Thursday, 7 December 2017

ಮೂಲ ನಕ್ಷತ್ರ ಶುಭಕಾರಕ-ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್‌.

ರಾತ್ರಿ ಸಮಯದಲ್ಲಿ ನೀಲ ಆಕಾಶವನ್ನು ನೋಡಿದರೆ ಅಗಣಿತವಾದ ಮಿನುಗುವ ಚುಕ್ಕೆಗಳೂ, ತೇಜಃಪುಂಜವಾದ ನಕ್ಷತ್ರಗಳು ನಮ್ಮ ಕಣ್ಣಿಗೆ ಗೋಚರವಾಗುವುವು. ಭಾರತೀಯ ವೇದಾಂಗ ಜ್ಯೋತಿಷ್ಯ ಶಾಸ್ತ್ರದಲ್ಲಿ 27 ನಕ್ಷತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದ್ದು, ಅದರಲ್ಲಿ ಕೆಲವು ನಕ್ಷತ್ರಗಳಿಗೆ ಹೆಚ್ಚಿನ ಪ್ರಾಧ್ಯಾನತೆಯನ್ನು ಕೊಟ್ಟಿರುತ್ತಾರೆ. ಅವು ಯಾವುವೆಂದರೆ- ಮೂಲ, ಆಶ್ಲೇಷ, ವಿಶಾಖ ಮತ್ತು ಜೇಷ್ಠ ನಕ್ಷತ್ರ. ಇವುಗಳನ್ನು ಸ್ತ್ರೀಯರಿಗೆ ಮಾತ್ರ ಬಹಳ ದೋಷಕಾರಕ ನಕ್ಷತ್ರಗಳಾಗಿವೆ ಎಂದು ಹೇಳಿರುವರು. ಮೂಲ ನಕ್ಷತ್ರದ ಬಗ್ಗೆ ಗಮನ ಹರಿಸಿದಾಗ, ಈ ನಕ್ಷತ್ರಗಳನ್ನು ಮೂರು ಗುಂಪುಗಳಾಗಿ ಮಾಡಿರುತ್ತಾರೆ. ಅಶ್ವಿನಿಯಿಂದ ಆಶ್ಲೇಷ ನಕ್ಷತ್ರದ ತನಕ ಒಂದು ಗುಂಪು. ಮಖಾ ನಕ್ಷತ್ರದಿಂದ ಜೇಷ್ಠ ನಕ್ಷತ್ರದ ತನಕ ಇನ್ನೊಂದು ಗುಂಪು. ಮೂರನೆಯದಾಗಿ ಮೂಲ ನಕ್ಷತ್ರದಿಂದ ರೇವತಿ ನಕ್ಷತ್ರದ ತನಕ ಮತ್ತೊಂದು ಗುಂಪು. ಇವುಗಳಲ್ಲಿ ಅಶ್ವಿನಿ, ಮಖಾ ಮತ್ತು ಮೂಲ ನಕ್ಷತ್ರ ಮೊದಲನೇ ನಕ್ಷತ್ರಗಳು. ಮೂಲ ನಕ್ಷತ್ರ ಮೊದಲನೆಯದಾಗಿದ್ದರಿಂದ ಅದಕ್ಕೆ ಋುಷಿ ಮುನಿಗಳು ಮೂಲ ನಕ್ಷತ್ರ ಎಂದು ಕರೆದರು. ಇದರ ಅಧಿಪತಿ ಕೇತು ಗ್ರಹ. ಮೂಲ ನಕ್ಷತ್ರದ 1ನೇ ಪಾದದಲ್ಲಿ ಹೆಣ್ಣು ಮಗು ಜನಿಸಿದರೆ 8 ವರ್ಷದ ತನಕ ಮಗು ತಂದೆಯನ್ನು ನೋಡಬಾರದು ಎಂದೂ 2ನೇ ಪಾದವಾದರೆ ತಾಯಿಗೆ ದೋಷ, 3ನೇ ಪಾದವಾದರೆ ತಂದೆಗೆ ಬರುವ ಆದಾಯದಲ್ಲಿ ನಷ್ಟ ಹಾಗೂ 4ನೇ ಪಾದವಾದರೆ ಶುಭ ಎಂದು ಹೇಳಿರುವರು. ಮೂಲ ನಕ್ಷತ್ರದಲ್ಲಿ ಹೆಣ್ಣು ಮಗು ಜನಿಸಿದರೆ ಮದುವೆಯ ನಂತರ ಪತಿಯ ತಂದೆಗೆ (ಮಾವ)ನಿಗೆ ಕಂಟಕವಾಗುವುದು ಎಂದು ಹೇಳಲಾಗಿದೆ. ಜಾತಕದಲ್ಲಿ ಚಂದ್ರನಿಗೆ ಶುಭ ದೃಷ್ಟಿ ಇದ್ದರೆ, ಯಾವ ಭಾವಕ್ಕೆ ದೋಷ ಆಗಿದೆ ಆ ಭಾವದ ಅಧಿಪತಿ 9ನೇ ಮನೆಯಲ್ಲಿ ಆಗಲಿ ಅಥವಾ ಶುಭ ಸ್ಥಾನದಲ್ಲಿದ್ದರೆ, ಶುಭ ಗ್ರಹಗಳಿಂದ ದೃಷ್ಟಿಸಿದ್ದರೆ, ಚಂದ್ರನಾಗಲಿ, ಭಾವಾಧಿಪತಿಯಾಗಲಿ ಬಲಿಷ್ಠನಾಗಿದ್ದರೆ, ಚಂದ್ರನಿಗೆ ಗುರು ದೃಷ್ಟಿ ಇದ್ದರೆ ಈ ಮೇಲಿನ ಮೂಲ ನಕ್ಷತ್ರದ ದೋಷಗಳೆಲ್ಲಾ ಪರಿಹಾರವಾಗುವುದು. ಇದನ್ನು ಯಾರು ಗಣನೆಗೆ ತೆಗೆದುಕೊಳ್ಳದೆ ಮೂಲ ನಕ್ಷತ್ರ ಎಂದ ತಕ್ಷಣ ಕೆಟ್ಟ ನಕ್ಷತ್ರ ಎಂದು ನಿರ್ಧರಿಸುವುದು ಸರಿಯಲ್ಲ. ಸಾಕ್ಷಾತ್‌ ಸರಸ್ವತಿ ದೇವಿಯ ಜನನವಾಗಿದ್ದೂ ಮೂಲ ನಕ್ಷತ್ರದಲ್ಲಿಯೇ. ನವರಾತ್ರಿಯ ಸಮಯದಲ್ಲಿ ಮೂಲ ನಕ್ಷತ್ರದ ದಿನ ಸರಸ್ವತಿ ದೇವಿಯನ್ನು ವಿಶೇಷ ರೀತಿಯಲ್ಲಿ ಪೂಜಿಸುವರು. ಅಂದು ಆ ದೇವಿಯು ಜನಿಸಿದ ದಿನ ಎಂದು ಸರಸ್ವತಿಯನ್ನು ಆವಾಹನೆ ಮಾಡಿ ಪುಸ್ತಕಗಳನ್ನು ಇಟ್ಟು ಪೂಜಿಸುವುದು ವಾಡಿಕೆಯಾಗಿದೆ. ಸಾಕ್ಷಾತ್‌ ಸರಸ್ವತಿ ದೇವಿಯದೇ ಮೂಲ ನಕ್ಷತ್ರವಾಗಿದ್ದರಿಂದ ಈ ನಕ್ಷತ್ರವನ್ನು ಒಳ್ಳೆಯ ನಕ್ಷತ್ರ ಎಂದೇ ಪರಿಗಣಿಸಬಹುದು. ವಿವಾಹ, ವಿದ್ಯಾರಂಭ, ಯಾತ್ರೆ, ಸೀಮಂತ, ಶಿಶುವಿಗೆ ತೊಟ್ಟಿಲು ಇನ್ನು ಮುಂತಾದ ಶುಭ ಕಾರ್ಯಗಳನ್ನು ಈ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಆದ್ದರಿಂದ ಮೂಲ ನಕ್ಷತ್ರ ಶುಭ ನಕ್ಷತವೇ ಆಗಿದೆ.

