Wednesday, 6 February 2019
ಸಂತಾನಯೋಗ
ಜಾತಕನಿಗೆ ಸಂತಾನಯೋಗ ತಿಳಿಯುವುದೆಂತು?
ನಮ್ಮ ಪುರಾಣಗಳಲ್ಲಿ ಸಂತಾನಕ್ಕೋಸ್ಕರ ತಪಸ್ಸು ಮಾಡಿ ಸಂತಾನ ಪಡೆದ ಹತ್ತು ಹಲವು ಪ್ರಸಂಗಗಳನ್ನು ನೋಡುತ್ತೇವೆ. ಜ್ಯೋತಿಷವು ಸಂತಾನಕಾರಕ ಗ್ರಹ ಗುರು ಎನ್ನುತ್ತದೆ. ಹಾಗೆಯೇ ವಿಶೇಷವಾಗಿ ಗುರು, ಬುಧ, ರಾಹು ನಂತರ ಕೇತು,ಚಂದ್ರರನ್ನೂ ಗಮನಿಸಲಾಗುತ್ತದೆ. ಅದರ ಆಧಾರದ ಮೇಲೆ ಸಂತಾನ ಯೋಗ ಯಾವಾಗ ಆಗುತ್ತದೆ, ಎಷ್ಟು ಸಂತಾನ ಎಂಬ ಅಂಶವನ್ನು ತಿಳಿಯಬಹುದು. ಸಂತಾನ ವಿಚಾರ ತಿಳಿಯಲು ಲಗ್ನ, ಪಂಚಮ ಭಾಗ್ಯ ಸ್ಥಾನಗಳನ್ನು ಪರಿಶೀಲಿಸಬೇಕು. ಸಂತಾನಯೋಗ ಲೆಕ್ಕಾಚಾರ ಮಾಡಲು ಗಂಡ-ಹೆಂಡಿರ ಜಾತಕವನ್ನು ಲೆಕ್ಕ ಹಾಕಬೇಕು.
ಲಗ್ನವು ಜಾತಕನನ್ನೂ, ಪಂಚಮವು ಮುಂದಿನ ಪೀಳಿಗೆಯನ್ನು, ಭಾಗ್ಯವು ಹಿಂದಿನ ಪೀಳಿಗೆಯನ್ನು ಸೂಚಿಸುತ್ತದೆ.
ಸಂತಾನಯೋಗದ ನಿಯಮಾವಳಿ :
ಲಗ್ನಾಧಿಪತಿ ಪಂಚಮದಲ್ಲಿ ಮತ್ತು ಪಂಚಮಾಧಿಪತಿ ಲಗ್ನದಲ್ಲಿದ್ದು ಪರಿವರ್ತನೆಯಾಗಿದ್ದರೆ ಸಂತಾನ ಸುಖ ಉಂಟಾಗುತ್ತದೆ. ಪಂಚಮಾಧಿಪತಿ ಕೇಂದ್ರ ತ್ರಿಕೋಣದಲ್ಲಿದ್ದು ಗುರುವಿನ ಸಂಬಂಧ ಹೊಂದಿದ್ದರೂ ಸಂತಾನಯೋಗವಿರುತ್ತದೆ. ಪಂಚಮಾಧಿಪತಿ ಬಲಾಢ್ಯನಾಗಿ ಲಗ್ನಾಧಿಪತಿ ಗುರುವಿನಿಂದ ಶುಭ ಸಂಬಂಧವನ್ನು ಹೊಂದ್ದಿದರೆ, ಪಂಚಮ ಭಾವದಲ್ಲಿ ಶುಭಗ್ರಹವಿದ್ದು ಪಂಚಮಕ್ಕೆ ಲಗ್ನ ಪಂಚಮಾಧಿಪತಿಯ ಸಂಬಂಧವಿದ್ದರೆ, ಲಗ್ನ ಅಥವಾ ಚಂದ್ರನಿಂದ ಪಂಚಮಾಧಿಪತಿ ಮತ್ತು ಗುರು ಸುಸ್ಥಿತಿಯಲ್ಲಿರುವ ಜಾತಕರಿಗೆ, ಪಂಚಮ ಭಾವದಲ್ಲಿ ಸ್ವಕ್ಷೇತ್ರದಲ್ಲಿ ಪಾಪಗ್ರಹನಿದ್ದರೆ ಸಂತಾನ ಭಾಗ್ಯವಿರುತ್ತದೆ ಎನ್ನುತ್ತದೆ ಫಲದೀಪಿಕ. ಹೀಗೆ ಸಂತಾನವಿದೆಯೇ ಎಂಬುದನ್ನು ಮೇಲಿನ ನಿಯಮಾವಳಿಗಳಿಂದ ತಿಳಿಯಬಹುದು.
ಪರಿಹಾರಗಳು :
ಪಂಚಮಾಧಿಪತಿ ದುಸ್ಥಾನದಲ್ಲಿದ್ದಾಗ ಸಂತಾನದೋಷ ಉಂಟಾಗುತ್ತದೆ. ಪಂಚಮ ಭಾವ / ಭಾವಾಧಿಪತಿಗೆ ಶನಿ, ಚಂದ್ರ ಅಥವಾ ಬುಧನ ಸಂಬಂಧವಿದ್ದರೂ ತೊಂದರೆ ಕಾಣುತ್ತದೆ. ಅಂತಹ ಸಂದರ್ಭದಲ್ಲಿ ರಾಮೇಶ್ವರದಲ್ಲಿ ತೀರ್ಥಸ್ನಾನ, ಗಂಗಾಸ್ನಾನ, ಸಂತಾನ ಗೋಪಾಲಸ್ವಾಮಿ ವ್ರತ ಮಾಡುವುದರಿಂದ ದೋಷ ಪರಿಹಾರ ಉಂಟಾಗುತ್ತದೆ.
ಸರ್ಪಶಾಪ ಮತ್ತು ಸಂತಾನ ಭಾಗ್ಯ ಅಂದರೆ ಇದು!
