Wednesday, 9 January 2019
2019: ನವಗ್ರಹ ಸಂಚಾರ
ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ನವಗ್ರಹ ಸಂಚಾರ ಹೇಗಿರುತ್ತದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ.
ಸೂರ್ಯ: ಜನವರಿ 13ರಂದು ಮಕರ ರಾಶಿಗೆ, ಫೆಬ್ರವರಿ 11ರಂದು ಕುಂಭ ರಾಶಿಗೆ, ಮಾರ್ಚ್ 13ರಂದು ಮೀನ ರಾಶಿಗೆ, ಏಪ್ರಿಲ್ 13ರಂದು ಮೇಷ ರಾಶಿಗೂ, ಮೇ13ರಂದು ವೃಷಭ ರಾಶಿಗೂ, ಜೂನ್ 14ರಂದು ಮಿಥುನ ರಾಶಿಗೂ, ಜುಲೈ 15ರಂದು ಕಟಕ ರಾಶಿಗೂ, ಆಗಸ್ಟ್ 16ರಂದು ಸಿಂಹ ರಾಶಿಗೂ, ಸೆಪ್ಟೆಂಬರ್ 16ರಂದು ಕನ್ಯಾ ರಾಶಿಗೂ, ಅಕ್ಟೋಬರ್ 16ರಂದು ತುಲಾ ರಾಶಿಗೂ, ನವೆಂಬರ್ 15ರಂದು ವೃಶ್ಚಿಕ ರಾಶಿಗೂ ಮತ್ತು ಡಿಸೆಂಬರ್ 15ರಂದು ಧನು ರಾಶಿಯಲ್ಲಿ ಸೂರ್ಯ ಪ್ರವೇಶಿಸುತ್ತಾನೆ.
ಕುಜ: ಫೆಬ್ರವರಿ 3ರಂದು ಬುಧ ರಾಶಿಗೂ, ಮಾರ್ಚ್ 20ರಂದು ವೃಷಭ ರಾಶಿಗೂ, ಮೇ 5ರಂದು ಮಿಥುನ ರಾಶಿಗೂ, ಜೂನ್ 20ರಂದು ಕಟಕ ರಾಶಿಗೂ, ಆಗಸ್ಟ್ 6ರಂದು ಸಿಂಹ ರಾಶಿಗೂ, ಸೆಪ್ಟೆಂಬರ್ 23ರಂದು ಕನ್ಯಾ ರಾಶಿಗೂ, ನವೆಂಬರ್ 8ರಂದು ತುಲಾ ರಾಶಿಗೂ, ಡಿಸೆಂಬರ್ 23ರಂದು ವೃಶ್ಚಿಕ ರಾಶಿಯಲ್ಲಿ ಕುಜ ಅಥವಾ ಮಂಗಳ ಪ್ರವೇಶಿಸುತ್ತಾನೆ.
ಬುಧ: ಜನವರಿ 19ರಂದು ಮಕರರಾಶಿಗೆ, ಫೆಬ್ರವರಿ 6ರಂದು ಕುಂಭ ರಾಶಿಗೆ, ಫೆಬ್ರವರಿ 24ರಂದು ಮೀನರಾಶಿಗೆ, ಮಾರ್ಚ್ 6ರಂದು ವಕ್ರಿಯಾಗಿ ಮಾರ್ಚ್ 16ರಂದು ಮತ್ತೆ ಕುಂಭರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 29ರಂದು ನೇರ ಪ್ರಭಾವವನ್ನು ಬೀರುತ್ತಾನೆ. ಏಪ್ರಿಲ್ 10ರಂದು ಮೀನರಾಶಿಗೆ, ಮೇ 2 ರಂದು ಮೇಷರಾಶಿಗೆ, ಮೇ 18ರಂದು ವೃಷಭರಾಶಿಗೂ, ಜೂನ್ 1ರಂದು ಮಿಥುನರಾಶಿಗೆ, ಜೂನ್ 19ರಂದು ಕಟಕರಾಶಿಗೆ ಪ್ರವೇಶಿಸಿ ಜುಲೈ 9ರಂದು ವಕ್ರಿಯಾಗುತ್ತಾನೆ. ಆಗಸ್ಟ್ 2ರಂದು ನೇರ ಪ್ರಭಾವವನ್ನು ಬೀರುತ್ತಾನೆ.
ಆಗಸ್ಟ್ 25ರಂದು ಸಿಂಹರಾಶಿಗೆ, ಸೆಪ್ಟಂಬರ್ 10ರಂದು ಕನ್ಯಾರಾಶಿಗೆ, ಸೆಪ್ಟೆಂಬರ್ 28ರಂದು ತುಲಾರಾಶಿಗೆ, ಅಕ್ಟೋಬರ್ 22ರಂದು ವೃಶ್ಚಿಕ ರಾಶಿಗೆ ಪ್ರವೇಶಿಸಿ ನವೆಂಬರ್ 1ರಂದು ವಕ್ರಿಯಾಗುತ್ತಾನೆ. ನವೆಂಬರ್ 8ರಂದು ತುಲಾರಾಶಿಗೆ ಪ್ರವೇಶಿಸಿ ನವೆಂಬರ್ 22ರಂದು ನೇರ ಪ್ರಭಾವವನ್ನು ಬೀರುತ್ತಾನೆ. ಡಿಸೆಂಬರ್ 4ರಂದು ವೃಶ್ಚಿಕರಾಶಿಗೆ ಮತ್ತು ಡಿಸೆಂಬರ್ 24ರಂದು ಧನುರಾಶಿಯಲ್ಲಿ ಬುಧ ಪ್ರವೇಶಿಸುತ್ತಾನೆ.
ಗುರು: ಮಾರ್ಚ್ 8ರಂದು ಧನುರಾಶಿಗೆ ಪ್ರವೇಶಿಸಿ ಏಪ್ರಿಲ್ 11ರಂದು ವಕ್ರಿಯಾಗುತ್ತಾನೆ. ಮೇ 14ರಂದು ವೃಶ್ಚಿಕರಾಶಿ ಪ್ರವೇಶಿಸಿ ಆಗಸ್ಟ್ 12ರಂದು ನೇರ ಪ್ರಭಾವ ಬೀರುತ್ತಾನೆ. ಅಕ್ಟೋಬರ್ 28ರಂದು ಧನುರಾಶಿಯಲ್ಲಿ ಗುರು ಪ್ರವೇಶಿಸುತ್ತಾನೆ.