ನವಧಾನ್ಯವೂ ಪರಿಹಾರವೂ

ಫಲ ಜ್ಯೋತಿಷ್ಯ- ವಿದ್ಯಾರ್ಥಿಗಳ ಮುಂದೆ ಕ್ಷೇತ್ರಗಳ ಆಯ್ಕೆ ಬಹಳ. ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುನ್ನಡೆಯಲು ಅನುಸರಿಸಬೇಕಾದ ಸುಲಭ ಪರಿಹಾರವೇನು? ಎಂಬುದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ಸರಳ ಪರಿಹಾರವಿದೆ. ಅದನ್ನು ಪಾಲಿಸಿ ಕ್ಷಿಪ್ರ ಲಾಭವನ್ನು ಹೊಂದಬಹುದು. ವಿದ್ಯಾರ್ಥಿಗಳಿಗೆ ಒಂದಿಲ್ಲೊಂದು ಆತಂಕ. ಅತ್ತ ಪರೀಕ್ಷಾ ಜ್ವರ. ಇತ್ತ ಪ್ರತಿನಿತ್ಯ ಅಸೈನ್‌ಮೆಂಟ್‌. ಮನೆಯಲ್ಲಿ ಪೋಷಕರಿಂದ ಓದು ಓದು ಅನ್ನೋ ಒತ್ತಡ. ಶಾಲೆ, ಕಾಲೇಜು ಮುಗಿಸಿ ಬಂದ ಮೇಲೆ ಟ್ಯೂಷನ್‌. ಟ್ಯೂಷನ್‌ ಅನ್ನೋ ಫ್ಯೂಷನ್‌ನಲ್ಲೇ ಸ್ಟೂಡೆಂಟ್‌ ಲೈಫ್‌ನಲ್ಲಿ ಪರ್ಫೆಕ್ಷನ್‌ ಸಾಧಿಸಬೇಕು. ಕಾಂಪಿಟೇಷನ್‌ ವರ್ಲ್ಡ್‌ನಲ್ಲಿ ಉತ್ತಮ ಅಂಕ ಗಳಿಸಬೇಕು. ಅಬ್ಬಾ ಎಷ್ಟೊಂದು ಟೆನ್ಷನ್‌! ಜ್ಯೋತಿಷ್ಯಶಾಸ್ತ್ರ ಎಲ್ಲದಕ್ಕೂ ಒಂದಿಷ್ಟು ಪರಿಹಾರ ಸೂಚಿಸುತ್ತದೆ. ವಿದ್ಯಾರ್ಥಿಗಳ ಪಾಡಿಗೆ ಏನಾದರೂ ಪರಿಹಾರ ಇದೆಯಾ? ಅದೂ ನಮ್ಮ ಕೈಗೆ ಎಟುಕವಂತಿದೆಯಾ? ಹಾಂ ಇದೆ... ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳು ನವಗ್ರಹದ ಚಲನೆಯನ್ನು ಆಧರಿಸಿವೆ. ಒಂದೊಂದು ಗ್ರಹವು ಒಂದೊಂದು ಧಾನ್ಯದ ಪ್ರತೀಕವಾಗಿವೆ. ಅಂದಮೇಲೆ ನವಧಾನ್ಯಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ? ಸೋಜಿಗವೆನಿಸಿದರೂ ಸಾಧ್ಯವಿದೆ. ಯಾವ ಧಾನ್ಯದಿಂದ ಯಾವ ಪರಿಹಾರ ಅಂತ ನೋಡೋಣ. ಗೋಧಿ : ಸೂರ್ಯ ಗ್ರಹವನ್ನು ಪ್ರತಿನಿಧಿಸುತ್ತದೆ. ವಿದ್ಯಾ ವಿಹೀನಃ ಪಶುಃ ಎನ್ನುವಂತೆ ವಿದ್ಯೆಯಿಲ್ಲದ ಬಾಳು ನಾಯಿಗಿಂತ ಕಡೆ. ಅದರಲ್ಲೂ ವಿದ್ಯಾರ್ಥಿಯಾದವನಿಗೆ ವಿದ್ಯೆಯೇ ಬಂಡವಾಳ. ತಾನು ತೆಗೆದುಕೊಂಡ ಕೋರ್ಸ್‌ನಲ್ಲಿ ಉತ್ತಮ ಅಂಕ ಪಡೆದರೇನೇ ಅವಕಾಶ. ಸೂರ್ಯ ಜ್ಞಾನ ಪ್ರದಾಯಕ. ಅವನ ಸಂಕೇತವಾದ ಗೋಧಿ ಪೌಷ್ಟಿದಾಯಕ. ಭಾನುವಾರ ಸೂರ್ಯನಿಗೆ ಸಂಬಂಧಿಸಿದ ವಾರ. ನವಗ್ರಹಗಳನ್ನು ವಿಗ್ರಹಗಳಿಂದಷ್ಟೇ ಅಲ್ಲದೇ ಸಂಬಂಧಿತ ವೃಕ್ಷಗಳಿಂದಲೂ ಗುರುತಿಸುತ್ತೇವೆ. ಹಾಗಾಗಿ ಸೂರ್ಯನ ಕೃಪೆ ಸಂಪಾದಿಸಲು ಜ್ಞಾನವಂತರಾಗಲು ಪ್ರತಿ ಭಾನುವಾರ ನವಗ್ರಹ ವೃಕ್ಷಗಳಿಗೆ ಅಥವಾ ನವಗ್ರಹ ಸನ್ನಿಧಾನಕ್ಕೆ ಎರಡು ಸುತ್ತು ಪ್ರದಕ್ಷಿಣೆ ಬನ್ನಿ. ಕಾಲು ಕೆ.ಜಿ.ಯಷ್ಟನ್ನಾದರೂ ಗೋಧಿಯನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಒಂದು ಬಗೆಯ ಶಿಸ್ತು, ಬದುಕಿಗೆ ಅವಶ್ಯವಾದ ತ್ಯಾಗ ಗುಣವೂ ನಿಮ್ಮದಾಗುತ್ತದೆ. ನಿರಾಳವಾದ ಮನಸ್ಸು ಜ್ಞಾನಾರ್ಜನೆಗೆ ಪೂರಕವಾಗುತ್ತದೆ. ಸೂರ್ಯ ಗ್ರಹವು ಆಡಳಿತಾತ್ಮಕ, ಅಂತಾರಾಷ್ಟ್ರೀಯ, ಕಾನೂನು, ವೈದ್ಯಕೀಯ, ಸಲಹೆಗಾರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಅಕ್ಕಿ : ತಂಡುಲ ಎಂದು ಕರೆಯಲ್ಪಡುವ ಅಕ್ಕಿ ಚಂದ್ರ ಗ್ರಹವನ್ನು ಪ್ರತಿನಿಧಿಸುತ್ತದೆ. ಚಂದ್ರ ಮನೋಕಾರಕ. ಮನಸ್ಸೇ ಸರಿಯಾಗಿಲ್ಲದಿದ್ದರೆ ಹಿಡಿದ ಕೆಲಸ ಸಾಧನೆಯಾಗುವುದಾದರೂ ಹೇಗೆ? ಚಂದ್ರನ ಒಲುಮೆ ಗಳಿಸಿಕೊಳ್ಳಲು ನಿಯಮಿತವಾಗಿ ಪ್ರತಿ ಸೋಮವಾರ ನವಗ್ರಹ ಸನ್ನಿಧಾನದಲ್ಲಿ ಐದು ಪ್ರದಕ್ಷಿಣೆ ಹಾಕಿ. ಕಾಲು ಕೆಜಿಯಷ್ಟಾದರೂ ಅಕ್ಕಿಯನ್ನು ದಾನ ಮಾಡಿ. ಚಂದ್ರಗ್ರಹವು ವಿಜ್ಞಾನ,ಸಂಶೋಧನೆ, ಚಲನಚಿತ್ರ, ನರ್ಸಿಂಗ್‌ ವಿದ್ಯೆ, ಪ್ರಸೂತಿ, ಔಷಧಿ ಶಾಸ್ತ್ರ ಮತ್ತಿತರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ತೊಗರಿ : ಕುಜಗ್ರಹವನ್ನು ಪ್ರತಿನಿಧಿಸುತ್ತದೆ. ಕುಜನಲ್ಲಿ ನಾಯಕತ್ವದ ಗುಣವಿದೆ. ವಿದ್ಯಾರ್ಥಿಯಾದವನಿಗೆ ಜ್ಞಾನವೊಂದಿದ್ದರೆ ಸಾಲದು. ಹಿಡಿದ ಕೆಲಸವನ್ನು ಸಾಧಿಸುವ ಛಲ ಅವನಲ್ಲಿರಬೇಕು. ಇನ್‌ಫೀರಿಯಾರಿಟಿ ಕಾಂಪ್ಲೆಕ್ಸ್‌ ಬದಿಗೊತ್ತಿ ಮುಂದಾಳುವಾಗುವ ಲಕ್ಷಣವಿರಬೇಕು. ಕುಜನು ಭೌತಶಾಸ್ತ್ರ, ಕ್ರಿಯಾಲಜಿ, ಭೂಗರ್ಭ ಮತ್ತಿತರ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಹೆಸರು ಕಾಳು : ಬುಧಗ್ರಹವನ್ನು ಪ್ರತಿನಿಧಿಸುತ್ತದೆ. ಬುಧನು ವ್ಯಾಪಾರ, ವಾಣಿಜ್ಯ, ಸಂಗ್ರಹಶಕ್ತಿ, ಚಾಣಾಕ್ಷತನ. ಕಂಪ್ಯೂಟರ್‌, ತೆರಿಗೆ, ಲೆಖ್ಖಪತ್ರ, ಪತ್ರಿಕೋದ್ಯಮ, ಮಾಹಿತಿ ಮತ್ತು ಸಂಪರ್ಕ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾನೆ. ಅವನ ಕೃಪೆ ಸಂಪಾದಿಸಲು ಪ್ರತಿ ಬುಧವಾರ ನವಗ್ರಹ ಸನ್ನಿಧಾನದಲ್ಲಿ ನಾಲ್ಕು ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಹೆಸರುಕಾಳನ್ನು ದಾನಮಾಡುವುದು ಒಳ್ಳೆಯದು. ಕಡಲೆಕಾಳು : ‘ನ ಗುರೋರಧಿಕಂ ಸತ್ಯಂ’ ಎನ್ನುತ್ತದೆ ವೇದವಾಕ್ಯ. ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಲು ಗುರುವಿನ ಅನುಗ್ರಹ ಮುಖ್ಯ. ಕಡಲೆಕಾಳು ಗುರುಗ್ರಹವನ್ನು ಪ್ರತಿನಿಧಿಸುತ್ತದೆ. ಗುರುವಿನ ಅನುಗ್ರಹವಿಲ್ಲದೇ ವಿದ್ಯೆಯಲ್ಲಿ ಆಸಕ್ತಿ ಮೂಡುವುದಿಲ್ಲ. ವೇದಾಂತ, ಜ್ಞಾನ, ಆಯುರ್ವೇದ, ಸಂಸ್ಕೃತ, ಶಿಕ್ಷಣ ತರಬೇತಿ, ಉಪನ್ಯಾಸಕ, ನ್ಯಾಯ, ಕಾನೂನು ಮತ್ತಿತರ ಕ್ಷೇತ್ರಗಳನ್ನು ಇವನು ಪ್ರತಿನಿಧಿಸುತ್ತಾನೆ. ಗುರುವಿನ ಅನುಗ್ರಹಕ್ಕೆ ಪ್ರತಿ ಗುರುವಾರ ನವಗ್ರಹಗಳಿಗೆ ಐದು ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಕಡಲೆಕಾಳನ್ನು ದಾನ ಮಾಡುವುದು ಒಳ್ಳೆಯದು. ಅವರೆಕಾಳು : ಶುಕ್ರಗ್ರಹವನ್ನು ಪ್ರತಿನಿಧಿಸುತ್ತದೆ. ಶುಕ್ರ ಗ್ರಹದ ಪ್ರಭಾವ ಚಲನಚಿತ್ರ, ನಾಟ್ಯ, ಸಂಗೀತ, ಅಲಂಕಾರ, ಒಳಾಂಗಣ ವಿನ್ಯಾಸ, ಛಾಯಾಗ್ರಹಣ, ಬ್ಯೂಟಿಷಿಯನ್‌ ಮತ್ತಿತರ ಕ್ಷೇತ್ರಗಳ ಮೇಲಾಗುತ್ತದೆ. ಶುಕ್ರನ ಅನುಗ್ರಹ ಸಂಪಾದಿಸಲು ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂನಷ್ಟಾದರೂ ಅವರೆಕಾಳನ್ನು ದಾನ ಮಾಡಬೇಕು. ಕಪ್ಪು ಎಳ್ಳು : ಶನಿಗ್ರಹವನ್ನು ಸಂಕೇತಿಸುತ್ತದೆ. ಶನಿ ಕರ್ಮಾಧಿಪತಿ. ಅವನೇ ಕಾರ್ಯಕಾರಕ. ‘ವಿದ್ಯಾ ದಧಾತಿ ವಿನಯಂ’ ಎನ್ನುವಂತೆ ವಿದ್ಯಾರ್ಥಿಗೆ ವಿನಯವೇ ಭೂಷಣ. ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು, ಸಹನೆ, ಸಂಯಮಗಳು, ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತಿ ಶನಿ ದೇವರ ಕೃಪೆಯಿಂದ ಲಭ್ಯವಾಗುತ್ತದೆ. ಇಂಜಿನಿಯರಿಂಗ್‌, ಕೃಷಿ, ನೀರಾವರಿ, ಪ್ರಾಚ್ಯವಸ್ತು ಸಂಶೋಧನೆ, ಇತಿಹಾಸ, ಗುಡಿ ಕೈಗಾರಿಕೆ ಮತ್ತಿತರ ಕ್ಷೇತ್ರಗಳನ್ನು ಶನಿ ಪ್ರತಿನಿಧಿಸುತ್ತಾನೆ. ಅವನ ಒಲುಮೆ ಸಂಪಾದಿಸಲು ಪ್ರತಿ ಶನಿವಾರ ನವಗ್ರಹಗಳಿಗೆ ಏಳು ಪ್ರದಕ್ಷಿಣೆ ಹಾಕಿ 50 ಗ್ರಾಂನಷ್ಟಾದರೂ ಕರಿ ಎಳ್ಳನ್ನು ದಾನ ಮಾಡಬೇಕು. ಉದ್ದಿನ ಬೇಳೆ : ರಾಹು ಗ್ರಹವನ್ನು ಸಂಕೇತಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಹು ಮತ್ತು ಕೇತು ಛಾಯಾ ಗ್ರಹಗಳು. ರಾಹು ಫೋಟೋಗ್ರಫಿ, ಚಿತ್ರಕಲೆ, ಅನೆಸ್ತೇಷಿಯಾ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯೆಗಳನ್ನು ಪ್ರತಿನಿಧಿಸುತ್ತಾನೆ. ರಾಹುವಿನ ಕೃಪೆಗಾಗಿ ಪ್ರತಿ ಶನಿವಾರ ನವಗ್ರಹ ಸನ್ನಿಧಾನಕ್ಕೆ ಒಂಬತ್ತು ಪ್ರದಕ್ಷಿಣೆ ಹಾಕುವುದು. ನೂರು ಗ್ರಾಂನಷ್ಟಾದರೂ ಉದ್ದಿನಬೇಳೆಯನ್ನು ದಾನ ಮಾಡುವುದು. ಹುರುಳಿ ಕಾಳು : ಕೇತು ಗ್ರಹವನ್ನು ಪ್ರತಿನಿಧಿಸುತ್ತದೆ. ಕೇತು ಗ್ರಹವು ಯೋಗ, ಧ್ಯಾನ, ಮೀಮಾಂಸೆ, ವ್ಯಾಕರಣ, ಔಷಧ ತಯಾರಿಕಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತದೆ. ಕೇತುವಿನ ಕೃಪೆಗೆ ಪ್ರತಿ ಮಂಗಳವಾರ ನವಗ್ರಹ ಸನ್ನಿಧಾನಕ್ಕೆ ಒಂಬತ್ತು ಪ್ರದಕ್ಷಿಣೆಗಳನ್ನು ಹಾಕಿ ಕನಿಷ್ಟ ಪಕ್ಷ 100 ಗ್ರಾಂನಷ್ಟಾದರೂ ಹುರಳಿಕಾಳನ್ನು ದಾನ ಮಾಡಬೇಕು. * ಎಂ. ವಾಸುದೇವ ಮೂರ್ತಿ sangraha

ಪಂಚಮಭಾವದ ಫಲಾಫಲ

