Thursday, 13 December 2018
ಉದ್ಯೋಗಸ್ಥರು ಯಾವ ರೀತಿ ಸ್ಲಿಪ್ಪರ್ ಹಾಕ್ಕೊಂಡರೆ ಧನ ಪ್ರಾಪ್ತಿಯಾಗುತ್ತೆ?
ನಾವು ಧರಿಸುವ ಚಪ್ಪಲಿಗಳು ನಮ್ಮ ಜೀವನದ ಅವಿಭಾಜ್ಯ ಅಂಗ. ಅದರೊಟ್ಟಿಗೆ ನಮಗೊಂದು ವಿಶೇಷ ಅನುಬಂಧ ಬೆಸೆದುಕೊಂಡಿರುತ್ತದೆ. ಅದರಲ್ಲಿಯೂ ನಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಸದಾ ಚಪ್ಪಲಿ ಧರಿಸಿಕೊಂಡೇ ಇರುವುದರಿಂದ, ಕೆಲಸಕ್ಕೆ ಹೋಗುವಾಗ ಧರಿಸುವ ಚಪ್ಪಲಿ, ಅದರ ಬಣ್ಣ, ಕ್ವಾಲಿಟಿ ಎಲ್ಲವೂ ನಮ್ಮ ಜಾತಕದ ಮೇಲೂ ಪ್ರಭಾವ ಬೀರುತ್ತೆ. ಹೇಗೆ? ಏನಿದು?
ನೋಡೋಕೆ ದೊಡ್ಡ ಬಂಗಲೆ. ಆ ಮನೆಯಲ್ಲಿ ದಿನಾ ಪೂಜೆ ಪುನಸ್ಕಾರಗಳು ತಪ್ಪದೇ ನಡೆಯುತ್ತದೆ. ಆದರೆ, ಮನೆಯವರ ಯಾರ ಆರೋಗ್ಯವೂ ಸರಿ ಇರೋಲ್ಲ. ಅಲ್ಲದೇ ಅವರ ಆಸ್ತಿ ಹಾಗೂ ಉದ್ಯೋಗದ ಮೇಲೂ ದುಷ್ಟ ಪರಿಣಾಮಗಳು ಬೀರುತ್ತಿರುತ್ತದೆ. ಇದಕ್ಕೆ ಅವರು ಹಾಕುವ ಚಪ್ಪಲಿಯೂ ಕಾರಣವಾಗಿರಬಹುದು. ಇದು ಏಕೆ, ಪರಿಹಾರವೇನು?
ಮನುಷ್ಯನ ದೈನಂದಿನ ಚಟುವಟಿಕೆಗಳು, ಆಗು ಹೋಗುಗಳು ನಿರ್ದಿಷ್ಟ ಗ್ರಹಗಳ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲದೇ ಚಪ್ಪಲಿ ಮೇಲೂ ಈ ಅದೃಷ್ಟ ಮತ್ತು ನತದೃಷ್ಟಗಳನ್ನು ತಾಳೆ ಹಾಕಬಹುದು! ಏಕೆ ಗೊತ್ತಾ? ನಮ್ಮ ಚಪ್ಪಲಿ ಶನಿ ಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತೆ. ಯಾರು ಶನಿ ದೋಷದಿಂದ ಬಳಲುತ್ತಿರುತ್ತಾರೋ, ಅವರು ಚಪ್ಪಲಿ ದಾನ ಮಾಡುವುದೊಳಿತು.
ಕೆಲವೊಮ್ಮೆ ಯಾವುದು ನಮ್ಮ ಕೈಯಲ್ಲಿ ಇರುವುದೇ ಇಲ್ಲ. ನಿರೀಕ್ಷೆ ಮೀರಿ ಜೀವನದಲ್ಲಿ ಕೆಲವು ಘಟನೆಗಳು ಸಂಭವಿಸುತ್ತವೆ. ಜೀವನದಲ್ಲಿ ಹೋರಾಟ ಮುಗಿಯುವುದೇ ಇಲ್ಲ. ಇದೂ ನಾವು ಧರಿಸುವ ಚಪ್ಪಲಿ ಅಥವಾ ಶ್ಯೂಸ್ ಕಾರಣವಾಗಿರಬಹುದೆಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.
- ಕೈ ನೋಡಿ ಜಾತಕ ನೋಡುವುದು ಗೊತ್ತು. ಆದರೆ, ಅಂಗಾಲು ಸಹ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಗೊತ್ತಾ? ನಮ್ಮ ಹಣೆ ಬರಹಕ್ಕೆ ನಮ್ಮ ಅಂಗಾಲೂ ಕಾರಣವಾಗಬಲ್ಲದು. ಕಾಲಿನ ಆರೋಗ್ಯ ಹಾಗೂ ಸೌಂದರ್ಯವನ್ನು ಯಾರು ಚೆಂದವಾಗಿ ಮ್ಯಾನೇಜ್ ಮಾಡುತ್ತಾರೋ ಅವರಿಗೆ, ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇಲ್ಲವಾದಲ್ಲಿ ಜೀವನದಲ್ಲಿ ಕೆಲವು ಅವಘಡಗಳು ಸಂಭವಿಸಬಲ್ಲದು.
- ಹಿಂದಿನ ಕಾಲದಲ್ಲಿ ಚಪ್ಪಲಿಗಳೇ ಇರುತ್ತಿರಲಿಲ್ಲ. ಇದ್ದರೂ ಮರದ ಚಪ್ಪಲಿಗಳನ್ನು ಅವರು ಹಾಕುತ್ತಿದ್ದರು. ಚರ್ಮದ್ದು, ಒಳ್ಳೆ ಕ್ವಾಲಿಟಿಯದ್ದು ಎಂದು ತರುವ ಚಪ್ಪಲಿಗಳೂ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರಬಲ್ಲದು. ಯಾವಾಗ, ಯಾವ ರೀತಿಯ ಚಪ್ಪಲಿಗಳನ್ನು ಧರಿಸಬೇಕೆಂದೂ ಶಾಸ್ತ್ರ ಪುರಾಣಗಳು ಸಲಹೆ ನೀಡುತ್ತವೆ.
ಸರಿ ಹಾಗಾದರೆ, ಚಪ್ಪಲಿಯಿಂದ ಯಾವುದೇ ದೋಷಗಳು ಕಾಡಬಾರದೆಂದರೆ ಏನು ಮಾಡಬೇಕು. ಇಲ್ಲಿವೆ ಟಿಪ್ಸ್.
