Friday, 24 November 2017
ಕಲ್ಯಾಣ ಯೋಗ
ಶುಕ್ರನಿಂದ ಕಲ್ಯಾಣ ಯೋಗ * ಡಾ.ಅನಸೂಯಾ ಎಸ್.ರಾಜೀವ್
ವಿವಾಹ ಎಂಬುದು ಕೇವಲ ಎರಡು ಜೀವಗಳ ಮಿಲನವಲ್ಲ, ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ಅನ್ಯೋನ್ಯವಾಗಿ ಇರುವುದೇ ಆಗಿದೆ. ಮಾನಸಿಕ ಹೊಂದಾಣಿಕೆ ಬಹಳ ಮುಖ್ಯವಾದುದು.
ಉತ್ತಮ ವಿವಾಹ ಜೀವನ ನಡೆಸಬೇಕಾದರೆ ಲಗ್ನ, ಚಂದ್ರ, ಶುಕ್ರ ಪ್ರಬಲವಾಗಿರಬೇಕು. ಲಗ್ನಭಾವ, ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ, ದ್ವಾದಶ ಭಾವಗಳನ್ನು ಲಗ್ನ,ಚಂದ್ರ,ಶುಕ್ರರಿಂದ ನಿರ್ಣಯ ಮಾಡಬೇಕು. ಈ ಭಾವಗಳಲ್ಲಿ ಶುಭಗ್ರಹಗಳು ಸ್ಥಿತರಾದಾಗ ವಿವಾಹ ಜೀವನ ಸುಖಮಯವಾಗಿರುತ್ತದೆ. ಈ ಭಾವಗಳಲ್ಲಿ ಅಶುಭ ಗ್ರಹ, ಪೀಡಿತ, ನೀಚ, ಅಸ್ತ ಗ್ರಹಗಳು ಸ್ಥಿತರಾದರೆ ವಿವಾಹ ಜೀವನವು ಏರುಪೇರಾಗುತ್ತದೆ. ವಿವಾಹ ಜೀವನಕ್ಕೆ ಶುಭ ಗ್ರಹಗಳು ಚಂದ್ರ, ಗುರು, ಶುಕ್ರ. ವಿವಾಹ ಜೀವನಕ್ಕೆ ಅಶುಭಗ್ರಹಗಳು ರವಿ, ರಾಹು, ಶನಿ. ಕುಜ, ಕೇತು, ಬುಧರು ಜೋಕರ್ ಗ್ರಹಗಳು ಅಂದರೆ ಶುಭಾಶುಭಫಲಗಳನ್ನು ಕೊಡುವವರು.
ಕಳತ್ರ ಕಾರಕ ಶುಕ್ರನು ಅಗ್ನಿ ತತ್ತ್ವರಾಶಿಗಳಲ್ಲಿ 'ಮೇಷ, ಸಿಂಹ, ಧನುಸ್ಸು' ಸ್ಥಿತನಾಗಿದ್ದರೆ ವೈವಾಹಿಕ ಜೀವನ ಸುಖಮಯವಾಗಿದ್ದರೂ ಅಲ್ಪಕಾಲದ್ದಾಗಿರುತ್ತದೆ. ಕಳತ್ರಕಾರಕ ಶುಕ್ರನು ಭೂತತ್ತ್ವರಾಶಿಯಲ್ಲಿ ಸ್ಥಿತನಾಗಿದ್ದರೆ(ವೃಷಭ, ಕನ್ಯಾ, ಮಕರ) ವೈವಾಹಿಕ ಜೀವನದ ಕಾಲವು ದೀರ್ಘವಾಗಿದ್ದರೂ ಏರಿಳಿತವಿರುತ್ತದೆ. ಶುಕ್ರನು ವಾಯುತತ್ತ್ವ ರಾಶಿಗಳಾದ ಮಿಥುನ, ತುಲಾ, ಕುಂಭ ರಾಶಿಗಳಲ್ಲಿ ಶುಭ ಫಲಗಳನ್ನು ಕೊಡುತ್ತಾನೆ. ಶುಕ್ರನು ಜಲತತ್ತ್ವ ರಾಶಿಗಳಾದ ಕಟಕ, ವೃಶ್ಚಿಕ, ಮೀನ ರಾಶಿಗಳಲ್ಲಿ ಸ್ಥಿತನಾಗಿದ್ದರೆ ವೈವಾಹಿಕ ಜೀವನದ ಕಾಲಾವಧಿ ದೀರ್ಘವಾಗಿದ್ದರೂ ಕಲಹಮಯವಾಗಿರುತ್ತದೆ.