ಕನ್ಯಾ: ಜನವರಿ 28ರಂದು ಧನುರಾಶಿಗೆ, ಫೆಬ್ರವರಿ 23ರಂದು ಮಕರರಾಶಿಗೆ, ಮಾರ್ಚ್ 20ರಂದು ಕುಂಭರಾಶಿಗೆ, ಏಪ್ರಿಲ್ 14ರಂದು ಮೀನರಾಶಿಗೆ, ಮೇ 9ರಂದು ಮೇಷರಾಶಿಗೆ, ಜೂನ್ 3ರಂದು ವೃಷಭರಾಶಿಗೆ, 27ನೇ ಜೂನ್‌ರಂದು ಮಿಥುನರಾಶಿಗೆ, ಜುಲೈ 22ರಂದು ಕಟಕರಾಶಿಗೆ, ಆಗಸ್ಟ್ 15ರಂದು ಸಿಂಹರಾಶಿಗೆ, ಸೆಪ್ಟೆಂಬರ್ 8ರಂದು ಕನ್ಯಾ ರಾಶಿಗೆ, ಅಕ್ಟೋಬರ್ 3ರಂದು ತುಲಾರಾಶಿಗೆ, ಅಕ್ಟೋಬರ್ 27ರಂದು ವೃಶ್ಚಿಕರಾಶಿಗೆ, ನವೆಂಬರ್ 20ರಂದು ಧನುರಾಶಿಗೆ ಮತ್ತು ಡಿಸೆಂಬರ್ 14ರಂದು ಮಕರರಾಶಿಗೆ ಕನ್ಯಾ ಪ್ರವೇಶಿಸುತ್ತದೆ.
ಶನಿ: ಮೇ 1ರಂದು ಧನುರಾಶಿಯಲ್ಲಿ ಶನಿಯು ವಕ್ರಿಯಾಗಿ ಸೆಪ್ಟೆಂಬರ್ 19ರವರೆಗೆ ನೇರ ಪ್ರಭಾವ ಬೀರುತ್ತಾನೆ.
ರಾಹು-ಕೇತು: ರಾಹುಗ್ರಹವು ಏಪ್ರಿಲ್ 3ರಂದು ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಏಪ್ರಿಲ್ 3ರಂದು ಧನುರಾಶಿಗೆ ಕೇತು ಪ್ರವೇಶಿಸುತ್ತದೆ.
ಹೊಸ ವರ್ಷದ ರಾಶಿಫಲ; ಯಾರಿಗೆ, ಹೇಗಿದೆ?
ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ಔದ್ಯೋಗಿಕ ಕ್ಷೇತ್ರದಲ್ಲಿರುವವರ ಬೆಳವಣಿಗೆ ಹೇಗೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ವ್ಯಾಪಾರಸ್ಥರಿಗೆ ಜ್ಯೋತಿಷ ದಿಕ್ಸೂಚಿ ಹೇಗಿದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ.
ಮೇಷ (ಅಶ್ವಿನಿ, ಭರಣಿ ಮತ್ತು ಕೃತ್ತಿಕ 1):
ವೃತ್ತಿಯಲ್ಲಿ ಉನ್ನತಿ ಸಾಧ್ಯತೆ. ವೃತ್ತಿಭೂಮಿಕೆಯಲ್ಲಿ ಕೆಲವರು ನಾಯಕರಾಗುವ ಸಂಭವ. ಹೆಚ್ಚುವರಿ ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸಿ. ಯಾವುದೇ ಪ್ರಮುಖ ನಿರ್ಣಯ ತೆಗೆದುಕೊಳ್ಳುವ ಮುನ್ನ ಸಹೋದ್ಯೋಗಿಗಳ ವಿಶ್ವಾಸವನ್ನು ಗಳಿಸಿರಿ. ನಿಮ್ಮ ಸುತ್ತಣ ಪರಿಸರದಲ್ಲಿರುವ ಬುದ್ಧಿವಂತ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ಹೆಚ್ಚಿನ ಲಾಭ ಉಂಟಾಗುವುದು. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಕಠಿಣ ಸವಾಲುಗಳು ಎದುರಾಗುತ್ತವೆ.
ಸ್ವಲ್ಪ ದುಡುಕಿದರೂ ಕಾನೂನಾತ್ಮಕ ತೊಡಕು ಉಂಟಾಗುವುದು. ಲೆಕ್ಕಾಚಾರದ ನಡಿಗೆ ಉತ್ತಮ. ತಜ್ಞರ ಸಲಹೆ ಪಡೆದು ಹೊಸ ಕಾರ್ಯಗಳನ್ನು ಪ್ರಾರಂಭಿಸಿದರೂ ಅಧಿಕ ಶ್ರಮವಾಗುತ್ತದೆ. ಸಾಕಷ್ಟು ಆದಾಯವಿದ್ದರೂ ಅದಕ್ಕೆ ತಕ್ಕಂತೆ ಖರ್ಚು ಇರುತ್ತದೆ. ನಿಮ್ಮ ಹಾಗೂ ಕುಟುಂಬದ ಆರೋಗ್ಯದ ವಿಚಾರದಲ್ಲಿ ಹೆಚ್ಚು ನಿಗಾ ವಹಿಸಿ. ಪದೇ ಪದೇ ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.
ಆಧ್ಯಾತ್ಮಿಕ ವ್ಯಕ್ತಿಗಳು ನೀವಾದ ಕಾರಣ ಪದೇ ಪದೇ ಪುಣ್ಯಕ್ಷೇತ್ರಗಳನ್ನು ದರ್ಶಿಸುತ್ತೀರಿ. ನಿಮ್ಮ ಸುತ್ತಣ ಪರಿಸರದೊಳಗೆ ಉತ್ತಮ ಪ್ರಶಂಸೆ ಲಭಿಸುವುದು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯಿದೆ. ಆದರೆ ಚಿತ್ತಚಾಂಚಲ್ಯದ ಕಾರಣ ತೊಡರುಗಾಲು ಹೆಚ್ಚು. ಉನ್ನತ ವ್ಯಾಸಂಗ ಮಾಡಲಿಚ್ಛಿಸುವವರು ಮತ್ತಷ್ಟು ಶ್ರಮ ಪಡಬೇಕಾಗುತ್ತದೆ.
ಹೊಸ ವರ್ಷದ ರಾಶಿಫಲ; ಯಾರಿಗೆ, ಹೇಗಿದೆ?
ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ಔದ್ಯೋಗಿಕ ಕ್ಷೇತ್ರದಲ್ಲಿರುವವರ ಬೆಳವಣಿಗೆ ಹೇಗೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ವ್ಯಾಪಾರಸ್ಥರಿಗೆ ಜ್ಯೋತಿಷ ದಿಕ್ಸೂಚಿ ಹೇಗಿದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ.