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಗಳಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಸರ್ಪ ನಾಶದ ಸಂಕೇತವೂ ಹೌದು. ಫಲವಂತಿಕೆಗೆ ಕೂಡಾ ಸರ್ಪ ಸಂಕೇತವಾಗಿದೆ. ನಮ್ಮ ಪುರಾಣದ ಪರಿಕಲ್ಪನೆಯಲ್ಲಿ ಸೃಷ್ಟಿಯ ನಂತರದ ಸ್ಥಿತಿ ಹಾಗೂ ಲಯಗಳಿಗೆ ಅಧಿಪತಿಗಳಾದ ವಿಷ್ಣು ಮಹೇಶ್ವರರು ಕ್ರಮವಾಗಿ ಸರ್ಪವನ್ನು ಹಾಸಿಗೆಯನ್ನಾಗಿಯೂ, ಸರ್ಪವನ್ನೇ ಅಲಂಕಾರವಾಗಿ ಕೊರಳಿಗೆ ಹಾರವನ್ನಾಗಿಯೂ ಉಪಯೋಗಿಸಿಕೊಂಡಿದ್ದಾರೆ. ಹಾಲ್ಗಡಲಲ್ಲಿ ತಣ್ಣನೆಯ ಮೈ ಆದಿಶೇಷನೆಂಬ ಹಾವಿನ ಮೇಲೆ ಮಲಗಿದ ವಿಷ್ಣುವಿಗೆ ಲಕ್ಷ್ಮೀ ದೇವಿ ಯಾವಾಗಲೂ ಕಾಲು ಒತ್ತುತ್ತಿರುತ್ತಾಳೆ. ತಣ್ಣನೆಯ ಮೈಯ ಆದಿಶೇಷನ ತಣ್ಣನೆಯ ತಟಸ್ಥ ಸ್ಥಿತಿ ವಿಷ್ಣುವಿಗೆ ಬಾಧಿಸಬಾರದೆಂದಾರೆ ಕಾಲೊತ್ತುತ್ತ ಕಾವಿನ ಜೀವಂತಿಕೆಯ ಘಟಕಗಳನ್ನು ವಿಷ್ಣುವಿನಲ್ಲಿ ಅಭಾದಿತಳಾಗಿಸುತ್ತಾಳೆ. ಹಾಗೆಯೇ ನಂಜುಂಡ ನಂಜನ್ನು ಕುಡಿದಾಗ ಪಾರ್ವತಿ ಶಿವನ ಕಂಠ ಸವರುತ್ತ ವಿಷವು ದೇಹದೊಳಗೆ ಪ್ರವೇಶಿಸದಂತೆ ತಡೆಯುತ್ತಾಳೆ. ಇದರಿಂದ ಶಿವನಿಗೆ ವಿಷದಿಂದ ಉಂಟಾಗುವ ಕಂಟಕ ತಪ್ಪುತ್ತದೆ. ಒಟ್ಟಿನಲ್ಲಿ ವಿಷಮಯವಾದ ಸರ್ಪ ಸೃಷ್ಟಿಯ ಸ್ಥಿತಿ ಹಾಗೂ ಲಯಗಳ ನಡುವೆ ಒಂದು ಸಮತೋಲನವನ್ನು ನೆರವೇರಿಸಿದೆ.
ನೋಡಿ, ನಮ್ಮ ಪುರಾಣದ ಪ್ರಕಾರ ಆದಿಶೇಷ ಭೂಮಿಯನ್ನು ನೆತ್ತಿಯ ಮೇಲೆ ಹೊತ್ತಿದ್ದಾನೆ. ಅದಕ್ಕೆ ಒಂದೆಡೆ ಒಂದೇ ಭಂಗಿಯಿಂದ ಎತ್ತಿದ ಹಾಗೆ ಚಡಪಡಿಕೆಯಾದಾಗ ಕೊರಳು ಕೊಂಕಿಸುತ್ತದೆ. ಆಗ ನಮಗೆ ಭೂಕಂಪನದ ಅನುಭವವಾಗುತ್ತದೆ ಎಂದು ಪುರಾಣ ಹೇಳುತ್ತದೆ. ಇಲ್ಲೂ ವಿನಾಶಕ್ಕೆ ಮತ್ತೆ ಸರ್ಪವೇ ಕಾರಣ. ಭೂಕಂಪ ಸರ್ಪದ ಕಾರಣದಿಂದಾಗಿ ಆಗುತ್ತದೆ.
ಏನು ಈ ಸರ್ಪ ಶಾಪ?
ಜಾತಕ ಶಾಸ್ತ್ರದಲ್ಲಿ 5ನೇ ಮನೆ ಸಂತಾನದ ಮನೆಯಾಗಿದೆ. ರಾಹು ಸರ್ಪದ ಸಂಕೇತವಾಗಿದ್ದಾನೆ. ಜಾತಕದಲ್ಲಿ ದೋಷ ಕಾರಕನಾದ ರಾಹುವು ಸಂತಾನದ ಮನೆಯನ್ನು ಬಾಧಿಸಿದ್ದಲ್ಲಿ ಹುಟ್ಟಿದ ಮಕ್ಕಳು ಸಾಯುವುದು, ಬಾಧೆ ಪಡುವುದು, ತಂದೆತಾಯಿಗಳನ್ನು ಗೋಳು ಹೊಯ್ದುಕೊಳ್ಳುವುದು ಸಂಭವಿಸುತ್ತದೆ. ಈ ರಾಹುವಿನ ಜೊತೆಗೆ ಕುಜ ಶನಿಗಳು ಕ್ಷೀಣ ಚಂದ್ರರು ಅಸ್ತಂಗತ ದೋಷ ಇರುವ ಸೂರ್ಯ ಇತ್ಯಾದಿ ವಿಚಾರಗಳಿಂದಾದ ಬಾಧೆ ಅಗಾಧವಾಗಿದ್ದಾಗ ಸಂತಾನ ಹೀನತೆ ಸಂತಾನನಾಶ ಮಕ್ಕಳಿಂದ ನಿರಂತರ ನೋವುಗಳು ಇತ್ಯಾದಿ ಸಂಭವಿಸುತ್ತ ಜೀವನಕ್ಕೆ ಅರ್ಥ ಕಳೆದುಬಿಡುತ್ತದೆ. ಬೇರೆಯವರ ಬಲಿ ಹೇಳಿಕೊಳ್ಳಲಾಗದ ತಮಗೆ ತಾವೇ ನಿಭಾಯಿಸಲಾಗದ ಸಮಸ್ಯೆಗಳಲ್ಲಿ ವ್ಯಕ್ತಿ ತೊಳಲಾಡುತ್ತಾನೆ.
