Friday, 24 November 2017
ಪಂಚಾಂಗ ಪರಿಚಯ
ಪಂಚಾಂಗ ಪರಿಚಯ – ದಿವಸಗಳು
ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವನ್ನು ನಾವು ಹಗಲು ಎಂತಲೂ, ಮತ್ತು ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲವನ್ನು ರಾತ್ರಿ ಎಂತಲೂ ಕರೆಯುತ್ತೆವೆ. ಹಗಲು ಮತ್ತು ರಾತ್ರಿಗಳನ್ನು ಸೇರಿಸಿ ಒಂದು ದಿನ ಅಥವಾ ದಿವಸ ಎಂದು ಕರೆಯುತ್ತೆವೆ. ಹಗಲಿನ ಪ್ರಮಾಣವನ್ನು “ದಿನಮಾನ” ಎಂತಲೂ, ರಾತ್ರಿಯ ಪ್ರಮಾಣವನ್ನು ರಾತ್ರಿಮಾನ ಎಂತಲೂ ಕರೆಯಲಾಗಿದೆ. ಆಯನಗತಿಯ ಪ್ರಭಾವದಿಂದ ಈ ದಿನಮಾನ – ರಾತ್ರಿಮನಗಳ ಪ್ರಮಾಣ ಸಮಾನವಾಗಿರದೆ, ಬದಲಾಗುತ್ತಲಿರುತ್ತದೆ. ದಿನಮಾನ ವಿಷಯವನ್ನು ಮುಂದೆ ವಿಷದವಾಗಿ ಹೇಳಲಿದ್ದೆನೆ.
ಧರ್ಮಾಚರಣೆಗಳಿಗೆ ಅನುಗುಣವಾಗಿ ದಿವಸ ಅಥವಾ ದಿನ ಶಬ್ದವನ್ನು ವ್ಯವಹಾರಿಕವಾಗಿ ಎರಡು ಅರ್ಥಗಳಲ್ಲಿ ಬಳಸಲಾಗುತ್ತದೆ. ಮೊದಲನೇಯದಾಗಿ ದಿವಸವನ್ನು ಹಗಲು ಎಂಬರ್ಥದಲ್ಲಿ ಉಪಯೋಗಿಸಲಾಗುತ್ತದೆ. ಎರಡನೇಯದಾಗಿ ಹಗಲು ಮತ್ತು ರಾತ್ರಿ ಸೇರಿ ಆಗುವ ೨೪ ಘಂಟೆಗಳ ಕಾಲಾವಧಿಯನ್ನು ಸಹ ದಿವಸವೆಂದೆ ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಷ್ಯದಲ್ಲಿ ಅಹೋರಾತ್ರ ಎಂದು ಕರೆಯಲಾಗಿದೆ.
ಪಂಚಾಂಗಗಣಿತದ ಪ್ರಕಾರ ನಲ್ಕು ಪ್ರಕಾರದ ದಿವಸಗಳಿವೆ. ಚಾಂದ್ರ ದಿವಸ, ಸಾವನ ದಿವಸ, ಸೌರ ದಿವಸ, ನಾಕ್ಷತ್ರ ದಿವಸ.
(೧) ಚಾಂದ್ರ ದಿವಸ (Lunar Day) – ಪಂಚಾಂಗದಲ್ಲಿ ಮೊದಲನೇಯ ಅಂಗವಾದ ತಿಥಿಯೇ ಚಾಂದ್ರ ದಿವಸವಾಗಿದೆ. ಇದು ಸೂರ್ಯ-ಚಂದ್ರರ ಗತಿಗಳನ್ನು ಅನುಸರಿಸುತ್ತದೆ. ಇದರ ಗಣಿತವನ್ನು ಮುಂದೆ ತಿಥಿಯ ಬಗ್ಗೆ ಹೇಳುವಾಗ ವಿಷದೀಕರಿಸುತ್ತೆನೆ.
(೨) ಸಾವನ ದಿವಸ (Civil Day) – ಎರಡು ಅನುಗತ ಸೂರ್ಯೋದಯಗಳ ಮಧ್ಯದ ಕಾಲಾವಧಿಯು ಒಂದು ಸಾವನ ದಿವಸ. ದಿನಮಾನದ ಹಾಗೆ ಇದೂ ಸಹ ವ್ಯತ್ಯಾಸವಾಗುತ್ತಿರುತ್ತದೆ. ಇದನ್ನು ಮೇದಿನಿ ದಿವಸ ಎಂತಲೂ ಕರೆಯುತ್ತಾರೆ.
(೩) ಸೌರ ದಿವಸ (Solar Day) – ಇದು ಕಾಂತಿವೃತ್ತದಲ್ಲಿ ಸೂರ್ಯನ ಚಲನೆಗೆ ಸಂಬಂಧಿಸಿದಂತೆ ಇರುತ್ತದೆ. ಭೂಮಿಯ ಮೇಲಿನ ವೀಕ್ಷಕನಿಗೆ ಅನುಗುಣವಾಗಿ ಸೂರ್ಯನ ಪಥವೆ ಕಾಂತಿವೃತ್ತ ಅಥವಾ ಅಪಾಮಂಡಲ. ಕಾಂತಿವೃತ್ತವು ಹೆಸರೇ ಸೂಚಿಸುವಂತೆ ೩೬೦ ಅಂಶಗಳಷ್ಟಿರುತ್ತದೆ. ಈ ಕಾಂತಿವೃತ್ತದಲ್ಲಿ ೧ ಅಂಶ (೧ ಡಿಗ್ರಿ) ಚಲಿಸಲು ಸೂರ್ಯನಿಗೆ ಸಂದುವ ಅವಧಿಯೇ ಒಂದು ಸೌರ ದಿವಸ.
(೪) ನಾಕ್ಷತ್ರ ದಿವಸ (Sidereal Day) – ಯಾವುದೇ ನಕ್ಷತ್ರ ಅಥವಾ ಗ್ರಹ ಅಥವಾ ಕೇವಲ ಒಂದು ಬಿಂದು, ನಕ್ಷತ್ರ ಚಕ್ರವನ್ನು ಒಂದು ಸಾರಿ ಸುತ್ತಲು ತಗಲುವ ಸಮಯ. ಇದು ಭುಮಿಯ ಮೇಲೆ ನಕ್ಷತ್ರ ಚಕ್ರಗತಿಗೆ ಅನುಗುಣವಾಗಿರುತ್ತದೆ (ಇದರ ವಿಷದೀಕರಣ ಮುಂದೆ ಮಾಡುತ್ತೆನೆ) . ಇದು ೨೩ಗಂಟೆ ೫೬ನಿಮಿಷ ೪.೦೯ಸೆಕೆಂಡುಗಳಷ್ಟು ಸರಾಸರಿಯಾಗಿರುತ್ತದೆ.
ಒಂದು ದಿವಸವು ೨೪ಗಂಟೆ(ಹೋರಾ)ಯದ್ದಾಗಿರುತ್ತದೆ. ಭಾರತೀಯ ಕಾಲಗಣನೆಯಲ್ಲಿ ಒಂದು ದಿವಸವು ೬೦ಘಟಿ ಅಥವಾ ಘಳಿಗೆಯಾಗಿರುತ್ತದೆ. ಒಂದು ದಿನವನ್ನು ೬೦ಭಾಗಗಳಾಗಿ ಮಾಡಿ ಗಣಿತಹಾಕುವ ಪ್ರಾಚೀನ ಪ್ರಕಾರವಿದು. ಒಂದು ಘಟಿಯು ಮತ್ತೆ ೬೦ವಿಘಟಿಯಷ್ಟಾಗಿರುತ್ತದೆ.