ವೃಷಭ (ಕೃತ್ತಿಕ 2, 3, 4, ರೋಹಿಣಿ ಮತ್ತು ಮೃಗಶಿರ 1,2)
ಸ್ವಭಾವತಃ ಕುಶಲಿಗಳಾದ ನೀವು ಕಾರ್ಯಕ್ಷೇತ್ರದಲ್ಲಿ ಎಂತಹ ಅಡೆತಡೆಗಳನ್ನು ಎದುರಿಸಬಲ್ಲಿರಿ. ನಿಮ್ಮ ಕೌಶಲ್ಯದ ಕಾರಣ ಉತ್ತಮ ಫಲಿತಾಂಶ ಮೂಡುವ ಕಾರಣ ಮೇಲಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ನಾಯಕರಾಗಿದ್ದ ಪಕ್ಷದಲ್ಲಿ ನಿಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ನಡೆಯದಿರಿ. ವ್ಯಾವಹಾರಿಕ ಚಟುವಟಿಕೆಗಳು ಉತ್ತಮವಾಗಿರುತ್ತವೆ. ವೃತ್ತಿಭೂಮಿಕೆಗೆ ಸಂಬಂಧಿಸಿದಂತೆ ವಿವಾದಗಳಿಂದ ದೂರವಿರಿ.
ವೃತ್ತಿಭೂಮಿಕೆಯ ಉನ್ನತಿಗೆ ಪೂರಕವಾಗುವಂತ ಹೊಸ ವಿಷಯಗಳ ಕಲಿಕೆಯಲ್ಲಿ ಆಸಕ್ತಿ ತೋರಿದರೆ ಒಳಿತಾಗುತ್ತದೆ. ವರ್ಷವಿಡೀ ಉತ್ತಮ ಆದಾಯವಿದ್ದರೂ ನೀರಿನಂತೆ ಹಣ ಪೋಲಾಗುವ ಸಾಧ್ಯತೆಯಿದೆ. ಬಂಡವಾಳ ಹೂಡಿಕೆಯಲ್ಲಿ ತಜ್ಞರ ಅಭಿಪ್ರಾಯ ಪಡೆದು ಮುನ್ನಡೆಯಿರಿ. ವಯಸ್ಸಾದವರು ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ವಹಿಸಿ.
ವರ್ಷವಿಡೀ ಸಾಮಾನ್ಯ ಆರೋಗ್ಯವಿದ್ದರೂ ವರ್ಷಾಂತ್ಯದಲ್ಲಿ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗುವ ಸಾಧ್ಯತೆ ಹೆಚ್ಚು. ಅಪಘಾತ, ಅವಘಡಗಳಿಗೆ ಕಾರಣವಾಗುವ ಕಾರ್ಯಕ್ಷೇತ್ರದಿಂದ ಆದಷ್ಟೂ ದೂರವಿರಿ. ಕೌಟುಂಬಿಕ ವ್ಯವಹಾರದಲ್ಲಿ ಸಮಾಧಾನ ಚಿತ್ತರಾಗಿ. ಕೋಪ ಅನರ್ಥಕ್ಕೆ ಕಾರಣವಾಗಬಹುದು.
ಪದೇ ಪದೇ ಅನುಮಾನ ಪಡುವ ಪ್ರವೃತ್ತಿಯ ಕಾರಣ ಬಂಧು, ಮಿತ್ರ ಹಾಗೂ ಪ್ರೀತಿಪಾತ್ರರಲ್ಲಿ ವೈಮನಸ್ಯ ಉಂಟಾಗಬಹುದು. ಸಂಗಾತಿಯ ನಿರೀಕ್ಷೆಯಲ್ಲಿರುವವರಿಗೆ ಸಿಗುವ ಸಾಧ್ಯತೆ ಹೆಚ್ಚು. ಸಹವಾಸ ಬೆಳಸುವಾಗ ಎಚ್ಚರವಿರಲಿ.
ನಿಮ್ಮ ಪ್ರಯತ್ನದ ಫಲವಾಗಿ ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ಪ್ರೌಢ ವಯಸ್ಸಿನವರು ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಬೇಕು. ಉನ್ನತ ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿದೆ. ಯಾವುದೇ ಕೆಲಸದಲ್ಲಾದರೂ ಏಕಾಗ್ರತೆ ಸಾಧನೆ ಮುಖ್ಯವೆನಿಸುತ್ತದೆ.
ಹೊಸ ವರ್ಷದ ರಾಶಿಫಲ; ಯಾರಿಗೆ, ಹೇಗಿದೆ?
ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಯಾವ ರಾಶಿಗೆ ಶುಭ? ಔದ್ಯೋಗಿಕ ಕ್ಷೇತ್ರದಲ್ಲಿರುವವರ ಬೆಳವಣಿಗೆ ಹೇಗೆ? ವಿದ್ಯಾರ್ಥಿಗಳಿಗೆ ಈ ವರ್ಷ ಶುಭದಾಯಕವೇ? ವ್ಯಾಪಾರಸ್ಥರಿಗೆ ಜ್ಯೋತಿಷ ದಿಕ್ಸೂಚಿ ಹೇಗಿದೆ? ಕೌಟುಂಬಿಕ ಮತ್ತು ಆರೋಗ್ಯದ ವಿಚಾರದ ಬಗ್ಗೆ ರಾಶಿಫಲ ಹೇಳುವುದೇನು? ಖ್ಯಾತ ಜ್ಯೋತಿಷಿ ಬೆಂಗಳೂರು ನಿರಂಜನಬಾಬು ಅವರು ಇಲ್ಲಿ ವಿವರಿಸಿದ್ದಾರೆ.
ಮಿಥುನ (ಮೃಗಶಿರ 3,4, ಆರಿದ್ರಾ ಮತ್ತು ಪುನರ್ವಸು 1,2,3)
ವೃತ್ತಿಕ್ಷೇತ್ರದಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅನಾಹುತ ತಪ್ಪಿದ್ದಲ್ಲ. ಕಚೇರಿಯ ಕೆಲಸಕ್ಕೆ ಹೆಚ್ಚು ಸಮಯ ವ್ಯಯ ಮಾಡಿ. ನಿರ್ಣಯ ತೆಗೆದುಕೊಳ್ಳುವ ಮುನ್ನ ಸಮಾಲೋಚಿಸಿ.
ವ್ಯಾಪಾರೋದ್ಯಮ ಕ್ಷೇತ್ರದಲ್ಲಿರುವವರು ತಜ್ಞರ ಸಲಹೆ ಪಡೆದು ಕಾನೂನಾತ್ಮಕ ಚೌಕಟ್ಟಿನಲ್ಲೇ ವ್ಯಾಪಾರವನ್ನು ನಿರ್ವಹಿಸಬೇಕು. ಪಾಲುದಾರಿಕೆ ವ್ಯವಹಾರದಲ್ಲಿ ಸ್ವಲ್ಪ ತೊಡಕಿದೆ. ವರ್ಷವಿಡೀ ಹಣಕಾಸಿನ ಲೆಕ್ಕಾಚಾರ, ಆಯವ್ಯಯ ಹಾಕಿಕೊಳ್ಳುವುದು ಒಳ್ಳೆಯದು.
