Friday 30 August 2019

ಕೋಪ :--ಜ್ಯೋತಿಷ್ಯದ ಕಾರಣಗಳು :---

ಕೋಪ ಅಥವಾ ಕ್ರೋಧ ವ್ಯಕ್ತ ಪಡಿಸುವಿದು ಮನುಷ್ಯನ ಅಸಾಮಾನ್ಯ ನಡತೆ. ಈ ಅಸಾಮಾನ್ಯ ನಡತೆ ಕೆಲವರಲ್ಲಿ ಹೆಚ್ಚಾಗಿದ್ದರೆ ಕೆಲವರಲ್ಲಿ ಸಾಧಾರಣವಾಗಿರುತ್ತದೆ. ಕೆಲವರಲ್ಲಂತೂ ಕೋಪಬಂದರೆ ಮುಖ ಕೆಂಪಾಗಿ ಮುಖದ ಆಕಾರವೇ ಬದಲಾಗಿ ನೋಡಲು ತುಂಬಾ ವ್ಯಗ್ರ ರಂತೆ ಕಾಣುತ್ತಾರೆ ಇಂಥವರನ್ನು " ಕೋಪಿಷ್ಟ " ಎಂದೇ ಗುರುತಿಸುತ್ತಾರೆ. ಜ್ಯೋತಿಷ್ಯ ದ ದೃಷ್ಟಿಯಿಂದ ಈ ಅಧಿಕ ಸಿಟ್ಟಿಗೆ ಕಾರಣವೇನು ಎಂಬುದನ್ನು ತಿಳಿಯೋಣ. ಜ್ಯೋತಿಷ್ಯದಲ್ಲಿ ಮನುಷ್ಯನ ಪ್ರವೃತ್ತಿಯ ಅಧ್ಯಯನವನ್ನು ಸಾಮಾನ್ಯವಾಗಿ ಲಗ್ನ, ಲಗ್ನಾಧಿಪತಿ, ಸೂರ್ಯ, ಚಂದ್ರ ಹಾಗೂ ಕುಜನ ಆಧಾರದ ಮೇಲೆ ಮಾಡಲಾಗುತ್ತದೆ. ಮನುಷ್ಯನ ಪ್ರವೃತ್ತಿ ತುಂಬಾ ಕ್ಲಿಷ್ಟವಾದುದು, ಹಾಗೆ ನೋಡಿದರೆ ಇದರ ಅಧ್ಯಯನವನ್ನು ಒಂದೆರಡು ಭಾವ ಅಥವಾ ಒಂದೆರಡು ಗ್ರಹಗಳ ಆಧಾರದಿಂದ ಮಾಡಲಾಗದು. ಇದನ್ನು ಹನ್ನೆರಡು ಭಾವಗಳು ಹಾಗೂ ಒಂಬತ್ತು ಗ್ರಹಗಳ ಸಂಯೋಗದಿಂದ ಅರ್ಥೈಸಬಹುದು, ಯಾವುದೇ ವ್ಯಕ್ತಿಗೆ ಅಧಿಕ ಕೋಪ ಬರಲು ಈ ಕೆಲವು ಜ್ಯೋತಿಷ್ಯ ಕಾರಣಗಳಿರುತ್ತವೆ.ಅವುಗಳು ಯಾವುವು ಎಂಬುದನ್ನು ನೋಡೋಣ 1. ಮೇಷ, ಸಿಂಹ, ವೃಶ್ಚಿಕ ಲಗ್ನದ ಜಾತಕರಿಗೆ ಸಾಮಾನ್ಯ ಕೋಪ ಹೆಚ್ಚು. 2. ಲಗ್ನದಲ್ಲಿ ಕುಜ ಅಥವಾ ರವಿ ಸ್ಥಿತರಿದ್ದರೆ ಜಾತಕ ರಿಗೆ ಅಧಿಕ ಕೋಪ, ಇಂಥವರನ್ನು ಕೋಪ ಪ್ರವೃತ್ತಿಯವರೆಂದೇ ಪರಿಗಣಿಸಲಾಗುತ್ತೆ. 3. ಕುಂಡಲಿಯ ಸಪ್ತಮಭಾವದಲ್ಲಿ ಕುಜ ಅಥವಾ ರವಿ ಸ್ಥಿತವಾಗಿದ್ದರೂ ಕೋಪ ಜಾಸ್ತಿ. 