೬೦ ಘಟಿ = ೨೪ ಗಂಟೆಗಳು , ೨^೧/೨ ಘಟಿ (೨.೫ ಘಟಿ) = ೧ ಗಂಟೆ, ೧ ಘಟಿ = ೨೪ ನಿಮಿಷ
ಕಾಲಗಣನೆ – ಕಾಲಸ್ವರೂಪ
ಕಾಲಗಣನೆಯನ್ನು ಪ್ರಧಾನವಾಗಿ ಎರಡು ರೀತಿಯಲ್ಲಿ ವಿಂಗಡಿಸಬಹುದು. ಕಾಲದ ಸೂಕ್ಷ್ಮಮಾನಗಳು (ತೃಟಿ, ವಿಘಟಿ, ಇತ್ಯಾದಿ) ಮತ್ತು ಸ್ಥೂಲಮಾನಗಳು (ಯುಗಗಳು, ಕಲ್ಪ ಇತ್ಯಾದಿ). ಈ ಲೇಖನದಲ್ಲಿ ಕಾಲದ ಮಹತ್ವವನ್ನು ತಿಳಿಸಿ ಮುಂದಿನ ಲೇಖನಗಳಲ್ಲಿ ವಿವಿಧ ಕಾಲಗಣನಾ ಪ್ರಕಾರಗಳ ಬಗ್ಗೆ ಚರ್ಚಿಸಲಾಗುವುದು.
ಜ್ಯೋತಿಷ್ಯಗ್ರಂಥಗಳಲ್ಲಿ ಪ್ರಾಚೀನತಮ ಎಂದು ಗುರುತಿಸಲ್ಪಡುವ ಲಗಧ ಮಹರ್ಷಿ ಪ್ರಣೀತವಾದ ವೇದಾಂಗ ಜ್ಯೋತಿಷದಲ್ಲಿ ಕಾಲಗಣನೆಯ ಮೂಲ ಉದ್ದೇಶ್ಯವನ್ನು ವಿವರಿಸಲಾಗಿದೆ. ವೇದ ಕಾಲದಲ್ಲಿ ಯಜ್ಞ-ಯಾಗಾದಿಗಳು ಜೀವನಚರ್ಯೆಯ ಪ್ರಧಾನಭಾಗಗಳಾಗಿದ್ದವು, ಎಲ್ಲ ಸಾಮಾಜಿಕ ವ್ಯವಸ್ಥೆಗಳು ಯಜ್ಞಗಳನ್ನೆ ಅವಲಂಬಿಸಿದ್ದವು.
ವೇದಾ ಹಿ ಯಜ್ಞಾರ್ಥಂ ಅಭಿಪ್ರವೃತ್ತಾಃ
ಕಾಲಾನುಪೂರ್ವ್ಯಾ ವಿಹಿತಾಶ್ಚ ಯಜ್ಞಾ |
ತಸ್ಮಾದಿದಂ ಕಾಲವಿಧಾನ ಶಾಸ್ತ್ರಂ
ಯೋ ಜ್ಯೋತಿಷಂ ವೇದ ಸ ವೇದ ಯಜ್ಞಾನ್ || (ವೇದಾಂಗ ಜ್ಯೋತಿಷ ಋ-೩೬, ಯ-೩)
ಮೇಲಿನ ಶ್ಲೋಕದಲ್ಲಿ ಯಜ್ಞ, ಕಾಲ, ವೇದ ಮತ್ತು ಜ್ಯೋತಿಷ ಇವುಗಳ ಮಹತ್ವವನ್ನು ಹೇಳಲಾಗಿದೆ. ವೇದಗಳ ಅಭಿಪ್ರಾಯ ಮತ್ತು ಅಭಿವ್ಯಕ್ತಿಗಳು ಯಜ್ಞಗಳಿಂದಲೇ ತಿಳಿಯಲು ಸಾಧ್ಯ, ಯಜ್ಞಗಳು ಕಾಲದಿಂದ ವಿಹಿತ-ನಿರ್ಧರಿತವಾಗಿವೆ. ಆದ್ದರಿಂದ ಯಾರು ಈ ಕಾಲವಿಧಾನಶಾಸ್ತ್ರ ರೂಪವಾದ ಜ್ಯೋತಿಷ್ಯವನ್ನು ತಿಳಿದಿರುತ್ತಾನೋ ಅವನೇ ವೇದಗಳನ್ನು ತಿಳಿದಿರುತ್ತಾನೆ (ಅಥವಾ ತಿಳಿಯುವ ಅಹ೯ತೆಯನ್ನು ಪಡೆದಿರುತ್ತಾನೆ). ವೇದಗಳು ನಮ್ಮ ಪ್ರಾಚೀನ ಸಂಸ್ಕೃತಿ, ಇತಿಹಾಸದ ಅವಿಭಾಜ್ಯ ಅಂಗಗಳಾಗಿವೆ. ಭಾರತದ ಎಲ್ಲ ಶಾಸ್ತ್ರಸಂಪತ್ತು (ಐಹಿಕ ಹಾಗು ಪರಮಾರ್ಥಿಕ) ವೇದಗಳಿಂದಲೆ ಪಡೆಯಲಾಗಿದೆ. ಇಂದಿನ ಆಧುನಿಕ ಜೀವನದಲ್ಲಿಯು ಸಹ ಈ ವೇದಗಳು ಪಥಪ್ರದರ್ಶಕಗಳಾಗಿವೆ.
ವೇದಗಳ ಅರ್ಥ, ಮಹತ್ವ ಮತ್ತು ಶಿಕ್ಷೆಗಳು ನಮಗೆ ತಿಳಿಯಬೇಕಾದರೆ ವೇದಾಂಗವಾದ ಜ್ಯೋತಿಷವು ಅತ್ಯಂತ ಸಹಾಯಕವೂ, ಅನಿವಾರ್ಯವೂ ಆಗಿದೆ. ಮುಂದೆ ಬರುವ ಲೇಖನಗಳಲ್ಲಿ ವೇದಭಾಗಗಳಲ್ಲಿ ಬಂದಿರುವ ಜ್ಯೋತಿಷ್ಯ ವಿಷಯಕ ಸಂದರ್ಭಗಳನ್ನು ಚರ್ಚಿಸಲಾಗುವುದು. ವೇದಗಳ ನಂತರ ಬಂದ ಆಗಮ-ತಂತ್ರಗಳು, ಪುರಾಣ-ಇತಿಹಾಸಗಳು, ಅನೇಕ ಸಂಹಿತೆಗಳು ಕಾಲವಿಷಯಕ ಜಿಜ್ಞಾಸೆಯನ್ನು ಸಾಕಷ್ಟು ಮಾಡುತ್ತಲೆ ಬಂದಿವೆ. ಭಾರತೀಯ ದರ್ಶನಗಳಲ್ಲಿ ಕಾಲದ ವಿವರಣೆ ಅವಿಭಾಜ್ಯ-ಅನಿವಾರ್ಯ ವಿಷಯವಾಗಿದೆ. ಕಾಲದ ಬಗ್ಗೆ ವಿಶ್ಲೇಷಣೆ ಮಾಡದೆ ಯಾವುದೇ ದಾರ್ಶನಿಕರು ಮುಂದೆ ಹೋಗಲು ಸಾಧ್ಯವೇ ಇಲ್ಲ. ವೇದಾಂತ, ಸಾಂಖ್ಯ, ನ್ಯಾಯ-ವೈಶೇಷಿಕ ದರ್ಶನಗಳಲ್ಲಿ ಕಾಲವು ಪ್ರಮುಖ ದಾರ್ಶನಿಕ ವಸ್ತುವಾಗಿದೆ.