ಸಂತಾನಭಾಗ್ಯಕ್ಕೆ ತೊಂದರೆ ಹಾಗೂ ವಿಳಂಬಕ್ಕೆ ಸರ್ಪಶಾಪ
ಮುಖ್ಯವಾಗಿ ಸಂತಾನ ಸ್ಥಾನಕ್ಕೆ ಸರ್ಪಶಾಪ ಅಂಟಿದಾಗ ಮಕ್ಕಳೂ ಹುಟ್ಟಿ ಬಾಧೆ ಹೊಂದುವುದು ಮಕ್ಕಳು ಸಾಯುವುದು ಇತ್ಯಾದಿಯಲ್ಲದೆ ಮಕ್ಕಳೇ ಆಗದಿರುವ ತಾಪತ್ರಯ ಎದುರಾಗಬಹುದು. ಸಂತಾನ ಸ್ಥಾನಕ್ಕೆ ದೋಷವಿದ್ದಾಗ ಎಂಬುದೇ ಅಲ್ಲ. ಭಾಗ್ಯ ಹಾಗೂ ಸುಖಸ್ಥಾನಗಳ ಸಂಬಂಧ ತಾನು ಪಡೆದ ದೋಷದಿಂದಾಗಿ ಯಾವುದೇ ರೀತಿಯಲ್ಲಿ, ಸಂತಾನ ಸ್ಥಾನದೊಂದಿಗೆ ಏನಾದರೂ ಬಹು ಮುಖ್ಯವಾದ ಕಿಂಚತ್ ಸಂಬಂದ ಹೊಂದಿದ್ದರೆ ಸಂತಾನ ಹೀನತೆ ಉಟಾಗಬಹುದು. ಹುಟ್ಟಿದ ಮಕ್ಕಳಿಂದ ಬಹುವಿಧವಾದ ಕಿರುಕುಳಗಳನ್ನು ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ಶನೈಶ್ಚರನೂ ಚಂದ್ರನೂ, ತಂತಮ್ಮ ಒಟ್ಟಾಗಿರುವ ಸ್ಥಿತಿ ಅಥವಾ ಪರಸ್ಪರ ದೃಷ್ಟಿ ಹೊಂದಿದ್ದಾಗಲೂ ಸಂತಾನದ ವಿಷಯದಲ್ಲಿ ಕಿರುಕುಳಗಳು ಕಟ್ಟಿಟ್ಟ ಬುತ್ತಿ. ಯಾವಾಗಲೂ ಶನೈಶ್ಚರನ ಜೊತೆಗಿನ ಚಂದ್ರಯುತಿ ಅನೇಕ ಕಿರಿಕಿರಿಗಳನ್ನು ಎದುರಿಗಿಡುತ್ತದೆ. ಶನಿಕಾಟದ ಸಂದರ್ಭದಲ್ಲಿ ವಿಪರೀತವಾಗಿ ಸಂತಾನದ ವಿಷಯದಲ್ಲಿ ಕಿರುಕುಳಗಳು ಎದುರಾದೀತು. ಅನೇಕ ಉದಾಹರಣೆಗಳೊಂದಿಗೆ ಈ ವಿಚಾರಗಳನ್ನು ಶ್ರುತಪಡಿಸಬಹುದಾಗಿದೆ. ಸ್ಪಷ್ಟವಾಗಿ ಇಂತ ಬವಣೆ, ಕಿರಕಿರಿ ಹೊಂದಿದವರ ಜಾತಕದಲ್ಲಿ ರಾಹು ದೋಷ, ಸರ್ಪದೋಷ ಖಂಡಿತಾ ಇರುತ್ತದೆ. ಹೀಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಸರ್ಪಶಾಪ ಅಥವಾ ಸರ್ಪದೋಷವನ್ನು ಬಹು ಪ್ರಮುಖವಾಗಿ ಪರಿಗಣಿಸುತ್ತಾರೆ.
ಸರ್ಪ ಪ್ರತಿಷ್ಠೆ, ಸರ್ಪ ಸಂಸ್ಕಾರ ಇತ್ಯಾದಿ ರಾಹು ಜಪ, ಸಂತಾನ ಗೋಪಾಲ ಜಪ ಇತ್ಯಾದಿ ಪರಿಹಾರ ಸ್ವರೂಪವಾಗಿ ನೆರವೇರಿಸುತ್ತಾರೆ. ಈ ಸರ್ಪಶಾಪ ಜನ್ಮ, ಜನ್ಮಾಂತರದಿಂದ ಅಂಟಿಕೊಂಡು ಬಂದ ಸೂಚನೆಗಳು ಜಾತಕದಲ್ಲಿ ದೊರಕುತ್ತಿರುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಹಾವು ಹೊಡೆಯುವುದನ್ನಾಗಲೀ, ನೋಡುವುದಾಗಲೀ ಪಾಪ ಎಂದು ಪರಿಗಣಿಸಲ್ಪಟ್ಟಿದೆ. ಆದರೆ ಇಂಥದೊಂದು ಮೂಢನಂಬಿಕೆಯಲ್ಲಿ ನಖಶಿಖಾಂಥವಾಗಿ ಮುಳುಗುವುದೂ ಬೇಡ. ಅನಿವಾರ್ಯವಾದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಸರ್ಪವನ್ನು ಹೊಡೆಯಲೇ ಬೇಕಾಗುತ್ತದೆ. ಹೀಗೆ ಹೊಡೆದಿದ್ದರಿಂದಾಗಿ ಸರ್ರನೆ ಒಬ್ಬನ ಜಾತಕದಲ್ಲಿ ಸರ್ಪ ಶಾಪ ಬಂದು ಬೇರು ಬಿಟ್ಟಿತು ಎಂದು ಅರ್ಥವಲ್ಲ. ಸರ್ಪಶಾಪದ ಕಲ್ಪನೆಯೇ ಬೇರೆ. ಆ ಕಲ್ಪನೆಯ ಪ್ರಕಾರ ಸರ್ಪವನ್ನು ಸಂಕೇತಿಸುವ ರಾಹು, ರಾಹುವನ್ನು ಒಳಗೊಳ್ಳುವ ಗ್ರಹಗಳು ಒಟ್ಟಾರೆಯಾದ ಅವರ ದುರ್ಬಲ ಸ್ಥಿತಿಯ ಸಂದರ್ಭದಲ್ಲಿ ಒಂದಿಷ್ಟು ತಡೆಯಲು ತೊಡಕಾಗುವ ಅಗಾಧ ಚಡಪಡಿಕೆ ಅಸಹಾಯಕತೆಗಳಿಗೆ ಕಾರಣವಾಗುತ್ತದೆ. ಇದು ಸತ್ಯ.
ಯಾರು ಮಕ್ಕಳಿಂದ ತೊಂದರೆಗೊಳಗಾಗಿದ್ದಾರೆ ?