4. ಷಷ್ಟ ಭಾವದಲ್ಲಿ ಕುಜ ಸ್ಥಿತನಾಗಿದ್ದರೂ ಕೋಪ ಜಾಸ್ತಿ. 5. ಲಗ್ನಾಧಿಪತಿ ದುರ್ಬಲನಾಗಿದ್ದು ಮತ್ತು ಕುಜನ ಯುತಿ ಅಥವಾ ದೃಷ್ಟಿಯಿದ್ದರೆ ಸಾಮಾನ್ಯಕ್ಕಿಂತ ಅಧಿಕ ಕೋಪ. 6. ಜಾತಕದಲ್ಲಿ ಚಂದ್ರನಿಗೆ ಕುಜನ ಸಂಬಂಧ ಬಂದರೂ ( ದೃಷ್ಟಿ ಅಥವಾ ಯುತಿ) ಜಾತಕನಿಗೆ ಅಧಿಕ ಕೋಪ. 7. ಕುಜನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಸ್ಥಿತನಿದ್ದರೆ, ಅಥವಾ ಕುಜನೊಂದಿಗೆ ಯುತಿ ಪಡೆದ ಗ್ರಹದ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೂ ಜಾತಕನಿಗೆ ಕೋಪ ಬರುವ ಸಂಭವ ಜಾಸ್ತಿ. 8. ಚಂದ್ರನು ಷಷ್ಟ ಅಥವಾ ಅಷ್ಟಮದಲ್ಲಿದ್ದರೆ ಅಥವಾ ಷಷ್ಟಾಷ್ಟಮ ಭಾವಾಧಿಪತಿಗಳ ಯುತಿಯಲ್ಲಿದ್ದರೆ ಜಾತಕನಿಗೆ ಕೋಪ ಬರುತ್ತದೆ, ಈ ಕೋಪ ಅಲ್ಪಕಾಲವಿದ್ದರೂ... ಇದರ ತೀವ್ರತೆ ಮಾತ್ರ ಅಧಿಕವಾಗಿರುತ್ತದೆ. 9. ಜಾತಕದಲ್ಲಿ ಶುಭ ಯೋಗಗಳಿಗಿಂತ ಅಶುಭಯೋಗಗಳು ಜಾಸ್ತಿಯಿದ್ದರೂ ಕೂಡ ಜಾತಕನು ಕೋಪಾವಿಷ್ಟನಾಗುತ್ತಾನೆ. 10. ಜಾತಕದಲ್ಲಿ ಲಗ್ನಾಧಿಪತಿಯೊಂದಿಗೆ 2, 9, 10 ನೇ ಅಧಿಪತಿಗಳು ದುರ್ಬಲರಾಗಿದ್ದರೂ ಕೂಡ ಜಾತಕನಿಗೆ ಕೋಪ. 11. ಜನ್ಮ ಕುಂಡಲಿಯ ಸಪ್ತಮ ಭಾವದಲ್ಲಿ ಪಾಪಗ್ರಹಗಳು ಸ್ಥಿತರಾಗಿದ್ದರೆ, ಜಾತಕನಿಗೆ ಕುಜದೋಷವಿದ್ದರೂ ಸಹ ಅಧಿಕ ಕೋಪ. 12. ಸಪ್ತಮಾಧಿಪತಿ ದುರ್ಬಲನಾಗಿದ್ದರೂ, ಸಪ್ತಮಾಧಿಪತಿ ಪಂಚಮದಲ್ಲಿದ್ದರೂ ಅಥವಾ ಪಾಪ ಗ್ರಹಗಳ ಸಂಪರ್ಕ ಪಡೆದಿದ್ದರೂ ಜಾತಕನಿಗೆ ಕೋಪವಿರುತ್ತದೆ. 