ಕಾಲ ಶಬ್ದವನ್ನು ಶಾಸ್ತ್ರಕಾರರು ಅನೇಕ ರೀತಿಯಲ್ಲಿ ಅರ್ಥೈಸಿರುತ್ತಾರೆ. ಕಲಯತಿ ಇತಿ ಕಾಲಃದಿವಸ, ಮಾಸ, ವರ್ಷ ಇತ್ಯಾದಿಯಾಗಿ ಗಣನೆ ಮಾಡುವುದೆ ಕಾಲ. ಗೀತೆಯಲ್ಲಿ ಶ್ರೀಕೃಷ್ಣನು ಕಾಲಃ ಕಲಯತಾಮಹಮ್ (ಗೀತಾ ೧೦-೩೦) – ಗಣನೆ ಮಾಡುವವರಲ್ಲಿ ನಾನೇ ಕಾಲ ಎಂದು ಹೇಳಿಕೊಂಡಿರುವುದು ಇದಕ್ಕೆ ಪೂರಕವಾಗಿದೆ. ತಾರ್ಕಿಕರು ಅತೀತವ್ಯವಹಾರ ಹೇತುಃ ಕಾಲಃ” – ಭೂತ, ವರ್ತಮಾನ, ಭವಿಷ್ಯತ್ ವ್ಯವಹಾರಗಳನ್ನು ಮಾಡಿಸುವುದೇ ಕಾಲ ಎಂದು ಹೇಳುತ್ತಾರೆ.
ಕಾಲೋ ಭವಾಯ ಭೂತಾನಾಮಭವಾಯ ಚ ಪಾಂಡವ |
ಕಾಲಮೂಲಮಿದಂ ಜ್ಞಾತ್ವಾ ಭವ ಸ್ಥೈರ್ಯಪರೋsರ್ಜುನ ||
ನದ್ಯ ಸಮುದ್ರಾ ಗಿರಯಸ್ಸಕಲಾ ಚ ವಸುಂಧರಾ |
ದೇವಾ ಮನುಷ್ಯಾಃ ಪಶವಸ್ತರವಶ್ಚ ಸರೀಸೃಪಾಃ ||
ಸೃಷ್ಟಾಃ ಕಾಲೇನ ಕಾಲೇನ ಪುನರ್ಯಾಸ್ಯಂತಿ ಸಂಕ್ಷಯಮ್ |
ಕಾಲಾತ್ಮಕಮಿದಂ ಸರ್ವಂ ಜ್ಞಾತ್ವಾ ಶಮಮವಾಪ್ನುಹಿ ||
ಕಾಲರೂಪೀ ಭಗವಾನ್ ಕೃಷ್ಣಃ ಕಮಲಲೋಚನಃ || (ವಿಷ್ಣು ಪುರಾಣ ಪಂಚಮ ಅಂಶ ೩೮-೫೫/೫೮)
ಸಮಸ್ತ ಭೂತಗಳ (ಪ್ರಾಣಿಸಮುದಾಯ) ಉನ್ನತಿ ಮತ್ತು ಅವನತಿಗಳಿಗೆ ಕಾಲವೇ ಪ್ರಧಾನಕಾರಣವಾಗಿದೆ. ಸಮಸ್ತ ಚರಾಚರ ಜಗತ್ತು ಕಾಲಕ್ಕೆ ಅಧೀನವಾಗಿದೆ. ನದಿಗಳು, ಸಮುದ್ರ, ಪರ್ವತಗಳು, ಪೃಥ್ವಿ, ದೇವತೆಗಳು, ಮನುಷ್ಯರು, ಪಶುಗಳು, ವೃಕ್ಷಗಳು, ಸರೀಸೃಪಗಳಾದಿ ಸಮಸ್ತ ಪ್ರಕೃತಿಯು ಕಾಲದಿಂದಲೇ ಸೃಜಿಸಲ್ಪಟ್ಟು ಕಾಲದಿಂದಲೇ ನಾಶವನ್ನು ಹೊಂದುತ್ತದೆ. ಆದ್ದರಿಂದ ಎಲ್ಲ ವಸ್ತುಗಳು ಕಾಲಾಧೀನವಾಗಿವೆ. ಕಮಲಲೋಚನನಾದ ಪರಮಾತ್ಮನಾದ ಶ್ರೀಕೃಷ್ಣನೇ ಕಾಲರೂಪಿಯಾಗಿಯಾ ಸಮಸ್ತ ಜದದ್ವ್ಯಾಪಾರಗಳನ್ನು ನಡೆಸುತ್ತಾನೆ.
ಈ ಸಮಸ್ತ ಚರಾಚರ ಜಗತ್ತು (ಬ್ರಹ್ಮಾಂಡ) ಚತುರ್ಮುಖ ಬ್ರಹ್ಮದೇವನಿಂದ ಸೃಷ್ಟೃವಾಗಿದ್ದು ಅವನನ್ನೇ ಸೃಷ್ಟಿಸಿದವನು ಕಾಲರೂಪಿಯಾದ ಪರಮಾತ್ಮ.
“”ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ” (ಗೀತಾ ೧೦-೩೩)
ಅಕ್ಷಯಕಾಲವೆಂಬುದು ಅವಿನಾಶಿ, ಅನಾದಿಯಾದದ್ದು, ಸ್ವರೂಪತಃ ಯಾವುದೇ ಪರಿಣಾಮ ಹೊಂದದೆ ಇರುವಂತಹದು. ಎಲ್ಲವೂ ಕಾಲದಿಂದ ಪರಿಣಾಮ ಹೊಂದಿದರೆ ಕಾಲವು ಸ್ವತಃ ಯಾವುದೇ ರೀತಿ ಬದಲಾಗುವುದಿಲ್ಲ. ಆದುದರಿಂದಲೇ ಕಾಲವು ಭಗವತ್ಸ್ವರೂಪಕವಾಗಿದೆ. ಇದೇ ಕಾಲಸ್ವರೂಪಿಯಾದ ಪರಮಾತ್ಮನು ಸರ್ವತೋಮುಖನಾಗಿಯು, ವಿಶ್ವತೋಮುಖನಾಗಿಯೂ ಸಮಸ್ತ ಜೀವ-ಜಗತ್ತಿನ ಕರ್ಮಫಲಗಳ ವಿಧಾತೃವೂ ಆಗಿದ್ದಾನೆ.
ಕಾಲ ಶಬ್ದವು ಕಲ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ಕಲ ಚ್ಛೇದನೇ – ತುಂಡರಿಸು, ಛೇದಿಸು ಎಂಬರ್ಥದಲ್ಲಿ ಕಾಲವು ಎಲ್ಲವನ್ನು ತುಂಡರಿಸುವ, ಸಂಹಾರಕ ಸ್ವರೂಪವೆಂದು ಹೇಳಲ್ಪಟ್ಟಿದೆ. ಗೀತೆಯಲ್ಲಿ ಶ್ರೀಕೃಷ್ಣನು ಕಾಲವನ್ನು ತನ್ನ ವಿಶ್ವರೂಪ-ವಿಭೂತಿರೂಪವಾಗಿ ಅರ್ಜುನನಿಗೆ ಪ್ರದರ್ಶಿಸುತ್ತಾ ಇದೇ ಅರ್ಥವನ್ನು ತೋರುತ್ತಾನೆ.
ಕಾಲೋsಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ (ಗೀತಾ ೧೧-೩೨)
ಎಲ್ಲ ಲೋಕಗಳನ್ನು ಕ್ಷಯಮಾಡುವವನಾಗಿ ನಾನೇ ಕಾಲ(ಸಂಹಾರಕ – ಕ್ಷಯಕಾರಕ)ನಾಗಿದ್ದೇನೆ.
ಕಲ ಧಾತುವಿಗೆ ಕಲ ಬಂಧನೇ ಎಂಬರ್ಥವೂ ಇದೆ. ಎಲ್ಲವೂ ಕಾಲಕ್ಕೆ ಅಧೀನವಾಗಿ ಅದರ ಬಂಧನಕ್ಕೆ ಒಳಪಟ್ಟಿರುತ್ತದೆ ಎಂಬುದೇ ಇದರರ್ಥ.
ಕಾಲದ ಮಹತ್ವದ ಬಗೆಗೆ ಇಷ್ಟು ಮಾಹಿತಿಗಳು ಸಾಕು, ಮುಂದೆ ಮತ್ತೆ ಅನೇಕ ವಿಚಾರಗಳು ಬರಲಿವೆ. ತಾತ್ವಿಕ ಪರಾಮರ್ಶೆ ಮಾಡುತ್ತ ಹೋದರೆ ಕಾಲಜಿಜ್ಞಾಸೆ ಮೊಕ್ಷಸಾಧಕವೂ ಹೌದು. ಶಾಸ್ತ್ರಗಳು ಕಾಲ ವಿಷಯಕ ಬಹಳಷ್ಟು ಜಿಜ್ಞಾಸೆ, ಸಂಶೋಧನೆಗಳನ್ನು ಮಾಡುತ್ತಲೇ ಬಂದಿವೆ, ಎಲ್ಲವನ್ನು ಸಂಗ್ರಹಿಸುವುದು ಕಷ್ಟಸಾಧ್ಯ. ಮುಂದಿನ ಲೇಖನಗಳಲ್ಲಿ ಕಾಲಗಣನೆಯ ಸ್ಥೂಲಮಾನಗಳು ಮತ್ತು ಸೂಕ್ಷ್ಮಮಾನಗಳ ಬಗ್ಗೆ ನೋಡೋಣ.
ಕಾಲಗಣನೆ – ಯುಗಗಳು, ಮನ್ವಂತರಗಳು
ಯುಗಗಳ ಗಣನೆ ಎರಡು ಪ್ರಕಾರದ್ದಾಗಿರುತ್ತದೆ. ವೇದಾಂಗ ಜ್ಯೋತಿಷ್ಯದಲ್ಲಿ ಐದು ವರ್ಷಗಳ ಯುಗ ಪರಿಕಲ್ಪನೆ ಇದೆ. ಆದರೆ ಈ ಲೇಖನದಲ್ಲಿ ಹೆಚ್ಚು ಪ್ರಖ್ಯಾತವಾದ ಪಂಚಾಂಗಗಣಿತರೀತ್ಯಾ ಬಳಕೆಯಲ್ಲಿರುವ ಯುಗಮಾನಗಳನ್ನು ನೋಡಲಿದ್ದೇವೆ. ನಾಲ್ಕು ಯುಗಗಳಿವೆ. ಅವುಗಳ ವರ್ಷಪ್ರಮಾಣ ಅಘಾದವಷ್ಟೇ ಅಲ್ಲ ಆಶ್ಚರ್ಯಕಾರಕವೂ ಆಗಿದೆ. ವೈದಿಕ ಶಾಸ್ತ್ರಗಳನ್ನು ಬಿಟ್ಟು ಜಗತ್ತಿನ ಯಾವುದೇ ಬೇರೆ ಸಭ್ಯತೆಗಳಲ್ಲಾಗಲಿ, ಧರ್ಮಗ್ರಂಥಗಲ್ಲಾಗಲಿ ಇಷ್ಟು ಅಗಾಧ ಮೊತ್ತದ ಸಂಖ್ಯೆಗಳು ಕಂಡುಬರುವುದಿಲ್ಲ. ಕಾಲಕ್ಕೆ ಆದಿ ಮತ್ತು ಅಂತ್ಯಗಳು ಇಲ್ಲ ಎಂಬ ಚಿಂತನೆಯೆ ಈ ಗಣಿತಕ್ಕೆ ತಳಹದಿಯಾಗಿರುತ್ತದೆ. ಕಾಲಚಕ್ರ ಎಂಬುವುದು ಎಂದಿಗೂ ನಿಲ್ಲದ, ನಿರಂತರ ತಿರುಗುತ್ತಿರುವ ಚಿತ್ರಣ ನಮ್ಮ ವೈದಿಕ ಶಾಸ್ತ್ರಗಳು ನಮಗೆ ಕೊಡುತ್ತವೆ.
ಚತ್ವಾರಿ ಭಾರತೇ ವರ್ಷೇ ಯುಗಾನಿ ಕವಯೋsಭ್ರುವನ್ |
ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೇತಿ ಚತುಷ್ಟಯಮ್ || (ಬ್ರಹ್ಮಾಂಡ ಪುರಾಣ ೨೯-೩೨)
ಕೃತಯುಗ (ಸತ್ಯಯುಗ), ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ – ಎಂಬ ನಾಲ್ಕು ಯುಗಗಳು ಭರತಖಂಡದಲ್ಲಿವೆ ಎಂದು ಜ್ಞಾನಿಗಳು ಹೇಳಿರುತ್ತಾರೆ.
ಈ ನಾಲ್ಕು ಯುಗಗಳನ್ನು ಸೇರಿಸಿ ಒಂದು ಮಹಾಯುಗ ಅಥವಾ ಕೇವಲ ಯುಗ ಎಂಬ ಸಂಜ್ಞೆಯಿಂದ ಕರೆಯುತ್ತಾರೆ.
ಯುಗಗಳ ಪ್ರಮಾಣ :
ಯುಗಗಳ ಗಣಿತವು ಎರಡು ಮಾನಗಳಿಂದ ಮಾಡಬಹುದಾಗಿದೆ ದೇವತಾಮಾನ ಮತ್ತು ಮನುಷ್ಯಮಾನ. ಪುರಾಣಗಳು ದೇವತಾಮಾನದ ಎಣಿಕೆಯನ್ನು ಹೇಳಿವೆ. ನಾಲ್ಕು ಪ್ರಕಾರದ ದಿವಸಗಳ ಜ್ಞಾನ ಈ ಮಾನದ ತಿಳುವಳಿಕೆಗೆ ಅವಶ್ಯಕ, ಆದ್ದರಿಂದ ಈ ಮಾನದ ಎಣಿಕೆಯ ಪದ್ಧತಿಯನ್ನು ಮುಂದಿನ ಲೇಖನಗಳಲ್ಲಿ ಹೇಳಲಿದ್ದೇನೆ, ಪ್ರಸಕ್ತ ನಾವು ಸುಲಭವಾದ ಮನುಷ್ಯಮಾನವನ್ನು ನೋಡೋಣ.