ಒಂದೊಮ್ಮೆ ಸ್ವಲ್ಪ ಅಜಾಗರೂಕರಾದರೂ ತೊಂದರೆ ತಪ್ಪಿದ್ದಲ್ಲ. ಅಲರ್ಜಿ ಮತ್ತು ಸೋಂಕು ಕಾಡುವ ಸಾಧ್ಯತೆಯಿದೆ. ವಯಸ್ಸಾದವರು ತಮ್ಮ ಆರೋಗ್ಯದ ಕಡೆ ನಿಗಾ ವಹಿಸುವುದು ಒಳ್ಳೆಯದು. ವರ್ಷದ ಮೊದಲ ಕೆಲ ತಿಂಗಳಲ್ಲಿ ಸಾಂಸಾರಿಕ ಭಿನ್ನಾಭಿಪ್ರಾಯ ಉಂಟಾಗಬಹುದು. ಮುಂದಿನ ದಿನಗಳಲ್ಲಿ ಕನಸು ನನಸಾಗುತ್ತದೆ. ನಿರೀಕ್ಷಿತ ಫಲ ನೀಡುತ್ತದೆ.
ಬಂಧು, ಮಿತ್ರರಲ್ಲಿ ವ್ಯವಹರಿಸುವಾಗ ಜಾಗ್ರತೆಯಿರಿಲಿ. ವೈಮನಸ್ಯ ಬಾರದಂತೆ ನೋಡಿಕೊಳ್ಳಿ. ಆಧ್ಯಾತ್ಮಿಕ ಜೀವನಶೈಲಿಗೆ ಒಗ್ಗಿಕೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ. ಆಧ್ಯಾತ್ಮಿಕ ಮನೋಭಾವನೆ ಉಳ್ಳವರಿಗೆ ಪುಣ್ಯಕ್ಷೇತ್ರ ದರ್ಶನ ಭಾಗ್ಯ.
ಉನ್ನತ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ. ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ. ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಪ್ರಗತಿ ಸ್ವಲ್ಪ ನಿಧಾನವಾದರೂ ಉತ್ತಮ ಫಲಿತಾಂಶ ದೊರೆಯುತ್ತದೆ.
ಕಟಕ (ಪುನರ್ವಸು 4, ಪುಷ್ಯ ಮತ್ತು ಆಶ್ಲೇಷ) :
ವೃತ್ತಿಭೂಮಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಸಹೋದ್ಯೋಗಿಗಳ ನೆರವು ದೊರೆತು ಉತ್ತಮ ಟೀಂ ಲೀಡರ್ ಆಗುವಿರಿ. ಆದರೆ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳುವುದು ಕಷ್ಟವೆನಿಸುತ್ತದೆ. ಕೌಶಲ್ಯಾಭಿವೃದ್ಧಿಯಲ್ಲಿ ಪದೇ ಪದೇ ಶ್ರಮ ಪಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ವ್ಯಾಪಾರಿಗಳಿಗೆ ಉತ್ತಮ ಕಾಲ. ಪರಿಣಿತರಲ್ಲಿ ಸೂಕ್ತ ಸಲಹೆ ಪಡೆಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ. ಆದ್ಯತೆಯ ಮೇರೆಗೆ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಸಮಯ ನಿರ್ವಹಣೆ ಸಾಧ್ಯವಾಗುತ್ತದೆ. ವರ್ಷವಿಡೀ ಲಾಭದಾಯಕವಾಗಿದೆ. ಬಂಡವಾಳ ಹೂಡಿಕೆಯಲ್ಲಿ ತಜ್ಞರ ಸಲಹೆ ಪಡೆಯಿರಿ.
ಆರೋಗ್ಯ ವಿಚಾರ ಉತ್ತಮವಾಗಿದೆ. ಸಮಸ್ಯೆಗಳು ಪರಿಹಾರವಾಗುತ್ತವೆ. ಆದರೆ ವೈದ್ಯಕೀಯ ಮತ್ತು ಪಥ್ಯದ ವಿಚಾರದಲ್ಲಿ ಎಚ್ಚರವಿರಲಿ. ಸಾಮಾಜಿಕ ಬಾಂಧವ್ಯ ಸುಧಾರಿಸುತ್ತದೆ. ಕಲೆ ಮತ್ತಿತರ ವಿಷಯಗಳಲ್ಲಿ ಉನ್ನತ ವ್ಯಾಸಂಗ ಬಯಸಿರುವವರು ನೀವಾಗಿದ್ದರೆ ಉತ್ತಮ ಪ್ರಗತಿ ಕಾಣುವಿರಿ. ಜೀವನ ಸಂಗಾತಿಯ ಹುಡುಕಾಟದಲ್ಲಿ ಯಶಸ್ಸು ಕಾಣುವಿರಿ.
ಸ್ನೇಹಿತರ ಆಯ್ಕೆಯಲ್ಲಿ ಎಚ್ಚರವಿರಲಿ. ಸ್ವಲ್ಪ ಎಚ್ಚರ ತಪ್ಪಿದರೂ ಸಮಾಜದಲ್ಲಿ ನಿಮ್ಮ ಘನತೆ ಮಣ್ಣುಪಾಲಾಗುತ್ತದೆ ಎಚ್ಚರ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಆದರೆ ಚಿತ್ತಚಾಂಚಲ್ಯವನ್ನು ಬದಿಗೊತ್ತುವುದು ಅತ್ಯವಶ್ಯ. ಪರಿಣಿತಿ ಹೊಂದಬೇಕೆಂದು ಬಯಸುವವರು ಮತ್ತಷ್ಟು ಶ್ರಮ ಪಡಬೇಕು.
ಸಿಂಹ (ಮಖ, ಪೂರ್ವಫಲ್ಗುಣಿ ಮತ್ತು ಉತ್ತರ ಫಲ್ಗುಣಿ 1):
ವೃತ್ತಿ ಭೂಮಿಕೆಯಲ್ಲಿರುವವರು ಸಾಕಷ್ಟು ಸವಾಲುಗಳನ್ನು ಎದುರಿಸುವಿರಿ. ಹೊಸ ಜವಾಬ್ದಾರಿ ಹೊರ ಬಯಸುವವರು ತಾಳ್ಮೆಯಿಂದ ಇರುವುದು ಒಳ್ಳೆಯದು. ಬೆಳವಣಿಗೆಯ ಹಾದಿಯಲ್ಲಿ ನಿಮ್ಮ ದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನವನ್ನು ಪ್ರದರ್ಶಿಸುವುದು ಸ್ವಲ್ಪ ಕಷ್ಟವಾದೀತು. ವ್ಯಾಪಾರಿಗಳು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಸ್ಪರ್ಧಾತ್ಮಕ ಜಗದಲ್ಲಿ ನಿಲ್ಲಲು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.