13. ಲಗ್ನಾಧಿಪತಿ 6, 8 ರಲ್ಲಿ ಸ್ಥಿತರಾದರೂ ಜಾತಕನಿಗೆ ಕೋಪ ಬರುವ ಸಂಭವ ಹೆಚ್ಚು. 14. ರಾಹುವಿನ ನಕ್ಷತ್ರ ದಲ್ಲಿ ಲಗ್ನಾಧಿಪತಿ ಇದ್ದರೆ ಅಧಿಕ ಕೋಪ. 15. ಒಂದು ವೇಳೆ ಷಷ್ಟಾಧಿಪತಿ, ಅಷ್ಟಮಾಧಿಪತಿ, ಅಥವಾ ಮಾರಕ ಗ್ರಹಗಳಿಂದ ಜಾತಕನು ಪೀಡಿತನಾಗಿದ್ದರೂ ಕೂಡ ಜಾತಕನಿಗೆ ಅಧಿಕ ಕೋಪವಿರುತ್ತದೆ. 16. ಗೋಚಾರ ದಲ್ಲಿ ರವಿಯು ಲಗ್ನ, ಷಷ್ಟ, ಸಪ್ತಮ, ಅಷ್ಟಮ, ದ್ವಾದಶ ಭಾವದಲ್ಲಿ ಸಂಚರಿಸುತ್ತಿದ್ದರೆ ಮತ್ತು ಲಗ್ನದ ಮೇಲೆ ಕುಜನ, ರಾಹುವಿನ ಅಥವಾ ಶನಿಯ ಗೋಚಾರದ ಪ್ರಭಾವವಿದ್ದರೆ, ಆ ಸಮಯದಲ್ಲಿ ಜಾತಕನಿಗೆ ಅಧಿಕ ಕೋಪವಿರುತ್ತದೆ. 17. ಗೋಚಾರದಲ್ಲಿ ಕುಜನು 1, 4, 6, 7, 8, 12 ನೇ ಮನೆಯಲ್ಲಿ ಸಂಚರಿಸುತ್ತಿದ್ದರೆ. ಮತ್ತು ಜಾತಕನಿಗೆ ಸಾಡೇಸಾತಿ ನಡೆಯುವಾಗ ಅಧಿಕ ಕೋಪ ಬರುತ್ತದೆ. 18. ಲಗ್ನಾಧಿಪತಿ ದುರ್ಬಲನಾಗಿದ್ದು, ಗೋಚಾರದಲ್ಲಿ ಚಂದ್ರನು 4, 8, 12 ನೇ ಭಾವದ ಮೇಲೆ ಪರಿಭ್ರಮಣ ಮಾಡುವಾಗ ಜಾತಕನಿಗೆ ಅಧಿಕ ಕೋಪ ಬರುತ್ತದೆ. ಕೋಪವು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಹಾಗಾಗಿ ಯಾವ ಜಾತಕರು ಪ್ರತೀಕೂಲ ಗ್ರಹಗಳ ದೆಸೆಯಿಂದ ಕೋಪಾವಿಷ್ಟರಾಗುತ್ತಾರೋ ಆಗ ಅದರಿಂದ ಆಗುವ ಹಾನಿಯಿಂದ ರಕ್ಷಣೆ ಪಡೆಯಲು ಈ ಕೆಳಗಂಡ ಪರಿಹಾರವನ್ನು ಮಾಡಬಹುದು. ◆ ಲಗ್ನಾಧಿಪತಿಯ ರತ್ನ ಧರಿಸಬಹುದು. ◆ ಏಕಮುಖಿ ರುದ್ರಾಕ್ಷಿ ಧಾರಣೆ ಮಾಡಬಹುದು ◆ ಯಾವ ಗ್ರಹದ ಕಾರಣದಿಂದ ಕೋಪ ಉತ್ಪನ್ನಗೊಳ್ಳುತ್ತಿದೆಯೋ ಆ ಗ್ರಹದ ಮಂತ್ರಜಪ ಮಾಡಬೇಕು. -SangrahaMahiti

No comments:

Post a Comment