ದ್ವಾತ್ರಿಂಶದ್ಭಿಃ ಸಹಸ್ರೈಶ್ಚ ಯುಕ್ತಂ ಲಕ್ಷಚತುಷ್ಟಯಮ್ |
ಪ್ರಮಾಣಂ ಕಲಿವರ್ಷಾಣಾಂ ಪ್ರೋಕ್ತಂ ಪೂರ್ವಮಹರ್ಷಿಭಿಃ ||
ಯುಗಾನಾಂ ಕೃತಮುಖ್ಯಾನಾಂ ಕ್ರಮಾನ್ಮಾನಂ ಪ್ರಜಾಯತೆ |
ಕಲೇರ್ಮಾನಂ ಕ್ರಮಾನ್ನಿಘ್ನಂ ಚತುಸ್ತ್ರಿದ್ವಿಮಿತೈಸ್ತದಾ ||
ಪೂರ್ವಾಚಾರ್ಯರ ಮತದಂತೆ ಕಲಿಯುಗದ ಪ್ರಮಾಣವು 4,32,000 ವರ್ಷಗಳಷ್ಟಾಗಿದೆ. ಈ ಕಲಿಯುಗ ವರ್ಷಗಳನ್ನು ಒಂದು ಗುಣಕವನ್ನಾಗಿ ಪರಿಗಣಿಸಿ ಇದಕ್ಕೆ ಕ್ರಮವಾಗಿ 4,3,2 ರಿಂದ ಗುಣಿಸಿದರೆ ಕ್ರಮವಾಗಿ ಕೃತ, ತ್ರೇತಾ, ದ್ವಾಪರಯುಗಗಳ ವರ್ಷಸಂಖ್ಯೆಗಳು ದೊರೆಯುತ್ತದೆ.
ಕಲಿಯುಗ ಮಾನ 4,32,000 ವರ್ಷಗಳು.
ಕೃತಯುಗ 4,32,000 X 4 = 17,28,000
ತ್ರೇತಾಯುಗ 4,32,000 X 3 = 12,96,000
ದ್ವಾಪರಯುಗ 4,32,000 X 2 = 8,64,000
ಕಲಿಯುಗ 4,32,000 X 1 = 4,32,000
————————————————————————–
೧ ಮಹಾಯುಗ 4,32,000 X 10 = 43,20,000
ಮೇಲೆ ಹೇಳಿರುವಂತೆ ಒಂದು ಮಹಾಯುಗವು ನಾಲ್ಕು ಯುಗಗಳ ಮೊತ್ತವಾಗಿರುತ್ತದೆ. ಜ್ಯೋತಿಷ್ಯ ಗ್ರಂಥಗಳಲ್ಲಿ ಮಹಾಯುಗಕ್ಕೆ ಕೇವಲ “ಯುಗ’ ಎಂತಲೂ, ಕೃತಾದಿ ಚತುರ್ಯುಗಗಳನ್ನು “ಯುಗಾಂಘ್ರಿ’ ಎಂದು ಸಂಬೋಧಿಸಲಾಗಿದೆ. ಮೇಲೆ ಹೇಳಲ್ಪಟ್ಟಿರುವ ಎಲ್ಲ ವರ್ಷಗಣನೆ “ಸೌರವರ್ಷ” ಪ್ರಮಾಣದಲ್ಲಿರುತ್ತದೆ.
ಪ್ರತಿಯುಗಗಳಿಗು ಅದರ ಪ್ರಮಾಣದ ಹನ್ನೆರಡನೆಯ ಭಾಗದಷ್ಟು ಪ್ರಾರಂಭ ಮತ್ತು ಅಂತ್ಯ ಸಂಧಿಗಳಿರುತ್ತವೆ. ಒಂದು ಯುಗವು ಮುಗಿದು ಮುಂದಿನ ಯುಗ ಪ್ರಾರಂಭವಾಗಬೇಕಾದಾಗ ಅದು ಮೊದಲನೇಯ ಯುಗ ಅಂತ್ಯಸಂಧಿಯಲ್ಲಿ ಹಾಗು ಮುಂದಿನದರ ಪ್ರಾರಂಭ ಸಂಧಿಯಲ್ಲಿ ಶುರುವಾಗುತ್ತದೆ.
ಉದಾ: ಕಲಿವರ್ಷಗಳಾದ 4,32,000 ವರ್ಷಗಳಲ್ಲಿ ಅದರ ಹನ್ನೆರಡನೆಯ ಭಾಗವಾದ 36,000 ವರ್ಷಗಳಷ್ಟು ಪ್ರಮಾಣ ಕಲಿಯುಗ ಪ್ರಾರಂಭಕ್ಕೆ ಮತ್ತು ಅಂತ್ಯದಲ್ಲಿ ಸಂಧಿಕಾಲ ಇರುತ್ತದೆ. ಪ್ರಾರಂಭ ಮತ್ತು ಅಂತ್ಯ (36000+36000=72000) ಸಂಧಿವರ್ಷಗಳನ್ನು ಕಳೆದಾಗ ಉಳಿಯುವ 3,60,000 ವರ್ಷಗಳು ನಿಜವಾದ ಕಲಿಯುಗ. ಇದೇ ರೀತಿಯಾದ ವಿಧಾನ ಎಲ್ಲ ಯುಗಗಳಿಗೂ ಅನ್ವಯಿಸುತ್ತದೆ.
ಯುಗ ಪ್ರಾರಂಭಸಂಧಿ + ನಿಜವರ್ಷ + ಅಂತ್ಯಸಂಧಿ = ಒಟ್ಟು
ಕೃತಯುಗ 144000+1440000+144000 = 1728000
ತ್ರೇತಾಯುಗ 108000+1080000+108000 = 1296000
ದ್ವಾಪರಯುಗ 72000+720000+72000 = 864000
ಕಲಿಯುಗ 36000+360000+36000 = 432000
ಮನ್ವಂತರಗಳು :
ಯುಗಾನಾಂ ಸಪ್ತತಿಃ ಸೈಕಾ ಭವನ್ತರಮಿಹೋಚ್ಯತೆ |
ಕೃತಾಬ್ದಸಂಖ್ಯಾ ತಸ್ಯಾಂತೇ ಸಂಧಿಃ ಪ್ರೋಕ್ತೊ ಜಲಪ್ಲವಃ ||
71 ಮಹಾಯುಗಗಳು ಸೇರಿ ಒಂದು ಮನ್ವಂತರವಾಗುತ್ತದೆ. ಒಂದು ಮನ್ವಂತರ ಮುಗಿದು ಮುಂದಿನ ಮನ್ವಂತರ ಶುರುವಾಗುವ ಮಧ್ಯದಲ್ಲಿ ಒಂದು ಕೃತಯುಗ ಪ್ರಮಾಣವರ್ಷದಷ್ಟು (1728000 ವರ್ಷ) ಸಮಯ ಸಂಧಿಕಾಲ (ವಿರಾಮಕಾಲ) ವಿರುತ್ತದೆ. ಈ ಸಂಧಿಕಾಲದಲ್ಲಿಯೇ ಜಲಪ್ರಳಯ ಉಂಟಾಗುತ್ತದೆ.