ಸಮರ್ಪಕ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಲೆಕ್ಕಾಚಾರಗಳ ಮೇಲೆ ಪೂರ್ವಗ್ರಹ ಪ್ರಭಾವ ಉಂಟಾಗದಂತೆ ನೋಡಿಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನವಿರಲಿ. ಮನೆಯಲ್ಲಿ ಸುಖ, ಶಾಂತಿ ನೆಲೆಸುತ್ತದೆ. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ನಕಾರಾತ್ಮಕ ಅಂಶಗಳು ದೂರಾಗುತ್ತವೆ.
ಕಾರ್ಯಕ್ಷೇತ್ರದತ್ತ ವಿಶೇಷ ಗಮನ ಹರಿಸುವುದರಿಂದ ಮೇಲಧಿಕಾರಿಗಳಿಂದ ಉತ್ತಮ ಪ್ರಶಂಸೆ ಗಳಿಸುವಿರಿ. ಆದರೆ ಯಾವ ಕಾರಣಕ್ಕೂ ನಿಮ್ಮ ಪ್ರಯತ್ನಗಳು ನೀರಿನಲ್ಲಿ ಹೋಮವಾಗದಂತೆ ನೋಡಿಕೊಳ್ಳಿ. ಜಾಣ್ಮೆಯ ನಡೆಯಿಂದ ಬಂಧು ಮಿತ್ರರಲ್ಲಿ ವೈಮನಸ್ಯ ಉಂಟಾಗುವುದನ್ನು ತಪ್ಪಿಸಬಹುದು. ನಿಮ್ಮ ಏಳ್ಗೆಗೆ ನೆರವಾಗುವವರ ಸಹವಾಸವನ್ನು ಮಾಡಿ.
ಅನಗತ್ಯ ವದಂತಿಗಳಿಗೆ ಕಿವಿಗೊಡಬೇಡಿ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಮೂಡಿಸಿಕೊಳ್ಳದ ಹೊರತು ಅಭ್ಯುದಯ ಸಾಧ್ಯವಿಲ್ಲ. ಯಾವ ಕಾರಣಕ್ಕೆ ವ್ಯಾಸಂಗದಲ್ಲಿ ಹಿಂದುಳಿದಿದ್ದೀರಿ ಎಂಬುದನ್ನು ಅರಿತು ಸರಿಪಡಿಸಿಕೊಳ್ಳಲು ತಜ್ಞರ ಸಲಹೆ ಪಡೆಯಿರಿ. ಅಂದುಕೊಂಡ ಗುರಿ ಮುಟ್ಟಲು ಶಿಸ್ತುಬದ್ಧ ಜೀವನ ಮತ್ತು ಏಕಾಗ್ರತೆ ಅತ್ಯವಶ್ಯ.
ಕನ್ಯಾ (ಉತ್ತರಫಲ್ಗುಣಿ 2,3,4, ಹಸ್ತ ಮತ್ತು ಚಿತ್ತ 1,2):
ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಸಹೋದ್ಯೋಗಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ನಡೆ ಸುಲಭವಲ್ಲ. ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧರಾಗಿ. ವ್ಯಾಪಾರಿಗಳು ತಮ್ಮ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಹಾಗೂ ಪಾಲುದಾರರ, ಸೇವಕ ವರ್ಗದವರ ಅಸಹಕಾರವನ್ನೂ ಎದುರಿಸುವ ಸಾಧ್ಯತೆ ಹೆಚ್ಚು.
ಆದರೆ ನಿರಂತರ ಪ್ರಯತ್ನದಿಂದ ಯಶಸ್ಸು ಶತಸ್ಸಿದ್ಧ. ಆತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ. ಅನಗತ್ಯ ವಿವಾದಗಳಿಂದ ದೂರವಿರಿ. ಕುಟುಂಬ ಸದಸ್ಯರ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ. ಅದರಲ್ಲೂ ಅಲರ್ಜಿ ಮತ್ತು ಸೋಂಕಿನಿಂದ ಪದೇ ಪದೇ ಭಾದಿತರಾಗುತ್ತಿದ್ದರೆ ಜಾಗರೂಕರಾಗಿರಿ.
ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮತ್ತು ಅಸಂತೋಷ ಉಂಟಾಗುವ ಸಾಧ್ಯತೆ. ವರ್ಷಾಂತ್ಯದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿಯಮಿತ ಲೆಕ್ಕಾಚಾರದಿಂದ ಹಣಕಾಸಿನ ವ್ಯವಹಾರ ಉತ್ತಮವಾಗುತ್ತದೆ.
ವಿದ್ಯಾರ್ಥಿಗಳು ಏಕಾಗ್ರತೆ ಕಳೆದುಕೊಳ್ಳುವ ಕಾರಣ ಅಂದುಕೊಂಡ ಗುರಿಮುಟ್ಟಲು ವಿಫಲರಾಗಬಹುದು. ಉನ್ನತ ವ್ಯಾಸಂಗದಲ್ಲಿ ಮುಂದುವರಿಯಲು ಕೌಶಲಾಭಿವೃದ್ಧಿ ಮುಖ್ಯವೆನಿಸುತ್ತದೆ. ಮುಂದಿನ ಭವಿಷ್ಯದ ಬಗ್ಗೆ ಆಲೋಚಿಸಿ ಮುನ್ನಡೆಯಿರಿ.
ತುಲಾ (ಚಿತ್ತ 3, 4, ಸ್ವಾತಿ ಮತ್ತು ವಿಶಾಖ 1, 2, 3):
ವೃತ್ತಿಭೂಮಿಕೆಯಲ್ಲಿ ಹೊಸ ಅಸೈನ್‌ಮೆಂಟ್‌ಗಳು ಎಡತಾಕುತ್ತವೆ. ಸಮರ್ಪಕ ವ್ಯಕ್ತಿಗಳೊಂದಿಗೆ ಬೆರೆಯುವುದರಿಂದ ಔದ್ಯೋಗಿಕ ಕ್ಷೇತ್ರದಲ್ಲಿ ಉನ್ನತಿ ಹೊಂದುವಿರಿ. ಸಕ್ರಿಯರಾಗಿ ತೊಡಗಿಸಿಕೊಳ್ಳಿ. ಕಲಿಯಲು ಸಾಕಷ್ಟು ಅವಕಾಶವಿದೆ. ವ್ಯಾಪಾರೋದ್ಯಮಿಗಳ ಬೆಳವಣಿಗೆಗೆ ಉತ್ತಮ ಅವಕಾಶವಿದೆ. ಪ್ರಸ್ತುತ ತೊಡಗಿಸಿಕೊಂಡಿರುವ ವ್ಯಾಪಾರ ಕ್ಷೇತ್ರವನ್ನು ಮತ್ತೂ ವಿಸ್ತರಿಸಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಹೊಂದುವಿರಿ.
