ್ನು ದಾನಮಾಡುವುದು ಒಳ್ಳೆಯದು.
ಕಡಲೆಕಾಳು : ‘ನ ಗುರೋರಧಿಕಂ ಸತ್ಯಂ’ ಎನ್ನುತ್ತದೆ ವೇದವಾಕ್ಯ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಲು ಗುರುವಿನ ಅನುಗ್ರಹ ಮುಖ್ಯ. ಕಡಲೆಕಾಳು ಗುರುಗ್ರಹವನ್ನು ಪ್ರತಿನಿಧಿಸುತ್ತದೆ. ಗುರುವಿನ ಅನುಗ್ರಹವಿಲ್ಲದೇ ವಿದ್ಯೆಯಲ್ಲಿ ಆಸಕ್ತಿ ಮೂಡುವುದಿಲ್ಲ. ವೇದಾಂತ, ಜ್ಞಾನ, ಆಯುರ್ವೇದ, ಸಂಸ್ಕೃತ, ಶಿಕ್ಷಣ ತರಬೇತಿ, ಉಪನ್ಯಾಸಕ, ನ್ಯಾಯ, ಕಾನೂನು ಮತ್ತಿತರ ಕ್ಷೇತ್ರಗಳನ್ನು ಇವನು ಪ್ರತಿನಿಧಿಸುತ್ತಾನೆ. ಗುರುವಿನ ಅನುಗ್ರಹಕ್ಕೆ ಪ್ರತಿ ಗುರುವಾರ ನವಗ್ರಹಗಳಿಗೆ ಐದು ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಕಡಲೆಕಾಳನ್ನು ದಾನ ಮಾಡುವುದು ಒಳ್ಳೆಯದು.
ಅವರೆಕಾಳು : ಶುಕ್ರಗ್ರಹವನ್ನು ಪ್ರತಿನಿಧಿಸುತ್ತದೆ. ಶುಕ್ರ ಗ್ರಹದ ಪ್ರಭಾವ ಚಲನಚಿತ್ರ, ನಾಟ್ಯ, ಸಂಗೀತ, ಅಲಂಕಾರ, ಒಳಾಂಗಣ ವಿನ್ಯಾಸ, ಛಾಯಾಗ್ರಹಣ, ಬ್ಯೂಟಿಷಿಯನ್ ಮತ್ತಿತರ ಕ್ಷೇತ್ರಗಳ ಮೇಲಾಗುತ್ತದೆ. ಶುಕ್ರನ ಅನುಗ್ರಹ ಸಂಪಾದಿಸಲು ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಅವರೆಕಾಳನ್ನು ದಾನ ಮಾಡಬೇಕು.
ಕಪ್ಪು ಎಳ್ಳು : ಶನಿಗ್ರಹವನ್ನು ಸಂಕೇತಿಸುತ್ತದೆ. ಶನಿ ಕರ್ಮಾಧಿಪತಿ. ಅವನೇ ಕಾರ್ಯಕಾರಕ. ‘ವಿದ್ಯಾ ದಧಾತಿ ವಿನಯಂ’ ಎನ್ನುವಂತೆ ವಿದ್ಯಾರ್ಥಿಗೆ ವಿನಯವೇ ಭೂಷಣ. ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು, ಸಹನೆ, ಸಂಯಮಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ಶನಿ ದೇವರ ಕೃಪೆಯಿಂದ ಲಭ್ಯವಾಗುತ್ತದೆ. ಇಂಜಿನಿಯರಿಂಗ್, ಕೃಷಿ, ನೀರಾವರಿ, ಪ್ರಾಚ್ಯವಸ್ತು ಸಂಶೋಧನೆ, ಇತಿಹಾಸ, ಗುಡಿ ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಶನಿ ಪ್ರತಿನಿಧಿಸುತ್ತಾನೆ. ಅವನ ಒಲುಮೆ ಸಂಪಾದಿಸಲು ಪ್ರತಿ ಶನಿವಾರ ನವಗ್ರಹಗಳಿಗೆ ಏಳು ಪ್ರದಕ್ಷಿಣೆ ಹಾಕಿ 50 ಗ್ರಾಂನಷ್ಟಾದರೂ ಕರಿ ಎಳ್ಳನ್ನು ದಾನ ಮಾಡಬೇಕು.
ಉದ್ದಿನ ಬೇಳೆ : ರಾಹು ಗ್ರಹವನ್ನು ಸಂಕೇತಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಮತ್ತು ಕೇತು ಛಾಯಾ ಗ್ರಹಗಳು. ರಾಹು ಫೋಟೋಗ್ರಫಿ, ಚಿತ್ರಕಲೆ, ಅನೆಸ್ತೇಷಿಯಾ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯೆಗಳನ್ನು ಪ್ರತಿನಿಧಿಸುತ್ತಾನೆ. ರಾಹುವಿನ ಕೃಪೆಗಾಗಿ ಪ್ರತಿ ಶನಿವಾರ ನವಗ್ರಹ ಸನ್ನಿಧಾನಕ್ಕೆ ಒಂಬತ್ತು ಪ್ರದಕ್ಷಿಣೆ ಹಾಕುವುದು. ನೂರು ಗ್ರಾಂನಷ್ಟಾದರೂ ಉದ್ದಿನಬೇಳೆಯನ್ನು ದಾನ ಮಾಡುವುದು.
ಹುರುಳಿ ಕಾಳು : ಕೇತು ಗ್ರಹವನ್ನು ಪ್ರತಿನಿಧಿಸುತ್ತದೆ. ಕೇತು ಗ್ರಹವು ಯೋಗ, ಧ್ಯಾನ, ಮೀಮಾಂಸೆ, ವ್ಯಾಕರಣ, ಔಷಧ ತಯಾರಿಕಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಕೇತುವಿನ ಕೃಪೆಗೆ ಪ್ರತಿ ಮಂಗಳವಾರ ನವಗ್ರಹ ಸನ್ನಿಧಾನಕ್ಕೆ ಒಂಬತ್ತು ಪ್ರದಕ್ಷಿಣೆಗಳನ್ನು ಹಾಕಿ ಕನಿಷ್ಟ ಪಕ್ಷ 100 ಗ್ರಾಂನಷ್ಟಾದರೂ ಹುರಳಿಕಾಳನ್ನು ದಾನ ಮಾಡಬೇಕು.
* ಎಂ. ವಾಸುದೇವ ಮೂರ್ತಿ
sangraha
Subscribe to:
Post Comments (Atom)
No comments:
Post a Comment