- ಕದ್ದ ಅಥವಾ ಉಡುಗೊರೆಯಾಗಿ ಸಿಕ್ಕ ಚಪ್ಪಲಿಯನ್ನು ಧರಿಸಲೇ ಬಾರದು. ಕದ್ದ ಅಥವಾ ದಾನವಾಗಿ ಬಂದ ಚಪ್ಪಲಿಯನ್ನು ಧರಿಸಿದರೆ ಜೀವನದಲ್ಲಿ ಅಂದು ಕೊಂಡ ತಲುಪಲು ಸಾಧ್ಯವಿಲ್ಲ. ನತದೃಷ್ಟವೇ ನಿಮ್ಮ ಕೈ ಹಿಡಿಯಲಿದೆ.
- ಹರಿದ ಅಥವಾ ಕಳೆಗುಂದಿದ ಚಪ್ಪಲಿಯನ್ನು ಹಾಕಬೇಡಿ. ಇದು ಅದೃಷ್ಟವನ್ನು ದುರಾದೃಷ್ಟವಾಗಿ ಪರಿವರ್ತಿಸಲಿದೆ. ಹರಿದ ಚಪ್ಪಲಿ ಯಶಸ್ಸನ್ನು ಹತ್ತಿಕ್ಕಲ್ಲಿದೆ. ಚಪ್ಪಲಿ ಕದ್ದರೆ ಗ್ರಹಚಾರ ಕಟ್ಟಿಟ್ಟ ಬುತ್ತಿ.
- ಉದ್ಯೋಗ ಸ್ಥಳದಲ್ಲಿ ಕಂದು ಅಥವಾ ಮರದ ಬಣ್ಣದ ಚಪ್ಪಲಿ ಧರಿಸಬಾರದು. ಪರಿಸ್ಥಿತಿ ಹದಗೆಟ್ಟಿದ್ದರೆ, ಈ ಚಪ್ಪಲಿಯಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ.
- ಅಕಸ್ಮಾತ್ ಉದ್ಯೋಗ ಸಂದರ್ಶನಕ್ಕೆ ಹೋಗುತ್ತಿದ್ದರೆ, ಹರಿದ ಅಥವಾ ಮಾಸಿದ ಚಪ್ಪಲಿಗಳನ್ನು ಧರಿಸಿಕೊಂಡು ಹೋಗಬೇಡಿ. ಇದು ಅದೃಷ್ಟವನ್ನು ದುರಾದೃಷ್ಟವನ್ನಾಗಿ ಬದಲಾಯಿಸುತ್ತೆ. ಹರಿದ ಚಪ್ಪಲಿ ಯಶಸ್ಸ ಓಟವನ್ನೇ ತಡೆಯಬಲ್ಲದು.
- ಬ್ಯಾಂಕಿಂಗ್ ಹಾಗೂ ಶೈಕ್ಷಿಣಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಸ್ಥರು ಕಾಫಿ ಬಣ್ಣದ ಅಥವಾ ಡಾರ್ಕ್ ಕಂದು ಬಣ್ಣದ ಚಪ್ಪಲಿಗಳನ್ನು ಧರಿಸಬಾರದು. ಆದಾಯ ಮೂಲಕ್ಕೆ ಇದು ಧಕ್ಕೆ ತರಬಲ್ಲದು.
- ವೈದ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಕಬ್ಬಿಣ ಸಂಬಂಧಿ ಕಾರ್ಯ ನಿರ್ವಹಿಸುವವರು ಶ್ವೇತ ವರ್ಣದ ಶೂಸ್ ಅನ್ನು ಧರಿಸಲೇ ಬಾರದು. ಇದರಿಂದ ಅವರಿಗೆ ಲಕ್ ಕೈ ಕೊಡಲಿದ್ದು, ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ.
- ಆಯುರ್ವೇದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ನೀಲಿ ಬಣ್ಣದ ಚಪ್ಪಲಿಯನ್ನು ಧರಿಸಬಾರದು. ಅಲ್ಲದೇ ಬಟ್ಟೆಯಿಂದ ಮಾಡಿರುವ ಪಾದರಕ್ಷೆಗಳನ್ನೂ ಧರಿಸಬಾರದು. ಇಂಥವರಿಗೆ ನೀಲಿ ಬಣ್ಣ ಹೇಳಿ ಮಾಡಿಸಿದ್ದಲ್ಲ.
- ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಸ್ಲಿಪ್ಪರ್ ಸ್ಟ್ಯಾಂಡ್ ಇಡಬಾರದು. ಈ ದಿಕ್ಕಿನಲ್ಲಿ ಸೂರ್ಯನ ಮೊದಲ ಕಿರಣಗಳು ಬೀಳಲಿದ್ದು, ಮನೆಗೆ ಧನಾತ್ಮಕ ಶಕ್ತಿ ಪ್ರವೇಶವಾಗುವ ಸ್ಥಳದಲ್ಲಿ ಚಪ್ಪಲಿಯಿರಬಾರದು.
ಶ್ರೀಕ್ಷೇತ್ರ ಗಾಣಗಾಪುರ ಮಠ ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರ
ಆಷಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯನ್ನು ಗುರು ಪೌರ್ಣಿಮಯೆಂದು ಆಚರಿಸುವ ಪರಂಪರೆ ನಮ್ಮ ದೇಶದಲ್ಲಿದೆ. ಗುರು ಪರಂಪರೆಯಲ್ಲಿ ದತ್ತ ಸಂಪ್ರದಾಯವು ಮಹಾನ್ ಸಂಪ್ರದಾಯವೆಂದು ಬಣ್ಣಿಸಲ್ಪಡುತ್ತದೆ. ಶ್ರೀಪಾದ ಶ್ರೀವಲ್ಲಭರು ಹಾಗೂ ಶ್ರೀಗುರು ನೃಸಿಂಹಸರಸ್ವತಿ ಸ್ವಾಮಿ ಮಹಾರಾಜರು ದತ್ತ ಸಂಪ್ರದಾಯದಲ್ಲಿನ ಸರ್ವಶ್ರೇಷ್ಠ ಮತ್ತು ವಂದನೀಯ ಅವತಾರಿಗಳಾಗಿದ್ದಾರೆ.
ಪ್ರಾಚೀನ ಕಾಲದಲ್ಲಿ ವಿದ್ಯಾರ್ಥಿಗಳು ಮತ್ತು ಬ್ರಹ್ಮಚಾರಿಗಳು ಆಶ್ರಮ ಇಲ್ಲದೆ ಗುರುಕುಲಗಳಲ್ಲಿ ವಿದ್ಯೆಯನ್ನುಕಲಿಯುತ್ತಿದ್ದರು. ವಿದ್ಯಾರ್ಥಿಗಳು ಈದಿವಸದಂದು ತಮ್ಮ ಗುರುವಿಗೆ ಪೂಜಿಸಿ ಗುರುದಕ್ಷಿಣೆಯನ್ನು ತಮ್ಮ ಶಕ್ತ್ಯಾನುಸಾರ ನೀಡುತ್ತಿದ್ದರು. ಜೀವನದಲ್ಲಿ ಮಾರ್ಗದರ್ಶನವನ್ನು ಮಾಡುವ ಗುರುವನ್ನು ಸ್ಮರಿಸುವ ಮತ್ತು ಪೂಜಿಸುವ ದಿನವೇ ಇದಾಗಿದೆ. ಈ ದಿವಸದಂದು ಭಕ್ತಾಧಿಗಳು ಹಾಗೂ ಶಿಷ್ಯರು ಗುರುಗಳ ಆಶೀರ್ವಾದವನ್ನು ಪಡೆಯಲು ಉಪವಾಸ ವೃತವನ್ನು ಆರಿಸುವರು. ನಮ್ಮ ಗುರುಗಳು ಸದಾಕಾಲ ನಮ್ಮ ಯೋಗಕ್ಷೇಮದ ಕಾಳಜಿಯನ್ನು ಮಾಡುವರು.