ಕೆಲವೊಮ್ಮೆ ನಡೆವ ಹಾದಿಯಲ್ಲಿ ಅಡೆತಡೆ ಉಂಟಾದೀತು ಎಚ್ಚರ. ಆದರೆ ಸ್ನೇಹಿತರ ಸಹಕಾರದಿಂದ ಮುನ್ನಡೆಯುವಿರಿ. ನಿಮ್ಮ ಸುತ್ತಮುತ್ತಲ ವರ್ತುಲದಿಂದ ಆದಾಯ ಸಾಧ್ಯತೆಯಿದೆ. ಸಣ್ಣ ಪುಟ್ಟ ತೊಂದರೆಯ ಹೊರತಾಗಿ ವರ್ಷವಿಡೀ ಆರೋಗ್ಯ ಉತ್ತಮವಾಗಿರುತ್ತದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕಾಲಕಳೆಯಲು ಸಮಯ ಸಿಗುವುದು.
ಹೊಸ ವಿಷಯ ಕಲಿಯಲು ಆಸಕ್ತಿ ತೋರಿಸುವಿರಿ. ಯಾವುದೇ ಸನ್ನಿವೇಶವನ್ನು ನಿಭಾಯಿಸಲು ಕೌಟಿಂಬಿಕ ಸಂದರ್ಭವು ಕಾರಣವಾಗುತ್ತದೆ. ನೀವೆಣಿಸಿದ ಕ್ಷೇತ್ರದಲ್ಲಿ ಪರಿಣತಿ ಹೊಂದುವಿರಿ. ಮಾಡುವ ಕೆಲಸದಲ್ಲಿ ಏಕಾಗ್ರತೆಯಿರಲಿ. ವದಂತಿಗಳಿಗೆ ಕಿವಿಗೊಡಬೇಡಿ. ವಿದ್ಯಾರ್ಥಿಗಳು ಅನಪೇಕ್ಷಿತ ವಿಷಯಗಳನ್ನು ಮರೆತು ವ್ಯಾಸಂಗದತ್ತ ಹೆಚ್ಚು ಗಮನ ಹರಿಸಬೇಕು.
ಹಿರಿಯರ ಮತ್ತು ತಜ್ಞರ ಅಭಿಪ್ರಾಯ, ಸೂಕ್ತ ಸಲಹೆ ಪಡೆದು ಮುನ್ನಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಮುಂದಿನ ಆಗುಹೋಗಗಳತ್ತ ಗಮನ ಹರಿಸುವುದರಿಂದ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ.
ವೃಶ್ಚಿಕ (ವಿಶಾಖ 4, ಅನುರಾಧ ಮತ್ತು ಜ್ಯೇಷ್ಠ):
ಹೊಸ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಆ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಸಾಕಷ್ಟು ಸಮಯ ವ್ಯಯ ಮತ್ತು ಪರಿಶ್ರಮವನ್ನು ಹಾಕಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ನಿಮ್ಮ ಅನುಭವ ಸೂಕ್ತ ವೇದಿಕೆಯಾಗುತ್ತದೆ.
ವೃತ್ತಿಪರಿಣಿತರು ಉನ್ನತಿ ಹೊಂದಲು ಮತ್ತೆ ಮತ್ತೆ ಶ್ರಮ ಪಡಬೇಕಾದದ್ದು ಅನಿವಾರ್ಯ. ಔದ್ಯೋಗಿಕ ಕ್ಷೇತ್ರದಲ್ಲಿ ವಿವಾದಗಳನ್ನು ನಿರ್ವಹಿಸಬೇಕಾಗುತ್ತದೆ. ವ್ಯಾಪಾರಿಗಳು ತಮ್ಮ ನಡೆಯಲ್ಲಿ ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ನಿರ್ದಿಷ್ಟ ಗುರಿಯನ್ನು ಸರಿಯಾದ ಸಮಯದಲ್ಲಿ ಮುಟ್ಟುವತ್ತ ಗಮನಹರಿಸಿ. ಇಲ್ಲವಾದರೆ ಅನಗತ್ಯವಾಗಿ ದಂಡ ಪಾವತಿಸಬೇಕಾಗುತ್ತದೆ ಅದರೊಂದಿಗೆ ಕಳಂಕದ ಹಣೆಪಟ್ಟಿಯನ್ನೂ ಕಟ್ಟಿಕೊಳ್ಳುವಿರಿ. ಹಣಕಾಸಿನ ವ್ಯವಹಾರದಲ್ಲಿ ಲಾಭ ನಷ್ಟ ಲೆಕ್ಕಾಚಾರದತ್ತ ಗಮನವಿರಲಿ.
ಯಾರೊಬ್ಬರ ಆಮಿಷಕ್ಕೂ ಒಳಗಾಗಬೇಡಿ. ವರ್ಷವಿಡೀ ಆರೋಗ್ಯದತ್ತ ಗಮನವಿರಲಿ. ವಿನಾಕಾರಣ ಮಾತುಕತೆ, ವಿವಾದ ಮತ್ತು ಅನಗತ್ಯ ಸಂದೇಹಗಳಿಗೆ ಎಡೆಮಾಡಿಕೊಡಬೇಡಿ. ಅದರಿಂದ ಮನಸ್ಸಿನ ಸ್ವಾಸ್ಥ್ಯ ಹಾಳಾಗುತ್ತದೆ. ಕಷ್ಟನಷ್ಟದ ಸಂದರ್ಭಗಳು ಎದುರಾಗುವ ಸಾಧ್ಯತೆ ಹೆಚ್ಚು. ಆಂತರಿಕವಾಗಿ ಸರಳವಾಗಿದ್ದರೂ ಇತರರಿಗೆ ನಿಮ್ಮ ಸ್ವಭಾವ ಗಡುಸೆನಿಸಬಹುದು.
ಕಷ್ಟಕರ ಸನ್ನಿವೇಶಗಳಲ್ಲಿ ಆಪ್ತ ಸ್ನೇಹಿತರು ನಿಮಗೆ ನೆರವಾಗುವರು. ಏಕತಾನತೆಯಿಂದ ಹೊರಬಂದು ಎಲ್ಲರೊಡನೆ ಬೆರೆಯಿರಿ. ಮನಸ್ಸನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಯಾರ ಸಖ್ಯದಿಂದ ನಿಮಗೆ ಕೇಡಾಗುತ್ತದೆ ಎನಿಸುತ್ತದೆಯೇ ಅಂತಹವರ ಸಹವಾಸದಿಂದ ದೂರವಿರಿ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಿಸಬೇಕು. ತಮ್ಮ ಗುರಿಯತ್ತ ಗಮನ ಹರಿಸಬೇಕು. ವ್ಯಾಸಂಗದಲ್ಲಿ ಏಕಾಗ್ರತೆಯನ್ನು ಹೊಂದಿ.