71 ಮಹಾಯುಗಗಳು = 71 X 43,20,000 ವರ್ಷಗಳು.
1 ಮನ್ವಂತರ = 30,67,20,000 ವರ್ಷಗಳು.
1 ಮನ್ವಂತರ ಸಂಧಿಕಾಲ = 17,28,000 ವರ್ಷಗಳು.
ಪುರಾಣ-ಸಂಹಿತೆಗಳಲ್ಲಿ ಮನುಗಳ ಸಂಖ್ಯೆಯನ್ನು 14 ಎಂದು ಹೇಳಿದ್ದಾರೆ. ಈ ಮನುಗಳು ಆಯಾ ಮನ್ವಂತರಗಳ ಅಧಿಪತಿಗಳಾಗಿರುತ್ತಾರೆ. ಈ 14 ಮನುಗಳ ಹೆಸರುಗಳಲ್ಲಿ ಶಾಸ್ತ್ರಗಳಲ್ಲಿ ವಿವರ ಭೇದವಿದೆ.
14 ಮನುಗಳ ವಿವರ ಹೀಗೆ ಇದೆ –
1 – ಸ್ವಾಯಂಭುವ, 2 – ಸ್ವಾರೋಚಿಷ, 3 – ಉತ್ತಮ, 4 – ತಾಮಸ, 5 – ರೈವತ,
6 – ಚಾಕ್ಷುಷ, 7 – ವೈವಸ್ವತ, 8 – ಸಾವರ್ಣಿ, 9 – ದಕ್ಷಸಾವರ್ಣಿ, 10 – ಬ್ರಹ್ಮಸಾವರ್ಣಿ,
11 – ಧರ್ಮಸಾವರ್ಣಿ, 12 – ರುದ್ರಸಾವರ್ಣಿ, 13 – ದೇವಸಾವರ್ಣಿ (ರುಚಿ – ಪಾಠಾಂತರ), 14 – ಇಂದ್ರಸಾವರ್ಣಿ (ಭೂತಿ – ಪಾಠಾಂತರ).
ಮೊದಲಿನ ಆರು ಮನ್ವಂತರಗಳು ಸಂದು ಈಗ ನಾವು ಎಳನೇಯದಾದ ವೈವಸ್ವತ ಮನ್ವಂತರದಲ್ಲಿ ಇದ್ದೇವೆ. ಈ ವೈವಸ್ವತ ಮನ್ವಂತರದಲ್ಲಿ 27 ಮಹಾಯುಗಗಳು ಮುಗಿದೆವೆ, 28ನೇಯ ಮಹಾಯುಗದ ಕಲಿಯುಗದ ಪ್ರಾರಂಭಸಂಧಿಯು ಸಧ್ಯ ನಡೆದಿದೆ.
ಕುಂಡಲಿಯ ಮೊದಲನೇಯ ಮನೆಯನ್ನು ಲಗ್ನವೆಂದು ಕರೆಯಲಾಗುತ್ತದೆ. ಇದು ಜನ್ಮಕಾಲದಲ್ಲಿ ಪೂರ್ವದಿಕ್ಕಿನಲ್ಲಿ ರಾಶಿಚಕ್ರದ ಮೇಲೆ ಉದಯಿಸುವ ಬಿಂದುವಾಗಿರುತ್ತದೆ (ಇದರ ಬಗ್ಗೆ ಮುಂದೆ ನೋಡೋಣ). ಲಗ್ನವನ್ನು ತನುವೆಂದು, ಎರಡನೇಯ ಮನೆಯನ್ನು ಕುಟುಂಬ, ಮೂರನ್ನು ಸಹೋತ್ಥ (ಭ್ರಾತಾ), ನಾಲ್ಕನ್ನು ಬಂಧು, ಐದನ್ನು ಪುತ್ರ, ಆರನ್ನು ಅರಿ (ಶತ್ರು), ಎಳನ್ನು ಪತ್ನಿ, ಎಂಟನ್ನು ಮರಣ, ಒಂಬತ್ತನ್ನು ಶುಭ, ಹತ್ತನ್ನು ಆಸ್ಪದ, ಹನ್ನೊಂದನ್ನು ಆಯ ಮತ್ತು ಹನ್ನೆರಡನೇಯ ಮನೆಯನ್ನು ರಿಃಫವೆಂದು ಕರೆಯಲಾಗುತ್ತದೆ.
ಈ ಸ್ಥಾನಗಳಿಗೆ ಭಾವವೆಂಬ ಸಂಜ್ಞೆಯು ಇರುತ್ತದೆ. ಮೇಲೆ ಹೆಳಲ್ಪಟ್ಟ ಸ್ಥಾನಗಳಿಗೆ ಜ್ಯೋತಿಷ್ಯದಲ್ಲಿ ಅನೇಕ ಪಾರಿಭಾಷಿಕ ಸಂಜ್ಞೆಗಳಿವೆ, ಅವುಗಳನ್ನು ಭಾವಗಳಿಂದ ಸೂಚಿತ ಕಾರಕತ್ವವೆಂದು ಸ್ಥೂಲವಾಗು ಹೇಳಬಹುದು. ಹನ್ನೆರಡು ಭಾವಗಳಿಂದ ತಿಳಿಯಲ್ಪಡುವ ವಿಷಯಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.
ಮೇಲ್ಕಂಡ ಹನ್ನೆರಡು ಮನೆಗಳ ಪೈಕಿ ಕೆಲವನ್ನು ಸೇರಿಸಿಕೊಂಡು ಅನೇಕ ಸಂಜ್ಞೆಗಳನ್ನು ಮಾಡಲಾಗಿದೆ. ಉದಾಹರಣೆಗೆ ಕೇಂದ್ರವೆಂದರೆ 1,4,7,10ನೇಯ ಸ್ಥಾನಗಳು. ಇವುಗಳಲ್ಲಿ ಮಹತ್ವವಾದವುಗಳನ್ನು ನೋಡೋಣ.
ಕೇಂದ್ರ: 1-4-7-10, ಪಣಪರ: 2-5-8-11, ಆಪೋಕ್ಲಿಮ: 3-6-9-12
ತ್ರಿಕೋಣ: 5-9, ಉಪಚಯ: 3-6-10-11, ಅನುಪಚಯ: ಉಪಚಯಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳು,
ನವಗ್ರಹ ಪರಿಚಯ – ವಿವಿಧ ವಿಚಾರಗಳು (ಆಧಿಪತ್ಯ, ಉಚ್ಚ, ನೀಚ, ಮೂಲತ್ರಿಕೋಣ)
ಹಿಂದಿನ ನವಗ್ರಹ ಪರಿಚಯ ಲೇಖನದಲ್ಲಿ ಗ್ರಹವೆಂದರೆ ಏನು, ಅದರ ಪ್ರಭಾವ ಹೇಗೆ ಇತ್ಯಾದಿ ವಿಷಯಗಳನ್ನು ನೋಡಿದ್ದಾಯಿತು. ಪ್ರಸಕ್ತ ಈ ಒಂಬತ್ತು ಗ್ರಹಗಳಿಂದ ಬೋಧ್ಯ ವಿವಿದ ವಿಷಯಗಳನ್ನು ಮುಂದಿನ ಲೇಖನಗಳಲ್ಲಿ ತಿಳಿದುಕೊಳ್ಳೋಣ. ಈಗ ಗ್ರಹಗಳ ಆಧಿಪತ್ಯ, ಉಚ್ಚ, ನೀಚ ಮತ್ತು ಮೂಲತ್ರಿಕೋಣ ಭಾಗಗಳನ್ನು ಕುರಿತು ವಿಚಾರ.