ಎಂದೆಂದಿಗೂ ಮುಗಿಯದ ಅವರ ಋಣವನ್ನು ತೀರಿಸುವುದಾರೂ ಹೇಗೆ? ಇವರಿಗೆ ನಾವು ಕೊಡುವುದಾದರೂ ಏನು? ಅವರ ಋಣವನ್ನು ಅಲ್ಪವೇ ಆಗಲಿ ಅವರ ನೆನಪಿಗಾಗಿ ಪ್ರತೀವರ್ಷ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೌರ್ಣಿಮೆ ಎಂದು ಆರಿ ಸುತ್ತಾರೆ. ನಮಗೆ ಜ್ಞಾನವನ್ನು ಕೊಡುವ ಮತ್ತು ಸುಸಂಸ್ಕೃತರನ್ನಾಗಿ ಮಾಡುವ ಗುರುವಿಗೆ ಕೃತಜ್ಞತೆಯಿಂದ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಅವರು ಮಾಡಿಸ ಮಹಾನ್ ಉಪಕಾರ ನೆನಪಿಸಿ ಜೀವನದಲ್ಲಿ ಮಾರ್ಗ ಸಫಲತೆಯಿಂದ ಗತಿಮಾನವಾಗಿ ಮಾಡುವ ಸಲುವಾಗಿ ನಮ್ಮ ಸಂಸ್ಕೃತಿಯು ಗುರು ಪೂಜನದ ಪರಂಪರೆಯ ನಿರ್ಮಾಣಮಾಡಿದೆ. ಮಾನವನ ಜೀವನ ಮಾರ್ಗದರ್ಶನವಿಲ್ಲದೆ ವಿಕಾಸವಾಗುವುದಿಲ್ಲ. ಈ ಮಾರ್ಗದರ್ಶನ ತಾಯಿ, ತಂದೆ, ಶಿಕ್ಷಕ,ಆಚಾರ್ಯ ಹಾಗೂಸಂತ-ಸಜ್ಜನ ರಿಂದ ಪಡೆಯುತ್ತಿರುವನಾದರುದರಿಂದ ಇವರೆಲ್ಲರ ಸ್ಮರಣೆ, ಪೂಜನೆ ಮಾಡಿ ಕೃತಜ್ಞತೆಯನ್ನು ಪ್ರಕಟಿಸುವುದು. ಈ ದಿವಸದ ಆಚರಣೆಯಿಂದಲೇ, ನಮ್ಮ ಜೀವನ ಸರ್ವಾರ್ಥದಿಂದ ಉಪಯುಕ್ತವಾಗಿಸಲು ಗುರುಗಳು ಮಾರ್ಗದರ್ಶನ ಮಾಡುವರು. ನಮ್ಮ ಸಂಕಟಗಳನ್ನು ನಿವಾರಿಸಿ ಭಕ್ತಿಯ ಜ್ಞಾನವನ್ನು ಕೊಡುವ ಶಕ್ತಿಯ ಗುರುಗಳಲ್ಲಿರುತ್ತದೆ.
ಈ ಪೌರ್ಣಿಮೆಯನ್ನು ವ್ಯಾಸ-ಪೌರ್ಣಿಮೆ ಯೆಂದೂ ಕರೆಯುತ್ತಾರೆ. ಜಗದ್ ವೃಂದ್ಯ ಹಾಗೂ ಜಗದ್ಗುರುಗಳಾದ ವೇದ ಮಹರ್ಷಿ ವ್ಯಾಸಋಷಿಗಳ ಪೂಜೆಯನ್ನು ಈ ದಿನವೇ ನೆರವೇರಿಸುತ್ತಾರೆ. ದತ್ತಾವಿಚಾರಿಗಳಾದ ಶ್ರೀಗುರು ನೃಸಿಂಹ ಸರಸ್ವತಿ ಸ್ವಾಮಿ ಮಹಾರಾಜರು ನೆಲೆಸಿರುವ ಭೀಮಾಮತ್ತು ಅಮರಜಾ ನದಿಗಳ ಸಂಗಮವಾಗಿರುವ ಪವಿತ್ರ ಹಾಗೂ ಪಾವನ ತಿರ್ಥ ಕ್ಷೇತ್ರವಾಗಿರುವ ಶ್ರೀಕ್ಷೇತ್ರ ಗಾಣಗಾಪುರ (ಗುಲ್ಬರ್ಗಾ ಜಿಲ್ಲೆ) ನಿರ್ಗುಣ ಮಠದಲ್ಲಿ ಗುರುಪೌರ್ಣಿಮೆಯಂದು ಬೆಳಗ್ಗೆ ೧೧ ಗಂಟೆಗೆ ವ್ಯಾಸಪೂಜೆ ಸಡಗರದಿಂದ ಹಾಗೂ ಭೈವಯುತವಾಗಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಉಪಸ್ಥಿತ ಭಕ್ತ ವೃಂದದವರೆಲ್ಲರೂ ಶ್ರೀಗುರುಗಳ ಹಾಗೂ ನಿರ್ಗುಣ ಪಾದಗಳ ದರ್ಶನವನ್ನು ಪಡೆದು ಕೃತಾರ್ಥರಾಗುತ್ತಾರೆ.
ಪೂಜಾ ಕೋಣೆಗೆ ಯಾವ್ ಬಣ್ಣವಿದ್ದರೆ ಕೈಗೆ ಸೇರುತ್ತೆ ದುಡ್ಡು?
ಬೆಡ್ ರೂಂ, ಅಡುಗೆ ಮನೆ ಹಾಗೂ ಬಚ್ಚಲಷ್ಟೇ ದೇವರ ಕೋಣೆಗೂ ವಿಶೇಷ ಮಾನ್ಯತೆ ನೀಡೋದು ಅಗತ್ಯ. ಮನಸ್ಸಿನ ನೆಮ್ಮದಿಗೆ ಇದು ಅತ್ಯಗತ್ಯ. ಭಕ್ತಿ ಎಂದು ಹೇಳಿ ದೇವರನ್ನು ಎಲ್ಲಿಯಾಯಿತೋ ಅಲ್ಲಿಟ್ಟು ಪೂಜಿಸಬಾರದು. ದೇವರ ಕೋಣೆ ಹೇಗಿರಬೇಕೆಂಬುದಕ್ಕೆ ಇಲ್ಲಿವೆ ವಾಸ್ತು ಟಿಪ್ಸ್...
