Thursday 10 January 2019

ಬಲಶಾಲಿ ಮಖೆ ನಕ್ಷತ್ರ

ಬಲಶಾಲಿ ಮಖೆ ನಕ್ಷತ್ರ ಮಖೆ ನಕ್ಷತ್ರ ಪಲ್ಲಕಿ ಆಕಾರದಾಗಿದ್ದು, 5 ನಕ್ಷತ್ರಗಳಿಂದ ಸೇರಿದ ನಕ್ಷತ್ರ ಆಗಿದೆ. ನಕ್ಷತ್ರದ ದೇವತೆ ಪಿತ ಸಮೂಹ. ಈ ನಕ್ಷತ್ರದವರು ತಮ್ಮ ಹೆಸರಿನ ಮೊದಲ ಅಕ್ಷರವನ್ನು ಮ, ಮಿ, ಮು, ಮೆ ಗಳಿಂದ ಆರಂಭಿಸಿದರೆ ಒಳ್ಳೆಯದು. ಜೈನರ 5ನೇ ತೀರ್ಥಂಕರರು ಸುಮಿತಿನಾಥ ಮತ್ತು ಭಾರತದ ಪಿತಾಮಹಾ ಮಹಾತ್ಮ ಗಾಂಧೀಜಿಯವರ ಜನ್ಮ ನಕ್ಷತ್ರ ಇದೇ ಆಗಿರುತ್ತದೆ. ಈ ನಕ್ಷತ್ರದವರು ಪಂಚಮುಖಿ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು. ಈ ನಕ್ಷತ್ರದವರು ಬಲಶಾಲಿಗಳು, ದಪ್ಪ ತುಟಿ , ಅಗಲವಾದ ಹಣೆ ಇರತಕ್ಕವರೂ, ಕೋಪ ಸ್ವಭಾವದವರಾದರೂ ತಂದೆ, ತಾಯಿಯವರ ಮೇಲೆ ಬಹಳ ಭಕ್ತಿ ಇರತಕ್ಕವರು ಆಗುವರು. ಸ್ತ್ರೀ ಆಗಿದ್ದರೆ ತಂದೆ, ತಾಯಿ ಗುರು ಹಿರಿಯರ ಬಗ್ಗೆ ವಿಶೇಷ ಭಕ್ತಿ ಉಳ್ಳವರೂ ಭಾಗ್ಯವಂತರು. ಎಲ್ಲ ವರ್ಗದವರ ಮೇಲೆ ಹೊಂದಿಕೊಂಡು ಹೋಗತಕ್ಕವರು. ಹಾಗಾಗಿ ಇದು ಮಹಾನಕ್ಷತ್ರ ಆಗಿ ಪೂರ್ಣ ಜನ್ಮಕುಂಡಲಿ ನೋಡುವ ಸಂದರ್ಭ ಬರಲಾರದು. ವಿವಾಹ ಆಗಬಹುದು. ಆದರೆ ಸಗೋತ್ರ, ಒಂದೇ ನಾಡಿ ಆಗಿದ್ದು ಹತ್ತಿರದ ಸಂಬಂಧಿಕರಾದರೆ ರಕ್ತದ ಗುಂಪು ಪರಿಶೀಲಿಸಿ ವಿವಾಹ ಆಗತಕ್ಕದ್ದು. ಈ ನಕ್ಷತ್ರದಲ್ಲಿ ಪ್ರಥಮ ಋತುಮತಿ ಆದರೆ ಸಂಗೀತ ಪ್ರಿಯಳೂ, ತಂದೆ, ತಾಯಿಯವರ ಮೇಲೆ ತುಂಬಾ ಪ್ರೀತಿ ಇರತಕ್ಕವಳೂ, ಗೌರವಾನ್ವಿತಳೂ, ಧನಧಾನ್ಯ ಸಂಪತ್ತು ಉಳ್ಳವಳೂ ಆಗುವಳು. ಈ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳಿಗೆ ಪ್ರಥಮ ಸರಸ್ವತಿಮಾತೆ ಎಂದರೆ ಅದನ್ನೇ ಮಾತದೇವೋಭವ ಎನ್ನುವರು. ಶಾಲೆಗೆ ಹೋಗುವಾಗ ತಾಯಿಯ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆದುಕೊಂಡು ಹೋಗಬೇಕು. ಹುಟ್ಟಿದ ಮಗುವಿಗೆ ಎರಡು ವರ್ಷಗಳವರೆಗೆ ಬಾಲಾಚೇಷ್ಠೆ ಇದೆ. ಗಣಪತಿ ದೇವರಿಗೆ ಕುಂಕುಮಾರ್ಚನೆ ಮಾಡಿ ಹಣೆಗೆ ಹಚ್ಚಬೇಕು. ನಿಮ್ಮ ಹೆಸರಿನ ಮೊದಲ ಅಕ್ಷರ ಮ, ಮಿ, ಮು, ಮೆ ಗಳಿಂದ ಆರಂಭವಾದ ವೈಢೂರ್ಯ ಹರಳಿನ ಉಂಗುರವನ್ನು ತೋರು ಬೆರಳಲ್ಲಿ ಧರಿಸತಕ್ಕದ್ದು. ಸಮಾಜದಲ್ಲಿ ಗಣ್ಯವ್ಯಕ್ತಿ ಆಗಬೇಕಾದರೆ ಸಾಧಕತಾರೆಗಳಾದ ಸ್ವಾತಿ(ರು ರೆ ರೊ) ಶತಃಭಿಷ(ಸ ಸಿ ಸು) ಆರಿದ್ರ(ಕು ಘ) ಅಕ್ಷರಗಳಿಂದ ಆರಂಭವಾದ ಹೆಸರು ಇಡತಕ್ಕದ್ದು. ಈ ನಕ್ಷತ್ರದ ವ್ಯಕ್ತಿ ಎಷ್ಟೇ ಪ್ರಭಾವಿತನಾದರೂ, ತಂದೆ ತಾಯಿಯವರನ್ನು ಮರೆಯಬಾರದು. ಊರಿಗೆ ಅರಸನಾದರೂ ತಾಯಿಗೆ ಮಗ ಎಂಬ ಗಾದೆ ಮಾತು ಅನ್ವಯಿಸುತ್ತದೆ. ಯಾವ ತಿಂಗಳ ಹುಣ್ಣಿಮೆ ದಿನ ಮಖೆ ನಕ್ಷತ್ರ ಇರುತ್ತದೋ ಅದನ್ನೇ ಮಾಘಮಾಸ ಎನ್ನುವರು. ಸಾಮಾನ್ಯವಾಗಿ ಜನವರಿ-ಫೆಬ್ರವರಿ ತಿಂಗಳಲ್ಲಿ ಬರುವುದು. ಹುಣ್ಣಿಮೆ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡಿದರೆ ವಿಶೇಷ ಫಲ ಸಿಗಲಿದೆ. ಅದೇ ರೀತಿ ಅಮವಾಸ್ಯೆಯ ದಿನ ಹಿರಿಯರ ಬಗ್ಗೆ ಸ್ಮರಿಸತಕ್ಕದ್ದು. ವಿದ್ಯೆ ಕ್ಷೇತ್ರದಲ್ಲಿ ವೈದಕೀಯ, ಮಾಹಿತಿ ಕ್ಷೇತ್ರ, ತರ್ಕಶಾಸ್ತ್ರ, ಕಲೆ, ಸಾಹಿತ್ಯ, ರಾಜಕೀಯ ಶಾಸ್ತ್ರ ಹಿಡಿಸುವುದು. ವ್ಯಾಪಾರ ವ್ಯವಹಾರವಾದರೆ ಔಷಧ, ವಿದ್ಯುತ್, ಸಿಮೆಂಟ್, ಅಗ್ನಿ ಸಂಬಂಧ ವಸ್ತುಗಳು ಹಿಡಿಸುವುವು. ಜ್ಯೇಷ್ಠಮಾಸ, ದಶಮಿ ತಿಥಿ, ಮೂಲ ನಕ್ಷತ್ರ ಇರುವ ದಿನಗಳು, ಘಾತ ಆಗಿವೆ. ಯಾವ ಕಾರ್ಯಗಳನ್ನು ಮಾಡಬಾರದು. ಮಾಘ ಮಾಸದಲ್ಲಿ ಕೃಷ್ಣ ಪಂಚಮಿ ತಿಥಿ ಮತ್ತು ಶುಕ್ಲಷಷ್ಠಿ ದಿನಗಳು ಶೂನ್ಯ ತಿಥಿಗಳಾಗಿವೆ. ದೇವತಾದಿಕಾರ್ಯಗಳು ನಿಷಿದ್ಧ. ವಶೀಕರಣ ವಿದ್ಯೆ, ವ್ಯವಹಾರ ಆರಂಭಿಸಲು, ಸೇವಕರನ್ನು