ಇಲ್ಲಿ ಅವರೆಲ್ಲ ಯಾರೆಂಬ ಹೆಸರುಗಳು ಬೇಡ. ಸೂಕ್ಷ್ಮವಾಗಿ ಅವರನ್ನು ಪ್ರಸ್ಥಾಪಿಸುತ್ತೇನೆ. ಜಾತಕಶಾಸ್ತ್ರದಲ್ಲಿ ಸರ್ಪದೋಷ ಶಾಪ ಹಾಗೂ ಇದನ್ನು ಸುತ್ತವರಿದು ಕಾಡುವ ಗ್ರಹಗಳು ಹೇಗೆ ಸಂತಾನದ ವಿಷಯದಲ್ಲಿ ವಿಳಂಬ, ಸಂತಾನಹೀನತೆ, ಮಕ್ಕಳ ಕಾಟ, ತಮ್ಮೆದುರೇ ಮಕ್ಕಳು ಪರದಾಡುವ ವಿಚಾರ ಗಮನಿಸುತ್ತಾರೆ. ಪರದಾಡುತ್ತಾರೆಂಬುದನ್ನು ಉದಾಹರಿಸಲು ಸರ್ಪಶಾಪ ಎಂಬುದು ಒಂದು ಕಟ್ಟುಕಥೆಯಲ್ಲ.
ಬಹಳ ಪ್ರಮುಖ ಹೆಸರು ಗಳಿಸಿದ ನಮ್ಮ ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳೊಬ್ಬರಿಗೆ ಸಂತಾನ ಭಾಗ್ಯವಿರಲಿಲ್ಲ. ಚಾಣಾಕ್ಯ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ ಜನಾಕರ್ಷಣೆಯಿಂದ ಮಿಂಚಿದ ಮತ್ತೂಂದು ರಾಜ್ಯದ ಮುಖ್ಯಮಂತ್ರಿ ಮಗನಿಂದ ಅಂತ್ಯಕಾಲದಲ್ಲಿ ಯಾತನೆ ಪಟ್ಟರು. ಬಹು ಪ್ರಖ್ಯಾತ ಮಹಿಳೆಯೊಬ್ಬರು ಮಗನಿಂದ ಇನ್ನಿಲ್ಲದ ಸಂಕಟಗಳನ್ನು ಎದುರುಹಾಕಿಕೊಂಡರು. ಜನಪ್ರಿಯ ನಟರೊಬ್ಬರಿಗೆ ಸಂತಾನ ಭಾಗ್ಯ ಕೂಡಿಬರಲೇ ಇಲ್ಲ. ಇನ್ನೊಬ್ಬರು ಇದೇ ರೀತಿಯ ಪ್ರಖ್ಯಾತ ನಟ ತನ್ನ ಸಾವಿನ ದಿನಗಳ ವರೆಗೂ ತಮ್ಮ ಮಗನಿಂದಾಗಿ ಎದುರಿಸಿದ ಕಷ್ಟಗಳು ಅಷ್ಟಿಷ್ಟಲ್ಲ. ಸಾಹಿತಿಗಳು ಮಾಜಿ ಮುಖ್ಯಮಂತ್ರಿಗಳು ಸಾಂಸ್ಕೃತಿಕ ವಕ್ತಾರರು ಎಂಬೆಲ್ಲಾ ದೊಡ್ಡ ಯಾದಿಯೇ ಇದೆ. ಸರ್ಪದೋಷ ಸರ್ಪಶಾಪ ಇವರನ್ನೆಲ್ಲ ಕಾಡಿ ಹಣ್ಣುಗಾಯಿ ನೀರುಗಾಯಿಯಾಗಿಸಿದೆ.
ಪಂಚಮ ಸ್ಥಾನ ದೋಷ ಸಂತಾನ ಭಾಗ್ಯಕ್ಕೆ ದಕ್ಕೆ ತರಬಲ್ಲುದೆ?
ಜನ್ಮಕುಂಡಲಿಯಲ್ಲಿ ಐದನೆಯ ಮನೆಯು ಬಹಳ ಮಹತ್ವದ ಸ್ಥಳವಾಗಿದೆ. ಸಹಜವಾಗಿಯೇ ಇದು ತ್ರಿಕೋನ ಸ್ಥಾನವಾದುದರಿಂದ ಮಾನವನ ಸಂಬಂಧವಾದ ಯಶಸ್ಸಿನ ಏರಿಳಿತಗಳಲ್ಲಿ ಈ ಸ್ಥಳವು ನಿರ್ಣಾಯಕವಾದ ಪಾತ್ರಗಳನ್ನು ವಹಿಸುತ್ತದೆ. ಮುಖ್ಯವಾಗಿ ಸಂತಾನ- ಅಂದರೆ ಮಕ್ಕಳ ಪ್ರಾಪ್ತಿಯ ಬಗೆಗೆ ಈ ಮನೆಯನ್ನು ವರವಾಗಿ ವಿಶ್ಲೇಷಿಸಬೆಕಾಗುತ್ತದೆ. ಕೇವಲ ಮಕ್ಕಳ ಪ್ರಾಪ್ತಿ ಅಥವಾ ಅಪ್ರಾಪ್ತಿಯ ವಿಷಯವೊಂದೇ ಅಲ್ಲ, ಆ ಮನೆಯ ಶಕ್ತಿ ಹಾಗೂ ದೌರ್ಬಲ್ಯಗಳ ಮೇಲಿಂದ ಮಕ್ಕಳ ಸಾವು, ಮಕ್ಕಳಿಂದ ಎದುರಾಗುವ ಪೀಡೆ, ಮನೋಲ್ಲಾಸ, ಇತ್ಯಾದಿ ಇತ್ಯಾದಿಗಳನ್ನು ಕೂಡ ಈ ಪಂಚಮಭಾವದಿಂದ ನಿರ್ಣಯಿಸಬಹುದು. ಕುಟುಂಬ ಸ್ಥಾನ, ಲಾಭ, ಸುಖ ಹಾಗೂ ಭಾಗ್ಯ ಸ್ಥಾನಗಳು ಕೂಡಾ ತಂತಮ್ಮ ಶಕ್ತಿ ಹಾಗೂ ಮಿತಿಗಳೊಡನೆ ಈ ಪಂಚಮ ಭಾವವನ್ನು ನಿಯಂತ್ರಿಸಬಲ್ಲವು. ಮನುಷ್ಯನ ಅದೃಷ್ಟ ದೈವಬಲ, ಒಟ್ಟಾರೆಯಾಗಿ ಪಂಚಮ ಸಂತಾನ ಭಾವದಿಂದಲೇ ಹೆಚ್ಚು ಸ್ಪಷ್ಟ ಎಂಬುದರ ಮೇಲಿಂದ ಪಂಚಮ ಸ್ಥಳ ಮಹತ್ವದ ಆಯಕಟ್ಟಿನ ಸ್ಥಳವಾಗಿದೆ.
ಸರ್ಪದೋಷ ಸಂತಾನ ದೋಷ ತರಬಲ್ಲುದೇ?
