Thursday, 10 January 2019

ಪಾಯ ತೆಗೆವ ಪದ್ಧತಿ ಶಾಸ್ತ್ರ ಸಮ್ಮತವಾಗಿರಲಿ

ಪಾಯ ತೆಗೆವ ಪದ್ಧತಿ ಶಾಸ್ತ್ರ ಸಮ್ಮತವಾಗಿರಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪೂರ್ಣವಾದ ಫಲ ಸಿಗಬೇಕೆಂದರೆ ಮಾರ್ಕಿಂಗ್ ಮತ್ತು ಪಾಯ ತೆಗೆಯುವಾಗ ಕೆಲವೊಂದು ಮುಖ್ಯವಾದ ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಟ್ಟಡ ನಿರ್ಮಿಸಲು ಈಗಾಗಲೇ ಸಿದ್ಧಪಡಿಸಿರುವ ನಕ್ಷೆಯ ಪ್ರಕಾರ ಮಾರ್ಕಿಂಗ್ ಮಾಡುವಾಗ ತೆಗೆದುಕೊಳ್ಳಬೇಕಾದ ವಾಸ್ತು ಶಾಸ್ತ್ರದ ಜಾಗೃತ ನಿಯಮಗಳು ಹೀಗಿವೆ. * ನಿವೇಶನದಲ್ಲಿ ನಕ್ಷೆಯ ಪ್ರಕಾರ ಅಳತೆ ಮಾಡಿ ಮಾರ್ಕಿಂಗ್ ಮಾಡಬೇಕಾರೆ, ನೆಲಕ್ಕೆ ಕೆಲವೊಂದು ಸ್ಟೀಲ್ ರಾಡ್‌ಗಳನ್ನು ಸಿಕ್ಕಿಸಬೇಕಾಗುತ್ತದೆ. ಹೀಗೆ ಸಿಕ್ಕಿಸುವ ಸ್ಟೀಲ್ ರಾಡನ್ನು ಮೊದಲು ನೈಋತ್ಯ ಭಾಗದಲ್ಲಿ ಪೂರ್ವಕ್ಕೆ ಮುಖ ಮಾಡಿ ಸಿಕ್ಕಿಸಬೇಕು. ನಂತರದ್ದು ಕ್ರಮವಾಗಿ ಆಗ್ನೇಯ, ವಾಯುವ್ಯ ಮತ್ತು ಈಶಾನ್ಯ ಮೂಲೆಯಲ್ಲಿ ಸಿಕ್ಕಿಸಬೇಕಾಗುತ್ತದೆ. * ಈ ಸ್ಟೀಲ್ ರಾಡ್‌ನಿಂದ ಸ್ಟೀಲ್ ರಾಡ್‌ಗೆ ದಾರವನ್ನು ಕಟ್ಟುವಾಗ (ಅಂದರೆ ಮಾರ್ಕ್ ಮಾಡಲು ದಾರ ಕಟ್ಟಬೇಕಾಗುತ್ತದೆ). ಮೊದಲ ದಾರ ನೈಋತ್ಯದಿಂದ ಆಗ್ನೇಯಕ್ಕೂ, ಎರಡನೆಯದಾಗಿ ನೈಋತ್ಯದಿಂದ ವಾಯುವ್ಯಕ್ಕೂ, ಮೂರನೆಯದಾಗಿ ಆಗ್ನೇಯದಿಂದ ಈಶಾನ್ಯಕ್ಕೂ ಮತ್ತು ಕಡೆಯದಾಗಿ ವಾಯುವ್ಯದಿಂದ ಈಶಾನ್ಯಕ್ಕೆ ಕಟ್ಟುವುದು ಶಾಸ್ತ್ರ ಸಮ್ಮತ. * ಹೀಗೆ ಕಟ್ಟಿದ ದಾರದ ಮೇಲೆ ಪೌಡರ್ ಹಾಕಿ ಮಾರ್ಕ್ ಮಾಡಬೇಕಾಗುತ್ತದೆ. ಈ ಪೌಡರ್ ಹಾಕುವ ಕ್ರಮವೂ ಈ ರೀತಿಯಾಗಿರುವುದು ಒಳ್ಳೆಯದು. ಅಂದರೆ ಪೌಡರ್ ಹಾಕುವ ವ್ಯಕ್ತಿಯ ಮುಖ ಪೂರ್ವ ಅಥವಾ ಉತ್ತರಕ್ಕೆ ಮಾಡಿರಬೇಕು. ಕ್ರಮವಾಗಿ ನೈಋತ್ಯದಿಂದ ಆಗ್ನೇಯ, ನೈಋತ್ಯದಿಂದ ವಾಯುವ್ಯ, ಆಗ್ನೇಯದಿಂದ ಈಶಾನ್ಯ ಮತ್ತು ವಾಯುವ್ಯದಿಂದ ಈಶಾನ್ಯ ಈ ಕ್ರಮವಾಗಿ ಮಾಡುವುದು ಶುಭಕರ. ಪಾಯ ತೆಗೆಯುವಾಗ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ * ಮಾರ್ಕಿಂಗ್ ನಂತರದಲ್ಲಿ ಭೂಮಿಯನ್ನು ಅಗೆಯುವ ಕೆಲಸ ಶುರು ಆಗುತ್ತದೆ. ಹೀಗೆ ಶುರುವಾದ ಕೆಲಸ ಮೊದಲು ಈಶಾನ್ಯ ಭಾಗದಲ್ಲಿ ಆಗಬೇಕು. ಅದು ಪಾಯ ಆಗಬಹುದು, ಪಿಲ್ಲರ್‌ನ ಫಿಟ್ ಆಗಬಹುದು, ನೀರಿನ ಸಂಪ್ ಆಗಬಹುದು. ಒಟ್ಟಾರೆ ಮೊದಲು ಭೂಮಿ ಅಗೆಯುವ ಕೆಲಸ ಈಶಾನ್ಯದಿಂದಲೇ. ನಂತರದಲ್ಲಿ ಈಶಾನ್ಯದಿಂದ-ಉತ್ತರ-ವಾಯುವ್ಯ, ಈಶಾನ್ಯದಿಂದ-ಪೂರ್ವ-ಆಗ್ನೇಯ, ವಾಯುವ್ಯದಿಂದ-ಪಶ್ಚಿಮ-ನೈಋತ್ಯ, ಆಗ್ನೇಯದಿಂದ-ದಕ್ಷಿಣ-ನೈಋತ್ಯ. ಇದೇ ಕ್ರಮದಲ್ಲಿ ಭೂಮಿ ಅಗೆಯುವುದು ಶಾಸ್ತ್ರ ಸಮ್ಮತ. * ಹೀಗೆ ತೆಗೆದಂತಹ ಮಣ್ಣನ್ನು ನೈಋತ್ಯ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲೇ ಹಾಕಬೇಕು. ಸ್ವಲ್ಪ ಭಾಗ ಮಾತ್ರ ಆಗ್ನೇಯ ಮತ್ತು ವಾಯುವ್ಯದಲ್ಲಿ ಹಾಕಬಹುದು. ಆದರೆ ಯಾವುದೇ ಕಾರಣಕ್ಕೂ ಉತ್ತರ, ಪೂರ್ವ ಮತ್ತು ಈಶಾನ್ಯದಲ್ಲಿ ಹಾಕಬಾರದು. * ಇದಾದ ನಂತರ ಕಟ್ಟಡ ನಿರ್ಮಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಶೇಖರಿಸಬೇಕಾಗುತ್ತದೆ. ಅಂತಹ ಕಚ್ಚಾವಸ್ತುಗಳಲ್ಲಿ ಮೊದಲನೆಯದಾಗಿ ಮರಳನ್ನು ನೈಋತ್ಯ ಭಾಗದಲ್ಲಿ ಹಾಕಬೇಕು. * ಉಳಿದ ಯಾವುದೇ ಕಚ್ಚಾ ವಸ್ತುಗಳನ್ನು ನೈಋತ್ಯ, ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಮಾತ್ರ ಶೇಖರಿಸಬೇಕು. * ಯಾವುದೇ ಕಾರಣಕ್ಕಾಗಿ ಈಶಾನ್ಯ, ಪೂರ್ವ ಮತ್ತು ಉತ್ತರದಲ್ಲಿ ವಸ್ತುಗಳನ್ನು ಶೇಖರಿಸಬಾರದು. ಈ ರೀತಿ ತೆಗೆದ ಪಾಯದಲ್ಲಿ ಕಲ್ಲು ಜೋಡಣೆಯಾಗಲಿ ಅಥವಾ ಪಿಲ್ಲರ್ ಪುಟಿಂಗ್ ಕಾಂಕ್ರೀಟ್ ಆಗಲಿ ಮಾಡಬೇಕಾದರೆ, ಮೊದಲು ನೈಋತ್ಯ ಮೂಲೆ, ನಂತರ ಕ್ರಮವಾಗಿ ದಕ್ಷಿಣ, ಪಶ್ಚಿಮ, ಆಗ್ನೇಯ, ವಾಯುವ್ಯ, ಪೂರ್ವ, ಉತ್ತರ ಮತ್ತು ಕಡೆಯದಾಗಿ ಈಶಾನ್ಯದಲ್ಲಿ ಮಾಡಬೇಕು. ಈ ಎಲ್ಲ ಶಾಸ್ತ್ರ ಸಮ್ಮತವಾದ ಕ್ರಮಗಳನ್ನು ಅನುಸರಿಸುವುದರಿಂದ ಕಟ್ಟಡ ನಿರ್ಮಾಣ ಸುಲಲಿತವಾಗಿ ನಡೆದು ಎಲ್ಲ ಶುಭವಾಗುತ್ತದೆ.

No comments:

Post a Comment