Thursday, 7 December 2017

ಗ್ರಹದೋಷಗಳ ಸುಲಭ ಪರಿಹಾರ ಹೇಗೆ

ಜಾತಕದಲ್ಲಿ ಗ್ರಹದೋಷ ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ. ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಕೂಡುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ. ಶನಿ ದೋಷ ಸೂರ್ಯನಿಂದ 1,427 ಮಿಲಿಯನ್‌ ಕಿ.ಮೀ. ದೂರದಲ್ಲಿ 16 ಚಂದ್ರಗಳನ್ನು ಹೊಂದಿರುವ ಶನಿ ಗ್ರಹದ ವಕ್ರ ಪ್ರಭಾವ ಮಾನವನ ಶರೀರದ ಮೇಲೆಬಿದ್ದಾಗ ಮನುಷ್ಯನ ಜೀವನವನ್ನೇ ಬದಲಿಸುತ್ತದೆ. ಶನಿ ಸೌರಮಂಡಲದ ವಿಸ್ಮಯ ಗ್ರಹ. ದುಂದು ವೆಚ್ಚ, ಅವ್ಯವಹಾರ ಮತ್ತು ನಿರ್ಲಕ್ಷ ಆಡಳಿತ, ಸಾಲದ ಬಾಧೆಗಳಿಂದ ಸಂಕೋಲೆಗೊಂಡು ಜೀವನವಿಡೀ ಕಲ್ಲುಮುಳ್ಳಿನ ಹಾದಿ. ಮನೋ ಕಲ್ಪನಾ ಶಕ್ತಿಗಳನ್ನು ಮೈಗೂಡಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗಿ ಮಾನಸಿಕ ಚಂಚಲತೆ, ಪ್ರೇಮಿಗಳು ಮತ್ತು ದಂಪತಿಗಳಲ್ಲಿ ವಿರಸ, ಯಾವುದೇ ಉದ್ದಿಮೆ ಆರಂಭಿಸಿದರೂ ತುಂಬಲಾರದ ನಷ್ಟ. ಶತೃ ಭಾದೆ ಬಂಧು ವರ್ಗ ಮತ್ತು ಮಿತ್ರರಿಂದ ದೂರ. ಅಶಾಂತಿ ಜಗಳ, ಕಂಕಣ ಭಾಗ್ಯ ಮತ್ತು ಸಂತಾನಯೋಗದಲ್ಲಿ ವಿಳಂಬ ಮುಂತಾದ ಲಕ್ಷಣಗಳು ಶನಿಗ್ರಹದಿಂದ ಉಂಟಾಗುತ್ತವೆ. ದೋಷ ಪರಿಹಾರ ಪ್ರಥಮವಾಗಿ ನಿವಾಸದ ಒಳಗೂ ಹೊರಗೂ ಸ್ವಚ್ಛತೆಯನ್ನು ಕಾಪಾಡಿರಿ. ಚಿಂದಿ ವಸ್ತುಗಳನ್ನು ಮುಕ್ತಗೊಳಿಸಿ, 41 ದಿವಸಗಳ ಕಾಲ ಅಷ್ಠಾಂಗ ಶನಿ ದೋಷ ನಿವಾರಣ ಪೂಜೆಯನ್ನು ಆಚರಿಸಿ. ಈ ಸಮಯದಲ್ಲಿ ಮಾಂಸಾಹಾರ, ಮಧುಪಾನದಿಂದ ದೂರವಿರಿ. ಪ್ರತಿ ನಿತ್ಯ ಸೂರ್ಯೋದಯದ ಸಮಯದಲ್ಲಿ ಮುಂಬಾಗಿಲು ಮತ್ತು ಹೊಸ್ತಿಲನ್ನು ಕೆಂಪು ಗುಲಾಬಿ ಹೂಗಳಿಂದ ಪೂಜಿಸಿ. ಶನಿವಾರದಂದು ನವಗ್ರಹಗಳಿಗೆ ಅಭಿಷೇಕ ಮಾಡಿಸಿ. ಪ್ರತಿ ಶನಿವಾರ ವಸ್ತ್ರ ದಾನ ಮಾಡಿ. ಯಾವುದಾದರೊಂದು ಶನಿ ದೇವಾಲಯಕ್ಕೆ ಭೇಟಿ ಕೊಟ್ಟು ದೇಗುಲದಲ್ಲಿ ನವಗ್ರಹ ಹೋಮ ಅಥವಾ ಶನಿದೇವರಿಗೆ ಅರ್ಚನೆ ಮಾಡಿಸಿ. ಕುಜ ದೋಷ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾನವನ ಮೇಲೆ ಕುಜ(ಅಂಗಾರಕ)ನ ಪ್ರಭಾವ ಹೆಚ್ಚಿರುತ್ತದೆ. ಕುಜ ದೋಷದ ಕಾರಣ ಜೀವನದ ಗತಿಯೇ ಬದಲಾಗುತ್ತದೆ. ಮುಖ್ಯವಾಗಿ ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ, ಸಾಲದ ಭಾದೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಅಶಾಂತಿ, ಮತಿ ಭ್ರಮಣೆ, ಆರೋಗ್ಯದಲ್ಲಿ ಏರುಪೇರು, ಕಳತ್ರ ದೋಷ (ಗಂಡ ಹೆಂಡಿರ ನಡುವೆ ಮನಸ್ತಾಪ), ಆಕಸ್ಮಿಕ ಅಪಘಾತ ಮತ್ತು ಅವಗಡಗಳು, ನಿರುದ್ಯೋಗ ಮತ್ತಿತರ ದೋಷಗಳು ಕಾಣಿಸುತ್ತವೆ. ದೋಷ ಪರಿಹಾರ ಕುಜ ದೋಷವು ಮುಖ್ಯವಾಗಿ ವಾಸ್ತು ಚಕ್ರದ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಹಾಗಾಗಿ ವಾಸ್ತು ತಜ್ಞರನ್ನು ಸಂಪರ್ಕಿಸಿ ದೋಷ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಏಳು ದಿನಗಳ ಪರ್ಯಂತ ಸಪ್ತಾಗ್ನಿ ಪೂಜೆ (ಅಖಂಡ ಜ್ಯೋತಿ) ಯನ್ನು ಮಾಡುವುದು ಉತ್ತಮ. ಕೆಂಪು ಗುಲಾಬಿ ಹೂಗಳಿಂದ ಶಕ್ತಿ ದೇವತೆಯರನ್ನು ಪೂಜಿಸುವುದು, ಮಂಗಳವಾರದಂದು ನದಿದಡದಲ್ಲಿ ಇರುವ ಯಾವುದಾದರೊಂದು ದೇವರಿಗೆ ಅಭಿಷೇಕ ಸಲ್ಲಿಸಿ ಅಂದು ಉಪವಾಸ ವ್ರತ ಆಚರಿಸುವುದು. ಕೆಂಪು ವಸ್ತ್ರಗಳನ್ನು ದಾನಮಾಡಬೇಕು. ಹೀಗೆ ಮಾಡುವುದರಿಂದ ಕುಜನು ಸಂಪ್ರೀತನಾಗಿ ಜ್ಞಾನ, ಬಲ, ಐಶ್ವರ್ಯ, ತೇಜಸ್ಸು ಮತ್ತು ಶಕ್ತಿಯ ವೃದ್ಧಿಗೆ ನೆರವಾಗುತ್ತವೆ. ಕಾಳಸರ್ಪ ದೋಷ ಜನನಕಾಲದಲ್ಲಿ ನಕ್ಷತ್ರ ಮತ್ತು ಲಗ್ನ ಕುಂಡಲಿಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಒಂದೊಮ್ಮೆ ನಿಶ್ಚಿತಾರ್ಥ ಮತ್ತು ವಿವಾಹ ಸಮಯದಲ್ಲಿ ಶುಭಲಗ್ನ ಇಲ್ಲದಿದ್ದರೂ ಕಾಳ ಸರ್ಪ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಾಳಸರ್ಪ ದೋಷವು ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಕಾಳಸರ್ಪ ದೋಷದ ಕಾರಣ ವಿವಾಹ ಹಾಗೂ ಸಂತಾನ ಯೋಗದಲ್ಲಿ ವಿಳಂಬವಾಗುತ್ತದೆ. ಚಿತ್ತ ಚಾಂಚಲ್ಯ ಹೆಚ್ಚಿರುತ್ತದೆ. ದೋಷ ಪರಿಹಾರ ನಾಗಪ್ರತಿಷ್ಠೆ ಮಾಡಿಸುವುದು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪದೋಷ ನಿವಾರಣಾ ಪೂಜೆ ಮಾಡಿಸುವುದು. ಮನೆಯಲ್ಲಿ 21 ದಿನಗಳ ಕಾಲ ಅಖಂಡವಾಗಿ ಜ್ಯೋತಿ ಬೆಳಗಿಸುವುದು. ಪ್ರತಿನಿತ್ಯ ಗಾಯತ್ರಿ ಮತ್ತು ಲಲಿತಾಂಬ ಅಷ್ಠೋತ್ತರಗಳನ್ನು ಫಠಿಸುವುದು. ಒಂದು ದೊಡ್ಡ ಪಾತ್ರೆಯಲ್ಲಿ ಶುದ್ಧ ನೀರನ್ನು ಕಾಯಿಸಿ ಸೂರ್ಯ ಮತ್ತು ಚಂದ್ರನ ಕಿರಣಗಳು ಕಾಯಿಸಿದ ನೀರಿನ ಮೇಲೆ ಬಿಳುವಂತೆ ವರಾಂಡದಲ್ಲಿ ಇಟ್ಟು ತಣ್ಣಗಾದ ನಂತರ ಆ ನೀರನ್ನು ಶುದ್ಧ ಪಾತ್ರೆಯಲ್ಲಿ ಶೇಖರಿಸಿಟ್ಟುಕೊಳ್ಳುವುದು. ಹೀಗೆ ಸಿದ್ಧಪಡಿಸಿಟ್ಟುಕೊಂಡ ನೀರನ್ನು ಪ್ರತಿನಿತ್ಯ 3 ಹೊತ್ತು ಕುಡಿಯಬೇಕು. ಬಾಳೆ ಹಣ್ಣನ್ನು ಸೇವಿಸಬೇಕು. ಈ ವ್ರತಾಚರಣೆಯನ್ನು ಹನ್ನೊಂದು ದಿನಗಳ ಕಾಲ ಮಾಡಬೇಕು. ಹನ್ನೊಂದನೆಯ ದಿವಸ ಇದೇ ನೀರಿಗೆ ಬೇವಿನ ಸೊಪ್ಪು ಬೆರಸಿ ಮಕ್ಕಳಿಗೆ ಸ್ನಾನ ಮಾಡಿಸಬೇಕು. ಹೀಗೆ ಮಾಡುವುದರಿಂದ ಬಾಲಗ್ರಹ ದೋಷ ನಿವಾರಣೆಯಾಗುತ್ತದೆ. -ನಾರಾಯಣ ಶೆಟ್ಟಿ ಪದ್ಮಶಾಲಿ sangraha

ಜಾತಕದಲ್ಲಿ ದೀರ್ಘಾಯುಷ್ಯ ಯೋಗ

ಮನುಷ್ಯರು ಎಲ್ಲರೂ ನೂರು ವರ್ಷ ಬದುಕುವುದು ಕಡಿಮೆ. ದೀರ್ಘಾಯುಷ್ಯ ಇರಬೇಕಾದರೆ ಅವರ ಜಾತಕದಲ್ಲಿ ತಿಳಿಯುತ್ತದೆ. ನೂರಕ್ಕಿಂತ ಜಾಸ್ತಿ ವರ್ಷಗಳು ಬದುಕಿದರೆ ಅಂಥವರನ್ನು ದೀರ್ಘಾಯುಷ್ಯ ಎಂದು ಕರೆಯುತ್ತಾರೆ. ದೀರ್ಘಾಯುಷ್ಯ ಯೋಗ ಬರುವುದು ಹೇಗೆ? ಲಗ್ನಾಧಿಪತಿ ಉಚ್ಚಮೂಲ ತ್ರಿಕೋನ ಸ್ವಕ್ಷೇತ್ರ ಅಥವಾ ಮಿತ್ರ ಕ್ಷೇತ್ರದಲ್ಲಿದ್ದರೆ ಶುಭಗ್ರಹಗಳೊಂದಿಗೆ ಇದ್ದರೆ ಶುಭದೃಷ್ಟಿಯನ್ನು ಹೊಂದಿದರೆ ಇವರು ದೀರ್ಘಾಯುಷ್ಯ ಹೊಂದುತ್ತಾರೆ. ಲಗ್ನಾಧಿಪತಿಯು ಕರ್ಮಾಧಿಪತಿಯೊಂದಿಗೆ ಅಥವಾ ಪರಿವರ್ತನದಲ್ಲಿ ಕೇಂದ್ರ ತ್ರಿಕೋನದಲ್ಲಿರಬೇಕು. ಚಂದ್ರನು ಉಚ್ಚ ಸ್ವಕ್ಷೇತ್ರ ಅಥವಾ ಮಿತ್ರ ಕ್ಷೇತ್ರದಲ್ಲಿದ್ದರೆ ಗುರು ಶುಕ್ರರು ನೋಡಿದರೆ ಅಥವಾ ಅವರೊಂದಿಗೆ ಇದ್ದರೆ ಇವರು ದೀಘಾಯುಷ್ಯವಂತರಾಗುತ್ತಾರೆ. ಲಗ್ನಾಧಿಪತಿಯು ಬಲಿಷ್ಠವಾಗಿ ಕೇಂದ್ರ ತ್ರಿಕೋನಗಳಲ್ಲಿ ಶುಭ ವರ್ಗದಲ್ಲಿದ್ದರೆ ಅಥವಾ ಅಷ್ಟಮಾಧಿಪತಿಯು ಶುಭವರ್ಗದಲ್ಲಿದ್ದರೆ ಬಲಿಷ್ಠನಾದ ಲಗ್ನಾಧಿಪತಿಯನ್ನು ಕೇಂದ್ರಸ್ಥಿತಿ ಶುಭಗ್ರಹರು ನೋಡಬೇಕು. ಈ ಯೋಗದಲ್ಲಿ ಜನಿಸಿದವರು ಧನ ಮತ್ತು ಸಕಲ ಗುಣದಿಂದ ಕೂಡಿದವರಾಗಿ ದೀಘಾಯುಷ್ಯವಂತರಾಗುತ್ತಾರೆ. ನವಮಾಧಿಪತಿ ಅಥವಾ ದಶಮಾಧಿಪತಿಯು ಲಗ್ನದಲ್ಲಿದ್ದರೆ ಇವರು ದೀಘಾಯುಷ್ಯವಂತರಾಗುತ್ತಾರೆ. ಶುಭಗ್ರಹರು ಕೇಂದ್ರ ತ್ರಿಕೋನಸ್ಥರಾದರೆ ಇವರು ದೀರ್ಘಾಯುವಾಗುತ್ತಾರೆ. ರಾಹುವು ಅಷ್ಟಮದ್ದಾಗಿ ಗುರುವು ಕೇಂದ್ರದಲ್ಲಿರಬೇಕು, ಇವರು ದೀರ್ಘಾಯುವಾಗುತ್ತಾರೆ, ಲಗ್ನ್ನಾಧಿಪತಿಯು ತನ್ನ ಉಚ್ಚರಾಶಿಯಲ್ಲಿರಬೇಕು, ಚಂದ್ರನು ಏಕಾದಶ ಭಾವದಲ್ಲಿ ಮತ್ತು ಗುರುವು ಅಷ್ಟಮ ಭಾವದಲ್ಲಿ ಇರಬೇಕು, ಇವರು ದೀರ್ಘಾಯು ಆಗುತ್ತಾರೆ. ಚಮ ಅಥವಾ ನವಮಾಧಿಪತಿಯು ತೃತೀಯದಲ್ಲಿ ಸ್ವವರ್ಗದಲ್ಲಿ ಶುಭಯುತನಾಗಿರಬೇಕು. ಇವರು ದೀರ್ಘಾಯು ಆಗುತ್ತಾರೆ. ಅಷ್ಟಮಾಧಿಪತಿ ಗುರುವಿನೊಂದಿಗೆ ನವಮಾಧಿಪತಿಯು ಸಂಬಂಧ ಇರಬೇಕು, ಇವರು ದೀರ್ಘಾಯುವಾಗುತ್ತಾರೆ. ಅಷ್ಟಮಾಧಿಪತಿ ಉಚ್ಚ ಸ್ವಕ್ಷೇತ್ರ ಶುಭ ಗ್ರಹದೊಂದಿಗೆ ಅಥವಾ ಶುಭಗ್ರಹದ ರಾಶಿಯಲ್ಲಿ ಕೇಂದ್ರ ತ್ರಿಕೋನದಲ್ಲಿರಬೇಕು ಇವರು ದೀರ್ಘಾಯುಷ್ಯವಂತರಾಗುತ್ತಾರೆ. ಹರಿಶ್ಚಂದ್ರ ಪಿ ಸಾಲಿಯಾನ್‌ sangraha

ಕೂಸು ಹುಟ್ಟೋ ಮೊದಲೇ ಭವಿಷ್ಯ

ಕೂಸು ಹುಟ್ಟೋ ಮೊದಲು ಕುಲಾವಿ ಅನ್ನೋ ಗಾದೆ ಮಾತು ಕೇಳಿರಬಹುದು. ಅದೊಂದು ಅಣಕು ನುಡಿ. ಆದರೆ ಮುನ್ಸೂಚನೆ ನೀಡೋ ಜ್ಯೋತಿಷ್ಯದ ವಿಚಾರದಲ್ಲಿ ಮಾತ್ರ ಆ ಮಾತು ಹೊರತಾಗಿದೆ. ಇತ್ತೀಚೆಗೆ ಕಂಡ ಸೂಪರ್‌ಮೂನ್‌ ಎಫೆಕ್ಟ್ ಆಧಾರದ ಮೇಲೆ ಹೊಸ ವರ್ಷದಲ್ಲಿ ಹುಟ್ಟೋ ಮಕ್ಕಳ ಸ್ವಭಾವ, ಮುಂದಿನ ಜೀವನ ಹೇಗಿರಬಹುದೆಂದು ಸೌರಮಂಡಲದ ಗ್ರಹ, ಉಪಗ್ರಹಗಳ ಚಲನ ಸಿದ್ದಾಂತ ಮತ್ತು ಪೃಥ್ವಿಯ ಮೇಲೆ ಎರಕ ಹೊಯ್ಯುವ ತಾಮಸ ಕ್ರಿಯೆಗಳಿಂದಾಗಿ ಹೊಸ ವರ್ಷದಲ್ಲಿ ಎಲ್ಲಾ ರಾಶಿಗಳ ಮೇಲೆ ಉತ್ಕ್ರಾಂತ ಪ್ರಭಾವ ಬೀರಲಿದೆ. ಇತ್ತೀಚೆಗೆ ಸಂಭವಿಸಿದ ಸೂಪರ್‌ಮೂನ್‌ ಮತ್ತು ನಭೋ ಮಂಡಲದಿಂದ ಪೃಥ್ವಿಯತ್ತ ಧಾವಿಸುತ್ತಿರುವ ನಿಬಿರು ಗ್ರಹದ ನಭೋಪ್ರಭಾವ ಮತ್ತು ಮನೋವೈಜ್ಞಾನಿಕ ಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳ ಆಧಾರದ ಮೇಲೆ 2017ನೇ ವರ್ಷದಲ್ಲಿ ಜನಿಸುವ ಮಕ್ಕಳ ಗೋಚಾರ ಫಲದ ಮುನ್ಸೂಚನೆ ನೀಡಲಾಗಿದೆ. ಜನವರಿ : ಈ ತಿಂಗಳಲ್ಲಿ ಸೂರ್ಯನು 20 ದಿನಗಳು ಮಕರ ರಾಶಿಯಲ್ಲಿ ಸಂಚರಿಸುವುದರಿಂದ ನಕ್ಕು ನಗಿಸುವ ದೆನೇಬ್‌ ಎಂಬ ನಕ್ಷತ್ರಗಳ ಪ್ರಭಾವ ಜನಿಸಿದ ಮಕ್ಕಳಲ್ಲಿ ಬುದ್ಧಿ ಬ್ರಹ್ಮಾಂಡ, ದೈವಭಕ್ತಿ, ದೇಹ ಬೆಳೆದಂತೆಲ್ಲಾ ಅಧಿಕ ಜ್ಞಾಪಕ ಶಕ್ತಿ, ಉತ್ತಮ ಆರೋಗ್ಯ, ಹೆಚ್ಚಿನ ಆಯಸ್ಸು, ಮಾತಾಪಿತರಿಗೆ ಕ್ಷೇಮ. ಯಾವುದೇ ಗ್ರಹ ದೋಷಗಳು ಬರಲಾರವು. ಜೀವನದಲ್ಲಿ ಯಾವುದೇ ಅವಘಡ ಮತ್ತು ಆಘಾತಗಳು ಸಂಭವಿಸಲಾರವು. ಫೆಬ್ರವರಿ : ಹೆಣ್ಣು ಮಗು ಜನಿಸಿದರೆ ಸರ್ವಕಾರ್ಯ ಚತುರೆ, ಸಹೃದಯವಂತಿಕೆ, ಗಂಡು ಮಗುವಾದರೆ ಸಿಂಹ ಬಲ, ಚುರುಕು ಬುದ್ಧಿ, ಜ್ಞಾನಿ, ಜೀವನ, ಛಲ. ಆದರೆ 11 ವರ್ಷಗಳ ತನಕ ಹಠಮಾರಿತನ, ಪ್ರತಿಭಾನ್ವಿತ ಮೇಧಾ, ಸೂರ್ಯನು ಅಧಿಕ ದಿನಗಳು ಕುಂಭರಾಶಿಯಲ್ಲಿ ಸಂಚರಿಸುವುದರಿಂದ ಉತ್ತಮ ಭವಿಷ್ಯದತ್ತ ಸಾಗಿಸುತ್ತದೆ. ಬಂಧು ವರ್ಗದವರಿಗೆ ಕ್ಷೇಮವಾಗುತ್ತದೆ. ಪ್ರತಿ 6-11-11-28 ವರ್ಷಗಳಿಗೊಮ್ಮೆ ಗಜಕೇಸರಿಯೋಗ ಪ್ರಾಪ್ತಿಯಾಗುತ್ತದೆ. ಮಾರ್ಚ್: ಕಾಲಗಣನಾ ಚಕ್ರದಲ್ಲಿ ಪ್ರತಿರೋಧಕರಾಗಿ, ನಿಶ್ಚಯಾತ್ಮಕ ಕಾರ್ಯಗಳಲ್ಲಿ ನಿರತರಾಗುತ್ತಾರೆ. ರಾಜಕೀಯ, ಸಮಾಜ ಸೇವೆಯಲ್ಲಿ ಪಟ್ಟಾಭಿಷೇಕ, ದೇಶ ವಾಸ್ತವ್ಯ, ಆಕಸ್ಮಿಕ ಅದೃಷ್ಟಗಳು, ಧನಿಕರು. ಈ ತಿಂಗಳಲ್ಲಿ ಸೂರ್ಯನು ಮಾರ್ಚ್‌ 21ರಂದು ಸಮಭಾಜಕ ವೃತ್ತದ ಮೇಲೆ ಹಾದು ಹೋಗುವುದಿಂದ, ಸೂರ್ಯನು ಅಧಿಕ ದಿನಗಳು ಮೀನ ರಾಶಿಯಲ್ಲಿ ಸಂಚರಿಸುವುದರಿಂದ ರವಿ ಮತ್ತು ಶುಕ್ರದೆಸೆಗಳು ಸದಾ ಇರುತ್ತವೆ. ಜೋಡಿ ನಕ್ಷತ್ರ ಪ್ರಭಾವದಿಂದ ಅಧಿಕ ಧನವಂತರಾಗುವರು. ಗ್ರಹದೋಷಗಳಿಂದ ಮುಕ್ತರಾಗುವರು. ಏಪ್ರಿಲ್‌ : ಪ್ರಾರಂಭದಿಂದಲೇ ಬುದ್ಧಿ ಬ್ರಹ್ಮಾಂಡ, ಚುರುಕುಬುದ್ಧಿ, ಉತ್ತಮ ಆರೋಗ್ಯ, ಜೀವನ ಮಧ್ಯಭಾಗದಲ್ಲಿ ಆತ್ಮದುರಭಿಮಾನ, ಸ್ವಾರ್ಥ, ಅಹಂಕಾರ, ಆತ್ಮವಂಚಕರಾಗುವರು. ಸರ್ಕಾರ ರಾಜಕೀಯ ಸಮಾಜ ಸೇವೆಯಲ್ಲಿ ಉನ್ನತ ಹುದ್ದೆಗಳಿಗೆ ಹೋಗುವರು. ಸೂರ್ಯನು ಈ ತಿಂಗಳಲ್ಲಿ 20 ದಿನಗಳು ಮೇಷರಾಶಿಯಲ್ಲಿ ಸಂಚರಿಸುವುದರಿಂದ ಶನಿ, ಕುಜ, ಕಾಳಸರ್ಪದೋಷಗಳು ಬರಲಾರವು. ಶುಕ್ರ ಮತ್ತು ಶನಿ ದೆಸೆಗ್ರಹಗಳಾಗಿರುತ್ತವೆ. ಜೀವನದ ಮಧ್ಯ ಭಾಗದಲ್ಲಿ ಹಲವು ವರ್ಷಗಳ ಕಾಲ ಸಂಕಷ್ಟಗಳು ತಲೆದೋರುತ್ತವೆ. ಮೇ: ಜೀವನದಲ್ಲಿ ದುಂದುವೆಚ್ಚ, ದುವ್ರ್ಯವಹಾರ, ನಿರ್ಲಕ್ಷ್ಯ ಆಡಳಿತ ಮನೋಭಾವಗಳು ವೃದ್ಧಿ. ಅಧಿಕ ಧನವಂತನಾಗುವ, ರಾಜಕೀಯ ಪಟ್ಟಾಭಿಷೇಕ, ಲೋಕಸಂಚಾರ, ಅಧಿಕ ದೈವಭಕ್ತಿ, ದೈವಕಾರ್ಯಗಳಲ್ಲಿ ನಿರತ ಸೂರ್ಯನು ಮೇ ತಿಂಗಳಲ್ಲಿ ಅಧಿಕ ದಿನಗಳು ವೃಷಭ ರಾಶಿಯಲ್ಲಿ ಸಂಚರಿಸುವುದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹತ್ತರ ಎನಿಸಿದ ತಾರೆಗಳು ಮಾನವ ಅದೃಷ್ಟ ದೆಸೆಗಳನ್ನೇ ಬದಲಿಸುತ್ತಿರುತ್ತವೆ. ಗ್ರಹದೋಷಗಳಿಂದ ದೂರವಿದ್ದರೂ ಕುಜ 21 ವರ್ಷಗಳಿಗೊಮ್ಮೆ ಸಂಕಷ್ಟಗಳನ್ನು ತರುತ್ತಾನೆ. ಜೂನ್‌ : ಸ್ವತಂತ್ರವಾಗಿ ಜೀವಿಸುವುದೇ ಬಾಳಿನ ಗುರಿ. ಏಕೆಂದರೆ, ಸೂರ್ಯನ ಸಂಚಾರ ಮಿಥುನ ರಾಶಿಯಲ್ಲಿ ಅಧಿಕವಾಗಿ ಇರುವುದರಿಂದ ಮಗುವಿನ ಪಂಚೇಂದ್ರಿಯಗಳ ಮೇಲೆæ ಅಧಿಕ ಪ್ರಭಾವ ಬೀರುತ್ತಿರುತ್ತದೆ. ಇದರಿಂದ ಮಕ್ಕಳಲ್ಲಿ ಅತೀಂದ್ರಿಯ ಶಕ್ತಿ ಹೆಚ್ಚಾಗಿ ಜಿಜ್ಞಾಸೆ ಉಳ್ಳ ಅತಿ ಬುದ್ಧಿವಂತನಾಗುವರು. ಉತ್ತಮ ಆರೋಗ್ಯ, ಚುರುಕುಬುದ್ಧಿ, ದೇಹ ಬೆಳವಣಿಗೆ, ಜ್ಞಾನ ವಿಜ್ಞಾನದಲ್ಲಿ ಆಸಕ್ತ, ವಿದ್ಯಾಬುದ್ಧಿಯಲ್ಲಿ ಪ್ರಾವೀಣ್ಯ. ಆದರೆ 12 ವರ್ಷಗಳ ತನಕ ಹಠಮಾರಿತನ ಇರುತ್ತದೆ. ಮಾತಾಪಿತ ಬಂಧು ವರ್ಗದವರಿಗೆ ಕ್ಷೇಮ. ಜುಲೈ : ಈ ತಿಂಗಳು ಸೂರ್ಯನು 22 ದಿನಗಳು ಕಟಕರಾಶಿಯಲ್ಲಿ ಸಂಚರಿಸುವುದರಿಂದ ಚಂದ್ರ ಮತ್ತು ಗುರುಗ್ರಹಗಳು ದೆಸೆ ಗ್ರಹಗಳಾಗಿರುತ್ತವೆ. ಜನನ ಕಾಲದಲ್ಲಿ ಗ್ರಹದೋಷಗಳು ಇರುವುದಿಲ್ಲ. ಅಧಿಕ ಆಯಸ್ಸು, ಜೀವನದಲ್ಲಿ ಆಕಸ್ಮಿಕ ಅದೃಷ್ಟಗಳು, ದೇಹ ಬೆಳೆದಂತೆಲ್ಲಾ ಚುರುಕುಬುದ್ಧಿ, ಬುದ್ಧಿ ಬ್ರಹ್ಮಾಂಡ. ಅಧಿಕ ದೈವಭಕ್ತಿ, ದೇಶ ವಾಸ್ತವ್ಯ, ದುಂದುವೆಚ್ಚ, ಕಾಲಗಣನಾ ಚಕ್ರದಲ್ಲಿ ಮತಿಸುವ ಸ್ವಭಾವ. ಅತಿ ಸುಂದರ ಅತಿ ಸೌಂದರ್ಯ ಅತಿಮಾತುಗಾರರು, ಉನ್ನತ ಪದ. ಆಗಸ್ಟ್‌ : ವೀರಮಲ್ಲರು, ಕ್ರೀಡಾಪಟುಗಳು, ಸಾಗರ ಸಂಶೋಧಕರು, ರಾಜಕೀಯ ಸಮಾಜ ಸೇವಾ ಮುಖಂಡರಾಗುವುದರಲ್ಲಿ ಸಂಶಯವೇ ಇಲ್ಲ. ಸೂರ್ಯನು ಸಿಂಹರಾಶಿಯಲ್ಲಿ 23 ದಿನಗಳು ಸಂಚರಿಸುವುದರಿಂದ ಪ್ರತಿ 21 ವರ್ಷಗಳಿಗೊಮ್ಮೆ ಗಜಕೇಸರಿಯೋಗ, ರಾಜಯೋಗಗಳು ಮರುಕಳಿಸುತ್ತಿರುತ್ತವೆ. ದೇಹ ಬೆಳೆದಂತೆಲ್ಲಾ ಅಧಿಕ ಜ್ಞಾಪಕಶಕ್ತಿ, ಬುದ್ಧಿ ಬ್ರಹ್ಮಾಂಡ ವಿದ್ಯಾಬುದ್ಧಿಯಲ್ಲಿ ಪ್ರವೀಣರು. ರವಿ, ಶುಕ್ರ ಗ್ರಹಗಳು ದೆಸೆ ಗ್ರಹಗಳಾಗಿರುತ್ತವೆ. ಇದರಿಂದ ಯಾವುದೇ ಗ್ರಹದೋಷಗಳು ಬರಲಾರವು. ಸೆಪ್ಟೆಂಬರ್‌ : ದೈವಾಂಶ ಸಂಭೂತರು, ಯೋಗಿಗಳು, ಪ್ರತಿಭಾನ್ವಿತರು, ದೇಶ ಪ್ರೇಮಿಗಳು, ಸಂಶೋಧಕರು, ಚಿತ್ರನಟರು, ಗಾಯಕರು ನೃತ್ಯಗಾರರಾಗುವುದರಲ್ಲಿ ಸಂಶಯವೇ ಇಲ್ಲ. ಸೂರ್ಯನು ಕನ್ಯಾರಾಶಿಯಲ್ಲಿ 23 ದಿನಗಳು ಸಂಚರಿಸಿ ಸಮಭಾಜಕವೃತ್ತದ ಮೇಲೆ ಹಾದುಹೋಗುವುದರಿಂದ ಜೀವನ ಮಧ್ಯಭಾಗದಲ್ಲಿ ಆಕಸ್ಮಿಕ ಅದೃಷ್ಟಗಳು ತಂದೆ ತಾಯಿ ಬಂಧುವರ್ಗದವರಲ್ಲಿ ನವಚೈತನ್ಯ ಚಂದ್ರ ಮತ್ತು ರವಿ ದೆಸೆ ಗ್ರಹಗಳಾಗಿರುತ್ತದೆ. ಅಕ್ಟೋಬರ್‌ : ಸರ್ವಕಾರ್ಯ ಚತುರರು, ಸಂಶೋಧಕರು, ಜ್ಞಾನಿಗಳು, ಅಧಿಕ ಧನವಂತರು, ರಾಜಕೀಯ ನೇತಾರರಾಗುವರು. ಜೀವನ ಮಧ್ಯಭಾಗದ ತನಕ ಯಾವುದೇ ಗ್ರಹದೋಷಗಳು ಬರಲಾರವು. ಸೂರ್ಯ ಈ ತಿಂಗಳಲ್ಲಿ 23 ದಿನಗಳ ಕಾಲ ತುಲಾರಾಶಿಯಲ್ಲಿ ಸಂಚರಿಸುವುದರಿಂದ ಬುಧ, ಶುಕ್ರ ಮತ್ತು ಶನಿಗ್ರಹಗಳು ದೆಸೆ ಮತ್ತು ಉಚ್ಚಗ್ರಹಗಳಾಗಿರುತ್ತವೆ. ಪ್ರತಿ 6-11-11-28 ವರ್ಷಗಳಿಗೊಮ್ಮೆ ಜೀವನ ಶೈಲಿ ಬದಲಾಗುವುದು. ಪ್ರತಿಭಾನ್ವಿತ ಮುಖಂಡನಾಗಿ ಪರಿವರ್ತನೆ. ನವೆಂಬರ್‌ : ಈ ತಿಂಗಳಲ್ಲಿ ಸೂರ್ಯನು ವೃಶ್ಚಿಕರಾಶಿಯಲ್ಲಿ ಪ್ರವೇಶ ಹೊಂದುವುದರಿಂದ ಕಾಲಗಣನಾ ಚಕ್ರದಲ್ಲಿ ಬುದ್ಧಿ ಬ್ರಹ್ಮಾಂಡವಾಗಿ ದೇಶ ಸೇವೆ, ಸಮಾಜಸೇವೆಯಲ್ಲಿ ನಿರತರಾಗುವರು. ರವಿ, ಶುಕ್ರ ಮತ್ತು ಗುರು ಗ್ರಹಗಳು ಜೀವನದಲ್ಲಿ ದೆಸೆ ಗ್ರಹಗಳಾಗಿರುವುದರಿಂದ ಪ್ರಾರಂಭದಿಂದಲೇ ಜ್ಞಾನ, ಛಲ, ವೀರ್ಯ, ತೇಜಸ್ಸು ಮತ್ತು ಶಕ್ತಿಗಳು ಹೆಚ್ಚಾಗಿ ಸ್ಥಿತಪ್ರಜ್ಞರಾಗುವರು. ಅಹಂಭಾವ, ದುಂದುವೆಚ್ಚ, ದುವ್ರ್ಯವಹಾರಗಳು ಹೆಚ್ಚುತ್ತಿರುತ್ತವೆ. ಅಧಿಕ ಮಿತ್ರರು ಮತ್ತು ಬಂಧುವರ್ಗ ಇರುತ್ತದೆ. ಡಿಸೆಂಬರ್‌ : ಸೂರ್ಯನು 21 ದಿನಗಳ ಕಾಲ ಧನುಸ್ಸು ರಾಶಿಯಲ್ಲಿ ಸಂಚರಿಸುವುದರಿಂದ ಈ ರಾಶಿಯಲ್ಲಿನ ಜ್ಯೋತಿ ನಕ್ಷತ್ರಗಳು ಮತ್ತು ಹಿಂದರ್‌ ಮ್ಯಾಟ್ರಿಕ್ಸ್‌ ಎಂಬ ಹೊಳಪಿನ ಹಳದಿ ನಕ್ಷತ್ರಗಳ ಪ್ರಭಾವದಿಂದ ಮಕ್ಕಳು ಜನಿಸುವರು. ತಂದೆ ತಾಯಿಯರ ಆಸ್ತಿಗಳು ದ್ವಿಗುಣಗೊಳ್ಳಲಿದೆ. ಮಕ್ಕಳ ಬೆಳವಣಿಗೆ ಅದೃಷ್ಟಗಳಿಂದ ಕೂಡಿರುತ್ತದೆ. ರಾಜ ರೈತನಾಗುವ ರೈತ ರಾಜನಾಗುವನು. ಸಿರಿ ಸಂಪತ್ತುಗಳಿಂದ ಕೂಡಿದ ಮಹಾ ಪಟ್ಟಣವಾಗಿ ಶರೀರ ಬೆಳೆಯುವುದು. ರವಿ, ಶುಕ್ರ ಮತ್ತು ಅಂಗಾರಕ ಗ್ರಹಗಳು ದೆಸೆ ಗ್ರಹಗಳಾಗಿರುತ್ತದೆ. ಜೀವನದಲ್ಲಿ ಯಾವುದೇ ಗ್ರಹದೋಷಗಳು ಬರುವುದಿಲ್ಲ. ನಾರಾಯಣಶೆಟ್ಟಿ ಪದ್ಮಸಾಲಿ sangraha

ವಿವಾಹಯೋಗ: ಸುಲಗ್ನ ಸಾವಧಾನ

ಮದುವೆ ಆಗಬೇಕಾದ್ರೆ ಎರಡು ಮನಸ್ಸುಗಳ ನಡುವಿನ ಸಂಬಂಧ, ಅನುಬಂಧ ಗಟ್ಟಿಯಾಗಿರಬೇಕು. ಸ್ವಲ್ಪ ಹಿಂದಿರುಗಿ ನೋಡಿದ್ರೂ ಜೀವನದಲ್ಲಿ ಹೀನಾಯ ಸೋಲು ಗ್ಯಾರಂಟಿ.ಬದಲಾದ ಕಾಲಮಾನದಲ್ಲಿ ನಮ್ಮ ಆಸೆ, ಆಕಾಂಕ್ಷೆ, ನಿರೀಕ್ಷೆ ಮತ್ತು ಸ್ವಭಾವಗಳು ಸಾಕಷ್ಟು ರೂಪಾಂತರಗೊಂಡಿವೆ. ಮದುವೆಗೆ ಮುನ್ನ ಸರಸ ಬಯಸೋ ಮನಸ್ಸು ನಂತರ ವಿರಸದ ದಾರಿ ಹಿಡಿಯೋದು ಏಕೆ? ಹೋರಾಶಾಸ್ತ್ರದ ರೀತ್ಯ ಜಾತಕದ ಗಣಕೂಟವನ್ನು ಪರಿಶೀಲಿಸಿದಾಗ ಅದಕ್ಕೊಂದು ಉತ್ತರ ಕಂಡುಕೊಳ್ಳಬಹುದು. ಜಾತಕನ ಕುಂಡಲಿಯಲ್ಲಿ ಲಗ್ನಾಧಿಪತಿಯಿಂದ 7 ಮತ್ತು 5ನೇ ಮನೆಯಲ್ಲಿ ಯಾವ ಗ್ರಹವಿದೆ ಎನ್ನುವುದರ ಮೇಲೆ ಸಂಸಾರ ಸೌಖ್ಯ ಅಥವಾ ಕಲ್ಯಾಣ ಲಕ್ಷಣವನ್ನು ಅರ್ಥ ಮಾಡಿಕೊಳ್ಳಬಹುದು. ಅದರ ಆಧಾರದಲ್ಲೇ ಹೊಂದಾಣಿಕೆಯ ಲೆಕ್ಕಾಚಾರ ಹಾಕಬಹುದು. ದೋಷದ ಸೂಚನೆಗಳು * ಸಪ್ತಮಾಧಿಪತಿ ಅಥವಾ ಏಳನೇ ಮನೆಯ ಗ್ರಹವು ಯಾವುದೇ ಕ್ಲೇಶಗಳಿಂದ ಬಾಧಿತನಾಗಿರಬಾರದು. * ಸಪ್ತಮಾಧಿಪತಿ ಅಥವಾ ಏಳನೇ ಮನೆಯಲ್ಲಿರುವ ಗ್ರಹಕ್ಕೆ ಪಾಪಕರ್ತಾರಿ ಯೋಗದಿಂದ ಬಾಧಿತನಾಗಿರಬಾರದು. * ಸಪ್ತಮಾಧಿಪತಿ ನೀಚ ನವಾಂಶದಿಂದ ಕೂಡಿರಬಾರದು. * ಅವಯೋಗವೇನಾದರೂ ಲಗ್ನವನ್ನು ಬಾಧಿಸಿದರೆ ಅದರಿಂದಾಗಿ ಆರೋಗ್ಯ ಅಥವಾ ಕುಟುಂಬ ಅಸೌಖ್ಯ ಉಂಟಾಗುತ್ತದೆ. * ಎರಡೂ ಜಾತಕಗಳಲ್ಲಿನ ಅವಯೋಗಗಳು ಒಂದಾದರೆ, ಸಂಸಾರ ಸಾಮರಸ್ಯಕ್ಕೆ ತೊಂದರೆಯಾಗುತ್ತದೆ. ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಬೇಕು. * ಶನಿ, ಬುಧ ಮತ್ತು ರಾಹು ಗ್ರಹಗಳು 12ನೇ ಮನೆಯಲ್ಲಿರಬಾರದು. ಕಾರಣ ಈ ಮನೆಯನ್ನು ಶಯನ ಸ್ಥಾನ ಎನ್ನುತ್ತಾರೆ. * ಮಹಿಳೆಯ ಜಾತಕದ ಎಂಟನೆ ಮನೆ ಮಾಂಗಲ್ಯ ಸ್ಥಾನವನ್ನು ಸೂಚಿಸುತ್ತದೆ. ಈ ಮನೆಯು ಯಾವುದೇ ರೀತಿಯಿಂದ ಬಾಧಿತವಾಗಿರಬಾರದು. * ಜಾತಕನ ಕುಂಡಲಿಯ 3,7 ಮತ್ತು 11ನೇ ಮನೆಗಳನ್ನು, ಅದರೊಳಗಿನ ಗ್ರಹಗಳನ್ನು, ಭಾವಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. * ಕುಟುಂಬ ಸೌಖ್ಯ ಲೆಕ್ಕಾಚಾರ ಹಾಕಲು ನವಾಂಶ ಕುಂಡಲಿಯನ್ನು ಪ್ರತ್ಯೇಕವಾಗಿ ಗಮನಿಸಬೇಕು. ಈ ಕುಂಡಲಿಯಲ್ಲಿ ಲಗ್ನ, ಲಗ್ನಾಧಿಪತಿ, ಶುಕ್ರನ ಸ್ಥಾನವನ್ನು ವಿಶೇಷವಾಗಿ ಗಮನಿಸಬೇಕು. ಶುಭ ಯೋಗದ ಸೂಚನೆಗಳು * ಸಪ್ತಮ ಸ್ಥಾನದಲ್ಲಿ ಶುಭ ಗ್ರಹವಿರಬೇಕು, ಶುಭ ನಕ್ಷತ್ರದ ದೃಷ್ಟಿ ಇರಬೇಕು ಮತ್ತು ಶುಭ ನವಾಂಶವನ್ನು (ಉಚ್ಛ ನವಾಂಶ, ಸ್ವ ನವಾಂಶ, ಮಿತ್ರ ನವಾಂಶ ಕೇಂದ್ರ ಮತ್ತು ರಾಶಿಲಗ್ನದಿಂದ ತ್ರಿಕೋಣಗಳ ಭಾವ) ಹೊಂದಿರಬೇಕು. * ಅತ್ಯುತ್ತಮ ಕುಟುಂಬ ಸೌಖ್ಯಕ್ಕಾಗಿ ಯಾವುದಾದರೂ ಒಂದು ಜಾತಕದಲ್ಲಿ ಯೋಗಗಳು ಕೂಡಿರಬೇಕು. * ಐದನೇ ಮನೆಗೆ ಹೋಲಿಸಿದರೆ ಏಳನೇ ಮನೆಯ ಸರ್ವಾಷ್ಟಕವರ್ಗದಲ್ಲಿ ಕಡಿಮೆ ಬಿಂದುಗಳಿರಬೇಕು. * ಏಳನೇ ಮನೆಯ ಶುಕ್ರಾಷ್ಟಕವರ್ಗದಲ್ಲಿ ಹೆಚ್ಚು ಬಿಂದುಗಳಿರಬೇಕು. * ಏಳನೇ ಮನೆ ಮತ್ತು ಸಪ್ತಮಾಧಿಪತಿಯ ಮೇಲೆ ಗುರುವಿನ ದೃಷ್ಟಿ ಇರಬೇಕು. * ಏಳನೇ ಮನೆ ಮತ್ತು ಸಪ್ತಮಾಧಿಪತಿಗೆ ಶುಭಕರ್ತಾರಿ ಯೋಗವಿದ್ದರೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. * ಸಪ್ತಮಾಧಿಪತಿ ಪುಷ್ಕರ ನವಾಂಶವನ್ನು ಹೊಂದಿದ್ದರೆ ಅತ್ಯುತ್ತಮ ಕುಟುಂಬ ಸೌಖ್ಯವನ್ನು ನಿರೀಕ್ಷಿಸಬಹುದು. * ಕುಜನ ಲಕ್ಷಣಗಳು ತೀವ್ರವಾಗಿದ್ದರೆ ಜಾತಕನ ಸ್ವಭಾವ ಆಕ್ರಮಣಕಾರಿಯಾಗಿರುತ್ತದೆ. ಅದರ ನೇರ ಪರಿಣಾಮ ಕುಟುಂಬದ ಮೇಲಾಗುತ್ತದೆ. * ಶನಿ ಚಂದ್ರ ಯೋಗದ ಕಾರಣ ಸ್ವಭಾವಗಳು ಚಿತ್ರವಾಗಿರುತ್ತವೆ. ಅದರ ಪರಿಣಾಮ ಕುಟುಂಬದ ಮೇಲಾಗುತ್ತದೆ. ಶುಕ್ರನಲ್ಲಿ ಜಲ ಲಕ್ಷಣವಿದ್ದರೆ ಅಂತಹವರು ಸೂಕ್ಷ್ಮ ಪ್ರವೃತ್ತಿಯುಳ್ಳವರಾಗಿರುತ್ತಾರೆ.ಷಂಡತ್ವ ಮತ್ತು ಸಂತಾನಶಕ್ತಿ * ಶನಿಯೊಂದಿಗೆ ಬುಧ ಏಳನೇ ಮನೆಯಲ್ಲಿ ಅಥವಾ ತುಲಾ ರಾಶಿಯಲ್ಲಿದ್ದರೆ ಒಳ್ಳೆಯದಲ್ಲ. * ಮಂಗಳ ಮತ್ತು ಶುಕ್ರಗ್ರಹವು ಬಾಧಿತವಾಗಿದ್ದರೆ ಮತ್ತು ಎಂಟನೆ ಮನೆಯು ಹಾನಿಕಾರಕವಾಗಿದ್ದರೆ ಜಾತಕನಿಗೆ ಲೈಂಗಿಕ ಆಸಕ್ತಿ ಅಷ್ಟಾಗಿ ಇರುವುದಿಲ್ಲ. * ರಾಶಿ ಚಕ್ರದಲ್ಲಿ ಬೀಜ ಸ್ಪುಟ ಮತ್ತು ಕ್ಷೇತ್ರ ಸ್ಪುಟವು ಬಾಧಿತವಾಗಿದ್ದರೆ ಲೈಂಗಿಕ ಜೀವನ ಅಷ್ಟೊಂದು ತೃಪ್ತಿಕರವಾಗಿರುವುದಿಲ್ಲ. * ಕುಂಡಲಿಯಲ್ಲಿ ಶುಕ್ರ ಮತ್ತು ಚಂದ್ರ ಬಾಧಿತನಾಗಿದ್ದರೆ ವೀರಾರ‍ಯಣುಗಳ ಸಂಖ್ಯೆ ಕಡಿಮೆಯಾಗುತ್ತದೆ. * ಏಳನೇ ಮನೆಯಲ್ಲಿ ಉಪಕೇತು, 12ನೇ ಮನೆಯಲ್ಲಿ ಧೂಮ ಲಕ್ಷಣಗಳಿದ್ದರೆ ಷಂಡತ್ವವನ್ನು ಸೂಚಿಸುತ್ತದೆ. ಉತ್ತಮ ಬಾಂಧವ್ಯ 'ಋುಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯಚ' ಎನ್ನುವಂತೆ ಋುಣಾನುಬಂಧವನ್ನು ಜಾತಕ ಕುಂಡಲಿಯ ಲಗ್ನಾಧಿಪತಿ ಅಥವಾ ಏಳನೇ ಮನೆಯಲ್ಲಿರುವ ಗ್ರಹ ಶುಭವಾಗಿದೆಯೇ ಎಂದು ನೋಡುವ ಮೂಲಕ ಲೆಕ್ಕ ಹಾಕಬಹುದು. ಮುಖ್ಯವಾಗಿ ನವಾಂಶ ಕುಂಡಲಿ ಸಂಗಾತಿಯ ಜೀವನ ದರ್ಪಣವಾಗಿರುತ್ತದೆ. ಕುಜ ದೋಷ ಕೆಲವೊಂದು ಲಗ್ನಗಳನ್ನು ಹೊರತುಪಡಿಸಿ ಕುಜ ದೋಷವು ಕನ್ಯಾ, ಮಿಥುನ, ತುಲಾ ಮತ್ತು ವೃಶ್ಚಿಕ ಲಗ್ನಗಳನ್ನು ಬಾಧಿಸುತ್ತದೆ. ಶನಿಗ್ರಹವೇನಾದರೂ 1, 4, 7, 8 ಮತ್ತು 12ನೇ ಸ್ಥಾನದಲ್ಲಿದ್ದರೆ ಕುಜದೋಷವು ಬಾಧಿಸುವುದಿಲ್ಲ. ಒಂದೊಮ್ಮೆ ಕುಜನೇನಾದರೂ ಚಂದ್ರ, ಬುಧ ಮತ್ತು ಗುರುವಿನೊಂದಿಗೆ ಇದ್ದರೆ ದೋಷವು ಗಣನೆಗೆ ಬರುವುದಿಲ್ಲ. ಜಾತಕನ ಲಗ್ನ ಅಥವಾ 7ನೇ ಮನೆಯಲ್ಲಿ ಗುರು ಮತ್ತು ಶುಕ್ರ ಗ್ರಹವಿದ್ದರೆ ಕುಜದೋಷ ನಿವಾರಣೆಯಾಗುತ್ತದೆ. ಅಶ್ವಿನಿ, ಮೃಗಶಿರಾ, ಪುನರ್ವಸು, ಪುಷ್ಯ, ಚಿತ್ತಾ, ಸ್ವಾತಿ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರಗಳಿಗೆ ಕುಜದೋಷವಿಲ್ಲ. ಡಾ. ಟಿ.ಎಸ್‌.ವಾಸನ್‌ sangraha

ವಿವಾಹ ನಿರ್ಣಯ ಹೇಗೆ?

