Monday, 11 February 2019
ವಿವಾಹ ಜ್ಯೋತಿಷ್ಯ: ಒಂದೇ ನಕ್ಷತ್ರ, ಒಂದೇ ರಾಶಿಯವರು ಮದುವೆ ಆಗಬಹುದಾ?
ಹುಡುಗ-ಹುಡುಗಿ ಇಬ್ಬರದೂ ಒಂದೇ ನಕ್ಷತ್ರವಾದರೆ ಮದುವೆ ಮಾಡಬಹುದಾ ಅಥವಾ ಆಗಬಹುದಾ ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತದೆ. ಆ ಪ್ರಶ್ನೆಗೆ ಉತ್ತರ ನೀಡುವ ಸಲುವಾಗಿಯೇ ಇಂದಿನ ಲೇಖನ.
ರೋಹಿಣಿ, ಆರಿದ್ರಾ, ಪುಷ್ಯಾ, ಮಖಾ, ವಿಶಾಖಾ, ಶ್ರವಣ, ಉತ್ತರಾಭಾದ್ರ ಹಾಗೂ ರೇವತಿ ಈ ಪೈಕಿ ಯಾವುದಾದರೂ ಒಂದಾಗಿದ್ದು, ಮದುವೆ ಆಗುವ ಹುಡುಗ ಹಾಗೂ ಹುಡುಗಿ ಇಬ್ಬರದೂ ಒಂದೇ ನಕ್ಷತ್ರವಾದರೆ ಶುಭ.
ಇನ್ನು ಅಶ್ವಿನಿ, ಕೃತ್ತಿಕಾ, ಮೃಗಶಿರಾ, ಪುನರ್ವಸು, ಚಿತ್ತಾ, ಅನೂರಾಧಾ ಹಾಗೂ ಪುರ್ವಾಭಾದ್ರಾವಾದರೆ ಮಧ್ಯಮ. ಉಳಿದ ನಕ್ಷತ್ರಗಳ ಪೈಕಿ ಯಾವುದಾದರೂ ಒಂದಾಗಿ, ಹುಡುಗ- ಹುಡುಗಿಯದು ಇಬ್ಬರದೂ ಒಂದೇ ನಕ್ಷತ್ರವಾದರೆ ವಿವಾಹ ಅಶುಭ. ಅಂದರೆ ಮದುವೆ ಮಾಡಬಾರದು. ಇನ್ನು ವಧು- ವರರ ನಕ್ಷತ್ರವು ಒಂದೇ ಆಗಿ, ಪಾದವು ಬೇರೆ ಬೇರೆಯಾಗಿ, ಹುಡುಗನ ನಕ್ಷತ್ರದ ಪಾದವು ಹುಡುಗಿಯದ್ದಕ್ಕಿಂತ ಮುಂದಿನದ್ದಾಗಿದ್ದರೆ, ಉದಾಹರಣೆಗೆ ಹುಡುಗನದು ಅಶ್ವಿನಿ ನಕ್ಷತ್ರ ಎರಡನೇ ಪಾದ, ಹುಡುಗಿಯದು ಅಶ್ವಿನಿ ನಕ್ಷತ್ರ ಮೂರನೇ ಪಾದ. ಆಗ ಕೂಡ ಮದುವೆ ಶುಭ.
ಏಕನಕ್ಷತ್ರ ಮದುವೆ ವಿಚಾರ
ಅಶ್ವಿನಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುಷ್ಯಾ, ಮಖಾ, ಹಸ್ತಾ, ಸ್ವಾತಿ, ವಿಶಾಖಾ, ಪೂರ್ವಾಷಾಢ, ಶತಭಿಷಾ ಈ ಪೈಕಿ ಯಾವುದಾದರೂ ಒಂದು ಹುಡುಗಿಯ ನಕ್ಷತ್ರವಾಗಿದ್ದು, ಅದೇ ನಕ್ಷತ್ರವು ಹುಡುಗನದೂ ಆಗಿ, ಪಾದದ ವಿಚಾರದಲ್ಲಿ ಹುಡುಗಿಯ ನಕ್ಷತ್ರ ಪಾದವು ಮುಂದಿನದಾದರೆ ವಿವಾಹ ಶುಭ. ಉದಾಹರಣೆ: ಹುಡುಗಿಯದು ರೋಹಿಣಿ ನಕ್ಷತ್ರ ಎರಡನೇ ಪಾದ, ಹುಡುಗನದು ರೋಹಿಣಿ ನಕ್ಷತ್ರ ಮೂರನೇ ಪಾದ.
