Sunday 10 February 2019

ಪಿತೃಕಾರಕ ರವಿಗೆ ದೋಷವಿದ್ದರೆ ಏನು ಮಾಡಬೇಕು?

ಕುಟುಂಬ ವ್ಯವಸ್ಥೆಯಲ್ಲಿ ತಂದೆಗೆ ಪ್ರಾಧಾನ್ಯತೆ ಇರುವಂತೆ ಸೌರವ್ಯೂಹ ವ್ಯವಸ್ಥೆಗೆ ರವಿಯೇ ಅಧಿಪತಿ. ಆತನೇ ಪಿತೃಕಾರಕ. ಜಾತಕ ಕುಂಡಲಿಯಲ್ಲಿ ರವಿಯ ಸ್ಥಾನದ ಆಧಾರದ ಮೇಲೆ ಫಲಾಫಲಗಳನ್ನು ನಿರ್ಣಯಿಸಬಹುದು. ನವಗ್ರಹಗಳಲ್ಲಿ ಮೊದಲನೆಯದೇ ರವಿ. ಸೂರ್ಯ ತಲಾ ಒಂದು ತಿಂಗಳು ಒಂದೊಂದು ರಾಶಿಯಲ್ಲಿ ಇರುತ್ತಾನೆ. ಈತನನ್ನು ಪಿತೃಕಾರಕ ಗ್ರಹ ಎನ್ನುತ್ತಾರೆ. ಸೌರಮಂಡಲದಲ್ಲಿ ಎಲ್ಲಾ ಗ್ರಹಗಳು ಈತನ ಸುತ್ತ ಸುತ್ತುತ್ತವೆ. ಆತನೇ ಆಕರ್ಷಣ ಬಿಂದುವಾಗಿದ್ದು ಕೇಂದ್ರಸ್ಥಾನದಲ್ಲಿದ್ದಾನೆ. ಅಂತೆಯೇ ಒಂದು ಕುಟುಂಬಕ್ಕೆ ತಂದೆಯೇ ಯಜಮಾನ. ಆತನದೇ ಕೇಂದ್ರಸ್ಥಾನ. ಹಾಗೆಂದು ಪುರುಷ ಪ್ರಧಾನ ಸಮಾಜವನ್ನು ಎತ್ತಿ ತೋರಿಸುವ ಪ್ರಯತ್ನ ನನ್ನದಲ್ಲ. ಕುಟುಂಬ ವ್ಯವಸ್ಥೆಯಲ್ಲಿ ತಂದೆಗಿರುವ ಪಾತ್ರದ ಉಲ್ಲೇಖವನ್ನಷ್ಟೇ ಮಾಡುತ್ತಿದ್ದೇನೆ. ಜ್ಯೋತಿಷ್ಯದ ಲೆಕ್ಕಾಚಾರ ರೀತ್ಯ ರವಿಗೆ ಚಂದ್ರ, ಕುಜ, ಗುರು ಮಿತ್ರ ಗ್ರಹಗಳು. ಬುಧ ಸಮ ಗ್ರಹವಾಗಿದ್ದಾನೆ. ಶುಕ್ರ ಮತ್ತು ಶನಿ ಶತ್ರು ಗ್ರಹಗಳಾಗಿವೆ. ಸಿಂಹರಾಶಿ ಈತನ ಮನೆಯಾಗಿದೆ. ದ್ವಾದಶ ಭಾವದಲ್ಲಿ ಪಿತೃಕಾರಕ ರವಿ ಲಗ್ನದಲ್ಲಿ ಸೂರ್ಯನಿದ್ದರೆ ಕೋಪಿಷ್ಠನು, ಪಂಚಂಡ ಸಾಹಸಿಯೂ ಆಗಿರುತ್ತಾನೆ. ಈತನಿಗೆ ತಂದೆಯ ಮೇಲೆ ಹೆಚ್ಚು ಪ್ರೀತಿ ಇರುತ್ತದೆ. ಲಗ್ನದಿಂದ ಎರಡನೇ ಮನೆಯಲ್ಲಿ ರವಿ ಇದ್ದರೆ ಧನವಂತನು, ಒರಟು ಮಾತಿನವನು, ಎಡ ಕಣ್ಣಿನ ತೊಂದರೆ ಉಳ್ಳವನು, ತಂದೆಯ ಮಾತನ್ನು ಧಿಕ್ಕರಿಸುವವನು ಆಗಿರುತ್ತಾನೆ. ಲಗ್ನದಿಂದ ಮೂರನೇ ಮನೆಯಲ್ಲಿ ರವಿ ಇದ್ದರೆ ಮಧುರ ಮಾತುಗಳನ್ನು ಆಡುವವನಾಗಿರುತ್ತಾನೆ. ತಂದೆಯ ಮಾತಿಗೆ ಬೆಲೆ ಕೊಡುತ್ತಾನೆ. ಲಗ್ನದಿಂದ ನಾಲ್ಕನೇ ಮನೆಯಲ್ಲಿ ರವಿ ಇದ್ದರೆ ಸಂಸಾರದಲ್ಲಿ ನೆಮ್ಮದಿ ಅಷ್ಟಾಗಿ ಇರುವುದಿಲ್ಲ. ತಂದೆಯನ್ನು ದ್ವೇಷಿಸುವವನು ಆಗಿರುತ್ತಾನೆ. ಲಗ್ನದಿಂದ ಐದನೆ ಮನೆಯಲ್ಲಿ ರವಿ ಇದ್ದರೆ ಸಂತಾನದಲ್ಲಿ ಏರುಪೇರು ಉಂಟಾಗುತ್ತದೆ. ಶ್ರಮ ಜೀವಿಯಾಗಿರುತ್ತಾರೆ. ಓದಿನಲ್ಲಿ ಅತೀವವಾದ ಆಸಕ್ತಿ ಹೊಂದಿರುತ್ತಾನೆ. ತಂದೆಗೆ ಗೌರವ ಕೊಡುತ್ತಾನೆ. ಲಗ್ನದಿಂದ ಆರನೆ ಮನೆಯಲ್ಲಿ ರವಿ ಇದ್ದರೆ ಸುಖದಿಂದ ಜೀವಿಸುತ್ತಾನೆ. ಉತ್ತಮ ಅಧಿಕಾರವನ್ನು ಹೊಂದುತ್ತಾನೆ. ಗುರುಹಿರಿಯರೆಂದರೆ ಅಪಾರ ಗೌರವವನ್ನು ಹೊಂದಿರುತ್ತಾನೆ. ಲಗ್ನದಿಂದ ಏಳನೇ ಮನೆಯಲ್ಲಿ ರವಿ ಇದ್ದರೆ ಸಂಸಾರದಲ್ಲಿ ನೆಮ್ಮದಿ ಅಷ್ಟಾಗಿ ಇರುವುದಿಲ್ಲ. ಹೊರದೇಶದಲ್ಲಿ ವಾಸ ಮಾಡುವ ಸಾಧ್ಯತೆ ಹೆಚ್ಚು. ತಂದೆಯ ವೃತ್ತಿಯನ್ನು ಮುಂದುವರಿಸುತ್ತಾನೆ. ಲಗ್ನದಿಂದ ಎಂಟನೇ ಮನೆಯಲ್ಲಿ ರವಿ ಇದ್ದರೆ ಅವನ ಅಂಗಾಂಗದಲ್ಲಿ ನ್ಯೂನ್ಯತೆ ಕಂಡು ಬರುವುದು, ತಂದೆಯಿಂದ ದೂರ ಇರುತ್ತಾನೆ. ಲಗ್ನದಿಂದ ಒಂಬತ್ತನೇ ಮನೆಯಲ್ಲಿ ರವಿ ಇದ್ದರೆ ಬುದ್ಧಿವಂತನೂ, ಧರ್ಮಕಾರ್ಯ ನಿರತನೂ, ಸಾಧುಗಳಿಗೆ ಸಹಾಯ ಮಾಡುವವನು ಆಗಿರುತ್ತಾನೆ. ಲಗ್ನದಿಂದ ಹತ್ತನೇ ಮನೆಯಲ್ಲಿ ರವಿ ಇದ್ದರೆ ಪುತ್ರನಿಂದ ಸುಖ ಹೊಂದುತ್ತಾನೆ. ಸರ್ಕಾರಿ ನೌಕರಿ ದೊರೆಯುವ ಸಾಧ್ಯತೆ, ತಂದೆಯೊಂದಿಗೆ ಕೈಜೋಡಿಸುತ್ತಾನೆ. ಲಗ್ನದಿಂದ ಹನ್ನೊಂದನೇ ಮನೆಯಲ್ಲಿ ರವಿ ಇದ್ದರೆ ರಾಜಕೀಯ ಕ್ಷೇತ್ರ ಪ್ರವೇಶ, ತಂದೆಯ ಆಸ್ತಿಗೆ ಒಡೆಯನಾಗುತ್ತಾನೆ. ಲಗ್ನದಿಂದ ಹನ್ನೆರಡನೇ ಮನೆಯಲ್ಲಿ ರವಿ ಇದ್ದರೆ ತಂದೆಯನ್ನು ವಿರೋಧಿಸುವ ಗುಣವನ್ನು ಹೊಂದಿರುತ್ತಾನೆ. ದುಷ್ಟ ಕಾರ್ಯಾಸಕ್ತನಾಗಿರುವ ಸಾಧ್ಯತೆ ಹೆಚ್ಚು. ದೋಷ ಪರಿಹಾರಕ್ಕೆ ಸುಲಭೋಪಾಯ ಜಾತಕದಲ್ಲಿ ರವಿಗೆ ಸಂಬಂಧಪಟ್ಟ ದೋಷಗಳಿದ್ದರೆ ಅದರ ನಿವಾರಣೆಗೆ ಆದಿತ್ಯ ಹೃದಯವನ್ನು ಪಾರಾಯಣ ಮಾಡುವುದು ಒಳಿತು. ಅದರೊಂದಿಗೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಹಾಕಬೇಕು, ಪ್ರತಿ ಭಾನುವಾರ ತಾವರೆ ಹೂವಿನಿಂದ ಸೂರ್ಯಾರಾಧನೆ ಮಾಡಬೇಕು. ಗೋಧಿಯನ್ನು ಹಾಗೂ ಗೋಧಿಯಿಂದ ತಯಾರಿಸಿದ ಪದಾರ್ಥಗಳನ್ನು ದಾನವಾಗಿ ಕೊಡುವುದು, ಪ್ರತಿನಿತ್ಯ 1008 ಬಾರಿ 'ಓಂ ಸೂರ್ಯಾಯ ನಮಃ' ಎಂಬ ಮಂತ್ರವನ್ನು ಜಪಿಸುವುದು ಒಳ್ಳೆಯದು. -SANGRAHA

No comments:

Post a Comment