ಪಂಚಾಂಗಗಳಲ್ಲಿ ಕೊಡುವ 36 ಗುಣದ ಲೆಕ್ಕಾಚಾರ ನೋಡಿ ಮೇಳಾಮೇಳಿ ನಿರ್ಣಯಿಸುವುದು ಸರಿಯಲ್ಲ. ವಧು-ವರರ ಜಾತಕ ಪರಿಶೀಲಿಸಿ ಗ್ರಹರ ಸ್ಥಿತಿಗತಿ, ಬಲಾಬಲದ ಮೇಲೆ ಮಾಡುವ ನಿರ್ಣಯವೇ ಹೆಚ್ಚು ಉಪಯುಕ್ತ. ಉತ್ತರಾಯಣದ ಆರಂಭದೊಂದಿಗೆ ವಿವಾಹಾದಿ ಶುಭಕಾರ್ಯಗಳಿಗೂ ಹೊಸ ಕಳೆ ಬಂದಿದೆ. ಜಾತಕಗಳನ್ನು ಕೂಡಿಸುವಾಗ ಸಾಮಾನ್ಯವಾಗಿ ನಕ್ಷ ತ್ರ ಕೂಟವನ್ನು ನೋಡಿ ಮೇಳಾ ಮೇಳಿ ಅಥವ ವಧುವರರ ಹೊ0ದಾಣಿಕೆ ತೀರ್ಮಾನಿಸುವವರೇ ಹೆಚ್ಚು. ಅದರೊಂದಿಗೆ ಗಮನಿಸಬೇಕಾದ ಕೆಲ ಅಂಶಗಳತ್ತ ಗಮನ ಹರಿಸೋಣ. ತಾರಾಕೂಟ : ನಮ್ಮ ಜನ್ಮ ತಾರೆಯಿದ ಒಬತ್ತು ತಾರೆಗಳನ್ನು ಜನ್ಮ, ಸಂಪತ್‌, ವಿಪತ್‌, ಕ್ಷೇಮ, ಪ್ರತ್ಯರ, ಸಾಧಕ, ವಧ, ಮಿತ್ರ, ಪರಮಮಿತ್ರ ತಾರೆಗಳೆಂದು ಹೆಸರಿಸಲಾಗಿದೆ. ಯೋನಿ ಕೂಟ : ಯೋನಿ ಎಂದರೆ ವರ್ಗ ಎಂದರ್ಥ. ಹಾಗೆಂದೇ ಪ್ರತಿ ನಕ್ಷ ತ್ರವೂ ಪ್ರಾಣಿಯ ಹೆಸರಿನಿಂದ ಗುರುತಿಸಲ್ಪಟ್ಟಿದೆ. ಹಾಗೆಂದೇ ನಮ್ಮ ಹಿರಿಯರು ಪತಿ-ಪತ್ನಿ ಇಬ್ಬರೂ ಒಂದೇ ಯೋನಿಗೆ ಸಂಬಂಧಿಸಿದವರಾದರೆ ಶ್ರೇಷ್ಠ ಎಂದರು. ವೈರಿ ಯೋನಿ ಕೂಡದು ಎಂದರು. ಈ ಅಂಶವು ದಾಂಪತ್ಯ ಮನಸ್ಥಿತಿಯನ್ನು ಸೂಚಿಸುತ್ತದೆ. ಗಂಡು ಹೆಣ್ಣಿನ ಸಪ್ತಮಭಾವ, ಹೆಣ್ಣಿನ ಕುಜ, ರವಿ, ಗಂಡಿನ ಶುಕ್ರ ಇವರ ಬಲಾಬಲ, ಪರಸ್ಪರ ಸ್ಥಿತಿ ಇಲ್ಲಿ ನಿರ್ಣಾಯಕವಾಗುತ್ತದೆ. ಹಾಗಾಗಿ ಯೋನಿಕೂಟದ ಆಧಾರದ ಮೇಲೆ ಜಾತಕ ತಿರಸ್ಕಾರ ಸಲ್ಲದು. ಗ್ರಹ ಮೈತ್ರಿ - ಇದು ವಧು-ವರರ ಚಂದ್ರ ಸ್ಥಿತ ರಾಶ್ಯಾಧಿಪತಿಗಳ ಮಿತ್ರತ್ವ. ಚಂದ್ರ ಮನೋಕಾರಕ. ಅವನು ಗಂಡು ಹೆಣ್ಣಿನ ಮಾನಸಿಕ ಸ್ಥಿತಿಯನ್ನು ಪ್ರಭಾವಿಸುತ್ತಾನೆ. ಗ್ರಹಮೈತ್ರಿ ಇಲ್ಲದಾಗ ಇಬ್ಬರ ನಕ್ಷ ತ್ರಾಧಿಪತಿಗಳ ಮಿತ್ರತ್ವ, ತಾತ್ಕಾಲಿಕ ಮಿತ್ರತ್ವ, ಇಬ್ಬರ ಶುಭ ಸ್ಥಿತಿ, ಇವರ ಮೇಲೆ ಶುಭ ದೃಷ್ಟಿ ಚಂದ್ರ ಬಲ ಇತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಗ್ರಹಮೈತ್ರಿ ಇಲ್ಲವೆಂದು ತಿರಸ್ಕರಿಸುವುದು ಸರಿಯಲ್ಲ. ಗಣಕೂಟ: ನಕ್ಷತ್ರಗಳಲ್ಲಿ ದೇವ, ಮನುಷ್ಯ, ರಾಕ್ಷ ಸ ಗಣಗಳಿವೆ. ಆದರೆ ಅದಕ್ಕೂ ನಕ್ಷ ತ್ರಗಳ ಅಧಿದೇವತೆಗಳಿಗೂ ಸಂಬಂಧವಿಲ್ಲವೆಂಬುದನ್ನು ಮನಗಾಣಬೇಕು. ಬಹುಶಃ ಚಂದ್ರನ ಪ್ರಭಾವಕ್ಕೆ ಅನುಗುಣವಾಗಿ ವಿಭಾಗಿಸಿರಬೇಕು. ಅದಕ್ಕೆ ಪೂರಕವಾದ ಆಧಾರಗಳಿಲ್ಲ. ಇದು ಕರ್ಮ, ಮತ್ತು ಗುಣ ಸ್ವಭಾವಕ್ಕೆ ಸಂಬಂಧಿಸಿದೆ. ಆದರೆ ಒಂದು ಜಾತಕದ ಲಗ್ನ, ಲಗ್ನಾಧಿಪತಿ, ಚಂದ್ರ, ಕುಂಡಲಿಯಲ್ಲಿರುವ ಬಲಯುತವಾದ ಗ್ರಹ ಇವುಗಳು ಆ ಜಾತಕನ ಗುಣ ಸ್ವಭಾವವನ್ನು ನಿರ್ಣಯಿಸುತ್ತವೆ. ಹಾಗಾಗಿ ಗಣಕೂಟಕ್ಕಾಗಿ ಜಾತಕವನ್ನು ತಿರಸ್ಕರಿಸುವುದು ಸರಿಯಲ್ಲ. ಭಕೂಟ ಅಥವ ರಾಶಿ ಕೂಟ- ಇಲ್ಲಿ ವಧುವಿನ ರಾಶಿಯಿಂದ ವರನ ರಾಶಿ ದೃಶ್ಯಾರ್ಧದಲ್ಲಿ ಬರಬೇಕೆಂದು ಹೇಳಲಾಗಿದೆ. ಅಂದರೆ 7,8,9,10,11,12ನೇ ರಾಶಿಯಾಗಿರಬೇಕು.ಇವಕ್ಕೆ ಈರೀತಿ ಫಲ ಹೇಳಲಾಗಿದೆ. ವಧುವಿನ ಜನ್ಮ ತಾರೆಯಿಂದ ವರನ ಜನ್ಮ ತಾರೆ 1. ಆದರೆ ಆಯಸ್ಸು ಕ್ಷೀಣ, ಧನನಾಶ, 2. ಆದರೆ ಧನನಾಶ 3. ಆದರೆ ದುಃಖ 4. ಪರಸ್ಪರ ವೈರ, 5. ಆದರೆ ಸಂತಾನ ನಷ್ಟ, 6. ಆದರೆ ವ್ಯಸನ, ರೋಗ, ಸಂಕಷ್ಟ, ವಿಯೋಗ, 7. ಆದರೆ ಸಾ0ತತಿ ಸೌಖ್ಯ, ಧನಪ್ರಾಪ್ತಿ, ಅನ್ಯೋನ್ಯ ಪ್ರೀತಿ, 8. ಆದರೆ ಪುತ್ರಲಾಭ, ಸುಖ, ಪ್ರೇಮ, 9.ಆದರೆ ಧನ, ಸಂಪತ್ತು, ಸೌಭಾಗ್ಯ, ಉತ್ತಮ ಸ0ತತಿ, 10.