ವಿವಾಹ ವಿಚ್ಛೇದನಕ್ಕೆ ಏಳನೇ ಮತ್ತು ಎಂಟನೇ ಭಾವಗಳು ಬಾಧಿತವಾಗಿರುತ್ತವೆ. ಲಗ್ನ ಅಥವಾ ಸಪ್ತಮಾಧಿಪತಿ ದುಸ್ಥಾನದಲ್ಲಿ ಸ್ಥಿತವಾದರೆ ವಿವಾಹದಲ್ಲಿ ತೊಂದರೆ. ಶುಕ್ರನಿಗೆ ಅಶುಭ ಚಂದ್ರ ಅಥವಾ ಪೀಡಿತ ಚಂದ್ರನ ಸಂಬಂಧ ಬಂದಾಗ ವಿವಾಹ ವಿಚ್ಛೇದನ. ಸಪ್ತಮಾಧಿಪತಿಗೆ ಫಲಸೂಚಕ ಪಾಪಗ್ರಹಗಳಾದ ರವಿ, ಶನಿ, ರಾಹುವಿನ ಸಂಬಂಧವಿದ್ದರೆ ವಿವಾಹ ಜೀವನದಲ್ಲಿ ದುಃಖ ಉಂಟಾಗುತ್ತದೆ.
ತಡವಾದ ವಿವಾಹಕ್ಕೆ ಶುಕ್ರ, ಸಪ್ತಮಭಾವ ಸ್ಥಿತ ಗ್ರಹ, ಸಪ್ತಮಭಾವ ಯಾವ ರಾಶಿಯ ಗುಣಧರ್ಮದಲ್ಲಿದೆ ಎಂಬುದನ್ನು ನೋಡಬೇಕು. ಕುಜ ಬಲಾಢ್ಯನಾಗಿದ್ದರೆ 30 ವರ್ಷಗಳಲ್ಲಿ ಮದುವೆ. ಕುಜನಿಗಿಂತ ಶನಿ ಬಲಾಢ್ಯನಾದರೆ 30ಕ್ಕಿಂತ ಹೆಚ್ಚನೆ ವಯಸ್ಸಿನಲ್ಲಿ ಮದುವೆ. ಶನಿ ಮತ್ತು ರಾಹು ಬಲಾಢ್ಯರಾದರೆ 35ಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಮದುವೆ ಆಗುವುದು. ಶನಿ, ಶುಕ್ರ, ಚಂದ್ರ, ಗುರು, ರಾಹುವಿನಿಂದ ಮದುವೆ ತಡವಾಗಿ ಆಗುತ್ತದೆ. ಇವರೆಲ್ಲರು ಪಾಪ ಗ್ರಹದಿಂದ ಪೀಡಿತರಾದಲ್ಲಿ ಈ ಸಾಧ್ಯತೆ ಕಂಡುಬರುವುದು.