ಜ್ಯೋತಿಷಿ ಬದಲಿಸುವವನೇ ಬ್ರಹ್ಮ ಲಿಖಿತವನು ಎಂದು ಮೂಗೆಳೆಯುವವರಿಗೇನು ಕಡಿಮೆಯಿಲ್ಲ. ಬ್ರಹ್ಮ ಲಿಖಿತವನ್ನು ಬದಲಿಸಲಿಕ್ಕೆ ಸಾಧ್ಯವಾಗದಿದ್ದರೂ ಜಾತಕದೊಳಗಿನ ಭಾವವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರಿಂದ ಬಂದೊದಗಬಹುದಾದ ಫಲಗಳನ್ನು ಹೇಳಬಹುದು. ಮಹರ್ಷಿ ಪರಾಶರರು ಪಂಚಮಭಾವವನ್ನು ಪರಿಶೀಲಿಸುವುದರಿಂದ ಯಂತ್ರ, ಮಂತ್ರ, ತಂತ್ರ, ವಿದ್ಯೆ, ಬುದ್ದಿ, ಕಲ್ಪನೆ, ರಾಜ್ಯಪ್ರಾಪ್ತಿ, ಅಪಭ್ರಂಶ ಮತ್ತಿತರ ಸಂಗತಿಗಳನ್ನು ತಿಳಿಯಬಹುದು ಎನ್ನುತ್ತಾರೆ. ಜ್ಯೋತಿಷ್ಯದಲ್ಲಿ ಲಗ್ನ, ಪಂಚಮ ಮತ್ತು ಭಾಗ್ಯಸ್ಥಾನಗಳಿಗೆ ವಿಶೇಷ ಪ್ರಾಶಸ್ಥ್ಯವಿದೆ. ಲಗ್ನವು ತನ್ನನ್ನೂ, ಪಂಚಮವು ಸಂತಾನ, ತಾತನನ್ನು , ಭಾಗ್ಯಸ್ಥಾನವು ಜನ್ಮದಾತನನ್ನು ಸೂಚಿಸುವುದರಿಂದ ಇವು ಜಾತಕನ ವಂಶವನ್ನು ಸೂಚಿಸುವುದು. ಅದರಿಂದಾಗಿ ವಂಶಪಾರಂಪರ್ಯವಾಗಿ ಬರುವ ಶುಭಾಶುಭ ಫಲಗಳನ್ನು ತಿಳಿದುಕೊಳ್ಳಬಹುದು. ಪಂಚಮಭಾವದಲ್ಲಿ ಶುಭಗ್ರಹಗಳಿದ್ದರೆ, ಪಂಚಮಾಧಿಪತಿಯು ಬಲಿಷ್ಠನಾಗಿದ್ದರೆ, ಕಾರಕನಾದ ಗುರುವು ಬಲಿಷ್ಠನಾಗಿದ್ದರೆ, ಪಂಚಮಾಧಿಪತಿ ನೈಸರ್ಗಿಕ ಶುಭಗ್ರಹನಾಗಿದ್ದು 1,2,3,4,5,7,9, 10, 11ರಲ್ಲಿದ್ದರೆ ಪಂಚಮಾಧಿಪತಿ ನೈಸರ್ಗಿಕ ಪಾಪಗ್ರಹನಾದಾಗ 1,5,9,10,11ನೇ ಭಾವಗಳಲ್ಲಿದ್ದರೆ ಪೂರ್ವಾರ್ಜಿತ ಪುಣ್ಯಫಲದ ಕಾರಣ ಉತ್ತಮ ನಡತೆ, ಜ್ಞಾನ, ಮಂತ್ರಸಿದ್ಧಿ, ರಾಜಾಶ್ರಯ, ಸತ್‌ ಸಂತಾನ, ಪ್ರೀತ್ಯಾಧರಗಳನ್ನು ಹೊಂದುತ್ತಾನೆ. ಪಂಚಮಭಾವದಲ್ಲಿ ಅಶುಭ ಗ್ರಹಗಳಿದ್ದರೆ, ಪಂಚಮಾಧಿಪತಿ ಬಲಹೀನನಾಗಿ ಅಶುಭ ಭಾವಗಳಲ್ಲಿ ಇದ್ದರೆ , ಪಂಚಮಾಧಿಪತಿ ನೈಸರ್ಗಿಕ ಶುಭಗ್ರಹನಾಗಿ 6,8,12ರಲ್ಲಿದ್ದರೆ , ಕಾರಕ ಗುರುವು ಬಲಹೀನನಾಗಿದ್ದರೆ, ಪೂರ್ವಾರ್ಜಿತ ಪುಣ್ಯಫಲದ ಕೊರತೆಯಿಂದ ಅಥವಾ ಪಾಪಫಲದ ಕಾರಣದಿಂದ ವಿದ್ಯಾಹೀನನಾಗುವನು, ಮೂಢನಾಗುವನು, ಸಂಕುಚಿತ ಹಾಗೂ ಹೊಟ್ಟೆ ಕಿಚ್ಚಿನ ಸ್ವಭಾವ ಉಳ್ಳವನಾಗುವನು. ನಿಸ್ಸಂತಾನ ಅಥವಾ ದುರ್ನಡತೆಯುಳ್ಳ ಸಂತಾನ ಪ್ರಾಪ್ತಿಯಾಗುವುದು. ಪಂಚಮಭಾವದ ಅಧಿಪತಿ ನೈಸರ್ಗಿಕವಾಗಿ ಅಶುಭನಾಗಿ 4,6,7,8,12ರಲ್ಲಿದ್ದರೆ ಅನಾರೋಗ್ಯ, ದುಃಖ, ಜ್ಞಾಪಕಶೂನ್ಯತೆ, ಅವಿವೇಕ ವರ್ತನೆ ಕಂಡು ಬರುತ್ತದೆ. ತನ್ನ ಬುದ್ಧಿಯ ಕಾರಣದಿಂದಲೇ ಕಷ್ಟ ನಷ್ಟಗಳನ್ನು ಅನುಭವಿಸುತ್ತಾನೆ. 3,5,9,10,11ರಲ್ಲಿದ್ದರೆ ಉತ್ತಮವಾದ ವಿದ್ಯೆ, ಬುದ್ದಿ, ಜ್ಞಾನ, ಸಂತಾನ, ಪದವಿ, ಉದ್ಯೋಗ ಇತ್ಯಾದಿಗಳು ಲಭಿಸುತ್ತವೆ. ಪಂಚಮಾಧಿಪತಿ ಸೂಚಿಸುವ ದೇವತೆಗಳನ್ನು ಜಪಿಸಿ ಪೂಜಿಸಿದರೆ ಜನ್ಮಾಂತರಗಳಲ್ಲಿ ಅಥವಾ ವಂಶವಾಹಿನಿಯಿಂದ ಪ್ರಾಪ್ತವಾದ ಕಷ್ಟ, ದುಃಖ, ರೋಗಗಳು ನಿವಾರಣೆಯಾಗಿ ಸುಖ ಪ್ರಾಪ್ತಿಯಾಗುತ್ತವೆ. ಪಂಚಮಾಧಿಪತಿ ಗ್ರಹಗಳ ಜತೆ ಸೂಚಿಸಿರುವ ದೇವತೆಗಳನ್ನು ಪೂಜಿಸುವುದರಿಂದ , ಮಂತ್ರಜಪ ಇತ್ಯಾದಿ ವಿಧಾನದಿಂದ ಸೇವಿಸುವುದರಿಂದ, ಪಂಚಮಾಧಿಪತಿ ಸೂಚಿಸುವ ಧಾನ್ಯವನ್ನು ದಾನ ಮಾಡುವುದರಿಂದ, ಸೂಚಿಸುವ ರತ್ನ ಧಾರಣೆ ಮಾಡುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಸಂಗೀತ ಮತ್ತಿತರ ಕಲೆಗಳಲ್ಲಿ ಪ್ರಾವೀಣ್ಯತೆ, ವಿದ್ಯೆಯಲ್ಲಿ ಆಸಕ್ತಿ, ಸಭೆಗಳಲ್ಲಿ ಗೌರವ, ಸನ್ಮಾನ ಉನ್ನತ ಪದವಿಯನ್ನು ಹೊಂದುವ ಸಾಧ್ಯತೆಯಿದೆ. ಬಾಂಧವ್ಯಗಳು ಸುಧಾರಣೆಯಾಗುತ್ತವೆ. ಮಾನಸಿಕ ಸ್ಥೈರ್ಯ ಉತ್ತಮವಾಗುತ್ತದೆ. ಪಂಚಮಾಧಿಪತಿ- ದೇವತೆ - ಧಾನ್ಯ - ರತ್ನ ರವಿ -ಸೂರ್ಯ, ಗಾಯತ್ರಿ -ಗೋಧಿ- ಮಾಣಿಕ್ಯ ಚಂದ್ರ -ಪಾರ್ವತಿ, ಲಕ್ಷ್ಮಿ- ಅಕ್ಕಿ,- ಭತ್ತ -ಮುತ್ತು ಕುಜ- ಸುಬ್ರಹ್ಮಣ್ಯ, ದುರ್ಗಾ, ನರಸಿಂಹ -ತೊಗರಿ- ಹವಳ ಬುಧ -ಲಕ್ಷ್ಮೇನಾರಾಯಣ, ವಿನಾಯಕ -ಹೆಸರುಕಾಳು -ಪಚ್ಚೆ ಗುರು- ದಕ್ಷಿಣಾಮೂರ್ತಿ, ದತ್ತಾತ್ರೇಯ- ಕಡಲೆ- ಪುಷ್ಯರಾಗ ಶುಕ್ರ -ಲಕ್ಷ್ಮಿ, ದುರ್ಗಾದೇವಿ- ಅವರೆ, ವಜ್ರ ಶನಿ- ಮೃತ್ಯುಂಜಯ, ಹನುಮಂತ- ಕರಿಎಳ್ಳು -ಗೋಮೇಧಿಕ ಕೇತು -ನಾಗದೇವತೆ, ಗಣಪತಿ- ಹುರಳಿ- ವೈಢೂರ್ಯ -ಪ್ರಕಾಶ್‌ರಾವ್‌ ಕೆಂದೋಳೆ sangraha

ನಂಬಿಕೆಯಲ್ಲಿದೆ ಪರಿಹಾರ

ಮನೆ, ಮನಸ್ಸನ್ನು ತುಂಬೋ ಮಕ್ಕಳು ಇದ್ದಕ್ಕಿದ್ದಂತೆ ಹುಷಾರು ತಪ್ಪುತ್ತಿರುತ್ತಾರೆ. ಮನೇಲಿ ಪದೇ ಪದೇ ಅನಾರೋಗ್ಯ. ಎಷ್ಟು ದುಡಿದ್ರೂ, ಏನೇ ಕೂಡಿಹಾಕಿದ್ರೂ ಪ್ರಯೋಜನವಿಲ್ಲ. ಕೈಸಾಲ ಇಲ್ಲಾ ಋುಣಬಾಧೆ ಇಲ್ಲಾ ಅಪವ್ಯಯ. ಇಂತಹ ಸಂದರ್ಭಗಳಲ್ಲಿ ತಕ್ಷ ಣ ನೆನಪಿಗೆ ಬರೋ ಸಂಗತಿಯೇ ಯಾರಾದರೂ ನಮಗೆ ಮಾಟ ಮಾಡಿಸಿದ್ದಾರಾ? ಕೈಮುಸುಕು (ವಾಮಾಚಾರ) ಮಾಡಿಸಿದ್ದಾರಾ? ಅಂತ. ಮನುಷ್ಯರ ಸ್ವಭಾವವೇ ಹಾಗೆ. ಸಮಸ್ಯೆ ಬಂದಾಗ ಸಕಾರಾತ್ಮಕವಾಗಿ ಚಿಂತಿಸಿ ಅದಕ್ಕೊಂದು ಪರಿಹಾರ ಹುಡ್ಕೋ ಬದಲು ನಕಾರಾತ್ಮಕವಾಗೇ ಯೋಚಿಸೋದು. ಕೈಮುಸುಕು, ಮಾಟ, ಮಂತ್ರಗಳ ಹಿಂದೆ ಮನಸ್ಸನ್ನು ಸುತ್ತಾಡಿಸೋದು. ಆದರೂ ನೊಂದ, ಬೆಂದ, ಖಿನ್ನವಾದ ಮನಸ್ಸಿಗೆ ಒಂದಿಷ್ಟು ಸಮಾಧಾನ ಕೊಡೋ ಮಾತು, ಪರಿಹಾರ ವಿಧಾನ ಕೊಟ್ಟಾಗ ಅವರಿಗೂ ಖುಷಿಯಾಗುತ್ತೆ. ಸಮಾಜಕ್ಕೆ ಒಳ್ಳೆಯದನ್ನು ಮಾಡಿದ ತೃಪ್ತಿಯೂ ನಮಗಿರುತ್ತೆ. ಯಾರೋ ವಾಮಾಚಾರ ಮಾಡಿದ್ದಾರೆ, ಮತ್ಯಾರೋ ಮಾಟ ಮಾಡಿಸಿದ್ದಾರೆ ಅಂತ ಗೊಣಗೋದು ಬಿಟ್ಟು ಸುಲಭ ಹಾಗೂ ಸರಳವಾದ ಈ ಪರಿಹಾರವನ್ನು ಅಳವಡಿಸಿಕೊಳ್ಳಿ. ಮಾಡಿದ ಕೂಡಲೇ ಪರಿಹಾರ ಸಿಗದಿದ್ದರೂ ಒಂದಷ್ಟು ದಿನಗಳ ನಂತರ ಅದರ ಫಲಾನುಭವ ನಿಮ್ಮದಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸೋಲಾರ್‌ ಟ್ರೀಟ್ಮೆಂಟ್‌: ಅರಿಶಿನ ಮಿಶ್ರಿತ ನೀರನ್ನು ಗಂಧದಂತೆ ಮಾಡಿಕೊಂಡು ದೊಡ್ಡದಾದ ಸ್ಟೀಲ್‌ ತಟ್ಟೆಗೆ ಸವರಿ. ಅದರ ಮೇಲ್ಬದಿಯಲ್ಲಿ ಕೆಂಪು ಗುಲಾಬಿ ಹೂವಿನ ದಳಗಳನ್ನು ಹರಡಿ. ಅದರ ಮೇಲೆ ಕೊಬ್ಬರಿ ಎಣ್ಣೆ ಮಿಶ್ರಿತ ಶುದ್ಧ ನೀರನ್ನು ಚಿಮುಕಿಸಿ. ಕೆಂಪು ಗುಲಾಬಿ ಹೂವಿನ ಮಧ್ಯೆ ಮೇಣದ ಬತ್ತಿಗಳನ್ನು ಬೆಳಗಿಸಿ. ದೇವರ ಮನೆಯಲ್ಲಿ ಇಡಿ. ತದೇಕ ಚಿತ್ತದಿಂದ ಒಂದು ನಿಮಿಷಗಳ ಕಾಲ ಮೇಣದ ಬತ್ತಿಯ ಜ್ಯೋತಿಯನ್ನೇ ದೃಷ್ಟಿಸಿ. ನಂತರ ಮನೆಯಿಂದ ಹೊರಗೆ ಬಂದು ಸೂರ್ಯನನ್ನು ದೃಷ್ಟಿಸುವುದು. ಸೂರ್ಯನಲ್ಲಾಗುವ ಬಣ್ಣದ ಬದಲಾವಣೆಗಳನ್ನು (ಕೆಂಪು, ಹಳದಿ ಮತ್ತು ನೀಲಿ) ಗಮನಿಸುವುದು. ಆ ನಂತರ ಮನೆಯೊಳಗೆ ತಟ್ಟೆಯಲ್ಲಿ ಇಟ್ಟಿರುವ ದೀಪವನ್ನು ದೃಷ್ಟಿಸಿದಾಗ ಅದೂ ಕೆಂಬಣ್ಣದಂತೆಯೇ ಕಾಣುತ್ತದೆ. ಅದನ್ನು ತದೇಕಚಿತ್ತವಾಗಿ ಒಂದು ನಿಮಿಷಗಳ ಕಾಲ ನೋಡುವ ಮೂಲಕ ಸೂರ್ಯನ ಪ್ರಭಾವ ನಮ್ಮ ಮೇಲಾಗುತ್ತದೆ. ಮನಸ್ಸಿಗೆ ಮಸುಕಿರುವ ವಾಮಾಚಾರದ ಛಾಯೆ ಸರಿದು ಹೋಗುತ್ತದೆ. ಆದರೆ ಗರ್ಭಿಣಿ ಹೆಣ್ಣು ಮಕ್ಕಳು ಹಾಗೂ ಮೈಗ್ರೇನ್‌ ಪೀಡಿತರು ಈ ಪ್ರಯೋಗವನ್ನು ಮಾಡಬಾರದು. ನಾರಾಯಣ ಸೆಟ್ಟಿ ಪದ್ಮಸಾಲಿ sangraha

ನವಧಾನ್ಯ ದಾನದಿಂದ ಕಾಯಿಲೆ ನಿವಾರಣೆ

ನವಧಾನ್ಯಗಳ ಸೇವನೆಯಿಂದ ಆರೋಗ್ಯವಷ್ಟೇ ಸುಧಾರಿಸುವುದಿಲ್ಲ. ಅದರೊಂದಿಗೆ ಕರ್ಮಸಂಬಂಧಿತ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ತತ್‌ ಸಂಬಂಧಿ ದೋಷವನ್ನು ಪರಿಹರಿಸಿಕೊಳ್ಳಬಹುದು. * ಗೋಧಿ-ಸೂರ್ಯ: ಪ್ರತಿ ಭಾನುವಾರ ನವಗ್ರಹಗಳಿಗೆ 2 ಪ್ರದಕ್ಷಿಣೆ ಹಾಕಿ 1/4 ಗೋಧಿ ದಕ್ಷಿಣೆ ಸಹಿತ ಧಾನ ಮಾಡಿದರೆಪುರುಷರ ಆರೋಗ್ಯ, ಹೃದಯ, ಕಣ್ಣುಪಿತ್ತ, ಪಿತ್ತಪ್ರಧಾನವಾದ ರೋಗಗಳು, ಬೆನ್ನು, ರಕ್ತದೊತ್ತಡ, ಮಿದುಳುವ್ಯಾಧಿ, ತಲೆ ಸುಡುವುದು, ಜಠರದ ಹುಣ್ಣು, ಸಣ್ಣಕರುಳು, ಕೆಂಪು ರಕ್ತಕಣ, ರಕ್ತದ ಪ್ಲೇಟ್‌ಲೆಟ್ಸ್‌ (ಡೆಂಗ್ಯೂ ಜ್ವರ), ಏಡ್ಸ್‌, ಸನ್‌ಸ್ಟ್ರೋಕ್ಸ್‌, ಪ್ರತಿರೋಧಕ ಶಕ್ತಿ, ಥೈರಾಯಿಡ್‌, ಪೋಲಿಯೋ ಗುಣವಾಗುತ್ತವೆ. *ಅಕ್ಕಿ-ಚಂದ್ರ: ಪ್ರತಿ ಸೋಮವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 1/4 ಅಕ್ಕಿ ದಕ್ಷಿಣೆ ಸಹಿತ ದಾನ ಮಾಡಿದರೆ ಸ್ತ್ರೀಯರ ಆರೋಗ್ಯ, ಮಾನಸಿಕವಾಗಿ ಬಲಾಡ್ಯನಾಗಲು, ಏಕಾಗ್ರತೆ, ಮನಃಶಾಂತಿಗೆ, ರಕ್ತ ಚಲನೆಗೆ, ಮಧುಮೇಹ,ಕೋಮ, ಮೂರ್ಛೆ, ಸನ್ನಿವ್ಯಾಧಿ, ಗರ್ಭಾಶಯ, ತುಟಿ, ಬಾಣಂತಿಯರ ವ್ಯಾಧಿಗಳು, ಪುರುಷರಿಗೆ ಎಡಗಣ್ಣು, ಸ್ತ್ರೀಗೆ ಬಲಕಣ್ಣು, ಅಸ್ತಮ, ಕ್ಷಯ, ಅನ್ನಕೋಶ, ಸ್ತನಗಳು, ಜಲಧೋರ, ಹುಚ್ಚು, ಥೈರಾಯಿಡ್‌, ಪಾಶ್ರ್ವವಾಯು, ಬಿಕ್ಕಳಿಕೆ, ಸಣ್ಣ ಮಕ್ಕಳಿಗೆ ಬರುವ ಎಲ್ಲಾ ವ್ಯಾಧಿಗಳು ಗುಣವಾಗುತ್ತವೆ. *ತೊಗರಿ-ಕುಜ: ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100ಗ್ರಾಂ ತೊಗರಿಬೇಳೆ ದಕ್ಷಿಣೆ ಸಹಿತ ದಾನ ಮಾಡಿದರೆ ಶಸ್ತ್ರಚಿಕಿತ್ಸೆ, ಬೆಂಕಿ, ರಕ್ತ ಹೆಪ್ಪುಗಟ್ಟಲು, ಸ್ತ್ರೀಮಾಸಿಕ ರಕ್ತಸ್ರಾವ ಮತ್ತು ಹೊಟ್ಟೆ ನೋವು, ಅಸ್ತಮ, ಅಲ್ಸರ್‌, ಕ್ಯಾನ್ಸರ್‌, ಗಾಯ, ಕುರು, ಹುಣ್ಣು, ನೋವುಗಳಿಗೆ ಎಡ ಮಿದುಳು, ಆಂತರಿಕ ವ್ರಣ, ಆಮ್ಲ ಉಷ್ಣ ಪಿತ್ಥ, ತಾಪಾಮಾನ ವ್ಯಾದಿ, ಕತ್ತು, ಮಜ್ಜ, ಸ್ನಾಯು, ಹೃದಯದ ಕವಾಟಗಳು, ಮಂಗನ ಬಾವು ಪಿಸಾರ, ಪ್ಲೇಗ್‌, ಮೈಲಿ, ಒಣಕೆಮ್ಮು, ರೋಗ ನಿರೋಧಕ ಗುಣವಾಗುತ್ತವೆ. *ಹೆಸರು ಕಾಳು-ಬುಧ: ಪ್ರತಿ ಬುಧವಾರ ನವಗ್ರಹಗಳಿಗೆ 4ಪ್ರದಕ್ಷಣೆ ಹಾಕಿ 100 ಗ್ರಾಂ ಹೆಸರುಕಾಳು ದಾನ ಮಾಡಿದರೆ ಚರ್ಮ, ತೊದಲು ಮಾತು,ನರಗಳು, ಬಲ ಮಿದುಳು, ತಲೆಸುತ್ತು, ನೆನಪಿನ ಶಕ್ತಿ, ಶ್ವಾಸಕೋಶ, ಗಂಟಲು, ಮೂಗಿನವ್ಯಾಧಿ, ಅಸ್ತಮಾ, ಉಸಿರಾಟ, ಅಪಸ್ಮಾರ, ಮೂಗಿನ ವ್ಯಾಧಿ, ದುಃಸ್ವಪ್ನ, ಮೈ ತುರಿಸುವಿಕೆ, ಚಿತ್ತಭ್ರಮೆ, ಉನ್ಮಾದ ಗುಣವಾಗುವಲ್ಲಿ ಪೂರಕ. *ಕಡಲೆಕಾಳು-ಗುರು: ಪ್ರತಿ ಗುರುವಾರ ನವಗ್ರಹಗಳಿಗೆ 5 ಪ್ರದಕ್ಷಿಣೆ ಹಾಕಿ 100ಗ್ರಾಂ ಕಡಲೆಕಾಳು ಸಹಿತ ದಾನ ಮಾಡಿದರೆ ಮೂತ್ರಪಿಂಡ, ದುರ್ಮಾಂಸ, ಕಾಮಾಲೆ, ಜ್ವರ, ಟೈಫಾಯಿಡ್‌, ಮಧುಮೇಹ, ಗ್ಯಾಸ್ಟ್ರಿಕ್‌, ಯಕೃತ್‌, ಸುಖದಿಂದ ಬರುವ ವ್ಯಾಧಿ, ಬಲಕಿವಿ, ಜಠರಾಗ್ನಿ, ಮೇದೋಜೀರಕ ಗ್ರಂಥಿ ಸಂಬಂಧಿ ಸಮಸ್ಯೆ ಇತ್ಯಾದಿ ಶಮನವಾಗುತ್ತವೆ. *ಅವರೆಕಾಳು- ಶುಕ್ರ: ಪ್ರತಿ ಶುಕ್ರವಾರ ನವಗ್ರಹಗಳಿಗೆ 6 ಪ್ರದಕ್ಷಿಣೆ ಹಾಕಿ 100 ಗ್ರಾಂ ಅವರೆಕಾಳು ದಕ್ಷಿಣೆ ಸಹಿತ ದಾನ ಮಾಡಿದರೆ ಗುಪ್ತವ್ಯಾಧಿಗಳು, ಬೆವರು, ಮೂತ್ರವ್ಯಾದಿ, ದಾಹ, ಮೇಧಾಶಕ್ತಿ, ಸ್ತ್ರೀವ್ಯಾಧಿಗಳು, ಏಡ್ಸ್‌, ವೀರ್ಯ ದೋಷ, ಮಧುಮೇಹ, ಮೂತ್ರಪಿಂಡ, ಜನನೇಂದ್ರೀಯ, ಸುಂದರ ಅಂಗ, ಥೈರಾಯಿಡ್‌, ಸಂಭೋಗದಲ್ಲಿ ತಡೆ ಇತ್ಯಾದಿ ಸಮಸ್ಯೆಗಳ ನಿರಾವಣೆಗೆ ಅನುಕೂಲ. *ಕಪ್ಪು ಎಳ್ಳು-ಶನಿ: ಪ್ರತಿ ಶನಿವಾರ ನವಗ್ರಹಗಳಿಗೆ 7 ಪ್ರದಕ್ಷಿಣೆ ಹಾಕಿ 50ಗ್ರಾಂ ಕಪ್ಪು ಎಳ್ಳು ದಕ್ಷಿಣೆ ಸಹಿತ ದಾನ ಮಾಡಿದರೆ ಗ್ಯಾಸ್ಟ್ರಿಕ್‌, ಸಂಧಿವಾತ, ಪಾಶ್ರ್ವವಾಯು, ಮೂಳೆ, ದೊಡ್ಡ ಕರುಳವ್ಯಾಧಿ, ವಾಹನದುರಸ್ತಿಗೆ, ಹಲ್ಲು, ಕೀಲುನೋವು, ಸಂಧಿವಾತ, ಪಾಶ್ರ್ವವಾಯು, ಮೂಳೆ, ದೊಡ್ಡ ಕರುಳುವ್ಯಾಧಿ, ಶೀತದ ಅಸ್ತಮ, ಬಾಲಗ್ರಹ, ಕೋಮ, ಮಿದುಳಿನಲ್ಲಿ ರಕ್ತತಡೆ, ಕೊಲೆಸ್ಟ್ರಾಲ್‌, ಕೆಮ್ಮು, ಮೂಳೆಕ್ಷಯ, ಕಾಲರಾ, ಫಿಟ್ಸ್‌, ಹೃದಯ, ಪೋಲಿಯೋ, ಸನ್ನಿಪಾತ, ನಾಯಿಕೆಮ್ಮು, ಹಲ್ಲು, ಬೆನ್ನು ನೋವು, ಸಂಧಿವಾತ, ಕೀಳು, ಅತಿಸಾರ, ಮಲೇರಿಯಾ, ಕೂದಲು ಉದುರುವುದು, ಧರ್ನುವಾತ, ಒಣಕೆಮ್ಮು, ಹೃದಯದಲ್ಲಿ ರಂಧ್ರಸಮಸ್ಯೆ ನಿವಾರಣೆಗೆ ಪೂರಕ. * ಉದ್ದು- ರಾಹು ಪ್ರತಿ ಶನಿವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಉದ್ದಿನಬೇಳೆ ಸಹಿತ ದಾನ ಮಾಡಿದರೆ ಹೆದರಿಕೆ, ನಡುಗಿಸುವಿಕೆ, ಕ್ರೂರ ಜಂತುಗಳಿಂದ ಬಾಧೆ, ಅಮ್ಮ, ನಾಗರಸುತ್ತು, ಕುಷ್ಠ, ಚರ್ಮ, ತೊನ್ನು, ಭೂತವಿಕಾರಗಳು, ಕರು, ಸಾಂಕ್ರಾಮಿಕ ವ್ಯಾಧಿ, ಭಯ, ಹೃದಯ ಸ್ತಂಭನ, ರಕ್ತನ್ಯೂನತೆ, ಗರ್ಭಪಾತ, ಸ್ತ್ರೀಮಾಸಿಕ ದೋಷ, ದೃಷ್ಟಿ ದೋಷ ನಿವಾರಣೆಗೆ, ಅನುಸೂಚಿತ ವ್ಯಾಧಿ, ಮಾಟ ಶೂನ್ಯ, ಒಣಕೆಮ್ಮು. *ಹುರುಳಿ- ಕೇತು: ಪ್ರತಿ ಮಂಗಳವಾರ ನವಗ್ರಹಗಳಿಗೆ 9 ಪ್ರದಕ್ಷಿಣೆ ಹಾಕಿ 100 ಗ್ರಾಂ ಹುರುಳಿಕಾಳು ದಕ್ಷಿಣೆ ಸಹಿತ ದಾನ ಮಾಡಿದರೆ ಎಲ್ಲಾ ವಿಧವಾದ ಕ್ಯಾನ್ಸರ್‌ಗಳು, ಅಲ್ಸರ್‌, ಗ್ರಂಥಿ ದೋಷ, ಜೀವಾಣುಗಳಿಂದ ಬರುವ ವ್ಯಾಧಿ, ಬುದ್ಧಿಭ್ರಮಣೆ, ಜೀವಕೋಶಗಳ ವ್ಯಾಧಿ ಶಮನಕ್ಕೆ ಪೂರಕವಾಗುತ್ತವೆ. ಮೇಲೆ ತಿಳಿಸಿದ ದಿನಗಳಲ್ಲಿ ವ್ಯಾದಿಗಳಿಗೆ ತಕ್ಕಂತೆ ನವಧಾನ್ಯಗಳನ್ನು ಹಲವು ವಾರ ದಾನ ಮಾಡಿದರೆ ಈ ವ್ಯಾಧಿಗಳು ನಿವಾರಣೆಯಾಗುತ್ತದೆ. * ಎಂ. ವಾಸುದೇವಮೂರ್ತಿ sangraha

ಜ್ಯೋತಿಷ್ಯ ಶಾಸ್ತ್ರ ಸಂಬಂಧಿ ಮೂಲ ಮಾಹಿತಿಗಳು

ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಅದೆಂದರೆ ಉತ್ತರಾಯಣ ಮತ್ತು ದಕ್ಷಿಣಾಯಣ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಇಂಗ್ಲಿಷ್‌ ಕಾಲಮಾನದ ಒಂದು ವರ್ಷವನ್ನು ಪಂಚಾಂಗದ ರೀತ್ಯ ಸಂವತ್ಸರವೆಂದು ಗುರುತಿಸಲಾಗುತ್ತದೆ. ಒಟ್ಟು 60 ಸಂವತ್ಸರಗಳಿವೆ. ನಾವೀಗ 30ನೇ ಸಂವತ್ಸರದಲ್ಲಿದ್ದೇವೆ. ಮುಂಬರುವ ಸಂವತ್ಸರವೇ 'ಹೇವಿಳಂಬಿ'. ಒಂದು ಸಂವತ್ಸರಕ್ಕೆ ಆರು ಋುತುಗಳು. ಮಾಸಗಳು : ಒಟ್ಟು ಹನ್ನೆರಡು ಮಾಸಗಳಿವೆ. ಅವೆಂದರೆ ವಸಂತ ಋುತು (ಚೈತ್ರ-ವೈಶಾಖ), ಗ್ರೀಷ್ಮ ಋುತು (ಜ್ಯೇಷ್ಠ-ಆಷಾಢ), ವರ್ಷ ಋುತು (ಶ್ರಾವಣ-ಭಾದ್ರಪದ), ಶರದ್ರುತು (ಆಶ್ವಯುಜ-ಕಾರ್ತಿಕ), ಹೇಮಂತ ಋುತು (ಮಾರ್ಗಶಿರ-ಪುಷ್ಯ), ಶಿಶಿರ ಋುತು (ಮಾಘ-ಫಾಲ್ಗುಣ). ಒಂದು ತಿಂಗಳಲ್ಲಿ ಎರಡು ಪಕ್ಷಗಳು. ಶುಕ್ಲ (ಹುಣ್ಣಿಮೆಯಿಂದ ಪಾಡ್ಯದವರೆಗೆ - ವೃದ್ಧಿ ಚಂದ್ರ) ಮತ್ತು ಕೃಷ್ಣ ಪಕ್ಷ (ಪಾಡ್ಯದಿಂದ ಅಮಾವಾಸ್ಯೆಯವರೆಗೆ - ಕ್ಷೀಣ ಚಂದ್ರ). ವೃದ್ಧಿ ಚಂದ್ರ ಕಾಲದಲ್ಲಿ ಶುಭ ಕಾರ್ಯಗಳನ್ನು ಮಾಡಬೇಕೆನ್ನುವುದು ಶಾಸ್ತ್ರಗಳ ಅಭಿಮತ.