ಆದರೆ ಧನ, ಸುಖ, ಸೌಭಾಗ್ಯ, 11. ಆದರೆ ಸಂತಾನ ಸುಖ, ಪ್ರೇಮ, ಶುಭಫಲ, 12. ಆದರೆ ಆರೋಗ್ಯ, ಧನ, ಸಂಪತ್ತು. ಆದರೆ ಇಲ್ಲಿ ಈ ನಕ್ಷ ತ್ರ ಸ್ಥಿತ ಚ0ದ್ರ ಪಾಪಗ್ರಹ ಪೀಡಿತ ನಾದರೆ ವ್ಯತಿರಿಕ್ತ ಫಲ ಹೇಳಬೇಕೆಂದಿದ್ದಾರೆ. ಇಲ್ಲಿ 8-12 ಕ್ಕೆ ಶುಭ ಫಲ ಹೇಳಿದರೂ ಅಲ್ಲಿ ಎರಡು ರಾಶ್ಯಾಧಿಪರಲ್ಲಿ ಮಿತ್ರತ್ವ (ತಾತ್ಕಾಲಿಕವಾಗಿ ಕೂಡ) ಇರುವುದು ಅವಶ್ಯಕ. ಅದರಲ್ಲೂ ಸ್ತ್ರೀಯದು ಸ್ತ್ರೀರಾಶಿ ಮತ್ತು ಪುರುಷನದು ಪುರುಷ ರಾಶಿಯಾದರೆ ಶ್ರೇಷ್ಠ. ಇದಕ್ಕೆ 36 ರಲ್ಲಿ ಏಳು ಗುಣ ಕೊಡಲಾಗಿದೆ. (19.5%). ಇದು ದಂಪತಿಯಲ್ಲಿ ಪರಸ್ಪರ ಪ್ರೀತಿಯನ್ನು ತೋರಿಸುತ್ತದೆ. ಆದ್ದರಿಂದ ಇದು ಮಹತ್ವದ ಕೂಟ. ಆದರೆ ಇಲ್ಲಿ ಕೂಡ ಚಂದ್ರ ಲಗ್ನದಿಂದ ಶುಭ ಸ್ಥಾನ ಸ್ಥಿತ ಶುಭ, ಬಲಿಷ್ಠ ಗ್ರಹರು ಸಾಕಷ್ಟು ಪ್ರಭಾವ ಬೀರಬಲ್ಲರಾದ್ದರಿಂದ ಕುಂಡಲಿಯ ವಿವೇಚನೆ ಅತ್ಯಗತ್ಯ. ನಾಡಿಕೂಟ:- ದಂಪತಿಯ ಆರೋಗ್ಯ ಸೂಚಕ. ಏಕನಾಡಿ ಅದರಲ್ಲೂ ಇಬ್ಬರದೂ ಅಂತ್ಯನಾಡಿ ಆಗಬಾರದು. ನಕ್ಷ ತ್ರಗಳನ್ನು ಆದಿ, ಮಧ್ಯ ಮತ್ತು ಅಂತ್ಯ ನಾಡಿ ಎಂದು ವಿಭಾಗಿಸಲಾಗಿದೆ. ಇಲ್ಲಿ ಏಕನಾಡಿಗೆ ಶೂನ್ಯಗುಣ. ಬೇರೆ ಬೇರೆ ನಾಡಿ ಆದರೆ 36 ರಲ್ಲಿ 8 ಗುಣ ಕೊಡಲಾಗಿದೆ. (22%). ಮುಖ್ಯವಾಗಿ ಆಯುರ್ವೇದದ ಆಧಾರದಲ್ಲಿ ನಿರ್ಣಯಿಸಲಾಗಿರುವುದರಿಂದ ಉತ್ಪ್ರೇಕ್ಷಿಸಲಾಗದು. ಆದರೆ ಜಾತಕದಲ್ಲಿ ತ್ರಿದೋಷಗಳ ಪ್ರಭಾವನ್ನು ಸೂಕ್ಷ್ಮವಾಗಿ ಗಮನಿಸಿ ಈ ವಿಚಾರದಲ್ಲಿ ಮುಂದುವರಿಯುವುದು ಒಳ್ಳೆಯದು.

ರಾಶಿ ಚಕ್ರದಲ್ಲಿ ಗ್ರಹಗಳ ಪ್ರಭಾವ

ಸೌರಮಂಡಲದ ಆಚೆ ಮಿಲಿಯನ್‌ ಗಟ್ಟಲೆ ತಾರಾಮಂಡಲಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಸೂರ್ಯನ ಚಲನ ಸಿದ್ದಾಂತವನ್ನು ಅವಲಂಬಿಸಿ, ಮಾನವ ಭೌತಿಕ ಗುಣಗಳಿಗೆ ಅನ್ವಯಿಸುವ 12 ತಾರಾಮಂಡಲಗಳನ್ನು (ರಾಶಿಗಳು) ಮಾತ್ರ ಗುರುತಿಸಲಾಗಿದೆ. ಪ್ರತಿಯೊಂದು ರಾಶಿಯಲ್ಲಿಯೂ ನಿರ್ಧಿಷ್ಟ ತಾರೆಗಳನ್ನು ಮತ್ತು ಗ್ರಹಗಳ ಪ್ರಭಾವವನ್ನು ಗುರುತಿಸಲಾಗಿದೆ. ಸೂರ್ಯನು ಸಮಭಾಜಕ ವೃತ್ತದ ಮೇಲೆ ಹಾದು ಹೋಗುವ ಮಾರ್ಚಿ-21ರವರೆಗೆ ರಾಶಿ ಚಕ್ರದಲ್ಲಿ ಗ್ರಹಗಳ ಪ್ರಭಾವವನ್ನು ತಿಳಿಸಲಾಗಿದೆ. * ಮೇಷ : ದೆಸೆಗ್ರಹ ಗುರು, ಉಚ್ಚಗ್ರಹ ಕುಜ, ಬಂಡವಾಳ ಹೂಡಿಕೆಯಲ್ಲಿ ಪ್ರಗತಿ, ಲೇವಾದೇವಿ ವ್ಯವಹಾರ, ಲೋಹ, ಜವಳಿ, ದಿನಸಿ, ವ್ಯಾಪಾರದಲ್ಲಿ ಲಾಭ, ಉತ್ತಮ ಆರೋಗ್ಯ, ನಿವಾಸದಲ್ಲಿ ಶಾಂತಿ, ಕಂಕಣ ಭಾಗ್ಯ, ಪ್ರವಾಸ ಯೋಗವಿದೆ.* ವೃಷಭ : ದೆಸೆಗ್ರಹ ಚಂದ್ರ, ಉಚ್ಚಗ್ರಹ ಗುರು, ನೀಚಗ್ರಹ, ಕುಜ. ಲೇವಾದೇವಿ ವ್ಯವಹಾರ. ಬಂಡವಾಳ ಹೂಡಿಕೆಯಲ್ಲಿ ಎಚ್ಚರ. ಚಲನಚಿತ್ರ, ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಿಗಳಿಗೆ ಅಧಿಕ ಲಾಭ. ವಾಹನ ಮತ್ತು ನಿವೇಶನ ಖರೀ ಯೋಗವಿದೆ. * ಮಿಥುನ : ದೆಸೆ ಗ್ರಹ ಶುಕ್ರ, ಉಚ್ಚ ಗ್ರಹ ಬುಧ, ಕಾಲಗಣನಾ ಚಕ್ರದಲ್ಲಿ ಗ್ರಹದೋಷಗಳು (ಶನಿ, ಕುಜ ಮತ್ತು ಕಾಳಸರ್ಪದೋಷಗಳು) ತಾವಾಗಿಯೇ ದೂರ ಸರಿಯುತ್ತವೆ. ಅಗಲಿದ ದಂಪತಿಗಳು, ಪ್ರೇಮಿಗಳು ಒಂದಾಗುತ್ತಾರೆ. ಆಕಸ್ಮಿಕ ಧನಲಾಭ, ಅದೃಷ್ಟ, ದೈವಾಚರಣೆ, ರಾಜಕೀಯ, ಸಮಾಜ ಸೇವೆಯಲ್ಲಿ ಪ್ರಗತಿ ಕಂಡು ಬರುತ್ತದೆ. * ಕಟಕ : ದೆಸೆಗ್ರಹ ಕುಜ, ಉಚ್ಚಗ್ರಹ ರವಿ, ಗುರು ಮಹಾದೆಸೆ ಇರುವುದರಿಂದ ರಾಜಯೋಗ ಅಮೃತ ಸಿದ್ಧ ಯೋಗಗಳು ಸದಾ ಬರುತ್ತವೆ. ಶನಿದೋಷ (ಸಾಡೆಸಾತ್‌) ದೂರ. ಹೂಡಿಕೆ ಮತ್ತು ಲೇವಾದೇವಿ ವ್ಯವಹಾರ ಉತ್ತಮವಾಗುತ್ತದೆ. * ಸಿಂಹ: ಈ ರಾಶಿಗೆ ಸಿಂಹ ಬಲ ಆಗಮನ. ದೆಸೆ ಗ್ರಹ ರ ಉಚ್ಚಗ್ರಹ ಶುಕ್ರ. ಯಾವ ಉದ್ದಿಮೆ ಕೈಗೊಂಡರೂ ಪ್ರಗತಿ. ರಾಜಕೀಯ ಪಟ್ಟಾಭಿಷೇಕ. ಬೆಳ್ಳಿ ಬಂಗಾರ ಲೋಹಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ದೊರೆಯುತ್ತದೆ. *ಕನ್ಯಾ : ದೆಸೆಗ್ರಹ ಶುಕ್ರ ಉಚ್ಚರ, ಗ್ರಹ ಸರ್ವಕಾರ್ಯ ಚತುರತೆ.ಆರೋಗ್ಯದಲ್ಲಿ ಕಿರಿಕಿರಿ, ಕುಜದೋಷದಿಂದ ದೂರ, ಕಂಕಣಭಾಗ್ಯ ನಿವಾಸದಲ್ಲಿ ಶಾಂತಿ, ಬಂಧು ಮಿತ್ರರಿಂದ ದೂರ, ಹಣದ ಲೇವಾದೇವಿಯಲ್ಲಿ ಪ್ರಗತಿ. ಚಂದ್ರದೆಸೆ ಸದಾ ಇರುತ್ತದೆ. *ತುಲಾ : ದೆಸೆ ಗ್ರಹ ಶನಿ, ಉಚ್ಚಗ್ರಹ ಗುರು, ನೀಚಗ್ರಹ ಕುಜ, ಬಂಡವಾಳ ಹೂಡಿಕೆ, ಹಣದಲೇವಾದೇ ವ್ಯಾಪಾರ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆ ಇರಲಿ. ಚಂದ್ರದೆಸೆ ಇರುವುದರಿಂದ ಅಧಿಕ ಖರ್ಚು.