ದ್ವಿಕಳತ್ರ ಯೋಗವುಂಟಾಗಲು ಚರ ರಾಶಿಗಳು ಹಾಗೂ ದ್ವಿಸ್ವಭಾವ ರಾಶಿಗಳಲ್ಲಿ ಬಹು ಗ್ರಹಗಳು ಸ್ಥಿತರಾದರೆ, ಚರ ನವಾಂಶ ಅಥವಾ ದ್ವಿಸ್ವಭಾವ ನವಾಂಶಗಳಲ್ಲಿ ಬಹುಗ್ರಹ ಸ್ಥಿತರಾದರೆ ದ್ವಿಕಳತ್ರ ಯೋಗವುಂಟಾಗುವುದು. ಸಪ್ತಮಾಧಿಪತಿ ಬಲಾಢ್ಯನಾಗಿ ಚರ, ದ್ವಿಸ್ವಭಾವ ರಾಶಿ ಅಥವಾ ಅಂಶದಲ್ಲಿ ಸ್ಥಿತನಾಗಿದ್ದಲ್ಲಿ ದ್ವಿಕಳತ್ರ ಯೋಗ. ನಾಲ್ಕು ಮತ್ತು ಹನ್ನೆರಡನೇ ಭಾವಗಳು ಪೀಡಿತವಾದರೆ ದ್ವಿಕಳತ್ರ ಯೋಗ ಉಂಟಾಗುತ್ತದೆ. ಸಪ್ತಮಾಧಿಪತಿ ದುಸ್ಥಾನದಲ್ಲಿ ಸ್ಥಿತನಾದರೆ ದ್ವಿಕಳತ್ರ ಯೋಗವುಂಟಾಗುತ್ತದೆ. ಲಗ್ನ ಸಪ್ತಮಗಳಲ್ಲಿ ಪಾಪಗ್ರಹಗಳೇ ಸ್ಥಿತವಾದರೆ ದ್ವಿಕಳತ್ರ ಯೋಗ. ಲಗ್ನ ಅಥವಾ ದ್ವಿತೀಯದಲ್ಲಿ ಪಾಪಗ್ರಹಗಳು ಸ್ಥಿತರಾಗಿ ಸಪ್ತಮ, ಅಷ್ಟಮದಲ್ಲಿ ಪಾಪಿಗಲಿಂದ ಪೀಡಿತರಾದರೆ ದ್ವಿಕಳತ್ರಯೋಗವುಂಟಾಗುತ್ತದೆ.
ಪ್ರೇಮ ವಿವಾಹಕ್ಕೆ ಕುಜ, ಬುಧ, ಶುಕ್ರ, ರಾಹು ಕಾರಕರು. ಸಮಗ್ರಹಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಕುಜ, ಶನಿ, ಶುಕ್ರ, ಬುಧ, ಚಂದ್ರರು ಸಮಗ್ರಹಗಳು. 2,5,7,11ನೇ ಭಾವಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಭಾವಾಧಿಪತಿಗಳು ಬಲಾಢ್ಯರಾಗಲೀ ಅಥವಾ ಪರಿವರ್ತಿತರಾದಾಗ ಪ್ರೇಮವಿವಾಹವುಂಟಾಗುತ್ತದೆ. ವಕ್ರಗ್ರಹಗಳು ಪ್ರೇಮವಿವಾಹ ಕಾರಕರು. ವಕ್ರಗ್ರಹಗಳು ಶಕ್ತಿಯುತವಾಗೆ 2/5/7/11ರಲ್ಲಿದ್ದರೆ ಪ್ರೇಮ ವಿವಾಹ ಉಂಟಾಗುತ್ತದೆ. ರಾಹುವಿನ ಪ್ರಭಾವ ಕುಜ, ಶನಿ, ಚಂದ್ರ, ಬುಧ, ಶುಕ್ರನ ಮೇಲೆ ಇದ್ದಾಗಲೂ ಪ್ರೇಮ ವಿವಾಹವುಂಟಾಗುತ್ತದೆ.
ರಾಶಿ ಕುಂಡಲಿಯಲ್ಲಿ ಸಪ್ತಮ ಭಾವ, ಕಳತ್ರ ಕಾರಕ ಶುಕ್ರನ ಸ್ಥಿತಿ ಗತಿ, ನವಾಂಶದಲ್ಲೂ ಶುಕ್ರನ ಸ್ಥಿತಿಯನ್ನು ನೋಡಿ ವಿವಾಹದ ಬಗ್ಗೆ ಚಿಂತಿಸಬೇಕು. ನವಾಂಶ ಕುಂಡಲಿಯೇ ಮುಖ್ಯವಾಗಿ ವಿವಾಹ ಜೀವನದ ಸ್ಥಿತಿಗತಿಗೆ ಕಾರಣವಾದುದು. ಗ್ರಹ ಕೂಟವನ್ನಷ್ಟೇ ಅಲ್ಲದೆ ಮೇಲೆ ತಿಳಿಸಿದ ಎಲ್ಲ ಅಂಶಗಳನ್ನು ಪರೀಕ್ಷಿಸಿ ವಧೂ, ವರರ ಜಾತಕ ಹೊಂದಾಣಿಕೆಯನ್ನು ಮಾಡಬೇಕು. ಆಗ ವೈವಾಹಿಕ ಜೀವನ ದೀರ್ಘಕಾಲ ಸುಖವಾಗಿರುತ್ತದೆ.
-ಸಂಗ್ರಹ
Subscribe to:
Post Comments (Atom)
No comments:
Post a Comment