ಯೋಗಗಳು : ಜ್ಯೋತಿಷ್ಯಶಾಸ್ತ್ರವು 27 ನಕ್ಷತ್ರಗಳನ್ನು ಗುರುತಿಸಿದೆ. ಅದಕ್ಕೆ ಹೊಂದಿಕೊಂಡಂತೆ 27 ಯೋಗಗಳನ್ನು ಹೇಳಿದೆ. ಅವೆಂದರೆ, ವಿಷ್ಕಂಭಯೋಗ, ಪ್ರೀತಿಯೋಗ, ಆಯುಷ್ಮಾನ್‌ಯೋಗ, ಸೌಭಾಗ್ಯಯೋಗ, ಶೋಭಾನಯೋಗ, ಅತಿಗಂಡಯೋಗ, ಸುಕರ್ಮಯೋಗ, ಧೃತಿಯೋಗ, ಶೂಲಯೋಗ, ಗಂಡಯೋಗ, ವೃದ್ಧಿಯೋಗ, ಧ್ರುವಯೋಗ, ವ್ಯಾಘಾತಯೋಗ, ಹರ್ಷಣಯೋಗ, ವಜ್ರಯೋಗ, ಸಿದ್ಧಿಯೋಗ, ವೃತೀಪಾತಯೋಗ, ವರೀಯಾನ್‌ಯೋಗ, ಪರಿಘಯೋಗ, ಶಿವನಾಮಯೋಗ, ಸಿದ್ಧಯೋಗ, ಸಾಧ್ಯಯೋಗ, ಶುಭಯೋಗ, ಶುಕ್ಲನಾಮಯೋಗ, ಬ್ರಹ್ಮಯೋಗ, ಐಂದ್ರಯೋಗ ಮತ್ತು ವೈಧೃತಿಯೋಗ. ಕರಣಗಳು : ಹನ್ನೊಂದು ಕರಣಗಳಿವೆ. ಅವೆಂದರೆ, ಬವ, ಬಾಲವ, ಕೌಲವ, ತೈತಿಲ, ಗರಜ, ವಣಿಕ್‌, ಭದ್ರ, ಶಕುನಿ, ಚತುಷ್ಪಾತ್‌, ನಾಗವಾನ್‌ ಮತ್ತು ಕಿಂಸ್ತುಘ್ನ ಕರಣ. ರಾಶ್ಯಾಧಿಪತಿ ಯಾರು? : ಹನ್ನೆರಡು ರಾಶಿಗಳಿದ್ದು ಪ್ರತಿಯೊಂದು ರಾಶಿಗೂ ರಾಶ್ಯಾಧಿಪತಿಯಿದ್ದಾನೆ. ಸಿಂಹರಾಶಿಗೆ ಸೂರ್ಯ, ಕರ್ಕಾಟಕ ರಾಶಿಗೆ ಚಂದ್ರ, ಮೇಷ-ವೃಶ್ಚಿಕ ರಾಶಿಗಳಿಗೆ ಅಂಗಾರಕ, ಕನ್ಯಾ-ಮಿಥುನ ರಾಶಿಗಳಿಗೆ ಬುಧ, ಧನು-ಮೀನ ರಾಶಿಗಳಿಗೆ ಗುರು, ತುಲಾ-ವೃಷಭ ರಾಶಿಗಳಿಗೆ ಶುಕ್ರ, ಮಕರ-ಕುಂಭ ರಾಶಿಗಳಿಗೆ ಶನಿಯು ಅಧಿಪತಿಯಾಗಿರುತ್ತಾರೆ. ಲಗ್ನ ಪ್ರಮಾಣ : ಲಗ್ನ ಪ್ರಮಾಣವನ್ನು ಲೆಕ್ಕ ಹಾಕುವಾಗ ಜಾತಕದಲ್ಲಿನ ಆಯಾ ಲಗ್ನಕ್ಕೆ ಅನುಗುಣವಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಮೇಷ ಪ್ರಮಾಣವು 4-12, ವೃಷಭ ಪ್ರಮಾಣವು 4-38, ಮಿಥುನ ಪ್ರಮಾಣವು 5-14, ಕರ್ಕಾಟಕ ಪ್ರಮಾಣವು 5-32, ಸಿಂಹ ಪ್ರಮಾಣವು 5-20, ಕನ್ಯಾ ಪ್ರಮಾಣವು 5-4, ತುಲಾ ಪ್ರಮಾಣವು 5-4, ವೃಶ್ಚಿಕ ಪ್ರಮಾಣವು 5-20, ಧನು ಪ್ರಮಾಣವು 5-32, ಮಕರ ಪ್ರಮಾಣವು 5-14, ಕುಂಭ ಪ್ರಮಾಣವು 4-38, ಮೀನ ಪ್ರಮಾಣವು 4-12. ಹೀಗೆ ಮೇಷಾದಿ ಲಗ್ನ ಪ್ರಮಾಣಗಳನ್ನು ಲೆಕ್ಕ ಹಾಕುತ್ತಾರೆ. ಲಗ್ನ ಪ್ರಮಾಣ ಲೆಕ್ಕ ಹಾಕಿದ ನಂತರ ಲಗ್ನಭುಕ್ತಿಯನ್ನು ನಿರ್ಣಯಿಸುತ್ತಾರೆ. ಲಗ್ನ ಭುಕ್ತಿಯ ನಿರ್ಣಯ ಹೀಗಿದೆ. ಮೇಷ -8, ಮಿಥುನ-10, ಕರ್ಕಾಟಕ-11, ಸಿಂಹ-11, ಕನ್ಯಾ-11, ತುಲಾ-10, ವೃಶ್ಚಿಕ-11, ಧನು-11, ಮಕರ-11, ಕುಂಭ-10, ಮೀನ-9.

ಪ್ರಶ್ನಶಾಸ್ತ್ರದ ಫಲಾಫಲ

ಭವಿಷ್ಯವನ್ನು ತಿಳಿಯಲು ಜಾತಕ ಬಹಳ ಮುಖ್ಯವಾದ ಸಾಧನ. ಈ ಜಾತಕ ರೂಪಿಸಲು ಜನ್ಮ ದಿನಾಂಕ, ಸಮಯ ಮತ್ತು ಜನ್ಮ ಸ್ಥಳದ ಖಚಿತ ಮಾಹಿತಿ ಇರಬೇಕು. ಆದರೆ ಎಷ್ಟೋ ಜನರಿಗೆ ಇವುಗಳಲ್ಲಿ ಯಾವುದಾದರೊಂದು ಮಾಹಿತಿ ಇಲ್ಲವಾದಾಗ ಪ್ರಶ್ನಶಾಸ್ತ್ರವು ಉಪಯೋಗಕ್ಕೆ ಬರುತ್ತದೆ. ಅಲ್ಲದೇ ಜಾತಕದಲ್ಲಿ ತಿಳಿಯಲು ಕಷ್ಟವಾಗುವ ವಿಷಯಗಳನ್ನು ಸಹಾ ಪ್ರಶ್ನಶಾಸ್ತ್ರದ ಮೂಲಕ ತಿಳಿಯಬಹುದು. ಪ್ರಶ್ನಶಾಸ್ತ್ರವು ಹೋರಾಶಾಸ್ತ್ರದಂತೆ ಜಾತಕನ ಸಾಮಾನ್ಯ ಫಲಗಳನ್ನು ಹೇಳುವುದಿಲ್ಲ. ಪ್ರಶ್ನೆಯನ್ನು ಕೇಳುವ ಸಮಯಕ್ಕೆ ಸರಿಯಾಗಿ ಒಂದು ಕುಂಡಲಿಯನ್ನು ತಯಾರಿಸಲಾಗುತ್ತದೆ. ಈ ಕುಂಡಲಿಯು ಪ್ರಶ್ನ ಸಮಯದ ಗೋಚಾರದ ಕುಂಡಲಿಯೇ ಆಗಿರುತ್ತದೆ. ಈ ಕುಂಡಲಿಯನ್ನು ಪ್ರಶ್ನೆ ಕೇಳುವವನ ಜಾತಕದಂತೆ ಭಾವಿಸಿ, ಆತನು ಆ ಸಧ್ಯಕ್ಕೆ ಕೇಳುವ ಪ್ರಶ್ನೆಗೆ ಉತ್ತರಿಸಲ್ಲಷ್ಟೇ ಸೀಮಿತಗೊಳಿಸಲಾಗುತ್ತದೆ. ಉದಾಹರಣೆಗೆ ಪೃಚ್ಛಕನು (ಪ್ರಶ್ನೆ ಕೇಳುವವನು) 'ಮಗಳ ವಿವಾಹ ಯಾವಾಗ ಆಗುತ್ತದೆ?', 'ಮಗನ ನೌಕರಿ ಯಾವಾಗ ಸಿಗುತ್ತದೆ?', 'ನನಗೆ ಈ ವ್ಯಾಪಾರವು ಲಾಭದಾಯಕವೇ?' ಇತ್ಯಾದಿ ಪ್ರಶ್ನೆಗಳಿಗೆ ಉತ್ತರವನ್ನು ನೇರವಾಗಿ ಕೊಡಲು ಪ್ರಶ್ನಶಾಸ್ತ್ರವು ಸಹಾಯಕವಾಗಿದೆ. ಲಕ್ಷಣಗಳು ಹೇಗಿರಬೇಕು? ಈ ಪ್ರಶ್ನಶಾಸ್ತ್ರವನ್ನು ಅಭ್ಯಸಿಸುವ ಜ್ಯೋತಿಷಿಯು ಶುದ್ಧ ಅಂತಃಕರಣ, ನಿರಹಂಕಾರ, ಉತ್ತಮ ದೈವಭಕ್ತಿ, ಗುರುಹಿರಿಯರಲ್ಲಿ ಗೌರವ, ಜ್ಯೋತಿಷವನ್ನು