ಮನೆಯಲ್ಲಿ ಸುಮ್ಮನೆ ದೇವರನ್ನಿಟ್ಟು, ಪೂಜಿಸದಿದ್ದರೆ ನೆಗಟಿವ್ ಎನರ್ಜಿ ಸ್ಪ್ರೆಡ್ ಆಗುತ್ತೆ. ಆದುದರಿಂದ ದೇವರನ್ನು ಮನೆಯಲ್ಲಿಟ್ಟರೆ, ಪೂಜಿಸಲೇ ಬೇಕು. ಇಲ್ಲಿವೆ ದೇವರ ಕೋಣೆಗೆ ಸಂಬಂಧಿಸಿದೆ ಕೆಲವು ವಾಸ್ತು ಟಿಪ್ಸ್...
- ಪ್ರತಿದಿನ ಪೂಜಿಸುವುದಾದರೆ ಮಾತ್ರ ಮನೆಯಲ್ಲಿ ದೇವರ ಮೂರ್ತಿ, ಸಾಲಿಗ್ರಾಮ ಮತ್ತು ಶ್ರೀಚಕ್ರವನ್ನಿಡಬೇಕು. ಇಲ್ಲವಾದರೆ ಮನೆ ಹಾಗೂ ಮನೆ ಮಂದಿಗೂ ಶ್ರೇಯಸ್ಸಲ್ಲ.
- ಪಶ್ಚಿಮಕ್ಕೆ ಮುಖ ಮಾಡಿ ಕುಳಿತು, ಪೂಜಿಸಬೇಕು. ದೇವರ ಕೋಣೆ ಅಥವಾ ಗೂಡು ಪೂರ್ವ ದಿಕ್ಕಿಗೆ ಮುಖ ಮಾಡಿದರೊಳಿತು.
- ದೊಡ್ಡದಾದ ಮನೆ ಅಥವಾ ಕಚೇರಿಯಲ್ಲಿ ದೇವರ ಕೋಣೆ ನಿರ್ಮಿಸುವಾಗ ಅದು ಮಧ್ಯದಲ್ಲಿರಲಿ. ಇದರಿಂದ ಪೂರ್ತಿ ಮನೆಗೆ ಪಾಸಿಟಿವ್ ಎನರ್ಜಿ ಹರಡುತ್ತದೆ.
- ತುಂಡಾದ ಅಥವಾ ಹಾಳಾದ ಯಾವುದೇ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಡಬೇಡಿ.
- ಪೂಜಾ ಕೋಣೆಗೆ ಬಿಳಿ, ತಿಳಿ ಹಳದಿ ಅಥವಾ ತಿಳಿ ನೀಲಿ ಬಣ್ಣವನ್ನು ಹಚ್ಚಿ.
- ಪೂಜಾ ಗೃಹ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಅಲ್ಲದೆ ಸ್ಟೋರ್ ರೂಮ್ ಅಥವಾ ಬೆಡ್ ರೂಮಿನಲ್ಲೂ ದೇವರನ್ನಿಟ್ಟು ಪೂಜಿಸಬಾರದು.
- ಧ್ಯಾನ ಮಾಡುವಾಗ ಅಥವಾ ಪೂಜಿಸುವಾಗ ಮ್ಯಾಟ್ ಅಥವಾ ಮಣೆ ಮೇಲೆಯೇ ಕುಳಿತುಕೊಳ್ಳಿ.
- ಸುಗಂಧಿತ ಅಗರಬತ್ತಿಗಳನ್ನು ಹಚ್ಚಿಡುವುದರಿಂದ ಮನೆ ವಾತಾವರಣ ಆಹ್ಲಾದಕರವಾಗಿರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.
- ಮೃತ ಪಟ್ಟವರ ಫೋಟೊವನ್ನು ದೇವರ ಫೋಟೊದೊಂದಿಗಿಡುವುದು ಕೆಟ್ಟದ್ದು.
- ದೇವರ ಮೂರ್ತಿಗಳು ನೇರವಾಗಿ ಮುಖ್ಯ ದ್ವಾರಕ್ಕೆ ಮುಖ ಮಾಡಿ ಇರದಿರಲಿ.
- ಪೂಜಾ ಗೃಹದಲ್ಲಿ ಡಸ್ಟ್ ಬಿನ್ ಇಡಬೇಡಿ. ಇದರಿಂದ ಪಾಸಿಟಿವ್ ಎನರ್ಜಿ ಕಡಿಮೆಯಾಗುತ್ತದೆ.
-ಪೂಜಾ ಕೋಣೆಯ ವಾಲ್ ಯಾವುದೇ ಟಾಯ್ಲೆಟ್, ಬಾತ್‌ರೂಮ್ ಗೋಡೆಗೆ ಅಟ್ಯಾಚ್ ಆಗಿರಾಬಾರದು.
ನವರಾತ್ರಿ, ದೇವಿ ಪೂಜೆ, ಉಪವಾಸ, ವ್ಯಕ್ತಿತ್ವ ವಿಕಸನ
ಮೊದಲ ಮೂರು ದಿನಗಳು ಮಹಾಕಾಳಿಯನ್ನು ಪೂಜಿಸಿದ ನಂತರ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕೊನೆಯ ಮೂರು ದಿನಗಳು ಮಹಾ ಸರಸ್ವತಿಗೆ ಮೀಸಲಿಡಲಾಗಿದೆ. ಮತ್ತಿನ್ನೇನು ನವರಾತ್ರಿ ವಿಶೇಷ?