ಆರಿಸಲು ಅಗತ್ಯ ಬಿದ್ದರೆ ವಿವಾಹ ಕಾರ್ಯಗಳಿಗೆ ಉತ್ತಮ ದಿನ ಆಗಿದೆ. ಹುಬ್ಬ(ಬುಧವಾರ) ಪೂರ್ವಾಷಾಢ(ಗುರುವಾರ) ಹೊಸ ಬಟ್ಟೆ ಧರಿಸಲು ಉತ್ತಮ ದಿನಗಳು. ಹಸ್ತ(ಭಾನುವಾರ) ರೋಹಿಣಿ, ಶ್ರವಣ(ಸೋಮವಾರ) ಭೂಮಿ ಖರೀದಿ, ಗೃಹ ಪ್ರವೇಶ, ಗೃಹಆರಂಭ, ಬಾವಿ ತೋಡಿಸಲು ಮತ್ತು ವಿವಾಹಾದಿ ಮಂಗಳ ಕಾರ್ಯಗಳಿಗೆ ಶುಭ. ಸ್ವಾತಿ(ಶುಕ್ರವಾರ) ಶತಃಭಿಷ(ಬುಧವಾರ) ಎಲ್ಲ ಕಾರ್ಯಗಳಿಗೆ ಉತ್ತಮ ದಿನಗಳು. ಪುಷ್ಯ(ಗುರುವಾರ) ಅನುರಾಧಾ(ಬುಧವಾರ) ರೇವತಿ(ಶುಕ್ರವಾರ) ರಾಜಕೀಯ ಸೇರಲು ಉತ್ತಮ ದಿನಗಳು. ಪ್ರಾರಂಭದ ದೆಸೆ ಕೇತು 7 ವರ್ಷ. 7, 10, 12, 24, 26, 30, 60, 75 ಕಂಟಕ ವರ್ಷಗಳು. ಪೂರ್ಣ ಆಯುಷ್ಯ ಪ್ರಮಾಣ 82 ವರ್ಷ. ಆದರೆ ಗಜಕೇಸರಿಯೋಗ ಇರಬೇಕು. ಮೊದಲನೇ ಪಾದ ಮೇಷ ನವಾಂಶ. ಕ್ರೀಡಾ ಕ್ಷೇತ್ರದಲ್ಲಿ ಹೆಸರು ಪಡೆಯುವರು. 2ನೇ ಪಾದ ವೃಷಭ ನವಾಂಶ. ಬ್ಯಾಂಕ್ ಸಂಬಂಧ ಉದ್ಯೋಗ ಯೋಗ ಫಲವಿದೆ. 3ನೇ ಪಾದ ಮಿಥುನ ನವಾಂಶ. ಗಣಿತ ವಿದ್ಯೆಯಲ್ಲಿ ಪರಿಣಿತರಾಗುವರು. 4ನೇ ಪಾದ ಕರ್ಕ ನವಾಂಶ. ನೀರು, ಹಾಲು, ಲಘು ಪಾನೀಯ ವ್ಯವಹಾರದಿಂದ ಲಾಭ ಬರಲಿದೆ. ಉದ್ಯೋಗಸ್ಥರಿಗೆ ವಿದೇಶ ಪ್ರಯಾಣ ಯೋಗವಿದೆ. ಈ ನಕ್ಷತ್ರದ 30 ರಿಂದ 34 ಗಳಿಗೆ ವಿಷ ಆಹಾರ ಸೇವನೆ ಮಾಡಬಾರದು. ಚಂದ್ರನು ಮೀನರಾಶಿಯಲ್ಲಿದ್ದಾಗ ಕೃತಿಕೆ, ಉತ್ತರೆ ದಿನಗಳಲ್ಲಿ ಪ್ರಯಾಣ ನಿಷಿದ್ಧ. ವಿಶಾಲ, ಪೂರ್ವಬಾದ್ರ, ಪುನರ್ವಸು ದಿನಗಳಲ್ಲಿ ಜಾಗ್ರತೆ ಇರಬೇಕು. ಸಂಖ್ಯಾಶಾಸ್ತ್ರದಂತೆ 7, 16, 25 ತಾರೀಖು ಶುಕ್ರವಾರ ಬಂದರೆ ಶುಭದಾಯಕವಾಗಲಿದೆ. ಮಖೆ ನಕ್ಷತ್ರ ಭಾನುವಾರ, ಸೋಮವಾರ, ಶುಕ್ರವಾರ ದಿನಗಳಲ್ಲಿ ಯಾವ ಕಾರ್ಯ ಮಾಡಬಾರದು. ಪ್ರಯಾಣ ನಿಷಿದ್ಧ. ಮತ್ಯುಯೋಗ ಆಗಲಿದೆ.

No comments:

Post a Comment