ಚೆನ್ನಾಗಿ ಅಭ್ಯಾಸಮಾಡುತ್ತಾ ವಾಕ್ಪಟುತ್ವ, ವಾಕ್‌ಸಿದ್ಧಿ, ಊಹಾಪೋಹ ಪಟುತ್ವವನ್ನು ಹೊಂದಿರಬೇಕು. ಪ್ರಶ್ನೆಗೆ ಉತ್ತರಿಸುವ ಮುನ್ನ ಪೃಚ್ಛಕನ ಅಂಗಚೇಷ್ಠೆ ಮತ್ತು ಶಕುನಗಳನ್ನು ಗಮನಿಸಬೇಕು. ತತ್ಕಾಲ ಪ್ರಶ್ನಕುಂಡಲಿಯನ್ನು ರಚಿಸಿ, ಗ್ರಹಗಳ ಫಲಗಳನ್ನು ತಿಳಿದು ದೈವಪ್ರಾರ್ಥನೆ ಮಾಡಿ ಫಲವನ್ನು ನುಡಿಯಬೇಕು. ಕೇಳುವವನ ಲಕ್ಷಣ ಪ್ರಶ್ನಶಾಸ್ತ್ರ ಹೇಳುವವನಿಗೆ ಪ್ರಾಮುಖ್ಯತೆ ಇರುವಂತೆ ಶಾಸ್ತ್ರ ಕೇಳುವವನಲ್ಲೂ ಕೆಲ ಲಕ್ಷಣಗಳಿರಬೇಕು. ಪೃಚ್ಛಕನು ದೈಹಿಕ, ಮಾನಸಿಕ ಶುದ್ಧಿಯಿಂದ ಇರಬೇಕು. ಪ್ರಶ್ನೆ ಕೇಳುವ ಸಂದರ್ಭದಲ್ಲಿ ಅವನ ಮನಸ್ಸು ಚಿತ್ತ ಚಾಂಚಲ್ಯಕ್ಕೆ ಒಳಗಾಗಬಾರದು. ದೃಢ ಮನಸ್ಸಿನಿಂದ ತನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ಭರವಸೆಯಿಂದ ದೈವ ಪ್ರಾರ್ಥನೆಯನ್ನು ಮಾಡಿಕೊಂಡು ಕೇಳಬೇಕು. ಒಮ್ಮೆಲೆ ಒಂದು ಪ್ರಶ್ನೆಯನ್ನು ಮಾತ್ರ ಕೇಳಬೇಕು. ಶಾಸ್ತ್ರದ ವಿಧಗಳು ಪ್ರಶ್ನಶಾಸ್ತ್ರದಲ್ಲಿ ಅಷ್ಟಮಂಗಲಪ್ರಶ್ನ, ತಾಜಕಪದ್ಧತಿ, ಸ್ವರನಾಡಿ, ಉದಯಲಗ್ನ, ಆರೂಢಲಗ್ನ, ಇಷ್ಟಸಂಖ್ಯಾಲಗ್ನ ಮತ್ತಿತರ ವಿಧಾನಗಳಿವೆ. ಇವುಗಳಲ್ಲಿ ಅಷ್ಟಮಂಗಲವು ಕೇರಳದಲ್ಲಿ ಪ್ರಸಿದ್ಧವಾಗಿದೆ. ತಾಜಕ, ಆರೂಢ, ಉದಯ ಲಗ್ನಗಳು ಸಾಧಾರಣವಾಗಿ ಬಳಕೆಯಾಗುತ್ತವೆ. ಫಲ ನಿರ್ಣಯ ರಾಶಿ, ಭಾವ ಮತ್ತು ಗ್ರಹಗಳ ಬಲಾಬಲಗಳನ್ನು ತುಲನೆ ಮಾಡಿ ಫಲ ನಿರ್ಣಯಿಸಬೇಕು. ಪ್ರಶ್ನೆ ಕೇಳಲು ಮನಃಕಾರಕ ಚಂದ್ರನೇ ಕಾರಣ. ಪ್ರಶ್ನೆಗೆ ಸಂಬಂಧಿಸಿದ ಗ್ರಹ ಮತ್ತು ಭಾವವು ಶುಭಗ್ರಹಗಳ ದೃಷ್ಟಿ, ಸ್ಥಿತಿ, ವೀಕ್ಷಣೆಗಳಿಂದ ಕುಡಿದ್ದರೆ ಉತ್ತರವು ಧನಾತ್ಮಕವಾಗಿಯೂ, ಪಾಪಗ್ರಹಗಳ ದೃಷ್ಟಿ, ಸ್ಥಿತಿ, ವೀಕ್ಷಣೆಗಳಿಂದ ಕೂಡಿದ್ದರೆ ಋುಣಾತ್ಮಕವಾಗಿಯೂ ಇರುತ್ತದೆ. ಕಾರಕಗ್ರಹ, ಭಾವಾಧಿಪತಿ, ಭಾವಗಳು ಬಲಿಷ್ಠವಾಗಿದ್ದು ಚಂದ್ರನು ಶುಭಭಾವಗಳಲ್ಲಿದ್ದರೆ ಪ್ರಶ್ನೆಯು ಸಿದ್ಧಿಸುವುದರಲ್ಲಿ ಸಂದೇಹವಿಲ್ಲ. ಗಮನಿಸಬೇಕಾದ ಅಂಶಗಳು * ಫಲಸಿದ್ಧಿಯ ಕಾಲ ನಿರ್ಣಯ. ಶೀಘ್ರ ಮತ್ತು ಮಂದಗ್ರಹಗಳಿರುವ ಕಾರಣ ಆಯಾ ಗ್ರಹಗಳ ಸೂಚಿತ ಸಮಯದಲ್ಲಿ ಕಾರ್ಯವು ಸಿದ್ಧಿಯಾಗುತ್ತದೆಯೇ ಇಲ್ಲವೇ ಎಂಬುದನ್ನು ನಿರ್ಣಯಿಸಬೇಕು. ಲಗ್ನಾಧಿಪತಿ, ಚಂದ್ರ ಮತ್ತು ಪ್ರಶ್ನಕಾರಾರ‍ಯಧಿಪತಿಗಳು ಪರಸ್ಪರ ತ್ರಿಕೋಣದಲ್ಲಿ ಅಥವಾ ಉತ್ತಮ ಸ್ಥಿತಿಯಲ್ಲಿದ್ದರೆ ಫಲವು ಶೀಘ್ರವಾಗಿ ಲಭಿಸುತ್ತದೆ. * ಪ್ರಶ್ನಲಗ್ನವು ಚರ ರಾಶಿಯಾದರೆ ಧಾತು ಪ್ರಶ್ನೆ, ದುಗುಡದಿಂದ ಕೇಳಿದ ವರ್ತಮಾನದ ಪ್ರಶ್ನೆ, ಶೀಘ್ರಫಲ; ಸ್ಥಿರರಾಶಿಯಾದರೆ ಮೂಲಪ್ರಶ್ನೆ, ಶಾಂತ ಮನಸ್ಸಿನಿಂದ ಕೇಳಿದ ಭೂತಕಾಲದ ಪ್ರಶ್ನೆ, ಮಂದಫಲ; ದ್ವಿಸ್ವಭಾವ ರಾಶಿಯಾದರೆ ಜೀವ ಪ್ರಶ್ನೆ, ಮಿಶ್ರಚಿತ್ತದಿಂದ ಕೇಳಿದ ಭವಿಷ್ಯದ ಪ್ರಶ್ನೆ, ಸಾವಧಾನವಾಗಿ ಸಿದ್ಧಿಸುತ್ತದೆ. * ಪ್ರಶ್ನಕುಂಡಲಿಯಲ್ಲಿ ಗುರುವು ಬಲಿಷ್ಠನಾಗಿದ್ದು ಕೇಂದ್ರ, ತ್ರಿಕೋಣಾದಿ ಶುಭಭಾವಗಳಲ್ಲಿದ್ದರೆ, ಲಗ್ನವನ್ನು ವೀಕ್ಷಿಸಿದರೆ, ಕಾರಾರ‍ಯಧಿಪತಿಗೆ ಸಂಬಂಧ ಹೊಂದಿದ್ದು ಇತರ ಗ್ರಹಗಳು ಪ್ರತಿಕೂಲವಾಗಿದ್ದರೆ ದೈವಾನುಗ್ರಹದಿಂದ ಕಾರ‍್ಯವು ಸಿದ್ಧಿಯಾಗುತ್ತದೆ ಎಂದು ತಿಳಿಯಬೇಕು. ಲಗ್ನಾಧಿಪತಿಯು ಬಲಿಷ್ಠನಾಗಿ ಶುಭಸ್ಥಾನದಲ್ಲಿದ್ದು ಇತರ ಗ್ರಹಗಳು ಪ್ರತಿಕೂಲವಾಗಿದ್ದರೆ ಪ್ರಶ್ನೆ ಕೇಳುವವನು ಸ್ವಶಕ್ತಿಯಿಂದ ಕಾರ‍್ಯವನ್ನು ಸಾಧಿಸುವನು ಎಂದು ತಿಳಿಯಬೇಕು. * ರಾಜದ್ರೋಹ, ಕಳ್ಳತನ, ಹಾದರ, ಭೂಗತ ನಿಧಿ, ಅನರ್ಥಕರವಾದ ಕೆಲಸ ಇತ್ಯಾದಿ ವಿಷಯಗಳ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಜ್ಯೋತಿಷಿಯು ಇವುಗಳಿಗೆ ಉತ್ತರಿಸಬಾರದು. * ಜ್ಯೋತಿಷ್ಯಶಾಸ್ತ್ರದಲ್ಲಿ ನಂಬಿಕೆ ಮತ್ತು ವಿಶ್ವಾಸವೇ ಮುಖ್ಯವಾಗಿದೆ. ಫಲವನ್ನು ನುಡಿಯುವ ಮುನ್ನ ದೈವಜ್ಞನು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಭೀತನಾಗಿರುವ ಪೃಚ್ಛಕನಿಗೆ ಧೈರ್ಯವನ್ನು ತುಂಬಬೇಕು. ಮನಃಶಾಸ್ತ್ರಜ್ಞನಂತೆ ಆತನನ್ನು ದುಃಖ, ಕಷ್ಟಗಳಿಂದ ಹೊರಬರಲು ಬೇಕಾದ ವಿಧಾನಗಳನ್ನು ವಿವರಿಸಿ ಪ್ರಯತ್ನಿಸಲು ಹುರಿದುಂಬಿಸಬೇಕು. -ಪ್ರಕಾಶ್‌ರಾವ್‌ ಕೆಂದೋಳೆ sangraha