ಸಂತಾನ ದೋಷಕ್ಕೆ ಸರ್ಪ ದೋಷವೂ ಕಾರಣವಾಗಬಲ್ಲದೇ ವಿನಾ ಸಂತಾನ ದೋಷಕ್ಕೆ ಸರ್ಪದೋಷವೇ ಮುಖ್ಯ ಕಾರಣವಲ್ಲ. ಪಂಚಮ ಸ್ಥಾನದ ಅಧಿಪತಿಗಿರುವ ದೋಷವು, ಪಂಚಮಭಾವದಲ್ಲಿರುವ ಗ್ರಹಗಳು ಈ ಗ್ರಹಗಳಿಗೆ ಒದಗಿದ ನೀಚತನ ಅಥವಾ ಅಸ್ತಂಗತ ದೋಷಗಳು, ಸಂತಾನ ಹೀನತೆಯನ್ನು ಅಥವಾ ಸಂತಾನ ವಿಳಂಬವನ್ನು ಕೊಂಡಿ ಕೊಡಿಸಬಲ್ಲುದು.
ಹಾಗೆಯೇ ಈ ಪಂಚಮಭಾವ ರಾಗ-ಭಾವಗಳನ್ನು, ಉದ್ವಿಗ್ನತೆ, ನಿರುದ್ವಿಗ್ನತೆಗಳನ್ನು ಕೂಡಾ ನಿರ್ಧರಿಸುವುದರಿಂದ ಬಹುತೇಕವಾಗಿ ನಿರ್ವಿàರ್ಯತೆ ಪುರುಷನಿಗೆ ಅಥವಾ ಬಂಜೆತನ ಮಹಿಳೆಗೆ ದೋಷ ಅಲ್ಲದಿದ್ದರೂ ಹೆಣ್ಣು ಹಾಗೂ ಗಂಡಿನ ಮಿಲನ ಕ್ರಿಯೆಯನ್ನೇ ದೋಷಪೂರ್ಣವಾಗಿ ಮಾಡಿಬಿಡಬಲ್ಲದು. ಹೀಗಾಗಿ ಗಂಡು ಹಾಗೂ ಹೆಣ್ಣಿನ ಜಾತಕಗಳ ಜೋಡಣೆಯ ಸಂದರ್ಭದಲ್ಲೇ ಈ ಆಂಶವನ್ನು ಸರಿಯಾಗಿ ಪರಿಶೀಲಿಸಿಯೆ ಜಾತಕ ಹೊಂದಾಣಿಕೆ ಸಾಧ್ಯವಾಗಬೇಕು. ಗಂಡು ಹಾಗೂ ಹೆಣ್ಣು ಇಬ್ಬರೂ ಉದ್ವಿಗ್ನ ಸ್ಥಿತಿಯವರಾದರೆ ಪೂರ್ವಪುಣ್ಯ ಸ್ಥಾನದ ಚಿಕ್ಕ ದೋಷವೂ ಕೂಡಾ ಸಂತಾನಹೀನತೆಯನ್ನು ತಂದೊಡ್ಡಬಹುದಾಗಿದೆ. ಉದ್ವಿಗ್ನತೆ, ನಿರುದ್ವಿಗ್ನತೆಗಳು ಒಂದು ಹೆಣ್ಣಿನಲ್ಲಿದ್ದರೆ ಇದಕ್ಕೆ ವಿರುದ್ದ ಭಾವದ ಗಂಡು ಆಕೆಗೆ ಸರಿಯಾದ ಜೊತೆಗಾರನಾಗಬಲ್ಲ. ಪೂರ್ವಪುಣ್ಯ ಸ್ಥಾನದ ತೀವ್ರ ದೌರ್ಬಲ್ಯಗಳು ಕೂಡಾ ಹೆಣ್ಣುಗಂಡುಗಳ ಸಂಯೋಜನೆಯೊಂದಿಗೆ ನಿವಾರಣೆಯಾಗಿ ಉತ್ತಮ ಸಂತಾನಕ್ಕ ಕಾರಣವಾಗಬಲ್ಲದು.
ಮಕ್ಕಳಿದ್ದರೂ ಪೀಡೆ
ಮನುಷ್ಯನ ಬದುಕಿನಲ್ಲಿ ಪೀಡೆಯ ಘಟ್ಟ ಎಲ್ಲಿಂದ ಪ್ರಾರಂಭ ಎಂದು ನಿಖರವಾಗಿ ಊಹಿಸಬಾರದು. ಉತ್ತಮವಾದ ಬಾಲ್ಯ, ಯುಕ್ತ ವಯಸ್ಸಿನಲ್ಲಿ ಮದುವೆ, ಶೀಘ್ರ ಸಂತಾನ ಅದರಲ್ಲೂ ಪುತ್ರ ಪ್ರಾಪ್ತಿಯ ಸುಯೋಗ. ಕೇಳಬೇಕೆ..? ಸ್ವರ್ಗಕ್ಕೆ ಮೂರೇ ಗೇಣು. ಆದರೆ ಹುಣ್ಣಿಮೆಯ ಚಂದ್ರನಂತೆ ಪರಿಶೋಭಿಸಬೇಕಾದ ಮಗನೋ, ಮಗಳ್ಳೋ ಅಡ್ಡದಾರಿ ಹಿಡಿದರೆ, ದುರಹಂಕಾರ, ಅಲ್ಪಮತಿಗಳಿಂದ ಬಳಲಿದರೆ, ಮನುಷ್ಯನ ನಡುವಯಸ್ಸು, ವೃದ್ಧಾಪ್ಯ ಕೇಳುವುದೇ ಬೇಡ, ನಿತ್ಯ ನರಕವಾಗಬಲ್ಲದು. ಸಂತಾನ ಸ್ಥಾನವಾದ ಪಂಚಮ ಭಾವಕ್ಕೆ ದೋಷದ ಅಬುìದ ಪೀಡೆ ಸಂತಾನಹೀನತೆಯನ್ನು ಮಾತ್ರ ಕೊಡುವ ರೀತಿಯಲ್ಲಿರುತ್ತದೆ ಎಂದು ಭಾವಿಸಬಾರದು. ಸಂತಾನದೋಷಕ್ಕೆ, ಪೀಡಕರಾದ ಮಕ್ಕಳೂ ತಂತಮ್ಮ ಪಾಲನ್ನು ಧಾರೆ ಎರೆಯಬಲ್ಲರು. ಹೀಗಾಗಿ ಬಂಜೆ ಎಂದು ಯಾರನ್ನೂ ಜರೆಯದಿರಿ. ನಿಮ್ಮನ್ನು ಬಂಜೆಯಲ್ಲಿ ಎಂದು ಸಾಬೀತು ಪಡಿಸಿದ ಮಕ್ಕಳೇ, ಮುಂದೆ ವ್ಯಾಘ್ರವಾಗಿ ತಲೆ ತಿನ್ನಬಲ್ಲರು.