ಧನು (ಮೂಲ, ಪೂರ್ವಾಷಾಢ ಮತ್ತು ಉತ್ತರಾಷಾಢ 1):
ಸೇವಾಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚು. ಕಾರ್ಯಕ್ಷೇತ್ರದಲ್ಲಿ ಅಡೆತಡೆಗಳು ಹೆಚ್ಚಾಗುವ ಸಾಧ್ಯತೆ. ನಿಯಮಿತವಾಗಿ ಕಾರ್ಯದತ್ತ ಗಮನ ಹರಿಸುವುದರಿಂದ ಸಂಕಷ್ಟದ ಸಮಯದಿಂದ ಪಾರಾಗುವಿರಿ. ನಿಮ್ಮ ಸೋಲಿನ ಕಾರಣವನ್ನು ನೀವೇ ಅವಲೋಕಿಸಿಕೊಂಡು ಸರಿಪಡಿಸಿಕೊಳ್ಳಿ.
ಯಾವುದೇ ವಿಷಯ, ವಿಚಾರವನ್ನು ಅನುಷ್ಠಾನಗೊಳಿಸುವ ಮುನ್ನ ಲೆಕ್ಕಾಚಾರದಿಂದ ಮುನ್ನಡೆಯಿರಿ. ಸ್ವಲ್ಪ ತಾಳ್ಮೆ ವಹಿಸಿ ಮುನ್ನಡೆದರೆ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಕಾಣುವಿರಿ. ಹಣಕಾಸಿನ ವಿಚಾರದಲ್ಲಿ ಖರ್ಚು, ವೆಚ್ಚ ಅಧಿಕವಾಗುತ್ತದೆ. ಯಾವ ಕಾರಣಕ್ಕೂ ಅನಗತ್ಯ ಕೈಸಾಲಕ್ಕೆ ಮುಂದಾಗಬೇಡಿ. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಸ್ನೇಹಿತರು ಮತ್ತು ಆಪ್ತರ ಸಲಹೆ ಪಡೆದು ಮುನ್ನಡೆಯಿರಿ.
ಔಷಧೋಪಚಾರಗಳನ್ನು ಸರಿಯಾಗಿ ಮಾಡಿಕೊಳ್ಳಿ. ಪಥ್ಯದ ವಿಚಾರದಲ್ಲಿ ಗಮನವಿರಲಿ. ವರ್ಷವಿಡೀ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ನಿಮ್ಮ ಪ್ರಯತ್ನದಲ್ಲಿ ಏಕಾಗ್ರತೆಯಿರಲಿ ಇಲ್ಲವಾದರೆ ಅನರ್ಥ ಸಂಭವಿಸೀತು ಎಚ್ಚರ.
ಕ್ಲಿಷ್ಟಕರ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಲು ಹಿರಿಯರ ಮತ್ತು ಪ್ರೀತಿಪಾತ್ರರ ನೆರವನ್ನು ಪಡೆದುಕೊಳ್ಳಿ. ಶಿಸ್ತುಬದ್ಧ ಜೀವನ ನಡೆಸಿದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿಯತ್ತ ಗಮನ ಹರಿಸಿ. ಉನ್ನತ ವ್ಯಾಸಂಗದತ್ತ ಗಮನ ಹರಿಸಲು ಬಯಸುವವರು ಮತ್ತಷ್ಟು ಶ್ರಮ ಪಡಬೇಕು.
ಮಕರ (ಉತ್ತರಾಷಾಢ 2,3,4, ಶ್ರವಣ ಮತ್ತು ಧನಿಷ್ಟ 1,2):
ವೃತ್ತಿಪರಿಣತರಿಗಿದು ಸಕಾಲ. ಸ್ವಲ್ಪ ಶ್ರಮ ವಹಿಸಿದರೂ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಗುರಿ ಮುಟ್ಟಲು ಮತ್ತಷ್ಟು ಪ್ರಯತ್ನಶೀಲರಾಗಿ. ವ್ಯಾಪಾರಿಗಳು ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು. ಬಿಸಿಷೆಡ್ಯೂಲ್ ನಿಮ್ಮದಾಗಲಿದೆ.
ತಜ್ಞರೊಂದಿಗೆ ಪದೇ ಪದೇ ಸಮಾಲೋಚಿಸುವ ಮೂಲಕ ಉತ್ತಮ ಅಭಿವೃದ್ಧಿ ಕಾಣುವಿರಿ. ಆದಾಯ ಉತ್ತಮವಾಗಲಿದೆ. ವ್ಯಾಪಾರ ಅಭಿವೃದ್ಧಿಯಾಗಲಿದೆ. ಖರ್ಚುವೆಚ್ಚದತ್ತ ಗಮನವಿರಲಿ. ವಂಚಿಸುವ ಜಾಲದತ್ತ ಗಮನವಿರಲಿ. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಈ ವರ್ಷ ಉತ್ತಮವಾಗಲಿದೆ. ನಕಾರಾತ್ಮಕ ಚಿಂತನೆಗಳನ್ನು ದೂರವಿಡಿ. ಕೌಟುಂಬಿಕ ನೆಮ್ಮದಿಯನ್ನು ಕಾಣುವಿರಿ.
ಗೊತ್ತುಗುರಿಯಲ್ಲದ ಓಡಾಟ ಬೇಡ. ಸ್ನೇಹಿತರು ಮತ್ತು ಬಂಧುಗಳೊಂದಿಗೆ ಸ್ನೇಹಕೂಟದಲ್ಲಿ ಭಾಗವಹಿಸುವಿಕೆ ಖುಷಿಯನ್ನು ತರುತ್ತದೆ. ಕೆಲವೊಮ್ಮೆ ಚಂಚಲಚಿತ್ತರಾಗುವ ಕಾರಣ ಸಂಬಂಧಗಳು ಕೆಡಬಹುದು.
ಸಕಾರಾತ್ಮಕ ಬೆಳವಣಿಗೆಗೆ ಆಧ್ಯಾತ್ಮಿಕ ಮತ್ತು ಚಾರಿತ್ರಿಕ ಅಧ್ಯಯನ ಪೂರಕವಾಗುತ್ತದೆ. ಕ್ಲಿಷ್ಟ ಸಂದರ್ಭವನ್ನು ಜಾಗರೂಕತೆಯಿಂದ, ಜಾಣ್ಮೆಯಿಂದ ನಿಭಾಯಿಸಿ. ವಿದ್ಯಾರ್ಥಿಗಳಿಗೆ ಉತ್ತಮ ಏಳ್ಗೆಯಿದೆ. ಉನ್ನತ ವ್ಯಾಸಂಗದಲ್ಲಿ ಪ್ರಗತಿ ಕಾಣುವಿರಿ.
