Friday, 24 November 2017
ಮನೆ ಕಟ್ಟಲು ಭೂಮಿ ಪರೀಕ್ಷೆ
ಮನೆ ಕಟ್ಟುವ ಸ್ಥಳದ ಭೂಮಿಯ ಗುಣದ ಪರೀಕ್ಷೆಗಳು ಮನೆ ಕಟ್ಟುವ ಸ್ಥಳದಲ್ಲಿ ಬಿಲ್ವ, ಬನ್ನಿ, ಬೇವು, ತುಳಸಿ, ಅರಳಿ, ಆಲ, ಮಾವು, ಮುತ್ತುಗ ಇವೇ ಮೊದಲಾದ ನಾನಾ ರೀತಿಯ ಹೂವು ಹಣ್ಣಿನ ಗಿಡ ಮರಗಳು, ಸೊಂಪಾಗಿ ಬೆಳೆದಿರುವ ಹುಲ್ಲು, ಸುವಾಸನೆಯಿಂದ ಕೂಡಿದ ಮಣ್ಣಿನಲ್ಲಿ ಮನೆ ಕಟ್ಟಿದರೆ ಸರ್ವ ರೀತಿಯಲ್ಲಿ ಶುಭ ಆಗುವುದು. ಈ ರೀತಿ ಇರದೆ ಚೌಳು ಭೂಮಿ, ಮುಳ್ಳು ಕಲ್ಲು ಇರುವ ಸ್ಥಳ ದಟ್ಟವಾಗಿ ಬೆಳದಿರುವ ಭೂಮಿ ತಗ್ಗು-ದಿಬ್ಬ-ಕುರಕಲು ಪ್ರದೇಶ, ಕೊಳಚೆ ಇರುವ ಪ್ರದೇಶ ಇಂತಹ ಜಾಗದಲ್ಲಿ ಮನೆ ಕಟ್ಟಿದರೆ ಆ ಮನೆಯು ವಾಸಕ್ಕೆ ಶ್ರೇಯಸ್ಕರವಾಗಿರುವುದಿಲ್ಲ. ಸದಾ ಅನಾರೋಗ್ಯ ದಾರಿದ್ರ್ಯ ದುಃಖ ತೊಂದರೆಗಳು ಉಂಟಾಗುವುವು.
ಭೂಮಿಯ ಪರೀಕ್ಷಾ ವಿಧಾನ
ಒಂದನೇ ವಿಧಾನ : ಮನೆ ಕಟ್ಟಿಸಬೇಕೆಂಬ ಸ್ಥಳದಲ್ಲಿ ಒಂದು ಮೊಳ ಅಗಲ, ಒಂದು ಮೊಳ ಉದ್ದ ಹಾಗೂ ಒಂದು ಮೊಳ ಆಳ ಇರುವ ಗುಂಡಿಯನ್ನು ತೆಗೆದು ಸಂಜೆ ಆರು ಗಂಟೆಯ ಸಮಯದಲ್ಲಿ ಗುಂಡಿ ತುಂಬಾ ನೀರು ಭರ್ತಿ ಮಾಡಿ ಅನಂತರ ಬೆಳಗ್ಗೆ ಆರು ಗಂಟೆಯ ಸಮಯಕ್ಕೆ ಹೋಗಿ ನೋಡಿದರೆ ಆ ಗುಂಡಿಯಲ್ಲಿ ನೀರಿದ್ದರೆ ಶುಭ, ಕೆಸರಿದ್ದರೆ ಮಧ್ಯಮ, ನೀರು ಪೂರ್ತಿ ಇಂಗಿ ಮಣ್ಣು ಹುಡಿಯಾಗಿದ್ದರೆ ಕನಿಷ್ಠ ಎಂದು ತಿಳಿಯುವುದು.
ಎರಡನೇ ವಿಧಾನ : ಮನೆ ನಿರ್ಮಿಸುವ ಮಧ್ಯದಲ್ಲಿ ಒಂದು ಗುಂಡಿ ತೆಗೆದು ಆನಂತರ ಅದರ ಮಣ್ಣಿನಿಂದಲೇ ಆ ಗುಂಡಿಯನ್ನು ಮುಚ್ಚಿದರೆ ಮಣ್ಣು ಹೆಚ್ಚಾದರೆ ಉತ್ತಮ. ಸಮವಾದರೆ ಸಾಧಾರಣ. ಕಡಿಮೆಯಾದರೆ ಕನಿಷ್ಠವೆಂದು ತಿಳಿಯಬೇಕು.
ಮೂರನೇ ವಿಧಾನ : ಒಂದು ಮೊಳ ಉದ್ದ, ಒಂದು ಮೊಳ ಅಗಲ ಹಾಗೂ ಒಂದು ಮೊಳ ಆಳ ಇರುವ ಗುಂಡಿಯನ್ನು ತೋಡಿ ಅದರಲ್ಲಿ ನೀರು ತುಂಬಿ ಉತ್ತರ ದಿಕ್ಕಿನತ್ತ ನೂರು ಹೆಜ್ಜೆ ನಡೆದು ಹೋಗಿ ಪುನಃ ಹಿಂತಿರುಗಿ ಬಂದು ನೋಡಬೇಕು. ಬಹುಶಃ ಗುಂಡಿಯಲ್ಲಿದ್ದ ನೀರು ಅಷ್ಟೇ ಪ್ರಮಾಣದಲ್ಲಿ ಇದ್ದರೆ ಅದನ್ನು ಉತ್ತಮ ಭೂಮಿ ಎಂದು ತಿಳಿಯಬೇಕು. ನೀರಿನ ಪ್ರಮಾಣ ಬಹಳ ಕಡಿಮೆಯಾಗಿದ್ದರೆ ಅದನ್ನು ಉತ್ತಮ ಭೂಮಿ ಅಲ್ಲ ಎಂದು ತಿಳಿಯಬೇಕು.
Subscribe to:
Post Comments (Atom)
No comments:
Post a Comment