ಅಶುಭ ಗ್ರಹಗಳ ದಶಾಕಾಲ ಮತ್ತು ಪುತ್ರನಾಶ
ಯಾವಾಗಲೂ ಅಶುಭ ಗ್ರಹಗಳಾದ ಸೂರ್ಯ, ಶನಿ, ಕುಜ, ರಾಹು, ಕೇತುಗಳು ಸಂತಾನ ಭಾವದಲ್ಲಿರುವುದು ಮಕ್ಕಳ ದೃಷ್ಟಿಯಿಂದ ಕ್ಷೇಮಕರವಲ್ಲ. ಯೋಗಕಾರಕನಾಗಿ, ಜಾತಕಕ್ಕೆ ಒಳ್ಳೆಯವನಾಗಿ ಅಶುಭಗ್ರಹಗಳು ಇದ್ದರೂ, ಶನಿಕಾಟದ ಸಂದರ್ಭದಲ್ಲಿ, ದುಷ್ಟ ದಶಾಕಾಲದಲ್ಲಿ ಈ ಅಶುಭಗ್ರಹಗಳೇನಾದರೂ ದುಷ್ಟ ದಶಾನಾಥನ ಕಕ್ಷೆಯಲ್ಲಿ ನರಳುವ ಸಂದರ್ಭಗಳು ಒದಗಿದಲ್ಲಿ ಮಕ್ಕಳಿಂದ ತೊಂದರೆ, ಸಂತಾನ ನಾಶ, ಸಂತಾನಹೀನತೆ ಇತ್ಯಾದಿ ಏನೋ ಒಂದು ನಿಸ್ಸಂಶಯವಾಗಿಯೂ ಸಂಭವಿಸಿಯೇ ತೀರುತ್ತದೆ.
ಈ ಮೇಲಿನ ಅಂಶವನ್ನು ಭಾರತದ ಮಾಜಿ ಪ್ರಧಾನಿಯೋರ್ವರ ಜಾತಕದಲ್ಲಿ ಗಮನಿಸಬಹುದಾಗಿದೆ. ಇವರ ಜಾತಕದಲ್ಲಿ ಪಂಚಮ ಸ್ಥಾನ ಸ್ಥಿತ ಸೂರ್ಯ, ಅವನ ವೈರಿಯಾದ ಶನೈಶ್ಚರನ (ಅನುರಾಧಾ) ನಕ್ಷತ್ರದಲ್ಲಿದ್ದುದು ಪ್ರಮುಖವಾಗಿದೆ. ಜೊತೆಗೆ ಸೂರ್ಯನಿಗೆ ಪಂಚಮಾಧಿಪತಿ (ಯೋಗಕಾರಕನೂ ಕೂಡ) ಕುಜನೊಂದಿಗೆ ಪರಿವರ್ತನ ಯೋಗವೂ ಇತ್ತು. ಇದರಿಂದಾಗಿ ಮುಂದೆ ಬಹು ಮುಖ್ಯವಾದ ಅಧಿಕಾರ ಯೋಗವನ್ನೂ ಪಡೆಯುವ ಪ್ರತಿಭೆಯನ್ನು ಇವರ ಪುತ್ರನಿಗೆ ಈ ಪರಿವರ್ತನಯೋಗ ಒದಗಿಸಿ ಕೊಡುವಷ್ಟು ಬಲವಾಗಿತ್ತು. ಆದರೆ, ಶನೈಶ್ಚರನ ದಶಾಕಾಲದಲ್ಲಿ ಶನೈಶ್ಚರ ಸೂರ್ಯನ ನಕ್ಷತ್ರವಾದ ಉತ್ತರಾ ನಕ್ಷತ್ರದಲ್ಲಿ ಸಂಚರಿಸುವಾಗ ಪುತ್ರನನ್ನು ಕಳೆದುಕೊಳ್ಳುವ ಯೋಗವನ್ನು ಈ ಮಾಜಿ ಪ್ರಧಾನಿಗಳಿಗೆ ಒದಗಿಸಿಬಿಟ್ಟಿದ್ದ. ಕಳೆದುಕೊಂಡ ಪ್ರಧಾನಿ ಪಟ್ಟ ಹಿಂತಿರುಗಿ ಪಡೆದ ಸಂಭ್ರಮದಲ್ಲೂ ಅವರಿಗೆ ಈ ಶೋಕ ಶನಿ ಹಾಗೂ ಸೂರ್ಯರ ದೋಷ ಪೂರ್ಣ ಜಟಾಪಟಿಯಿಂದ ಆವರಿಸುವಂತಾಯ್ತು.
ಸರ್ಪ ದೋಷ ಹಾಗೂ ಸಂತಾನ ಪೀಡೆ
ಭಾಗ್ಯಸ್ಥಾನದಲ್ಲಿನ ಸರ್ಪ ನೆರಳು, ಸುಖ ಸ್ಥಾನದಲ್ಲಿನ ಸರ್ಪನೆರಳು, ಪಂಚಮ (ಸಂತಾನ) ಸ್ಥಾನದ ಸರ್ಪ ನೆರಳು ಮುಖ್ಯವಾಗಿ ರಾಹು ದೋಷದಿಂದ ಒದಗುವಂಥದ್ದು. ಹೀಗಾಗಿ ರಾಹುವೂ ವ್ಯಕ್ತಿಯೋರ್ವನ, ಓರ್ವಳ ಜಾತಕದಲ್ಲಿ ಸಂತಾನ ದೋಷಕ್ಕೆ ಬಹು ಪ್ರಮುಖವಾದ ಘಟಕವಾಗಿ ಬಿಡುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಸರ್ಪಾರಾಧನೆಗೆ ಮಹತ್ವದ ಪಾತ್ರವಿದೆ. ನಾಗಬನ, ನಾಗಪೂಜೆ, ನಾಗಾರಾಧನೆ, ನಾಗಪ್ರತಿಷ್ಠೆ, ನಾಗ ಸಂಸ್ಕಾರ ಇತ್ಯಾದಿಗಳನ್ನ ನಾಗರ ಪ್ರೀತ್ಯರ್ಥವಾಗಿ ನೆರವೇರಿಸಿ ಮುಖ್ಯವಾಗಿ ಸಂತಾನ ಫಲಕ್ಕಾಗಿ, ಸಂತಾನಫಲ ದೊರಕಿದರೂ ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳನ್ನು ಕಳೆದುಕೊಳ್ಳುವ ಪ್ರಾರಬ್ಧ ನಿವಾರಣೆಗಾಗಿ, ಮಕ್ಕಳಿಂದಲೇ ಪರಮ ಪೀಡೆಗಳನ್ನು ಅನುಭವಿಸುವ ಯಾತನೆಯ ಶಮನಕ್ಕಾಗಿ ಸರ್ಪದೋಷಗಳನ್ನು ಕಳೆದುಕೊಳ್ಳುತ್ತಾರೆ.