ದೇವಿಯನ್ನು ವಿಧವಿಧವಾಗಿ ಅಲಂಕರಿಸಿ, ವಿಭಿನ್ನ ನೇವೈಧ್ಯವನ್ನಿಟ್ಟು ಪೂಜಿಸುವ ನವರಾತ್ರಿ ಉಪವಾಸವೂ ಅಷ್ಟೇ ಶ್ರೇಷ್ಠ. ದಿನದಲ್ಲಿ ಒಮ್ಮೆ ಕೇವಲ ಸಾತ್ವಿಕ ಆಹಾರ ಸೇವಿಸಿ, ಉಪವಾಸ ಮಾಡೋ ಹಿಂದೆಯೂ ಇದೆ ವಿಶೇಷ ಅರ್ಥ. ಆತ್ಮ ಶುದ್ಧೀಕರಿಸುವ ಕಾರ್ಯಕ್ಕೆ ಈ ಕಾಲ ಮೀಸಲು.ಒಂಬತ್ತು ದಿನಗಳ ಈ ಉಪವಾಸಕ್ಕೂ ಒಂದೊಂದು ಅರ್ಥವಿದೆ. ಆ ಮೂಲಕ ನಮ್ಮ ವ್ಯಕ್ತಿತ್ವ ಶುದ್ಧಿಗೂ ಸಮಯ ಮೀಸಲು. ಊಟ ಬಿಡುವುದರೊಂದಿಗೆ, ಜೀವನದಲ್ಲಿ ಯಾವ ಋಣಾತ್ಮಕ ಶಕ್ತಿಯನ್ನು ನಾವು ಬಿಡಬೇಕು? ಈ ಆಧುನಿಕ ಜೀವನ ಒತ್ತಡದ ಬದುಕಲ್ಲಿ ಏನು ಬಿಟ್ಟರೊಳಿತು?
ಕಾಮ, ಮೋಕ್ಷ, ಕ್ರೋಧ, ಮದ, ಮತ್ಸರ...ಎಂಬ ಅರಿಷಡ್ವರ್ಗಗಳನ್ನು ತ್ಯಜಿಸುವ ಜತೆ ಕೆಲವು ಸರಳವಾದ, ಸಣ್ಣ ಪುಟ್ಟ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಬೇಕೆನ್ನುವುದು ಈ ಉಪವಾಸ ಮಾಡುವ ಉದ್ದೇಶ...
ದಿನ 1: ಸಿಟ್ಟನ್ನು ತ್ಯಜಿಸಬೇಕು.
ದಿನ 2: ಜನರ ಬಗ್ಗೆ ತೀರ್ಮಾನಕ್ಕೆ ಬರೋದನ್ನು ನಿಲ್ಲಿಸಬೇಕು.
ದಿನ 3: ದ್ವೇಷವನ್ನು ಬಿಟ್ಟು ಬಿಡಬೇಕು.
ದಿನ 4: ನನ್ನನ್ನು ಕ್ಷಮಿಸಿಕೊಳ್ಳುವುದರೊಂದಿಗೆ, ಎಲ್ಲರನ್ನೂ ಕ್ಷಮಿಸುವ ಗುಣ ಬೆಳೆಯಿಸಿಕೊಳ್ಳುವೆ.
ದಿನ 5: ಯಾರು ಹೇಗಿರುತ್ತಾರೋ, ಹಾಗೆಯೇ ಸ್ವೀಕರಿಸುತ್ತೇನೆ.
ದಿನ 6: ನನ್ನನ್ನು ನಾನು ಪ್ರೀತಿಸುವುದರೊಂದಿಗೆ, ಎಲ್ಲರನ್ನೂ ಯಾವುದೇ ಷರತ್ತುಗಳಿಲ್ಲದೇ ಪ್ರೀತಿಸುವೆ.
ದಿನ 7: ತಪ್ಪಿತಸ್ಥ ಭಾವ ಹಾಗೂ ಹೊಟ್ಟೆಕಿಚ್ಚಿನಂಥ ಬುದ್ಧಿಯನ್ನು ತ್ಯಜಿಸುವೆ.
ದಿನ 8: ಭಯದೊಂದಿಗಿನ ಬದುಕನ್ನು ದೂರ ಮಾಡುತ್ತೇನೆ.
ದಿನ 9: ನನ್ನಲ್ಲಿ ಏನಿದೆಯೋ ಅದನ್ನು ಅನುಭವಿಸುತ್ತೇನೆ. ಏನು ಸಿಗುತ್ತೋ ಅದಕ್ಕೆ ದೇವರನ್ನು ವಂದಿಸುತ್ತೇನೆ.
ದಿನ 10: ವಿಶ್ವದಲ್ಲಿ ಪ್ರೀತಿ, ಪ್ರೇಮಗಳು ತುಂಬಿ ತುಳುಕುತ್ತಿದ್ದು, ನಾನೇನು ಬಯಸುತ್ತೇನೋ, ಅದನ್ನು ಇನ್ನೊಬ್ಬರಿಗೆ ನೀಡುತ್ತೇನೆ. ಸಾಧನೆ, ನಿಷ್ಕಲ್ಮಷ ಸೇವೆಯಲ್ಲಿ ನಂಬಿಕೆ ಇಡುತ್ತೇನೆ.
ಯಾವ ಆಹಾರ ಸೇವಿಸಬಹುದು?
- ಬೇಯಿಸಿರುವ ಆಲೂಗಡ್ಡೆ
ಕುಟ್ಟು ಹಿಟ್ಟು ಮತ್ತು ಪಾಯಸ
ಆಲೂ ಟಿಕ್ಕಾ
ಬಾಳೆ ಚಿಪ್ಸ್
ಹಣ್ಣು ಮತ್ತು ಹಣ್ಣಿನ ಜೂಸ್
ಸಾಬುದಾನ ವಡೆ
ಮೊಸರು
ಲಸ್ಸಿ
ದೇವಿ ಶಕ್ತಿಯ ಪ್ರತೀಕ:
ನವರಾತ್ರಿ ತಾಯಿ ದುರ್ಗಾದೇವಿಯನ್ನು ಪೂಜಿಸುವ ಕಾಲ. ಈ ದಿನಗಳಲ್ಲಿ ಎಲ್ಲಾ ದೇವತೆಗಳಿಗೂ ದಿನಕ್ಕೊಂದು ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ತಾಯಿ ದುರ್ಗೆಯು ಮಹಿಷಾಸುರ ಸಂಹಾರ ಮಾಡಿದಂದು ದಸರಾ ಮುಕ್ತಾಯವಾಗುತ್ತದೆ. ಪ್ರತಿ ದಿನವೂ ಒಂದೊಂದು ಬಣ್ಣದ ಬಟ್ಟೆ ಧರಿಸಿ, ದೇವಿಗೆ ಪ್ರಿಯವಾದ ನೇವೈಧ್ಯವಿಟ್ಟು ಪೂಜಿಸುವುದು ನವರಾತ್ರಿ ವಿಶೇಷ. ಯಾವ ದೇವಿಗೆ, ಹೇಗೆ ಪೂಜಿಸಲಾಗುತ್ತದೆ?
ದಿನ 1 - ಶೈಲು ಪುತ್ರಿ
ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರನ ಸ್ವರೂಪಕ್ಕೆ ಮೊದಲ ದಿನದ ಪೂಜೆ. ಈ ದಿನ ಕೆಂಪು ಬಣ್ಣದ ಬಟ್ಟೆ ಧರಿಸುತ್ತಾರೆ.
ದಿನ 2 - ಬ್ರಾಹ್ಮಚಾರಿಣಿ
ಮಹಾಮಾತೆಯ ಶಕ್ತಿ, ಶಾಂತಿ ಮತ್ತು ಸಮೃದ್ಧಿ ತೋರುವ ದಿನ. ಈ ದಿನ ನೀಲಿ ಬಣ್ಣದ ಬಟ್ಟೆ ಧರಿಸುವರು.
ದಿನ 3 - ಚಂದ್ರಾಘಂಚಾ
ಸೌಂದರ್ಯ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ದೇವಿಗೆ ಹಳದಿ ವರ್ಣ ಮೀಸಲು.
ದಿನ 4 - ಕುಷ್ಮುಂಡಾ
ಸೃಷ್ಟಿಕರ್ತೆ ಬ್ರಾಹ್ಮ ರೂಪಿಯನ್ನು ತರಕಾರಿಯಿಂದ ಅಲಂಕರಿಸುವುದು ಈ ದಿನದ ವಿಶೇಷ. ಅದಕ್ಕೆ ಸಮೃದ್ಧಿಯ ಪ್ರತೀಕವಾದ ಹಸಿರು ವಸ್ತ್ರ ಧರಿಸಬೇಕು.
ದಿನ 5 - ಸ್ಕಂದಾ ಮಾತಾ
ಸ್ಕಂದಾ/ ಕಾರ್ತಿಕೇಯನ ತಾಯಿ ಶಾಂತ ಸ್ವರೂಪಿಯಿಂದ ರೌದ್ರ ರೂಪಕ್ಕೆ ಬರುತ್ತಾಳೆ. ಈ ದಿನ ಬೂದು ಬಣ್ಣ ಧರಿಸಬೇಕು.
ದಿನ 6 - ಕಾತ್ಯಾಯನಿ
ಋಷಿ ಮಗಳಾಗಿ ಹುಟ್ಟಿದ ಕಾತ್ಯಾಯನಿ ದುರ್ಗಿಯಾಗಿ ಅವತರಿಸುತ್ತಾಳೆ. ಈ ಉಗ್ರ ಸ್ವರೂಪಿ ತಾಯಿಗೆ ಕೇಸರಿ ಇಷ್ಟ.
ದಿನ 7 - ಕಾಳರಾತ್ರಿ
ಕಪ್ಪಾಗಿರುವ ಕಾಳಿಗೆ ಕೆದರಿದ ಕೂದಲು, ಮೂರು ಕಣ್ಣು ಹಾಗೂ ಗಾಳಿ ಬೀಸಿದರೆ ಎಂಥ ಅನುಭವವಾಗುತ್ತೋ, ಹಾಗೆ ಉಸಿರಾಡುತ್ತಾಳೆ. ಈ ಉಗ್ರ ಮಾತೆಯನ್ನು ಶಾಂತವಾಗಿಸಲು ಶ್ವೇತ ವಸ್ತ್ರಕ್ಕೆ ಆದ್ಯತೆ ನೀಡಬೇಕು.
ದಿನ 8 - ಮಹಾ ಗೌರಿ
ಬುದ್ಧಿವಂತೆ ಹಾಗೂ ಶಾಂತ ಸ್ವರೂಪಿ ಗೌರಿಯನ್ನು ಪೂಜಿಸುವ ದಿನ. ಈ ದಿನ ಗುಲಾಬಿ ಬಣ್ಣದ ಬಟ್ಟೆಗೆ ಆದ್ಯತೆ.
ದಿನ 9 - ಸಿದ್ಧಿದಾತ್ರಿ
ನಾಲ್ಕು ಕೈ ಹೊಂದಿರುವ ಸಿದ್ಧಿ ಶಕ್ತಿಶಾಲಿ ದೇವತೆ. ಎಲ್ಲ ನೋವನ್ನೂ ಗುಣ ಪಡಿಸೋ ಶಕ್ತಿ ಇರೋ ಈಕೆಗೆ ಆಕಾಶ ನೀಲಿ ಬಣ್ಣದ ವಸ್ತ್ರ ಅಚ್ಚುಮೆಚ್ಚು.
ನಿಮ್ಮ ಅದೃಷ್ಟ! ಖುಲಾಯಿಸುತ್ತದೆ ಮನೆಯಲ್ಲಿ ಶಂಖವಿದ್ದರೆ
ವಿಷ್ಣುವಿನ ಸ್ವರೂಪವಾದ ಶಂಖವನ್ನುಮನೆಯಲ್ಲಿಟ್ಟುಕೊಂಡರೆ, ಮನೆಗೆ, ಮನೆಯವರಿಗೆ ಒಳ್ಳೆಯದು. ಅದರಿಂದ ಬರುವ ‘ಓಂ’ ಶಬ್ದ ಎಲ್ಲಾಋಣಾತ್ಮಕ ಶಕ್ತಿಯನ್ನು ದೂರವಾಗಿಸಬಲ್ಲದು.
ಮನೆಗೊಂದು ದೇವರ ಕೋಣೆ ಹಾಗೂ ಅಲ್ಲೊಂದು ಶಂಖವಿದ್ದರೆ ಮನೆಯ ವರ್ಚಸ್ಸು ಹೆಚ್ಚಿಸುತ್ತದೆ. ಇಂಥ ಶಂಖ ತರುವಾಗ ಕೆಲವು ಅಂಶಗಳನ್ನು ಗಮನಿಸಬೇಕು. ಶಂಖ ತರಲು, ಮನೆಯಲ್ಲಿ ಇಟ್ಟುಕೊಳ್ಳಲು ಏನು ಟಿಪ್ಸ್?
ಶಾಸ್ತ್ರದ ಪ್ರಕಾರ ಎರಡು ಶಂಖಗಳನ್ನು ತರಬೇಕು.
ಶಂಖವನ್ನು ಹಳದಿ ಬಟ್ಟೆ ಮೇಲಿಟ್ಟು ದೇವರ ಕೋಣೆಯಲ್ಲಿ ಮಾತ್ರ ಇಡಬೇಕು.
ಶಂಖವನ್ನು ಶಿವ ಲಿಂಗದಿಂದ ದೂರವಿಡಬೇಕು.
ಯಾವುದೇ ಕಾರಣಕ್ಕೂ ಇದರಿಂದ ನೀರನ್ನು ಎತ್ತಿ ಲಿಂಗದ ಮೇಲೆ ಹಾಕಬಾರದು.
ಪೂಜಿಸುವ ಶಂಖ ಮತ್ತು ಊದುವ ಶಂಖ ಬೇರೆ ಬೇರೆಯಾಗಿರಬೇಕು.
ಪೂಜಿಸುವ ಶಂಖವನ್ನು ಊದುವ ಶಂಖಕ್ಕಿಂತ ಎತ್ತರದ ಜಾಗದಲ್ಲಿಡಬೇಕು.