ಒಂದೇ ರಾಶಿಯವರು ಮದುವೆಯಾಗಬಹುದೆ?
ಒಂದು ವೇಳೆ ಹುಡುಗ ಹಾಗೂ ಹುಡುಗಿಯದು ಒಂದೇ ರಾಶಿಯಾಗಿ, ನಕ್ಷತ್ರವು ಬೇರೆ ಬೇರೆ ಆಗಿದ್ದರೆ ಆಗ ನಾಡಿ ದೋಷ ಹಾಗೂ ಗಣ ದೋಷಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದೇ ರೀತಿ ನಕ್ಷತ್ರವು ಒಂದೇ ಹಾಗೂ ಪಾದಗಳು ಬೇರೆ ಆಗಿದ್ದಲ್ಲಿ ಕೂಡ ವಿವಾಹ ಪ್ರಶಸ್ತ. ಅಲ್ಲಿ ಯಾವುದೇ ದೋಷವಿಲ್ಲ.
ಯಾವಾಗ ನಾಡಿ ದೋಷವಿಲ್ಲ?
ವಧು- ವರರದು ಒಂದೇ ಜನ್ಮ ರಾಶಿ ಹಾಗೂ ಬೇರೆ ನಕ್ಷತ್ರಗಳಾಗಿದ್ದರೆ ಯಾವುದೇ ನಾಡಿ ದೋಷವಿಲ್ಲ. ಅದೇ ರೀತಿ ಒಂದೇ ನಕ್ಷತ್ರ ಹಾಗೂ ಬೇರೆ ಜನ್ಮ ರಾಶಿಗಳಿದ್ದರೂ ಯಾವುದೇ ನಾಡಿ ದೋಷವಿಲ್ಲ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಹುಡುಗ ಹಾಗೂ ಹುಡುಗಿಯದು ಒಂದೇ ನಕ್ಷತ್ರ ಹಾಗೂ ಬೇರೆ ಪಾದಗಳಾಗಿದ್ದರೂ ನಾಡಿ ದೋಷವಿಲ್ಲ.
ಸ್ತ್ರೀ ಪೂರ್ವ ನಕ್ಷತ್ರ ಬಂದರೆ ವಿವಾಹ ಮಾಡುವಂತಿಲ್ಲ
ಆದರೆ, ಹುಡುಗಿಯ ನಕ್ಷತ್ರದ ಹಿಂದೆಯೇ ಹುಡುಗನ ನಕ್ಷತ್ರ ಬಂದರೆ ಮದುವೆ ಅಶುಭ. ಇದನ್ನು ಸ್ತ್ರೀಪೂರ್ವ ನಕ್ಷತ್ರ ಅಂತ ಕರೆಯಲಾಗುತ್ತದೆ. ಉದಾಹರಣೆಗೆ: ಹುಡುಗಿಯ ನಕ್ಷತ್ರವು ಅನೂರಾಧಾವಾಗಿ ಹುಡುಗನದು ಜ್ಯೇಷ್ಠಾ ನಕ್ಷತ್ರವಾದರೆ, ಹುಡುಗಿಯದು ಅಶ್ವಿನಿ ನಕ್ಷತ್ರವಾಗಿ ಹುಡುಗನದು ಭರಣಿಯಾದರೆ ವಿವಾಹ ಅಶುಭ. ಇನ್ನು ನಾಡಿ ದೋಷ ಎಂಬುದು ಆರೋಗ್ಯ, ಆಯುಷ್ಯ ಹಾಗೂ ಮಕ್ಕಳ ಸಂತೋಷ ಇವೆಲ್ಲವನ್ನೂ ಸೂಚಿಸುತ್ತದೆ. ಒಂದೇ ನಾಡಿಯಾದರೆ ಇವೆಲ್ಲಕ್ಕೂ ಸಮಸ್ಯೆಯಾಗುತ್ತದೆ. ಆದ್ದರಿಂದ ನಾಡಿ ದೋಷಕ್ಕೆ ಮಹಾ ಮೃತ್ಯುಂಜಯ ಜಪ ಅಥವಾ ಹೋಮ ಪರಿಣಾಮಕಾರಿ ಪರಿಹಾರ. ಇದನ್ನು ಸೋಮವಾರದಂದು ಶಿವ ದೇವಾಲಯದಲ್ಲಿ ಮಾಡಬೇಕು.
SANGRAHA
Subscribe to:
Post Comments (Atom)
No comments:
Post a Comment