ಚಂದ್ರನ ಕ್ಷೀಣ ಸ್ಥಿತಿ ಸಂತಾನಕ್ಕೆ ಅಪಾಯಕಾರಿ
ಸಂತಾನ ಸ್ಥಾನವಾದ ಪೂರ್ವಪುಣ್ಯ ಅಥವಾ ಪಂಚಮಭಾವಕ್ಕೆ ದೋಷ ವಿದ್ದಾಗ ಜಾತಕದಲ್ಲಿ ಚಂದ್ರನೇ ಕ್ಷೀಣನಾಗಿ ಪಂಚಮಾಧಿಪತಿಯೂ ಆಗಿದ್ದರೆ ಪಂಚಮ ಭಾವದಲ್ಲೇ ಕ್ಷೀಣ ಚಂದ್ರನಿದ್ದರೆ ಸಂತಾನಹೀನತೆ ದೊಡ್ಡ ಸಮಸ್ಯೆಯಾಗಬಲ್ಲುದು. ಈ ಸಂದರ್ಭದಲ್ಲಿ ತಂದೆ-ತಾಯಿಗಳ, ಅತ್ತೆ- ಮಾವಂದಿರ ಸಾಂತ್ವನ ಬೆಂಬಲದ ಆಸರೆ, ಆರೈಕೆ, ಧೈರ್ಯದ ಮಾತು ಚಂದ್ರನ ದೋಷವನ್ನು ನಿವಾರಿಸಬಲ್ಲದು. ಚಂದ್ರನೊಟ್ಟಿಗೆ ಸಂಪನ್ನವಾದ ಯೋಗವನ್ನು ಒಡಮೂಡಿಸುವ ಗುರುಗ್ರಹದ ಶಕ್ತಿಯೂ ಕೂಡಾ ಚಂದ್ರನ ಕ್ಷೀಣತೆಯನ್ನು ಸಾಕಷ್ಟು ದೂರ ಮಾಡುತ್ತದೆ. ಗುರುಗ್ರಹವು ಸಹಜವಾಗೇ ಚಂದ್ರನ ಜೊತೆ ಅಪಾರವಾದ ಒಳಿತುಗಳನ್ನು ಒಬ್ಬ ವ್ಯಕ್ತಿಗೆ ಕೊಡ ಮಾಡುವಲ್ಲಿ ನಿರಂತರವಾಗಿ ಹೆಣಗುತ್ತಿರುತ್ತದೆ.
ಯೋಗ್ಯ ಸಂತಾನಕ್ಕೆ ಸಂಸ್ಕಾರ
ಆಷಾಢ ಕಳೆದು ಶ್ರಾವಣಮಾಸದ ಹೊಸ್ತಿಲಲ್ಲಿದ್ದೇವೆ. ಆಷಾಢಕ್ಕೆ ತವರಿಗೆ ತೆರಳಿದ ಹೆಣ್ಣುಮಕ್ಕಳು ಹಬ್ಬದ ಸಂಭ್ರಮದೊಂದಿಗೆ ಗಂಡನ ಮನೆಗೆ ಬರುತ್ತಾರೆ. ಒಂದೆಡೆ ಸಂಭ್ರಮ, ಸಂತೋಷ, ಉಲ್ಲಾಸ. ಮತ್ತೊಂದೆಡೆ ಪ್ರತಿಯೊಬ್ಬರಿಗೂ ತಮ್ಮ ಬದುಕು ಚೆನ್ನಾಗಿರಬೇಕು. ತಮಗೆ ಹುಟ್ಟುವ ಮಕ್ಕಳು ಉತ್ತಮರಾಗಿರಬೇಕು, ಆರೋಗ್ಯವಂತರಾಗಿರಬೇಕು, ಭವಿಷ್ಯದಲ್ಲಿ ಯಶಸ್ಸನ್ನು ಹೊಂದಬೇಕು ಎಂದು ಬಯಸುವುದು ಸಹಜವೇ.
ನಮ್ಮ ಸಂಸ್ಕೃತಿಯಲ್ಲಿ ಆ ಕಾರಣ 'ಗರ್ಭದಾನ ಸಂಸ್ಕಾರ' ವಿಧಾನವನ್ನು ರೂಪಿಸಲಾಗಿದೆ. ಶಾಸ್ತ್ರೋಕ್ತ ವಿಧಾನದಿಂದ ಪತಿ ಪತ್ನಿಯರ ಮಿಲನವೇ ಗರ್ಭದಾನ ಸಂಸ್ಕಾರವಾಗಿದೆ. ಯೋಗ್ಯ ಸಂತಾನೋತ್ಪತ್ತಿಯೇ ಇದರ ಉದ್ದೇಶವಾಗಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಇದಕ್ಕೆಂದೇ ಕೆಲವೊಂದು ಮಹೂರ್ತಗಳನ್ನು ನಿರ್ಣಯಿಸಲಾಗಿದೆ.
ಸೂಕ್ತ ತಿಥಿಗಳು - ಕೃಷ್ಣಪಕ್ಷದಲ್ಲಿ 1,2,3,5,7,10 ಮತ್ತು ಶುಕ್ಲಪಕ್ಷದಲ್ಲಿ 2,3,5,7,10,12,13.
ರಿಕ್ತ ತಿಥಿಗಳು (4,9,14): ಷಷ್ಠಿ, ಅಷ್ಟಮಿ, ಏಕಾದಶಿ, ಪೌರ್ಣಮಿ, ಅಮಾವಾಸ್ಯೆ ತಿಥಿಗಳು ವರ್ಜವಾಗಿವೆ. ಇದಲ್ಲದೆ, ತಂದೆ-ತಾಯಿಯ ಶ್ರಾದ್ಧ ತಿಥಿಗಳು, ತಿಥಿ ಗಂಡಾಂತ ಸಮಯ ವರ್ಜಿತವಾಗಿರುತ್ತದೆ.
ಸೂಕ್ತ ವಾರಗಳು : ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಸೂಕ್ತವಾಗಿವೆ. ರವಿವಾರ, ಮಂಗಳವಾರ, ಶನಿವಾರ ನಿಷಿದ್ದವಾಗಿವೆ.