ಮನೆಯ ಹಿರಿಯರು ಶಂಖವನ್ನು ಬೆಳಗ್ಗೆ ಹಾಗೂ ಸಂಜೆ ಊದಬೇಕು.
ಬಳಸದ ಸಮಯದಲ್ಲಿ ಅದನ್ನು ಗಂಗಾಜಲದಲ್ಲಿ ತೂಳೆದು ಬಿಳಿ ಬಟ್ಟೆಯಲ್ಲಿ ಸುತ್ತಿಡಬೇಕು.
ಉಪಯೋಗವೇನು?
ಶಂಖವನ್ನು ಊದುವವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುವುದಿಲ್ಲ.
ಇದನ್ನು ಊದಿದಾಗ ಅದರಲ್ಲಿ ‘ಓಂ’ ಶಬ್ದ ಹೊರ ಬರುತ್ತದೆ. ಇದು ಮನೆಯಲ್ಲಿನ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.
ತೊದಲು ಮಾತಾಡುವ ಮಗುವಿಗೆ ದಿನ ಶಂಖ ಊದುವುದನ್ನು ಹೇಳಿಕೊಟ್ಟರೆ, ಸ್ಪಷ್ಟವಾಗಿ ಮಾತನಾಡಲು ಕಲಿಯುತ್ತದೆ.
ಮೈ ಚರ್ಮದ ಮೇಲೆ ಬಿಳಿ ದದ್ದಾದರೆ ಶಂಖದ ನೀರಿನಿಂದ ಮಸಾಜ್ ಮಾಡಿಕೊಂಡರೆ, ಸರಿ ಹೋಗುತ್ತದೆ.
ತುಳಸಿ ಎಲೆ ತೀರ್ಥದಲ್ಲೇಕೆ ಹಾಕಿರುತ್ತಾರೆ?
ಕೆಲವು ಆಚಾರ, ವಿಚಾರಗಳನ್ನು ಮೂಢ ನಂಬಿಕೆಗಳು ಎಂದುಕೊಳ್ಳುವುದು ಇದೆ. ಖಂಡಿತ ಅಲ್ಲ. ಇವುಗಳ ಹಿಂದೆ ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳಿವೆ. ನಮ್ಮೆಲ್ಲಾ ಆಚಾರ ಹಾಗೂ ನಂಬಿಕೆಯ ಹಿಂದೆಯೂ ಒಂದೊಂದು ಲಾಜಿಕ್ ಇದೆ. ಕೆಲವು ಅಚ್ಚರಿ ಹುಟ್ಟಿಸುವಂತಿವೆ, ಇನ್ನು ಕೆಲವು ನಿಗೂಢವಾಗಿವೆ. ಏನವು? ಇಂದಿನಿಂದ ಪ್ರತಿದಿನ ಒಂದೊಂದನ್ನು ಇಲ್ಲಿ ಓದಿ.
ಹಳೆ ಆಚಾರ, ಹೊಸ ವಿಚಾರ-1
ತುಳಸಿ ಹಾಕದೆ ದೇವರ ತೀರ್ಥವಿಲ್ಲ. ತೀರ್ಥಕ್ಕೆ ತುಳಸಿ ಹಾಕುವುದಕ್ಕೆ ಧಾರ್ಮಿಕ ಕಾರಣವೂ ಇದೆ, ಆರೋಗ್ಯ ಸಂಬಂಧಿ ಹಿನ್ನೆಲೆಯೂ ಇದೆ.
ಧಾರ್ಮಿಕ ಕಾರಣ- ತುಳಸಿ ದೇವಪತ್ರೆ. ಸ್ಕಂದಪುರಾಣದ ಪ್ರಕಾರ, ದೇವತೆಗಳು ಸಮುದ್ರಮಥನ ಮಾಡುವಾಗ ಅಮೃತದ ಕೆಲ ಹನಿಗಳು ಭೂಮಿ ಮೇಲೆ ಬಿದ್ದವಂತೆ. ಅಲ್ಲಿ ತುಳಸಿ ಹುಟ್ಟಿತಂತೆ. ಅಂದರೆ, ತುಳಸಿಯಲ್ಲಿ ಅಮೃತದ ಗುಣವಿದೆ ಎಂದರ್ಥ. ನಂತರ ಬ್ರಹ್ಮನು ಈ ತುಳಸಿಯನ್ನು ವಿಷ್ಣುವಿಗೆ ಒಪ್ಪಿಸಿದನಂತೆ. ವಿಷ್ಣುವಿಗೆ ಇದು ಬಹಳ ಇಷ್ಟವಾಯಿತಂತೆ. ತುಳಸಿ ಗಿಡದಲ್ಲಿ ಎಲ್ಲಾ ದೇವತೆಗಳೂ ನೆಲೆಸಿದ್ದಾರಂತೆ. ಆ ಕಾರಣಕ್ಕೇ ಪ್ರತಿ ಮನೆಯಲ್ಲೂ ತುಳಸಿ ಗಿಡ ಇಟ್ಟು ಪೂಜಿಸುತ್ತಾರೆ.
ಔಷಧಿಯ ಆಗರ ತುಳಸಿ
ಆರೋಗ್ಯ ಸಂಬಂಧಿ ಕಾರಣ- ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.
-ತುಳಸಿ ಎಲೆ ಅಥವಾ ಅದನ್ನು ನೆನೆಸಿದ ನೀರನ್ನು ಸೇವಿಸಿದರೆ ಉಸಿರಾಟ ಸುಗಮವಾಗುತ್ತದೆ.
- ತುಳಸಿಯ ನೀರು ಕುಡಿದರೆ ಕಫ ನಿವಾರಣೆಯಾಗುತ್ತದೆ.
- ಸಣ್ಣಪುಟ್ಟ ಜ್ವರ, ಫಂಗಸ್ ಹಾಗೂ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ ಸೋಂಕುಗಳನ್ನು, ಕೆಮ್ಮನ್ನು ನಿವಾರಿಸುವ ಶಕ್ತಿ ಹಾಗೂ ಚರ್ಮ ಸಂಬಂಧಿ ತೊಂದರೆಗಳನ್ನು ದೂರ ಮಾಡುವ ಗುಣ ತುಳಸಿಗಿದೆ.
- ಒತ್ತಡ ನಿವಾರಣೆಗೆ, ಕಿಡ್ನಿ ಸ್ಟೋನ್, ಹೃದ್ರೋಗ ಹಾಗೂ ಮಧುಮೇಹ ತಡೆಯಲು ಕೂಡ ತುಳಸಿ ಪ್ರಶಸ್ತ.
- ತುಳಸಿಯಲ್ಲಿರುವ ಓಲಿಯೋನಿಕ್ ಆಸಿಡ್ ಯಕೃತ್ ರಕ್ಷಕ. ಗಂತಿರೋಧಕ ಹಾಗೂ ವೈರಸ್ ರೋಧಕ ಗುಣಗಳೂ ತುಳಸಿಯಲ್ಲಿವೆ.