*ವೃಶ್ಚಿಕ : ಈ ರಾಶಿಯವರಿಗೆ ಸಂಪಾದನೆಯಲ್ಲಿ ಖರ್ಚು-ಲಾಭ ಸರಿಸಮನಾಗಿ ಇರುತ್ತದೆ. ದೆಸೆಗ್ರಹ ಕುಜ, ಉಚ್ಚಗ್ರಹ ರವಿ ಯಾವುದೇ ಉದ್ದಿಮೆ ಮತ್ತು ಹೂಡಿಕೆಯಲ್ಲಿ ಪ್ರಾರಂಭದಲ್ಲಿ ನಿರುತ್ಸಾಹ ನಂತರ ಅಧಿಕ ಲಾಭ. ಆರೋಗ್ಯದಲ್ಲಿ ಎಚ್ಚರವಿರಲಿ. *ಧನಸ್ಸು : ಅಧಿಕ ನಕ್ಷತ್ರಗಳಿಂದ ಕೂಡಿದ ಧನಸ್ಸು ರಾಶಿಯವರಿಗೆ ಅದೃಷ್ಟದ ದಿನಗಳು ಆರಂಭ. ಮಾರ್ಚಿ 21ರಂದೇ ಗಜಕೇಸರಿ ಯೋಗ ಆರಂಭ. ದೆಸೆಗ್ರಹ ರವಿ ಉಚ್ಚಗ್ರಹ ಚಂದ್ರ ಕಂಕಣ ಭಾಗ್ಯ. ಸಂತಾನಯೋಗವಿದೆ. ಗ್ರಹ ದೋಷಗಳು ದೂರವಾಗುತ್ತವೆ. *ಮಕರ : ದೆಸೆಗ್ರಹ ಚಂದ್ರ, ಉಚ್ಚ ಗ್ರಹ ಶುಕ್ರನಾದ್ದರಿಂದ ಅಧಿಕ ದೈವಭಕ್ತಿ, ಆಕಸ್ಮಿಕ ಧನಲಾಭ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಸಾಲಗಳಿಂದ ಸಂಕೋಲೆ, ಯಾವುದೇ ಕೆಲಸ ಆರಂಭಿಸಿದರೂ ದುಂದುವೆಚ್ಚ, ನಿರ್ಲಕ್ಷ್ಯ ಮನೋಭಾವ ಹೆಚ್ಚಿರುತ್ತದೆ. * ಕುಂಭ: ದೆಸೆ ಗ್ರಹ ರವಿ, ಉಚ್ಚಗ್ರಹ ಗುರು, ಸರ್ವಕಾರ್ಯ ಸಿದ್ಧಿ. ಸಂಶೋಧನೆ, ಬಂಡವಾಳ ಹೂಡಿಕೆ, ದೇಶ ನಿಮಯ, ಪ್ರವಾಸ, ಹಣದ ಲೇವಾದೇಯಲ್ಲಿ ಪ್ರಗತಿ, ುತ್ರರು ಮತ್ತು ಬಂಧುವರ್ಗದವರಿಂದ ಸಹಾಯದ ಹಸ್ತ ಉತ್ತಮ ಆರೋಗ್ಯ ಭಾಗ್ಯವಿದೆ. *ಮೀನ : ದೆಸೆಗ್ರಹ ಶುಕ್ರ, ಉಚ್ಚ ಗ್ರಹ ಚಂದ್ರ. ಮನೋಕಲ್ಪಿತ ವಿಚಾರಗಳಿಂದ ದೂರವಿರಿ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಉನ್ನತ ಹುದ್ದೆ. ಹೂಡಿಕೆಯಲ್ಲಿ ಪ್ರಗತಿ, ಕುಟುಂಬ, ಬಂಧು, ಮಿತ್ರ ಸಖ್ಯ. ಲೇವಾದೇವಿ ವ್ಯವಹಾರದಲ್ಲಿ ಎಚ್ಚರ ವಹಿಸುವುದು ಉತ್ತಮ.

ವರ್ಗೋತ್ತಮ ರಾಜಯೋಗಗಳು

ಜಾತಕದಲ್ಲಿ ರಾಶಿ ಕುಂಡಲಿಯಲ್ಲಿನ ಲಗ್ನ ಮತ್ತು ನವಾಂಶ ಕುಂಡಲಿಯ ಲಗ್ನವು ಒಂದೇ ಆದರೆ ಅದನ್ನು ವರ್ಗೋತ್ತಮ ರಾಜಯೋಗಗಳೆಂದು ಕರೆಯುತ್ತಾರೆ. ಇದೇ ರೀತಿ ಕುಂಡಲಿಯಲ್ಲಿ ಮತ್ತು ನವಾಂಶ ಕುಂಡಲಿಯಲ್ಲಿ ಒಂದೇ ರಾಶಿಯಲ್ಲಿ ಚಂದ್ರನಿದ್ದರೆ ಇದು ವರ್ಗೋತ್ತಮ ಆಗುತ್ತದೆ. ಇದೇ ರೀತಿ ರವಿ ಲಗ್ನಕುಂಡಲಿಯಲ್ಲಿ ಮತ್ತು ನವಾಂಶ ಕುಂಡಲಿಯಲ್ಲಿ ಒಂದೇ ರಾಶಿಯಲ್ಲಿದ್ದರೆ ವರ್ಗೋತ್ತಮವಾಗುತ್ತದೆ. ಕುಜ ಇನ್ನಿತ್ತರ ಎಲ್ಲ ಗ್ರಹಗಳು ಲಗ್ನ ಮತ್ತು ನವಾಂಶದಲ್ಲಿ ಒಂದೇ ರಾಶಿಯಲ್ಲಿದ್ದರೆ ವರ್ಗೋತ್ತಮವಾಗುತ್ತದೆ.ಚಂದ್ರನಿಂದ ವರ್ಗೋತ್ತಮವಾದಾಗ ಯಾವ ರೀತಿ ಮತ್ತು ಎಷ್ಟು ಆಗುತ್ತದೆ ಎಂದು ನೋಡುವ ವರ್ಗೋತ್ತಮ ನವಾಂಶ ಹೊಂದಿದ ಲಗ್ನವಾಗಲಿ ಚಂದ್ರನಾಗಲೀ ಉಳಿದ ಗ್ರಹಗಳಲ್ಲಿ ನಾಲ್ಕು ಐದು ಅಥವಾ ಆರು ಗ್ರಹಗಳಿಂದ ನೋಡಲ್ಪಟ್ಟಾಗ ಹುಟ್ಟಿದವರು ರಾಜ ಅಥವಾ ರಾಜ ಸಮಾನರಾಗುತ್ತಾರೆ. ಇಲ್ಲಿ ಉಳಿದ ಗ್ರಹಗಳೆಂದರೆ ಚಂದ್ರ ವ್ಯತಿರಿಕ್ತವಾದ ರವಿ ಕುಜ ಬುಧ ಗುರು, ಶುಕ್ರ, ಶನಿಗಳೆಂದು ನಾವು ತಿಳಿಯಬೇಕು. ಈ ರಾಜಗ್ರಹ ಯೋಗದಲ್ಲಿ ರಾಹು ಕೇತುಗಳನ್ನು ಗÜಣನೆಗೆ ತೆಗೆದುಕೊಂಡಿಲ್ಲ ಈ ರೀತಿ ಒಟ್ಟು ರಾಜ ಯೋಗಗಳ ಸಂಖ್ಯೆ 520 ಆಗುತ್ತದೆ. ವರ್ಗೋತ್ತಮ ಲಗ್ನವನ್ನು ಚಂದ್ರನನ್ನು ಬಿಟ್ಟು ಉಳಿದ ಆರು ಗ್ರಹಗಳಲ್ಲಿ ನಾಲ್ಕು ಗ್ರಹಗಳು ನೋಡಿದರೆ ಹದಿನೈದು ರಾಜಯೋಗಗಳು, ಐದು ಗ್ರಹಗಳು ನೋಡಿದರೆ ಆರು ರಾಜಯೋಗಗಳು ಆರುಗ್ರಹಗಳು ಒಟ್ಟಿಗೆ ನೋಡಿದರೆ ಒಂದು ರಾಜಯೋಗ. ಈ ರೀತಿ ಒಟ್ಟು ಇಪ್ಪತ್ತೆರಡು ರಾಜಯೋಗಗಳು ಉಂಟಾಗುತ್ತದೆ. ಚಂದ್ರ ವರ್ಗೋತ್ತಮವಾಗಿ ಮೇಲ್ಕಂಡ ಗ್ರಹಗಳು ನೋಡಲ್ಪಟ್ಟರೆ ಇನ್ನೂ ಇಪ್ಪತ್ತೆರಡು ರಾಜಯೋಗಗಳು ಆಗುವುದರಿಂದ ವಗೋತ್ತಮ ಲಗ್ನ ಚಂದ್ರನಿರುವ ರಾಶಿಗಳಿಂದ ಒಟ್ಟು ನÜಲವತ್ತ ನಾಲ್ಕು ರಾಜಯೋಗಗಳು ಉಂಟಾಗುತ್ತದೆ. ಲಗ್ನ ಅಥವಾ ರಾಶಿ ಮೇಷಾದಿದ್ದಾದಶ ರಾಶಿಗಳಾಗಿರಬಹುದಾದ ಪ್ರಯುಕ್ತ ಈ ನಲವತ್ತನಾಲ್ಕನ್ನು ಹನ್ನೆರಡರಿಂದ ಗುಣಿಸಿದರೆ ಬರುವ ಸಂಖ್ಯೆ 528 ಆಗುತ್ತದೆ. * ಮೂಲ್ಕಿ ಹರಿಶ್ಚಂದ್ರ ಪಿ ಸಾಲಿಯಾನ್‌ sangraha