ನಕ್ಷತ್ರಗಳು : ಮೃಗಶಿರಾ, ರೋಹಿಣಿ, ಉತ್ತರಾ, ಫಾಲ್ಗುಣಿ, ಹಸ್ತ, ಸ್ವಾತಿ,ಅನುರಾಧಾ, ಉತ್ತರಾಷಾಢ, ಶ್ರವಣ, ಧನಿಷ್ಠ, ಶತಭಿಷಾ, ಉತ್ತರಾಭಾದ್ರಪದ ಈ ಹನ್ನೊಂದು ನಕ್ಷತ್ರಗಳು ಸೂಕ್ತವಾಗಿವೆ. ಇವುಗಳ ಅಭಾವದಲ್ಲಿ, ಅಶ್ವಿನಿ, ಪುನರ್ವಸು, ಪುಷ್ಯ ಮತ್ತು ಚಿತ್ತಾ ನಕ್ಷತ್ರಗಳನ್ನು ಪರಿಗಣಿಸಬಹುದು. ಇದಲ್ಲದೆ, ಪತಿ ಪತ್ನಿಯರ ಜನ್ಮ ನಕ್ಷತ್ರ ವರ್ಜಿತವಾಗಿವೆ. ಜನ್ಮ ನಕ್ಷತ್ರದಿಂದ 7, 10, 16, 19 ಮತ್ತು 25ನೆಯ ವಧ ತಾರೆಗಳು ವರ್ಜಿತವಾಗಿವೆ. ಪತಿ ಪತ್ನಿ ಇಬ್ಬರ ಜನ್ಮ ನಕ್ಷತ್ರದಿಮದ ವಧ ತಾರೆಗಳನ್ನು ನೋಡಬೇಕು ಮತ್ತು ಸೂರ್ಯ ಮಂಗಲ, ಶನಿ , ರಾಹು-ಕೇತುಗಳು ಗೋಚಾರದಲ್ಲಿರುವ ನಕ್ಷತ್ರಗಳು ಕೂಡಾ ಮತ್ತು ನಕ್ಷತ್ರ ಗಂಡಾಂತರ ಕಾಲ ವರ್ಜಿತವಾಗಿವೆ.
ಕರಣ : ವಿಷ್ಟಿ ಕರಣದ ಹೊರತು ಅನ್ಯ ಕರಣಗಳು ಸೂಕ್ತವಾಗಿವೆ.
ಯೋಗ : ವ್ಯತಿಪಾತ, ಪರಿಘ, ವೈಧೃತಿಯ ಹೊರತು ಅನ್ಯ ಯೋಗಗಳು ಸೂಕ್ತವಾಗಿರುತ್ತವೆ. ಪರಿಘದ ಪೂರ್ವಾರ್ಧ ವರ್ಜಿತವಾಗಿದ್ದು, ಉತ್ತರಾರ್ಧ ಯೋಗ್ಯವಾಗಿದೆ.
ಲಗ್ನ : ಎಲ್ಲಾ ಲಗ್ನಗಳು ಶುಭವಾಗಿವೆ. ಆದರೆ ಜನ್ಮರಾಶಿ ಅಥವಾ ಜನ್ಮ ಲಗ್ನದಿಂದ ಅಷ್ಟಮ ಲಗ್ನ ವರ್ಜಿತವಾಗಿದೆ ಮತ್ತು ಪಾಪಗ್ರಹಯುಕ್ತ ಲಗ್ನವು ವರ್ಜಿತವಾಗಿದೆ.
ಕೇಂದ್ರ (1,4,7,10) ಮತ್ತು ತ್ರಿಕೋಣ (5,9) ಭಾವಗಳಲ್ಲಿ ಬುಧ, ಗುರು, ಶುಕ್ರಾದಿ ಶುಭಗ್ರಹಗಳು ಇರುವಾಗ ಮತ್ತು ಚಂದ್ರ ಮತ್ತು ಪಾಪಗ್ರಹಗಳು 3,6,11ರಲ್ಲಿ ಇದ್ದರೆ ಉಪಯುಕ್ತವಿರುತ್ತದೆ.
ಅಷ್ಟಮ ಭಾವವು ಗ್ರಹರಹಿತವಾಗಿರಬೇಕು. ವಿಶೇಷವಾಗಿ ಮಂಗಲನು ಇರಬಾರದು ಮತ್ತು ಲಗ್ನ ಗಂಡಾಂತರವಿರಬಾರದು.
ನವಾಂಶ : ನವಾಂಶದಲ್ಲಿ ಎಲ್ಲಾ ನವಾಂಶಗಳು ಶುಭವಾಗಿವೆ. ಆದರೆ ನವಾಂಶ ಕುಂಡಲಿಯಲ್ಲಿ ಚಂದ್ರ ವಿಷಮ ರಾಶಿಯಲ್ಲಿ ಇರಬೇಕು. ಜೊತೆಗೆ ಲಗ್ನದ ವಿಷಯದಲ್ಲಿ ಹೇಳಲಾದ ಎಲ್ಲ ವರ್ಜಿತ ಅಂಶಗಳನ್ನು ಗಮನಿಸಬೇಕು.
ಸ್ತ್ರೀಯರ ಋುತುಕಾಲ, ಗ್ರಹಣ, ಸಂಕ್ರಾಂತಿ ದಿನಗಳು, ಸಂಧ್ಯಾಕಾಲ, ಹಗಲು, ಗುರು-ಶುಕ್ರಾಸ್ತ ಸಮಯ, ಮಲಮಾಸ ಮತ್ತು ಸ್ತ್ರೀಯ ಜನ್ಮರಾಶಿಯಿಂದ ಚತುರ್ಥ, ಅಷ್ಟಮ ಮತ್ತು ದ್ವಾದಶ ಭಾವಗಳಲ್ಲಿ ಚಂದ್ರನಿರುವ ಸಮಯಗಳು ಗರ್ಭಾದಾನಕ್ಕೆ ವರ್ಜಿತವಾಗಿವೆ.
ಈ ಪ್ರಕಾರ ಗರ್ಭಾದಾನ ಸಂಸ್ಕಾರದ ಮುಹೂರ್ತವನ್ನು ತಿಳಿದುಕೊಂಡು, ಶಾಸ್ತ್ರೀಯ ತಿಥಿ ವಿಧಿಗೆ ಅನುಸಾರವಾಗಿ ಗರ್ಭಾದಾನ ಸಂಸ್ಕಾರ ಮಾಡಿಸುವುದರಿಂದ ಯೋಗ್ಯ, ಆರೋಗ್ಯವಂತ ಸಂತಾನ ಪ್ರಾಪ್ತಿಯಾಗುತ್ತದೆ.
-ಸಂಗ್ರಹ
Subscribe to:
Post Comments (Atom)
No comments:
Post a Comment