- ಆರ್ಸೋಲಿಕ್ ಆಸಿಡ್ ಕ್ಯಾನ್ಸರ್ ನಿಗ್ರಾಹಕ. ಕ್ಯಾನ್ಸರ್ ಕೋಶಗಳ ಸ್ವಯಂಭಕ್ಷಣೆಗೆ ಇದು ಪ್ರೇರೇಪಿಸುತ್ತದೆ.
- ರೋಸ್ಮೆರಿನಿಕ್ ಆಮ್ಲವು ಆತಂಕಲಯ (ಆಂಕ್ಸಿಯೋಲೈಟಿಕ್) ಕಾರಕ ಗುಣವುಳ್ಳದ್ದು. ಕಾರ್ವಕ್ರಾಲ್ ಬ್ಯಾಕ್ಟೀರಿಯ ನಾಶಕ.
- ಚರಕಸಂಹಿತೆಯು ತುಳಸಿಯ ಬಗ್ಗೆ ಪ್ರಸ್ತಾಪಿಸಿ ಮನೋ ಒತ್ತಡವನ್ನು ನಿಗ್ರಹಿಸುವುದರ ಜೊತೆಗೆ ಶರೀರ ಕ್ರಿಯೆಯಲ್ಲಿ ಸಮತೋಲನೆ ತರುತ್ತದೆ ಎನ್ನುತ್ತದೆ.
- ಇದು ಒಂದು ಅರ್ಥದಲ್ಲಿ ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ. ಹೀಗಾಗಿ ಪ್ರತಿದಿನ ತೀರ್ಥದ ರೂಪದಲ್ಲಾದರೂ ತುಳಸಿಯ ಅಂಶ ದೇಹಕ್ಕೆ ಹೋಗಲಿ ಎಂದು ತೀರ್ಥದಲ್ಲಿ ತುಳಸಿ ಕಡ್ಡಾಯ ಮಾಡಲಾಗಿದೆ.
ಮನೆಯಲ್ಲಿ ನವಿಲುಗರಿ ಇದ್ದರೆ! ಶನಿ ದೋಷ ನಿವಾರಿಸುತ್ತೆ
ವಾಸ್ತು ಶಾಸ್ತ್ರದಲ್ಲಿ ಮನೆ ಹಾಗೂ ಮನೆಯವರ ಏಳ್ಗೆಗಾಗಿ ಸಾಕಷ್ಟು ಸಲಹೆ, ಸೂಚನೆಗಳಿರುತ್ತವೆ. ಕೆಲವೊಂದನ್ನು ಮನೆಯಲ್ಲಿಟ್ಟುಕೊಂಡರೆ ಒಳ್ಳೆಯದು. ಮತ್ತೆ ಕೆಲವನ್ನು ಇಟ್ಟುಕೊಳ್ಳಬಾರದು. ಅಂಥದ್ರಲ್ಲಿ ನವಿಲಿನ ಗರಿ ಬಗ್ಗೆ ಈ ಶಾಸ್ತ್ರ ಹೇಳುವುದೇನು?
ಎಲ್ಲರನ್ನೂ ಮೋಡಿ ಮಾಡುವ ನವಿರಾದ ನವಿಲು ಗರಿಗೆ ಮಾರು ಹೋಗದವರು ಯಾರು? ಬೀಸಣಿಗೆಯಲ್ಲಿಯೋ, ಕೃಷ್ಣನ ಫೋಟೋ ಅಥವಾ ಮೂರ್ತಿ ಮೇಲೋ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾರೆ ಹಲವರು. ಆದರೆ, ಇದಕ್ಕೆ ಮನೆಯ ದೋಷವನ್ನೂ ಪರಿಹರಿಸೋ ಶಕ್ತಿ ಇದೆ ಎಂಬ ಸತ್ಯ ಗೊತ್ತಾ?
ನವಿಲುಗರಿ ಮನೆಯಲ್ಲಿದ್ದರೆ ಹೇಗೆ ವಾಸ್ತು ದೋಷ ನಿವಾರಣೆಯಾಗುತ್ತೆ.
ಎಂಟು ನವಿಲು ಗರಿಗಳನ್ನು ಒಟ್ಟಾಗಿ ಬಿಳಿ ದಾರದಿಂದ ಕಟ್ಟಿ ಓಂ ಸೋಮಯಾ ನಮಃ ಎಂದು ಮಂತ್ರ ಹೇಳಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.
ಮೂರು ನವಿಲು ಗರಿಗಳನ್ನು ಕಟ್ಟಿ, ಅದರ ಜೊತೆ ಅಡಿಕೆ ಇಟ್ಟು, ಅದರ ಮೇಲೆ ನೀರು ಸಿಂಪಡಿಸುವಾಗ ಓಂ ಶನೀಶ್ವರಾಯ ನಮಃ ಜಪಿಸಿದರೆ ಶನಿ ದೋಷವೂ ದೂರವಾಗುತ್ತದೆ.
ನವಿಲುಗರಿಯನ್ನು ಲಾಕರ್ ಬಳಿ ಇಟ್ಟರೆ ಸಂಪತ್ತು ಹೆಚ್ಚುತ್ತದೆ.
ಮನೆ ಮುಂಭಾಗದಲ್ಲಿಟ್ಟರೆ ಋಣಾತ್ಮಕ ಶಕ್ತಿ ದೂರವಾಗುತ್ತದೆ.
ಆಫೀಸ್‌ನಲ್ಲಿ ನಾಟ್ಯ ಮಾಡುವ ನವಿಲಿನ ಚಿತ್ರವನ್ನಿಟ್ಟರೆ, ಆದಾಯ ಹೆಚ್ಚುತ್ತದೆ.
ಹಿಂದೆ ದೇಹದಿಂದ ವಿಷ ತೆಗೆಯಲೂ ನವಿಲು ಗರಿಯನ್ನು ಬಳಸುತ್ತಿದ್ದರು. ದೇಹದ ವಿಷವನ್ನೂ ತೆಗೆಯುವಷ್ಟು ಶಕ್ತಿ ನವಿಲು ಗರಿಗಿದೆ.
ಮನೆಯಲ್ಲಿರುವ ಹಲ್ಲಿ ಓಡಿಸಲೂ ಈ ನವಿಲು ಗರಿ ಬೆಸ್ಟ್.
ಬೆಡ್‌ರೂಮಿನಲ್ಲಿ ಗರಿ ಬಿಚ್ಚಿರುವ ನವಿಲಿನ ಚಿತ್ರವಿದ್ದರೆ, ದಾಂಪತ್ಯದ ಬಾಂಧವ್ಯ ಗಟ್ಟಿಗೊಳ್ಳುತ್ತದೆ.
Subscribe to:
Posts (Atom)