ರಾಶ್ಯಾಧಿಪರು – ಆಧಿಪತ್ಯವು ಯಾವುದೇ ಗ್ರಹವು ತನ್ನ ಅತ್ಯಂತ ಹೆಚ್ಚಿನ ಅಥವಾ ಪೂರ್ಣ ಪ್ರಭಾವವನ್ನು ತೋರಿಸುವ ರಾಶಿ. ಈ ರಾಶಿಯನ್ನೇ ಆ ಗ್ರಹದ ಸ್ವರಾಶಿ, ಸ್ವಕ್ಷೇತ್ರ, ಸ್ವಂತ ಮನೆಯೆಂದು ಕರೆಯಲಾಗುತ್ತದೆ. ಯಜಮಾನನು ತನ್ನ ಮನೆಯಲ್ಲಿ ಪ್ರಬಲನಾಗಿರುವನಲ್ಲವೆ. ಸೂರ್ಯಾದಿ ನವಗ್ರಹಗಳು ದ್ವಾದಶ ರಾಶಿಗಳಲ್ಲಿ ಹೊಂದಿರುವ ಆಧಿಪತ್ಯ ಕ್ರಮ ಹೀಗೆ ಇದೆ –
ಸೂರ್ಯ ಮತ್ತು ಚಂದ್ರರು ಒಂದೊಂದು ರಾಶಿಗೆ ಅಧಿಪತಿಗಳಾಗಿದ್ದಾರೆ. ದ್ವಾದಶ ರಾಶಿಗಳನ್ನು ಮನುಷ್ಯನ ದೇಹದ ಹನ್ನೆರಡು ಭಾಗಗಳಲ್ಲಿ ವಿಭಾಗಿಸಲಾಗಿದೆ. ಈ ಆಕಾರವನ್ನು ಕಾಲಪುರುಷನ ಶರೀರವೆನ್ನಲಾಗಿದೆ. ಮನುಷ್ಯದ ದೇಹದ ಅತ್ಯಂತ ಮುಖ್ಯ ಅಂಗಗಳು ಮನಸ್ಸು ಮತ್ತು ಆತ್ಮ. ಇವುಗಳ ಕಾರಕರು ಕ್ರಮವಾಗಿ ಚಂದ್ರ ಮತ್ತು ಸೂರ್ಯ. ಕಾಲಪುರುಷನ ಶರೀರರಲ್ಲಿ ಹೃದಯಸ್ಥಾನದಲ್ಲಿ ಬರುವ ಕರ್ಕರಾಶಿಯೇ ಚಂದ್ರನ ಆಧಿಪತ್ಯ. ಕರ್ಕರಾಶಿಯ ನಂತರ ಬರುವ ಸಿಂಹರಾಶಿಯ ಕಾಲಪುರುಷನ ಆತ್ಮದ್ಯೋತಕವಾಗಿ ಸೂರ್ಯನ ಆಧಿಪತ್ಯವನ್ನು ಹೊಂದಿದೆ.
ಉಳಿದ ಗ್ರಹಗಳಾದ ಕುಜ, ಬುಧ, ಗುರು, ಶುಕ್ರ ಮತ್ತು ಶನಿ – ಇವರು ಪ್ರತಿಯೊಬ್ಬರು ಎರಡೆರಡು ರಾಶಿಗಳ ಅಧಿಪತಿಗಳಾಗಿದ್ದಾರೆ. ಕರ್ಕದ ಹಿಂದಿರುವ ಮಿಥುನ ಮತ್ತು ಸಿಂಹದ ನಂತರದ ಕನ್ಯಾರಾಶಿಗಳಿಗೆ ಬುಧ ಅಧಿಪತಿ. ಇದೇ ರೀತಿ ವೃಷಭ ಮತ್ತು ತುಲಾ ರಾಶಿಗಳಿಗೆ ಶುಕ್ರ ಅಧಿಪತಿ, ಮೇಷ ಮತ್ತು ವೃಶ್ಚಿಕ ರಾಶಿಗಳಿಗೆ ಕುಜ (ಮಂಗಳ) ಅಧಿಪತಿ, ಧನು ಮತ್ತು ಮೀನ ರಾಶಿಗಳಿಗೆ ಗುರು ಅಧಿಪತಿ, ಮಕರ ಮತ್ತು ಕುಂಭ ರಾಶಿಗಳಿಗೆ ಶನೈಶ್ಚರನು ಅಧಿಪತಿಯಾಗಿರುತ್ತಾನೆ.
ರಾಹು, ಕೇತುಗಳಿಗೆ ಯಾವುದೇ ರಾಶ್ಯಾಧಿಪತ್ಯವನ್ನು ಶಾಸ್ತ್ರಗ್ರಂಥಗಳಲ್ಲಿ ಹೇಳಿಲ್ಲವಾದರು ಸಂಪ್ರದಾಯದಂತೆ ಕನ್ಯಾ, ಮೀನಗಳನ್ನು ಕ್ರಮದಿಂದ ಅವರ ಸ್ವಗ್ರಹವೆಂದು ಕರೆಯಲಾಗಿದೆ. ಕೆಲವು ನಾಡೀಗ್ರಂಥಗಳಲ್ಲಿ ಕುಂಭ ಮತ್ತು ಮೇಷಗಳನ್ನು ಕ್ರಮವಾಗಿ ರಾಹು, ಕೇತುಗಳ ಆಧಿಪತ್ಯ ರಾಶಿಗಳೆಂದು ಕರೆಯಲಾಗಿದೆ.
ಗ್ರಹಗಳು ನಿರ್ದಿಷ್ಟರಾಶಿ, ಭಾಗಗಳಲ್ಲಿ ಇದ್ದಾಗ ಅವುಗಳನ್ನು ಉಚ್ಚ, ನೀಚ ಮತ್ತು ಮೂಲತ್ರಿಕೋಣದಲ್ಲಿ ಸ್ಥಿತ ಎಂದು ಹೇಳಲಾಗುತ್ತದೆ. ಉಚ್ಚರಾಶಿಯಿಂದ ಏಳನೇಯ ರಾಶಿಯು ಆ ಗ್ರಹದ ನೀಚರಾಶಿಯಾಗಿರುತ್ತದೆ. ಗ್ರಹಗಳ ಉಚ್ಚರಾಶಿಯ ಕೆಲವು ಅಂಶಗಳಷ್ಟು ಭಾಗವನ್ನು ಪರಮೋಚ್ಚ ಭಾಗವೆನ್ನಲಾಗುತ್ತದೆ. ಇದೇ ರೀತಿ ನೀಚರಾಶಿ ಮತ್ತು ಪರಮನೀಚ ಭಾಗವೂ ಸಹ ಇರುತ್ತದೆ. ಉಚ್ಚರಾಶಿಯಲ್ಲಿರುವ ಗ್ರಹವೂ ಶುಭಪ್ರದವೂ ನೀಚದಲ್ಲಿರುವ ಗ್ರಹವು ಅಶುಭಫಲವನ್ನು ಕೊಡುತ್ತದೆ, ಇದು ಸಾಮಾನ್ಯ ನಿಯಮವಾದರು ಈ ನಿಯಮಕ್ಕೆ ಕೆಲವು ವಿಕಲ್ಪಗಳು ಇವೆ.