ಕುಂಭ (ಧನಿಷ್ಟ 3, 4, ಶತಭಿಷ ಮತ್ತು ಪೂರ್ವಾಭಾದ್ರ 1, 2, 3)
ಜಾಹಿರಾತು, ಮಾರ್ಕೆಟಿಂಗ್ ಅಥವಾ ಫೈನ್ ಆರ್ಟ್ಸ್ ಕ್ಷೇತ್ರದಲ್ಲಿ ನೀವಿದ್ದರೆ ಉತ್ತಮ ಫಲಿತಾಂಶ ಕಾಣುವಿರಿ. ಸನ್ನಿವೇಶಗಳನ್ನು ಸಮರ್ಪಕವಾಗಿ ನಿರ್ವಹಿಸುವ ನಿಮ್ಮ ಕೌಶಲ ಪ್ರಗತಿಗೆ ಪೂರಕ. ಸೂಕ್ತ ಸಲಹೆ ಮತ್ತು ಸಹಾಯ ಪಡೆಯುವುದರಿಂದ ಹಿಡಿದ ಕೆಲಸವನ್ನು ಸಾಧಿಸುವಿರಿ.
ಕಾರ್ಯಕ್ಷೇತ್ರದಲ್ಲಿ ಸೌಹಾರ್ಧಯುತ ವಾತಾವರಣವಿರುತ್ತದೆ. ವ್ಯಾಪಾರಸ್ಥರು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಸಾಲದ ಬಾಧೆಯಿಂದ ಮುಕ್ತರಾಗುವಿರಿ. ಲೆಕ್ಕಾಚಾರ ಹಾಗೂ ವಿವೇಕದಿಂದ ಷೇರು ಕ್ಷೇತ್ರದಲ್ಲಿ ಬಂಡವಾಳ ಹೂಡುವುದರಿಂದ ಉತ್ತಮ ಲಾಭ ಗಳಿಸುವಿರಿ. ಆರೋಗ್ಯದತ್ತ ಗಮನವಿರಲಿ.
ಕಾಲಕಾಲಕ್ಕೆ ತಕ್ಕಂತೆ ವೈದ್ಯರ ಸಲಹೆ ಪಡೆಯಿರಿ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಗುರಿ ಸಾಧನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಅಡ್ಡಿಯಾಗಬಲ್ಲದು. ಮನೋಚಾಂಚಲ್ಯದಿಂದ ದೂರಾಗಿ ಹಿಡಿದ ಕಾರ್ಯದಲ್ಲಿ ಗಮನ ಹರಿಸಿ.
ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬಿಝಿಯಾಗಿರುತ್ತೀರಿ. ವಿದ್ಯಾರ್ಥಿಗಳು ಅವಕಾಶಗಳಿಗಾಗಿ ಎದುರು ನೋಡಬೇಕು. ಹಿರಿಯರ ಸಲಹೆ ಪಡೆಯಬೇಕು.
ಕಠಿಣ ಪರಿಶ್ರಮದಿಂದ ಹಿಡಿದ ಗುರಿಯನ್ನು ಸಾಧಿಸಬಹುದು. ಸಂಶೋಧನಾ ಕ್ಷೇತ್ರದಲ್ಲಿರುವವರು ಸರಿಯಾದ ಸಲಹೆ, ಸಹಾಯ ಪಡೆಯಬೇಕು.
ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ ಮತ್ತು ರೇವತಿ):
ವೃತ್ತಿಪರಿಣಿತರಿಗಿದು ಸಕಾಲ. ಉನ್ನತಿ ಹೊಂದುವಿರಿ. ಔದ್ಯೋಗಿಕ ಕ್ಷೇತ್ರದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ವಿನಯಶೀಲ ಗುಣದ ಕಾರಣ ಅಂತಹ ಸಂದರ್ಭಗಳನ್ನು ಸಮರ್ಪಕವಾಗಿ ಎದುರಿಸುವಿರಿ. ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುವ ಮೂಲಕ ಗುರಿಸಾಧಿಸುವಿರಿ.
ಅದೆಷ್ಟೇ ಪ್ರತಿರೋಧವಿದ್ದಾಗ್ಯೂ ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಲಾಭ ಹೊಂದುವಿರಿ. ಆದರೆ ತಾಳ್ಮೆ ಅತ್ಯಗತ್ಯ. ಹಣಕಾಸಿನ ಸ್ಥಿತಿ ಉತ್ತಮವಾಗುತ್ತದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿರಿ. ನೀವೇನಾದರೂ ಅಲರ್ಜಿ ಮತ್ತು ಸೋಂಕಿಗೆ ಪದೇ ಪದೇ ತುತ್ತಾಗುತ್ತಿದ್ದರೆ ಎಚ್ಚರವಿರಲಿ.
ಮನೆಯಲ್ಲಿರುವ ಹಿರಿಯರ ಆರೋಗ್ಯದತ್ತ ಗಮನವಿರಲಿ. ಶೈಕ್ಷಣಿಕ ಕ್ಷೇತ್ರದಲ್ಲಿ ಆಸ್ಥೆ ವಹಿಸುವುದರಿಂದ ಉತ್ತಮ ಫಲಿತಾಂಶ ಕಾಣುವಿರಿ. ಸಹನಶೀಲರಾಗಿ, ದುಡುಕು ಪ್ರವೃತ್ತಿ ಬೇಡ. ಅನಗತ್ಯ ಸಂದೇಹ, ಅನುಮಾನಗಳಿಗೆ ಆಸ್ಪದಕೊಡಬೇಡಿ. ಹಾಗೇನಾದರೂ ಕೊಟ್ಟರೆ ಅನಗತ್ಯ ವಿವಾದ, ಜಗಳಕ್ಕೆ ಕಾರಣವಾಗುತ್ತದೆ. ನಿಮ್ಮ ನಡೆ, ನುಡಿಯತ್ತ ಎಚ್ಚರವಿರಲಿ.
ನಿಮ್ಮ ಚಟುವಟಿಕೆಗಳಿಂದ ಬೇರೆಯವರ ಕುದೃಷ್ಟಿಗೆ ಕಾರಣರಾಗುವುದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗದಂತಾಗಬಹುದು. ಸಂಬಂಧ ಸುಧಾರಣೆಯತ್ತ ಗಮನವಿರಲಿ. ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ನಡೆಸಬೇಕು.
ಕಷ್ಟಪಟ್ಟು ವ್ಯಾಸಂಗದಲ್ಲಿ ತೊಡಗಬೇಕು. ಏಕಾಗ್ರತೆ ಅಳವಡಿಸಿಕೊಳ್ಳಲು ಗುರು, ಹಿರಿಯರ ಮತ್ತು ಹಿತೈಷಿಗಳ ಸಲಹೆ ಪಡೆದುಕೊಳ್ಳಿ.
Subscribe to:
Post Comments (Atom)
No comments:
Post a Comment