ಸೂರ್ಯ ಮೇಷದಲ್ಲಿ ಉಚ್ಚ, ತುಲಾದಲ್ಲಿ ನೀಚನಾಗಿರುತ್ತಾನೆ.
ಸೂರ್ಯನ ಪರಮೋಚ್ಚ ಮತ್ತು ಪರಮನೀಚ ಭಾಗಗಳು ಆರಂಭದ 10 ಅಂಶಗಳು (ಡಿಗ್ರಿಗಳು).
ಚಂದ್ರ ಉಚ್ಚ – ವೃಷಭ, ನೀಚ – ವೃಶ್ಚಿಕ, ಪರಮ ಉಚ್ಚ/ನೀಚ ಭಾಗಗಳು – 3 ಡಿಗ್ರಿ.
ಮಂಗಳ (ಕುಜ) ಉಚ್ಚ – ಮಕರ, ನೀಚ – ಕರ್ಕ, ಪರಮ ಉಚ್ಚ/ನೀಚ ಭಾಗಗಳು – 28 ಡಿಗ್ರಿ.
ಬುಧ ಉಚ್ಚ – ಕನ್ಯಾ, ನೀಚ – ಮೀನ, ಪರಮ ಉಚ್ಚ/ನೀಚ ಭಾಗಗಳು – 15 ಡಿಗ್ರಿ.
ಗುರು ಉಚ್ಚ – ಕರ್ಕ, ನೀಚ – ಮಕರ, ಪರಮ ಉಚ್ಚ/ನೀಚ ಭಾಗಗಳು – 5 ಡಿಗ್ರಿ.
ಶುಕ್ರ ಉಚ್ಚ – ಮೀನ, ನೀಚ – ಕನ್ಯಾ, ಪರಮ ಉಚ್ಚ/ನೀಚ ಭಾಗಗಳು – 27 ಡಿಗ್ರಿ.
ಶನಿ ಉಚ್ಚ – ತುಲಾ, ನೀಚ – ಮೇಷ, ಪರಮ ಉಚ್ಚ/ನೀಚ ಭಾಗಗಳು – 20 ಡಿಗ್ರಿ.
ರಾಹು ಉಚ್ಚ – ಮಿಥುನ, ನೀಚ – ಧನು, ಪರಮ ಉಚ್ಚ/ನೀಚ ಭಾಗಗಳು – 15 ಡಿಗ್ರಿ.
ಕೇತು ಉಚ್ಚ – ಧನು, ನೀಚ – ಮಿಥುನ, ಪರಮ ಉಚ್ಚ/ನೀಚ ಭಾಗಗಳು – 15 ಡಿಗ್ರಿ.
ಮೂಲತ್ರಿಕೋಣವನ್ನು ಅನೇಕಾಂಶ ಜ್ಯೋತಿಷ್ಯರು ಇಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಮುಖ್ಯವಾಗಿ ಮೂಲತ್ರಿಕೋಣವೆಂದರೆ ಏನು? ಎಂದು ಬಹುಜನಕ್ಕೆ ಗೊತ್ತಿಲ್ಲ. ಗ್ರಹಗಳಿಗೆ ಉಚ್ಚ, ನೀಚ, ಆಧಿಪತ್ಯಗಳು ಇರುವಾಗ ಈ ಮೂಲತ್ರಿಕೋಣದ ಅಗತ್ಯವಾದರೂ ಏನು? ಉತ್ತರವನ್ನು ವಿವರಿಸುವುದು ಸ್ವಲ್ಪ ಕಷ್ಟ. ಜಾತಕದ ಅಧ್ಯಯನ ಮಾಡುವಾಗ ಅದರಲ್ಲೂ ವರ್ಗ ಕುಂಡಲಿಗಳ ವಿಶ್ಲೇಷಣೆಯಲ್ಲಿ ಈ ಮೂಲತ್ರಿಕೋಣಕ್ಕೆ ಹಿರಿದಾದ ಮಹತ್ವವಿದೆ. ಮೂಲತ್ರಿಕೋಣದಿಂದ ಫಲಾದೇಶ ಜ್ಯೋತಿಷ್ಯದ ಕ್ಲಿಷ್ಟ ಪದ್ದತಿಗಳಲ್ಲಿ ಒಂದು (ಈ ಕಾರಣದಿಂದಲೇ ಬಹಳಷ್ಟು ನಗಣಿತಪಟುಗಳು ಇದನ್ನು ಕೈಬಿಟ್ಟಂತಿದೆ). ಯಾವುದೇ ಗ್ರಹದ ಮೂಲತ್ರಿಕೋಣ ಅಥವಾ ತ್ರಿಕೋಣ ಬಲರಾಶಿಯು ಒಂದು ವಿಶೇಷ ರಾಶಿಯ ವಿಶಿಷ್ಟ ಅಂಶಗಳಷ್ಟು ಇರುತ್ತದೆ. ಈ ರಾಶಿ-ಅಂಶದಲ್ಲಿ ಆ ಗ್ರಹವು ಇದ್ದಾದ ಮಹಾ ಬಲಿಷ್ಟವಾಗಿ, ಶ್ರೇಷ್ಠಫಲಗಳನ್ನು ನೀಡುತ್ತದೆ. ಈ ಗ್ರಹದ ಸಾಮರ್ಥ್ಯ ಉಳಿದೆಲ್ಲ ಗ್ರಹಗಳನ್ನು ಮೀರಿಸುವಂಥದ್ದಾಗಿರುತ್ತದೆ. ಮೇಲ್ನೊಟದ ಜಾತಕವಾಚನದಲ್ಲಿ ಇದು ತಿಳಿದುಬರುವುದಿಲ್ಲ. ಸೂರ್ಯಾದಿ ನವಗ್ರಹಗಳ ಮೂಲತ್ರಿಕೋಣವು ಕೆಳಕಂಡಂತೆ ಇರುತ್ತದೆ.
ಸೂರ್ಯ – ಸಿಂಹ ರಾಶಿಯ 0 ರಿಂದ 20 ಡಿಗ್ರಿ ಮೂಲತ್ರಿಕೋಣ.
ಚಂದ್ರ – ವೃಷಭ 4 ರಿಂದ 30 ಡಿಗ್ರಿ.
ಕುಜ – ಮೇಷ 0 ರಿಂದ 12 ಡಿಗ್ರಿ.
ಬುಧ – ಕನ್ಯಾ 16 ರಿಂದ 20 ಡಿಗ್ರಿ.
ಗುರು – ಧನು 0 ರಿಂದ 10 ಡಿಗ್ರಿ.
ಶುಕ್ರ – ತುಲಾ 0 ರಿಂದ 15 ಡಿಗ್ರಿ.
ಶನಿ – ಕುಂಭ 0 ರಿಂದ 20 ಡಿಗ್ರಿ.
ರಾಹು, ಕೇತುಗಳ ಮೂಲತ್ರಿಕೋಣ ಅಸ್ಪಷ್ಟ. (ಕರ್ಕ, ಮಕರ ಅಥವಾ ಕುಂಭ, ಸಿಂಹ ಅಥವಾ ಸಿಂಹ, ಕುಂಭ)
-sangraha
Subscribe to:
Post Comments (Atom)
No comments:
Post a Comment